ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಪ್ರಚಲಿತ ವಿದ್ಯಮಾನಗಳು

Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

1. ವೀರಾಂಗಣ ರಾಣಿ ದುರ್ಗಾವತಿ

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ವೀರಾಂಗಣ ರಾಣಿ ದುರ್ಗಾವತಿ ಗೌರವ ಯಾತ್ರೆ’ಗೆ ಚಾಲನೆ ನೀಡಿದರು. ಮಧ್ಯಪ್ರದೇಶ ಸರ್ಕಾರ ವೀರಾಂಗಣ ರಾಣಿ ದುರ್ಗಾವತಿ ಅವರಿಗೆ ನಮನ ಸಲ್ಲಿಸಿ ಹಾಗೂ ಅವರ ಐತಿಹಾಸಿಕ ಸಾಧನೆಗಳನ್ನು ಮತ್ತೊಮ್ಮೆ ಮೆಲುಕು ಹಾಕಲು ಯಾತ್ರೆಯನ್ನು ಆಯೋಜಿಸಿದೆ.

ವೀರಾಂಗಣ ರಾಣಿ, ಚಂಡೇಲಾ ಸಾಮ್ರಾಜ್ಯದ ದೊರೆ ಕಿರತ್ ರಾಯ್ ಅವರ ಕುಟುಂಬದಲ್ಲಿ 1524ರಲ್ಲಿ ಜನಿಸಿದರು. 1542ರಲ್ಲಿ ಗರ್ಹ ಸಾಮ್ರಾಜ್ಯದ ರಾಜನಾಗಿದ್ದ ಸಂಗ್ರಾಮ್ ಷಾ ಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. 1545ರಲ್ಲಿ ವೀರನಾರಾಯಣ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು. ಮಗು ಜನಿಸಿದ ಐದು ವರ್ಷಗಳಲ್ಲಿಯೇ ಪತಿ ದಲ್ಪತ್‌ ಶಾ ಮರಣ ಹೊಂದಿದರು. ಪತಿಯ ನಿಧನದ ನಂತರ, ತನ್ನ ಪುತ್ರನಿಗೆ ಸಾಮ್ರಾಜ್ಯ ನಿರ್ವಹಿಸಲು ಸಾಧ್ಯವಾಗದ ಕಾರಣ 1550ರಲ್ಲಿ ತಾನೇ ಆಡಳಿತದ ಚುಕ್ಕಾಣಿ ಹಿಡಿದರು. 1550–1564ರ ಅವಧಿಯಲ್ಲಿ (16 ನೇ ಶತಮಾನದಲ್ಲಿ) ಗಾಂಡ್ವನ (Gondwana) ಸಂಸ್ಥಾನದ ರಾಣಿಯಾಗಿ ಆಳ್ವಿಕೆ ನಡೆಸುತ್ತಿದ್ದರು.

ಸಿಂಹಾಸನವನ್ನು ಏರಿದ ನಂತರ ಇವರು ತಮ್ಮ ರಾಜಧಾನಿಯನ್ನು ಸಿಂಗರ್‌ಘರ್‌ದಿಂದ ಚೌರಘರ್ ಪ್ರದೇಶಕ್ಕೆ ಸ್ಥಳಾಂತರಿಸಿದರು. ಇದಾದ ನಂತರ ಇವರ ಸಂಸ್ಥಾನದ ಮೇಲೆ ಮೊಘಲರು ಹಲವಾರು ಬಾರಿ ದಾಳಿ ಮಾಡಿದರೂ ಅದನ್ನು ಸಮರ್ಥವಾಗಿ ಎದುರಿಸಿದರು. 

ವಿಶೇಷ ಸೂಚನೆ: ವೀರಾಂಗಣ ರಾಣಿ ಆಳ್ವಿಕೆಯ ಸಂದರ್ಭದಲ್ಲಿ ಇಬ್ಬರು ಸಮರ್ಥ ಮಂತ್ರಿಗಳಾದ ಆಧಾರ್ ಕಾಯಸ್ಥ ಹಾಗೂ ಮಾನ್ ಠಾಕೂರ್ ರವರು ಕಾರ್ಯನಿರ್ವಹಿಸುತ್ತಿದ್ದರು.

2. ಕಳಸಾ ಬಂಡೂರಿ ಯೋಜನೆ

ಹಿಂದಿನ ಕರ್ನಾಟಕ ಸರ್ಕಾರ ಕಳಸಾ ಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿತ್ತು. ಆದರೆ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮುನ್ನ ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆಯ ಅನುಮೋದನೆಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ ಹಿಂದಿನ ಸರ್ಕಾರ ಯಾವುದೇ ಅನುಮೋದನೆ ಪಡೆಯದ ಕಾರಣದಿಂದ ಟೆಂಡರ್ ಪ್ರಕ್ರಿಯೆ ಸ್ಥಗಿತ ವಾಗುವ ಎಲ್ಲ ಗುಣಲಕ್ಷಣಗಳು ಕಂಡುಬರುತ್ತಿದೆ ಎಂದು ವಿಶ್ಲೇಷಕರು ವರದಿ ಮಾಡಿದ್ದಾರೆ.

ಮಹದಾಯಿ ಉಪ ನದಿಗಳಾದ ಕಳಸಾ ಮತ್ತು ಬಂಡೂರಿ ನದಿಗಳಿಗೆ ಅಡ್ಡಲಾಗಿ ಬ್ಯಾರೇಜ್‌ಗಳನ್ನು ನಿರ್ಮಿಸಲು ಕರ್ನಾಟಕ ಸರ್ಕಾರ ಕೈಗೊಂಡಿರುವ ಯೋಜನೆಯೇ ‘ಕಳಸಾ–ಬಂಡೂರಿ ಯೋಜನೆ’.

ಎರಡು ಉಪನದಿಗಳಿಗೆ ಬ್ಯಾರೇಜ್‌ ನಿರ್ಮಿಸಿ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಮತ್ತು ಹುಬ್ಬಳ್ಳಿ ಜಿಲ್ಲೆಗಳಿಗೆ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಈ ಯೋಜನೆ ರೂಪಿಸಲಾಗಿದೆ. ಇದನ್ನು ಮಹದಾಯಿ ನದಿಯ ನೀರಿನ ಪಥವನ್ನು ಬದಲಿಸುವ ಯೋಜನೆ ಎಂದು ಪರಿಗಣಿಸಬಹುದು.

ಕಳಸಾ ಬಂಡೂರಿ ಯೋಜನೆಯ ಮೂಲಕ ಕರ್ನಾಟಕ ಸರ್ಕಾರ ಮಾಂಡವಿ ನದಿ ನೀರನ್ನು ಕಳಸ ಮತ್ತು ಬಂಡೂರಿ ಕಾಲುವೆಗಳಿಂದ ರಾಜ್ಯದ ಮಲಪ್ರಭಾ ನದಿಯ ಕಡೆಗೆ ತಿರುಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಒಟ್ಟು 11 ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗುತ್ತದೆ.

ವಿಶೇಷ ಸೂಚನೆ: ಮಹದಾಯಿ ನದಿ ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ 1980 ರಿಂದ ಗೋವಾ ಮತ್ತು ಕರ್ನಾಟಕ ರಾಜ್ಯಗಳ ನಡುವೆ ವಿವಾದ ಮುಂದುವರಿದಿದೆ.

ಮಹದಾಯಿ ಅಥವಾ ಮಾಂಡೋವಿ ನದಿ

ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿರುವ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಮಹದಾಯಿ ನದಿ ಉಗಮವಾಗು ತ್ತದೆ. ನಂತರ ಅಲ್ಲಿಂದ ಪಶ್ಚಿಮಕ್ಕೆ ಹರಿಯುತ್ತದೆ. ಇದಾದ ನಂತರ ಮಹದಾಯಿ ನದಿಯು ಉತ್ತರ ಗೋವಾ ಜಿಲ್ಲೆಯ ಸತ್ತಾರಿ ತಾಲ್ಲೂ ಕಿನ ಬಳಿ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ ಮತ್ತು ಗೋವಾದಲ್ಲಿ ಹರಿದ ನಂತರ ಪಣಜಿಯಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಮಾಂಡೋವಿ ನದಿಯ ಜಲಾನಯನ ಪ್ರದೇಶವನ್ನು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಾಣಬಹುದು. ಮೂರು ರಾಜ್ಯಗಳಲ್ಲಿ ಹರಿಯುವುದರಿಂದ ಇದನ್ನು ಅಂತರರಾಜ್ಯ ನದಿ ಎಂದು ಪರಿಗಣಿಸಬಹುದು.

ಮಹದಾಯಿ ನದಿಯನ್ನು ಗೋವಾದ ಜೀವನಾಡಿ ಎಂದು ಕರೆಯಲಾಗುತ್ತದೆ. ಗೋವಾದಲ್ಲಿರುವ ಬಹುತೇಕ ನದಿಗಳಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುವ ಕಾರಣದಿಂದ, ಅವುಗಳ ನೀರು ಬಳಕೆಗೆ ಹೆಚ್ಚು ಸೂಕ್ತವಾಗಿರುವುದಿಲ್ಲ. ಆದರೆ ಮಹದಾಯಿ ನದಿ ಸಿಹಿನೀರಿನ ನದಿಯಾಗಿರುವ ಕಾರಣ ಗೋವಾದ ಜನರಿಗೆ ಬೇಕಾದ ಕುಡಿಯುವ ನೀರಿನ ಭದ್ರತೆ ಹಾಗೂ ಮೀನುಗಾರಿಕೆಯೂ ಕೂಡ ಈ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

3. ವಿಶ್ವಸಂಸ್ಥೆಯ ’ವಾಲ್‌ ಆಫ್ ಪೀಸ್‌’

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮ್ಮ ಅಮೆರಿಕದ ಪ್ರವಾಸದ ವೇಳೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಅವರು ಅಲ್ಲಿನ ‘ವಿಶ್ವಸಂಸ್ಥೆ ಶಾಂತಿಪಾಲಕರ ಸ್ಮಾರಕಗಳಿಗೆ(Wall of Peace)’ ಗೌರವ ಸಲ್ಲಿಸಿದರು. ‌

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಹುತಾತ್ಮರಾದ ವ್ಯಕ್ತಿಗಳಿಗೆ ಗೌರವ ಸೂಚಿಸುವುದಕ್ಕಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಉತ್ತರ ಭಾಗದಲ್ಲಿ ‘ಸ್ಮಾರಕ ಗೋಡೆ’ಯನ್ನು ನಿರ್ಮಿಸಲಾಗಿದೆ. ‌

ಶಾಂತಿಪಾಲನಾ ಪ್ರಕ್ರಿಯೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಪ್ರಕ್ರಿಯೆ ವಿಶ್ವ ಸಂಸ್ಥೆಯ ಸ್ಥಾಪನೆಯ ಹಂತದಿಂದಲೂ ಅವ್ಯಾಹತವಾಗಿ ಮುಂದುವರಿಯುತ್ತಿದೆ. ಯುದ್ಧಪೀಡಿತ ಪ್ರದೇಶಗಳಲ್ಲಿ, ಭಯೋತ್ಪಾದನೆ ಪೀಡಿತ ಪ್ರದೇಶಗಳಲ್ಲಿ ಹಾಗೂ ಶಾಂತಿ ಮತ್ತು ಸುವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಶಾಂತಿಪಾಲನಾ ಪ್ರಕ್ರಿಯೆಯಲ್ಲಿ ವಿಶ್ವಸಂಸ್ಥೆಯ ಸ್ವಾಭಾವಿಕವಾಗಿ ತೊಡಗಿಕೊಳ್ಳುತ್ತದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪ್ರಕ್ರಿಯೆಯ ಮೂರು ಪ್ರಮುಖ ತತ್ವಗಳು : ನಿಷ್ಪಕ್ಷಪಾತ, ಪರಸ್ಪರ ಪಕ್ಷಗಳ ಸಮಾಲೋಚನೆ ಮತ್ತು ಒಪ್ಪಿಗೆಯ ಮೂಲಕ ಕಾರ್ಯನಿರ್ವಹಣೆ ಹಾಗೂ  ಶಾಂತಿಪಾಲನಾ ಪ್ರಕ್ರಿಯೆಯಲ್ಲಿ ಆತ್ಮರಕ್ಷಣೆಗಾಗಿ ಮಾತ್ರ ಶಸ್ತ್ರಾಸ್ತ್ರಗಳನ್ನು ಬಳಸುವುದು.

ಪ್ಯಾಲೇಸ್ತೀನ್‌ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 1948 ರಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ದಿನದ ನೆನಪಿಗಾಗಿ ವಿಶ್ವಸಂಸ್ಥೆ ಪ್ರತಿವರ್ಷ ಮಾರ್ಚ್ 29 ರಂದು ಶಾಂತಿ ಪಾಲಕರ ದಿನಾಚರಣೆಯನ್ನು ಆಯೋಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT