ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: 1971ರ ಬಾಂಗ್ಲಾದೇಶ ವಿಮೋಚನಾ ಹೋರಾಟದ ಬಗ್ಗೆ ಮಾಹಿತಿ ಇಲ್ಲಿದೆ..

ಬಾಂಗ್ಲಾದೇಶ ವಿಮೋಚನಾ ಹೋರಾಟದ ಬಗ್ಗೆ ಮಾಹಿತಿ
Published 22 ನವೆಂಬರ್ 2023, 23:40 IST
Last Updated 22 ನವೆಂಬರ್ 2023, 23:40 IST
ಅಕ್ಷರ ಗಾತ್ರ

ಅಕ್ಟೋಬರ್ 26, 2023ರಂದು ದೆಹಲಿಯಲ್ಲಿ ರಕ್ಷಣಾ ಖಾತೆಯ ರಾಜ್ಯ ಸಚಿವರಾದ  ಅಜಯ್ ಭಟ್  1971ರ ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಈ ಸಮಾರಂಭವನ್ನು ಬಾಂಗ್ಲಾದೇಶದ ಹೈಕಮಿಷನ್ ಆಯೋಜಿಸಿತ್ತು.

ಬಾಂಗ್ಲಾ ವಿಮೋಚನೆ:1971ರ ಬಾಂಗ್ಲಾದೇಶ ವಿಮೋಚನಾ ಹೋರಾಟವು ದಕ್ಷಿಣ ಏಷ್ಯಾದ ಇತಿಹಾಸದಲ್ಲಿಯೇ ಪ್ರಮುಖ ಘಟನೆಯಾಗಿದ್ದು, ಇದು ಬಂಗಾಳೀಯರು ತಮ್ಮ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸುದೀರ್ಘ ಹೋರಾಟ ಕಥನವಾಗಿದೆ.

lಈ ಹೋರಾಟವು ತನ್ನದೇ ಆದ ಐತಿಹಾಸಿಕ, ರಾಜಕೀಯ ಮತ್ತು ಸಾಮಾಜಿಕ ಆಯಾಮಗಳನ್ನು ಹೊಂದಿದೆ.

ಹಿನ್ನೆಲೆ: ಪೂರ್ವ ಬಂಗಾಳವು ಪ್ರಧಾನವಾಗಿ ಮುಸ್ಲಿಂಬಾಹುಳ್ಯದ ಪ್ರದೇಶ (ಇಂದಿನ ಬಾಂಗ್ಲಾದೇಶ)ವಾಗಿತ್ತು ಆದರೆ  ಪಶ್ಚಿಮ ಬಂಗಾಳವು ಹಿಂದೂ ಬಾಹುಳ್ಯದ ಭಾಗವಾಗಿತ್ತು.

ಭಾರತದ ವಿಭಜನೆ (1947):  1947ರಲ್ಲಿ ಭಾರತೀಯ ಉಪಖಂಡವನ್ನು ಧರ್ಮದ ಆಧಾರದಲ್ಲಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ದೇಶಗಳಾಗಿ ವಿಭಜಿಸಲಾಯಿತು. ಈ ವಿಭಜನೆಯಲ್ಲಿ ಸಹಜವಾಗಿಯೇ ಪಶ್ಚಿಮ ಬಂಗಾಳವು ಭಾರತದ ಭಾಗವಾದರೆ ಪೂರ್ವ ಬಂಗಾಳವನ್ನು ಪಾಕಿಸ್ತಾನಕ್ಕೆ ( ಪೂರ್ವ ಪಾಕಿಸ್ತಾನವಾಗಿ) ಸೇರಿಸಲಾಯಿತು. ಪಶ್ಚಿಮ ಪಾಕಿಸ್ತಾನದಿಂದ ಸುಮಾರು ಸಾವಿರ ಮೈಲು ದೂರದಲ್ಲಿ ಭಾರತವನ್ನು ಹಾದುಬಂದರೆ ಪೂರ್ವ ಪಾಕಿಸ್ತಾನವನ್ನು ತಲುಪಬಹುದಾಗಿತ್ತು.

ಭಾಷಾ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳು:  ಈ ವಿಭಜನೆಯ ಬಳಿಕ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳು ಪಾಕಿಸ್ತಾನದ ಭಾಗಗಳಾಗಿದ್ದರೂ ಭಾಷೆ, ಸಾಂಸ್ಕೃತಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೊಂದಿದ್ದವು. ಇದು ಪೂರ್ವ ಪಾಕಿಸ್ತಾನದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಪಶ್ಚಿಮ ಪಾಕಿಸ್ತಾನದಲ್ಲಿ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಭಾವ ಬೆಳೆಯಿತು.

ಹೋರಾಟಕ್ಕೆ ಕಾರಣಗಳು

ರಾಜಕೀಯ ನಾಯಕರ ಅಸಡ್ಡೆ: ಪಶ್ಚಿಮ ಪಾಕಿಸ್ತಾನದ ರಾಜಕೀಯ ನಾಯಕರು ಪೂರ್ವ ಪಾಕಿಸ್ತಾನದ ಬಗ್ಗೆ ಗಮನ ಹರಿಸುವುದಿಲ್ಲ ಎಂಬ ಅಸಮಾಧಾನ.

ಆರ್ಥಿಕ ಶೋಷಣೆ: ಪಶ್ಚಿಮ ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಪೂರ್ವ ಪಾಕಿಸ್ತಾನದ ಆರ್ಥಿಕ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬರಿದು ಆಗಿ, ವ್ಯಾಪಕ ಬಡತನಕ್ಕೆ ಕಾರಣವಾಯಿತು. ಪೂರ್ವ-ಪಾಕಿಸ್ತಾನಕ್ಕೆ ಹೋಲಿಸಿದರೆ ಪಶ್ಚಿಮ-ಪಾಕಿಸ್ತಾನದ ಜನಸಂಖ್ಯೆಯ ಗಾತ್ರವು ಚಿಕ್ಕದಾಗಿದ್ದರೂ ರಾಷ್ಟ್ರೀಯ ಬಜೆಟ್‌ನ ಪ್ರಮುಖ ಪಾಲನ್ನು (ಶೇ 75 ) ಪಶ್ಚಿಮ-ಪಾಕಿಸ್ತಾನಕ್ಕೆ ವಿನಿಯೋಗಿಸಲಾಯಿತು. ಪೂರ್ವ-ಪಾಕಿಸ್ತಾನವು ಆದಾಯದ ಶೇ 62ರಷ್ಟು ಉತ್ಪಾದನೆಗೆ ಕಾರಣವಾಗಿದ್ದರೂ ಆರ್ಥಿಕ ಅನುದಾನಗಳಿಂದ ವಂಚಿತಗೊಂಡಿತು.

ಭಾಷಾ ಆಂದೋಲನ: ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷೆ ಚಾಲ್ತಿಯಲ್ಲಿದ್ದರೆ ಪಶ್ಚಿಮ ಪಾಕಿಸ್ಥಾನದಲ್ಲಿ ಉರ್ದು ಭಾಷೆ ಚಾಲ್ತಿಯಲ್ಲಿತ್ತು. ಉರ್ದು ಭಾಷಿಗರು ಬಂಗಾಳಿ ಭಾಷೆಗೆ ಮನ್ನಣೆ ನೀಡುತ್ತಿರಲಿಲ್ಲ. 1952ರಲ್ಲಿ ಭಾಷಾ ಚಳವಳಿ ನಡೆದು ಇದರಲ್ಲಿ ಬಂಗಾಳಿಗಳು ತಮ್ಮ ಭಾಷೆಯಾದ ಬಂಗಾಳಿಗೆ ಪಾಕಿಸ್ತಾನದ ಅಧಿಕೃತ ಭಾಷೆ ಎಂಬ ಮನ್ನಣೆ ನೀಡಬೇಕೆಂದು ಹೋರಾಡಿದರು.

ಅವಾಮಿ ಲೀಗ್ ಮತ್ತು ಸಿಕ್ಸ್-ಪಾಯಿಂಟ್ ಚಳವಳಿ:  ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದ ಅವಾಮಿ ಲೀಗ್, ಪೂರ್ವ ಪಾಕಿಸ್ತಾನಕ್ಕೆ ಹೆಚ್ಚಿನ ಸ್ವಾಯತ್ತತೆ ಮತ್ತು ಸಿಕ್ಸ್-ಪಾಯಿಂಟ್(ಆರು ಅಂಶಗಳ) ಚಳುವಳಿಯ ಅನುಷ್ಠಾನಕ್ಕೆ ಒತ್ತಾಯಿಸಿತು.

ಆಪರೇಷನ್ ಸರ್ಚ್‌ಲೈಟ್: ಯುದ್ಧಕ್ಕೆ ತಕ್ಷಣದ ಕಾರಣ ಆಪರೇಷನ್ ಸರ್ಚ್‌ಲೈಟ್. ಇದು ಮಾರ್ಚ್ 25, 1971ರಂದು ಪಾಕಿಸ್ತಾನಿ ಮಿಲಿಟರಿಯಿಂದ ನಡೆಸಲಾದ ಮಿಲಿಟರಿ ಕಾರ್ಯಾಚರಣೆಗೆ ಇಟ್ಟ ಹೆಸರು. ಇದು ಪೂರ್ವ ಪಾಕಿಸ್ತಾನದಲ್ಲಿ ಸ್ವಾಯತ್ತತೆಯ ಬೇಡಿಕೆಗಳ ಬಗ್ಗೆ ನಡೆಯುತ್ತಿರುವ ಹೋರಾಟಗಳನ್ನು ನಿಗ್ರಹಿಸುವ ಗುರಿ ಇತ್ತು. ಅನೇಕ ಸಾಮಾನ್ಯ ನಾಗರಿಕರ ಹತ್ಯೆ, ಬುದ್ಧಿಜೀವಿಗಳನ್ನು ಗುರಿಯಾಗಿಸಿದ ಹತ್ಯಾಕಾಂಡಗಳು ನಡೆದವು.

ಯುದ್ಧದ ಪ್ರಮುಖ ಘಟನೆಗಳು

l→ಸ್ವಾತಂತ್ರ್ಯದ ಘೋಷಣೆ: ಮಾರ್ಚ್ 26, 1971ರಂದು, ಶೇಖ್ ಮುಜಿಬುರ್ ರೆಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದ್ದು ಇದಕ್ಕೆ ಬಂಗಾಳೀಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

l→ಭಾರತದ ಒಳಗೊಳ್ಳುವಿಕೆ : ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಭಾರತವು ಬಾಂಗ್ಲಾದೇಶದ ಪಡೆಗಳಿಗೆ ಬೆಂಬಲವನ್ನು ನೀಡಿತು. ಅಂತಿಮವಾಗಿ ಡಿಸೆಂಬರ್ 1971ರಲ್ಲಿ ಭಾರತದ ಮಿಲಿಟರಿಶಕ್ತಿಯು ನೇರವಾಗಿ ಮಧ್ಯಪ್ರವೇಶಿಸಿತು. ಇದು ಯುದ್ಧದಲ್ಲಿ ನಿರ್ಣಾಯಕ ತಿರುವಿಗೆ ಕಾರಣವಾಯಿತು.

l→ಪಾಕಿಸ್ತಾನಿ ಪಡೆಗಳ ಶರಣಾಗತಿ: ಡಿಸೆಂಬರ್ 16, 1971 ರಂದು, ಪಾಕಿಸ್ತಾನಿ ಮಿಲಿಟರಿಯು ಢಾಕಾದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಪಡೆಗಳಿಗೆ ಶರಣಾಗುವುದರೊಂದಿಗೆ ಯುದ್ಧ ಅಂತ್ಯಗೊಂಡಿತು . ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಯಿತು.

ಪರಿಣಾಮಗಳು

ಅಪಾರ ಜೀವಹಾನಿ : ಯುದ್ಧದಿಂದ ಅಂದಾಜು 3 ಲಕ್ಷದಿಂದ 30 ಲಕ್ಷ ಸಾವು–ನೋವುಗಳು ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಪಾಕಿಸ್ತಾನಿ ಮಿಲಿಟರಿಯ ದೌರ್ಜನ್ಯ ಎಲ್ಲೆ ಮೀರಿತು.

ರಾಜಕೀಯ ಬದಲಾವಣೆಗಳು: ಬಾಂಗ್ಲಾದೇಶ ಸಂಸದೀಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿತು ಮತ್ತು ರಾಷ್ಟ್ರದ ಪುನರ್‌ನಿರ್ಮಾಣ ಮತ್ತು ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸಲು ಉತ್ತಮ ನೀತಿಗಳನ್ನು ಅನುಸರಿಸಿತು.

ಭಾರತದೊಂದಿಗಿನ ಸಂಬಂಧಗಳು: ಯುದ್ಧವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳನ್ನು ಬಲಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT