ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ಹುದ್ದೆಗೆ ತಯಾರಿ ಹೇಗೆ?

Last Updated 29 ಜನವರಿ 2023, 20:30 IST
ಅಕ್ಷರ ಗಾತ್ರ

1. ನಾನು ಸರ್ಕಾರಿ ಮಹಾವಿದ್ಯಾಲಯದಲ್ಲಿ ಐಚ್ಛಿಕ ವಿಷಯವಾಗಿ ಗ್ರಾಮೀಣ ಅಭಿವೃದ್ಧಿ ವಿಷಯವನ್ನು ತೆಗೆದುಕೊಂಡು, ಪ್ರಥಮ ಸ್ಥಾನದೊಂದಿಗೆ ಉತ್ತೀರ್ಣನಾಗಿದ್ದೇನೆ. ಈಗ, ಪಿಡಿಒ ಹುದ್ದೆಗೆ ತಯಾರಿ ಆಗಬೇಕು ಎಂದುಕೊಂಡಿದ್ದೇನೆ. ಹೇಗೆ ತಯಾರಿ ಮಾಡಬೇಕು ತಿಳಿಸಿ.
ಬಸವರಾಜ, ಊರು ತಿಳಿಸಿಲ್ಲ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಬೇಕೆನ್ನುವ ನಿಮಗೆ ಅಭಿನಂದನೆಗಳು. ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ
ಪರಿಣಾಮಕಾರಿ ಅನುಷ್ಠಾನ, ಪಂಚಾಯತ್ ಮಟ್ಟದಲ್ಲಿನ ಸರ್ವತೋಮುಖ ಅಭಿವೃದ್ಧಿ ಇತ್ಯಾದಿ ಪ್ರಮುಖ ಜವಾಬ್ದಾರಿಗಳಿರುವ ಈ ಹುದ್ದೆಯನ್ನು ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಇದಾದ ನಂತರ, ದಾಖಲಾತಿಗಳ ಪರಿಶೀಲನೆಯಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಪ್ರಶ್ನೆಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ಇರುತ್ತದೆ. ಎರಡನೇ ಪತ್ರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಪಟ್ಟಿರುತ್ತದೆ. ಈ ಪರೀಕ್ಷೆಯನ್ನು ಎಲ್ಲಾ ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ-ಅಧ್ಯಯನದಿಂದ
ತಯಾರಾಗುವುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೇ ಎನ್ನುವ ನಿರ್ಧಾರ ನಿಮ್ಮದು. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ
ಅಭ್ಯಾಸ, ಪರಿಣಾಮಕಾರಿ ಓದುವಿಕೆ ಮತ್ತು ಮಾರ್ಗದರ್ಶನವಿರಬೇಕು. ಹಾಗಾಗಿ, ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

2. ನಾನು ಎಂಎ (ಇಂಗ್ಲಿಷ್) ಮುಗಿಸಿದ್ದೇನೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ನೆಟ್) ತಯಾರಿ ನಡೆಸುತ್ತಿದ್ದೇನೆ. ಬಿಇಡಿ ತೆಗೆದುಕೊಂಡಿಲ್ಲ. ಶಿಕ್ಷಕ ವೃತ್ತಿಯಲ್ಲದೆ, ಬೇರೆ ಯಾವ ವೃತ್ತಿಯ ಆಯ್ಕೆಗಳಿವೆಯೆಂದು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.

ಶಿಕ್ಷಣದ ನಂತರದ ಬದುಕಿನ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಆ ಕನಸುಗಳನ್ನು ನನಸಾಗಿಸಲು ಸೂಕ್ತವಾದ ವೃತ್ತಿಯ ಬಗ್ಗೆ ಮೊದಲೇ ನಿಶ್ಚಯಿಸಿರಬೇಕು. ಏಕೆಂದರೆ, ಯಶಸ್ಸಿನ ಹಾದಿಯಲ್ಲಿ ವೈಯಕ್ತಿಕ ಬದುಕಿನ ಕನಸುಗಳೇ ಪ್ರೇರಣೆ. ಎಂಎ (ಇಂಗ್ಲಿಷ್) ನಂತರ, ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್‌ ಸೇರಿದಂತೆ ಮಾಧ್ಯಮಗಳು,
ಪ್ರಕಾಶನ ಸಂಸ್ಥೆಗಳು, ಚಿತ್ರೋದ್ಯಮ ಮತ್ತು ಮನರಂಜನಾ ಕ್ಷೇತ್ರ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ
ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಭಾಷಾಂತರ, ವಿಷಯಾಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಂತೆ ಸೂಕ್ತ ಕ್ಷೇತ್ರವನ್ನು ಆಯ್ಕೆ ಮಾಡಿ, ವೃತ್ತಿ ಯೋಜನೆಯನ್ನು ಮಾಡಬೇಕು. ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಕೌಶಲಾಭಿವೃದ್ಧಿಗೆ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಮಾಡುವುದು ಸೂಕ್ತ. ವೃತ್ತಿಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/@ExpertCareerConsultantAuthor

3. ನಾನು ಬಿಎ ಪ್ರಥಮ ಸೆಮಿಸ್ಟರ್ ಓದುತ್ತಿದ್ದೇನೆ. ಯುಪಿಎಸ್‌ಸಿ ಪರೀಕ್ಷೆ ಬರಿಯಬೇಕೆಂಬ ಆಸೆಯಿದೆ. ನಾನು ಯಾವ ರೀತಿ ತಯಾರಾಗಬೇಕು?. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿ; ಇಂಗ್ಲಿಷ್ ಭಾಷೆ ಮಾತನಾಡಲು ಹೇಗೆ ಪ್ರಯತ್ನಿಸಬೇಕು?
ಸುನೀಲ್ ಮೇಲ್ಮಟ್ಟಿ, ಗೋಕಾಕ್.
ಯುಪಿಎಸ್‌ಸಿ ಆಯೋಜಿಸುವ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.

 ಪೂರ್ವಭಾವಿ (ಬಹು ಆಯ್ಕೆ ಮಾದರಿ-ಇಂಗ್ಲಿಷ್/ಹಿಂದಿ).
 ಮುಖ್ಯ ಪರೀಕ್ಷೆ (ಕನ್ನಡದಲ್ಲಿ ಬರೆಯಬಹುದು).
 ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ (ಕನ್ನಡದಲ್ಲಿ ನೀಡಬಹುದು).
ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ, ಏಕಾಗ್ರತೆಯ ಜೊತೆಗೆ ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಇಂಗ್ಲಿಷ್ ಕಲಿಕೆ ಕುರಿತ ಉಪಯುಕ್ತ ಮಾಹಿತಿಯನ್ನು ಕಳೆದ ವರ್ಷದ ಅಕ್ಟೋಬರ್ 3ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ.

4. ನಾನು, ಬಿಎ ಅಂತಿಮ ವರ್ಷದ ವಿದ್ಯಾರ್ಥಿ. ಎಂಎ (ಅಪರಾಧ ಶಾಸ್ತ್ರ ಮತ್ತು ವಿಧಿ
ವಿಜ್ಞಾನ) ಮಾಡಬೇಕೆಂದು ನಿರ್ಧರಿಸಿದ್ದೇನೆ. ಎಂಎ ಮುಗಿದ ನಂತರ ನನಗೆ
ಯಾವ ಆಯ್ಕೆಗಳಿರುತ್ತವೆ?
ಹೆಸರು, ಊರು ತಿಳಿಸಿಲ್ಲ.
ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿ, ಮತ್ತು ಪದವಿಯ ನಂತರ ವೃತ್ತಿ ನಿರ್ವಹಣೆಗೆ ಬೇಕಾಗುವ ಕೌಶಲಗಳನ್ನು
ಗಮನದಲ್ಲಿಟ್ಟುಕೊಂಡು, ಎಂಎ (ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ) ಕೋರ್ಸ್ ಮಾಡಲು ನಿರ್ಧರಿಸಿದ್ದೀರಿ ಎಂದು ಭಾವಿಸುತ್ತೇನೆ. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ವಿಧಿ ವಿಜ್ಞಾನ ಲ್ಯಾಬೋರೇಟರಿಗಳು, ಸಿಐಡಿ, ಸಿಬಿಐ, ಐಬಿ, ಪೋಲೀಸ್ ಇಲಾಖೆ, ನರ್ಕೋಟಿಕ್ಸ್ ಇಲಾಖೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.

5. ಬಹಳ ಕಾಲದಿಂದ ನನಗೆ ಪಿಎಸ್‌ಐ ಆಗಬೇಕೆಂಬ ಕನಸು ಇತ್ತು, ಆದರೆ, ಈಗ ಮನೆಯ ಪರಿಸ್ಥಿತಿಯ ಸಲುವಾಗಿ ಓದುವುದನ್ನು ಅರ್ಧಕ್ಕೇ ಬಿಟ್ಟಿದ್ದೇನೆ. 2022ರಲ್ಲಿ ಹೆಸ್ಕಾಂ ಲೈನ್‌ಮನ್‌ ಆಗಿ ಕೆಲಸವನ್ನು ಮಾಡುತ್ತಿದ್ದೇನೆ. ಆದರೆ, ನನ್ನ ಕನಸನ್ನು ಮತ್ತೆ ನನಸು ಮಾಡಿಕೊಳ್ಳಲು ಅವಕಾಶವಿದೆಯೇ? ದಯವಿಟ್ಟು ಮಾರ್ಗದರ್ಶನ ನೀಡಿ.
ಹೆಸರು, ಊರು ತಿಳಿಸಿಲ್ಲ.

ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಬದುಕಿನ ಕನಸುಗಳನ್ನು ಸಾಕಾರಗೊಳಿಸುವ ರಹಸ್ಯ. ಏಕೆಂದರೆ, ಮಾನವನ ಚೈತನ್ಯಕ್ಕೆ, ಬುದ್ಧಿಶಕ್ತಿಗೆ ಮಿತಿಯಿಲ್ಲ; ಇಲ್ಲದ ಆ ಮಿತಿಯನ್ನು ನಮ್ಮ ಸೀಮಿತ ಆಲೋಚನೆಗಳಿಂದ, ನಕಾರಾತ್ಮಕ
ಚಿಂತನೆಗಳಿಂದ ನಾವೇ ಸ್ವತಃ ನಿರ್ಮಿಸುತ್ತೇವೆ. ಇದನ್ನು ತಡೆಯಲು, ಕನಸುಗಳು ಮಹತ್ವಾಕಾಂಶೆಯಾಗಬೇಕು.
ಪಿಎಸ್‌ಐ ಆಗುವ ನಿಮ್ಮ ಕನಸನ್ನು ಸಾಕಾರಗೊಳಿಸುವ ಸದವಕಾಶ ಈಗ ನಿಮ್ಮ ಮುಂದಿದೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಆಗಲು ಯಾವುದಾದರೂ ಪದವಿಯ ಜೊತೆ ನಾಯಕತ್ವದ ಕೌಶಲ, ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜತೆ ಸಕಾರಾತ್ಮಕ ಧೋರಣೆಯಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಪಿಎಸ್‌ಐ ನೇಮಕಾತಿಯಲ್ಲಿ ಭಾಗವಹಿಸಿ, ಭವಿಷ್ಯ ರೂಪಿಸಿಕೊಳ್ಳಬಹುದು. ಪಿಎಸ್‌ಐ ನೇಮಕಾತಿಯ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ:
https://ksp-recruitment.in/

6. ನಾನು ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ. ನನ್ನ ಎಲ್ಲ ಅಂಕಪಟ್ಟಿಗಳಲ್ಲಿ ತಂದೆ ತಾಯಿಯವರ ಹೆಸರು ತಪ್ಪಾಗಿದೆ. ಮುಂದೆ ಸರ್ಕಾರಿ ಉದೋಗ್ಯದಲ್ಲಿ ಏನಾದರೂ ಸಮಸ್ಯೆಯಾಗಬಹುದೇ?
ಹೆಸರು, ಊರು ತಿಳಿಸಿಲ್ಲ.
ಸರ್ಕಾರಿ ಉದ್ಯೋಗದ ಅಪೇಕ್ಷೆಯಿರುವುದರಿಂದ, ಸಮಯವಿರುವಾಗಲೇ ಅಂಕಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವುದು ಸೂಕ್ತ. ದಾಖಲಾತಿಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವ ವ್ಯವಸ್ಥೆಯಿದೆ. ಹಾಗಾಗಿ, ನಿಗದಿತ ಅರ್ಜಿಯನ್ನು ಕಾಲೇಜಿನ ಮುಖಾಂತರ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT