ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲೇಜು ಲೈಬ್ರರಿ ಎಂಬ ಆಪ್ತಮಿತ್ರ

–ಆರ್.ಜಿ. ಲತ
Published : 14 ಏಪ್ರಿಲ್ 2024, 21:03 IST
Last Updated : 14 ಏಪ್ರಿಲ್ 2024, 21:03 IST
ಫಾಲೋ ಮಾಡಿ
Comments

ಹಿಂಗ ಒಂದಿನ ನಾನು ಮತ್ತು ಗೆಳತ್ಯಾರು ಕ್ಲಾಸು ಇಲ್ಲಾಂತ ಮಾತಾಡ್ತಾ ಕೂತಿದ್ವಿ. ಆಗ ಗೆಳತಿ ಸಿಂಧು ‘ನಾವು ಹಿಂಗ ಹಲ್ಟಿ ಹೊಡಿತಾ ಕೂತ್ರೆ ಸುಮ್ನೆ ಟೈಮ್ ವೇಸ್ಟ್ ಆಕೈತಿ. ಇದ್ರ ಬದ್ಲಾಗಿ ಒಂದೀಟ ಲೈಬ್ರರಿಗಾದ್ರೂ ಹೋಗಾಣ ರ‍್ರೀ’ ಅಂದಳು. ಆಗ ರಕ್ಷಿತ ‘ಅಯ್ಯಾ, ಅದೇನು ಯಾವಾಗ ನೋಡಿದ್ರೂ ಲೈಬ್ರರಿ ಲೈಬ್ರರಿ ಅಂತಾ ಇರ್ತೀಯಲ್ಲ, ಅಲ್ಲಿ ಅಂತಾದ್ದೇನಿದೆ’ ಎಂದು ಪ್ರಶ್ನಿಸಿದಳು. ನನಗೂ ಬಹಳ ದಿನದಿಂದ ಇಂತದ್ದೊAದು ಪ್ರಶ್ನೆ ಕಾಡುತ್ತಲೇ ಇತ್ತು. ‘ಅಲ್ಲಿ ಜಾದೂ ಏನಾದ್ರೂ ಇದೆಯಾ’ ಅಂತ ಕೇಳಿದೆ. ಅದಕ್ಕೆ ಸಿಂಧು ‘ಹೌದು ಅಲ್ಲಿ ಜಾದೂ ಇದೆ. ರ‍್ರೀ ತೋರಿಸ್ತೀನಿ’ ಅಂತ ನಮ್ಮನ್ನೆಲ್ಲ ಕರೆದೊಯ್ದಳು.
ಲೈಬ್ರರಿಯ ಒಳಗೆ ಕಾಲಿಡುತ್ತಿದ್ದಂತೆ ಏನೋ ಒಂಥರ ವಿನೀತ ಭಾವ ನಮ್ಮನ್ನು ಆವರಿಸಿತು. ಈ ಹಿಂದೆ ಅನೇಕ ಬಾರಿ ಇಲ್ಲಿಗೆ ಬಂದಿದ್ದೆವಾದರೂ ಇಂದೇಕೋ ವಿಶೇಷ ಭಾವ ಆವರಿಸಿತು. ಅಲ್ಲಿನ ಪ್ರಶಾಂತತೆಗೆ ಮಾರುಹೋದೆ. ನಮ್ಮ ಕಾಲೇಜಿನ ಲೈಬ್ರರಿ ಮುಖ್ಯ ರಸ್ತೆಯ ಪಕ್ಕದಲ್ಲೇ ಇದ್ದರೂ ಪ್ರಶಾಂತವಾಗಿತ್ತು. ಹೊರಗಿನ ಗೌಜು ಗದ್ದಲ ಅಲ್ಲಿರಲಿಲ್ಲ. ಒಂದು ಕ್ಷಣ ಇದೊಂದು ನೆಮ್ಮದಿಯ ತಾಣ ಎನ್ನಿಸಿತು. ಟೇಬಲ್ಲುಗಳ ಮೇಲೆ ಹರವಿದ್ದ ನ್ಯೂಸ್ ಪೇಪರ್‌ಗಳು, ಮ್ಯಾಗಜಿನ್‌ಗಳು, ಕರಪತ್ರಗಳು ಎಲ್ಲವೂ ನಮ್ಮನ್ನು ಸ್ವಾಗತಿಸಿದವು. ಕಪಾಟಿನಲ್ಲಿ ಬಂಧಿಯಾಗಿದ್ದ ಪುಸ್ತಕಗಳು ಓದುಗರ ಕೈಸೇರಲು ಹಾತೊರೆಯುತ್ತಿವೆ ಎನ್ನಿಸಿತು. ಹೌದಲ್ಲ! ಇಷ್ಟೊಂದು ಪುಸ್ತಕಗಳು, ಜ್ಞಾನದ ಸಂಪನ್ಮೂಲಗಳು ನಮಗಾಗಿ ಇರುವಾಗ ನಾವೇಕೆ ಇದನ್ನೆಲ್ಲಾ ಮರೆತೆವು ಎನ್ನಿಸಿತು. ಏನಾದರೂ ಆಗಲಿ ಇನ್ನು ಮುಂದೆ ಇಲ್ಲಿನ ಪುಸ್ತಕಗಳನ್ನು ಒಮ್ಮೆಯಾದರೂ ಕೈಯಲ್ಲಿ ಹಿಡಿದು ಅದರೊಳಗಿನ ಜ್ಞಾನವನ್ನು ವರ್ಗಾವಣೆ ಮಾಡಿಕೊಳ್ಳಬೇಕೆಂದು ದೃಢ ನಿಶ್ಚಯ ಮಾಡಿದೆವು ಮತ್ತು ನಮ್ಮನ್ನೆಲ್ಲ ಅಲ್ಲಿಗೆ ಕರೆದುತಂದ ಸಿಂಧುಗೆ ತ್ಯಾಂಕ್ಸ್ ಹೇಳಿದೆವು. ಆನಂತರ ಕಾಲೇಜು ಲೈಬ್ರರಿಯ ಮಹತ್ವವನ್ನು ತಿಳಿದುಕೊಂಡೆ. ಅದನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ.

ಕಾಲೇಜು ಗ್ರಂಥಾಲಯದ ಅನುಕೂಲಗಳು :

ಕಾಲೇಜು ಗ್ರಂಥಾಲಯವು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಜ್ಞಾನ ಸಂಪನ್ಮೂಲವಾಗಿದೆ. ಅದರ ಉಪಯೋಗಗಳು ಅನನ್ಯ. ಆದಾಗ್ಯೂ ಕೆಲ ಮಹತ್ವದ ಉಪಯೋಗಗಳು ಕೆಳಗಿನಂತಿವೆ.

ಶೈಕ್ಷಣಿಕ ಪ್ರಯೋಜನ : ಕಾಲೇಜು ಗ್ರಂಥಾಲಯವು ನಮ್ಮ ಶೈಕ್ಷಣಿಕ ಮಿತ್ರ ಇದ್ದಂತೆ. ಅಲ್ಲಿನ ಪುಸ್ತಕಗಳು, ನಿಯತಕಾಲಿಕಗಳು, ಶೈಕ್ಷಣಿಕ ಸಾಮಗ್ರಿಗಳು, ನಮ್ಮ ಕಲಿಕಾ ವಿಷಯಗಳ ಸಮಗ್ರ ತಿಳಿವಳಿಕೆಯನ್ನು ನೀಡುತ್ತದೆ ಮತ್ತು ನಮ್ಮ ಅಧ್ಯಯನಕ್ಕೆ ಉತ್ಕೃಷ್ಟವಾದ ಮತ್ತು ಅಗತ್ಯವಿರುವ ಮಾಹಿತಿಯನ್ನು ಹುಡುಕಲು ಸಹಾಯ ಮಾಡುತ್ತದೆ. ಹೊಸ ರಾಷ್ಟಿçÃಯ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ಪ್ರತಿ ಕಲಿಕಾಂಶವನ್ನು ವಿಸ್ಕೃತವಾಗಿ ಅಧ್ಯಯನ ಮಾಡಲೇಬೇಕಿದೆ. ವಿಸ್ಕೃತ ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳನ್ನು ಗ್ರಂಥಾಲಯ ಒದಗಿಸುತ್ತದೆ. ಸಿಲಬಸ್‌ಗೆ ನಿಗದಿ ಪಡಿಸಿದ ಎಲ್ಲಾ ಪುಸ್ತಕಗಳು ಲಭ್ಯ ಇಲ್ಲದಿದ್ದಾಗಲೂ ಗ್ರಂಥಾಲಯವು ಆಕರ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ಸಹಾಯ ಮಾಡುತ್ತದೆ.

ಭವಿಷ್ಯದ ಬುನಾದಿಗೆ ಅಗತ್ಯ ಸಾಮಗ್ರಿ : ಪಿ.ಯು.ಸಿ, ಪದವಿ ಅಥವಾ ಸ್ನಾತಕೋತ್ತರ ಪದವಿ ನಂತರ ಉದ್ಯೋಗ ಗಳಿಸಿಲು ಬೇಕಾದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ದತೆಗೆ ಅಗತ್ಯ ಸಂಪನ್ಮೂಲ ಸಾಹಿತ್ಯವನ್ನು ಕಾಲೇಜು ಗ್ರಂಥಾಲಯ ಒದಿಸುತ್ತದೆ. ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ.ಯಂತಹ ಮಹತ್ತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ಸಂಪನ್ಮೂಲ ಇಲ್ಲಿ ದೊರೆಯುತ್ತದೆ. ಇದನ್ನು ಬಳಸಿಕೊಂಡು ನಮ್ಮ ಭವಿಷ್ಯದ ಬುನಾದಿಯನ್ನು ಭದ್ರಗೊಳಿಸಿಕೊಳ್ಳಬಹುದು.

ನಿಶ್ಯಬ್ದ ಅಧ್ಯಯನದ ಸ್ಥಳ : ಗ್ರಂಥಾಲಯಗಳು ನಿಶ್ಯಬ್ದ ಮತ್ತು ವ್ಯಾಕುಲತೆ ಮುಕ್ತ ವಾತಾವರಣವನ್ನು ಹೊಂದಿರುತ್ತವೆ. ಹಾಗಾಗಿ ಅಲ್ಲಿ ನಾವು ಯಾವುದೇ ಅಡೆತಡೆಗಳಿಲ್ಲದೆ ನಮ್ಮ ಅಧ್ಯಯನಗಳ ಮೇಲೆ ಗಮನ ಕೇಂದ್ರೀಕರಿಸಬಹುದು. ಮನೆ ಅಥವಾ ವಸತಿ ನಿಲಯಗಳಲ್ಲಿ ಸಿಗದಿರುವ ಪ್ರಶಾಂತತೆ ಇಲ್ಲಿರುವುದರಿಂದ ಓದಿನ ಮೇಲೆ ಗಮನ ಕೇಂದ್ರೀಕರಿಸಲು ಇದು ಸಹಾಯಕವಾಗುತ್ತದೆ.

ವಿಮರ್ಶಾತ್ಮಕ ಚಿಂತನೆಗೆ ರಹದಾರಿ : ಗ್ರಂಥಾಲಯದಲ್ಲಿನ ಪುಸ್ತಕಗಳು ವೈವಿಧ್ಯಮಯ ಆಗಿರುವುದರಿಂದ ವಿಷಯಕ್ಕೆ ಪೂರಕವಾದ ವಿವಿಧ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲಿನ ಪುಸ್ತಕಗಳನ್ನು ಓದುವ ಮೂಲಕ ನಮ್ಮಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಮೂಡುತ್ತದೆ. ಇದು ನಮ್ಮ ಸ್ವಂತ ಸ್ವತಂತ್ರ ಆಲೋಚನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ಹೆಚ್ಚು ಸ್ವಯಂ ಕಲಿಕೆಗೆ ಸಹಾಯ ಮಾಡುತ್ತದೆ.

ಹಣಕಾಸಿನ ಉಳಿತಾಯ : ಪಠ್ಯಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಲು ಬೇಕಾದ ಹಣವನ್ನು ಗ್ರಂಥಾಲಯಗಳು ಉಳಿಸುತ್ತವೆ. ಇವು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಅತ್ಯಮೂಲ್ಯ ನಿಧಿಗಳಾಗಿವೆ. ಇಲ್ಲಿ ಉಚಿತವಾಗಿ ಪಠ್ಯಪುಸ್ತಕಗಳು ಮತ್ತು ಇತರ ಅಧ್ಯಯನ ಸಾಮಗ್ರಿಗಳನ್ನು ಎರವಲು ಪಡೆದು ಓದಬಹುದು. ಆದ್ದರಿಂದ ಗ್ರಂಥಾಲಯಗಳು ಹಣವನ್ನು ಉಳಿತಾಯ ಮಾಡುತ್ತವೆ.


ಗ್ರಂಥಾಲಯವನ್ನು ಹೀಗೆ ಬಳಸೋಣ :
• ನಿಗದಿತವಾಗಿ ಗ್ರಂಥಾಲಯಕ್ಕೆ ಭೇಟಿ ನೀಡಿ ಜ್ಞಾನವನ್ನು ಪ್‌ಡೇಟ್ ಮಾಡಿಕೊಳ್ಳೋಣ.
• ಗ್ರಂಥಪಾಲಕರ ಸಹಾಯ ಪಡೆದು ಉತ್ತಮ ಪುಸ್ತಕಗಳನ್ನು ಎರವಲು ಪಡೆದು ಓದಿ ಹಿಂದಿರುಗಿಸೋಣ.
• ಕಾಲೇಜು ಗ್ರಂಥಾಲಯದಲ್ಲಿ ಆಯೋಜನೆಗೊಳ್ಳುವ ಚರ್ಚೆ, ಸಂವಾದದಲ್ಲಿ ಭಾಗವಹಿಸಿ ಜ್ಞಾವನ್ನು ವಿಸ್ತಿರಿಸಿಕೊಳ್ಳೋಣ.
• ವಿರಾಮ ವೇಳೆಯಲ್ಲಿ ಅಲ್ಲಲ್ಲಿ ಕುಳಿತು ಸಮಯ ವ್ಯರ್ಥ ಮಾಡುವ ಬದಲಾಗಿ ಲೈಬ್ರರಿಯ ಪುಸ್ತಕ ಓದೋಣ.
• ಕೋರ್ಸ್ಗೆ ಮೀಸಲಾದ ಪರಾಮರ್ಶನ ಗ್ರಂಥಗಳನ್ನು ಓದೋಣ.
• ಗ್ರಂಥಾಲಯದ ಓದುಗರ ಬಳಗವನ್ನು ಸೇರಿಕೊಳ್ಳೋಣ ಅಥವಾ ನಮ್ಮದೇ ಆದ ಓದುಗರ ಬಳಗವನ್ನು ಸೃಜಿಸಿಕೊಳ್ಳೋಣ. ಆ ಮೂಲಕ ಓದಿದ ಪುಸ್ತಕಗಳ ಕುರಿತು ಚರ್ಚೆ ಮಾಡೋಣ.
• ಗ್ರಂಥಾಲಯದ ಪಾವಿತ್ರತೆ ಕಾಪಾಡೋಣ.
ಗ್ರಂಥಾಲಯದಲ್ಲಿ ಕೇವಲ ಪುಸ್ತಕಗಳಿರುವುದಿಲ್ಲ, ಬದಲಾಗಿ ನಮ್ಮ ಭವಿಷ್ಯದ ಬೆಳಕೂ ಇದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಭವಿಷ್ಯದ ಬೆಳಕಾಗೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT