ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾವಾಣಿ: ಡಿಜಿಟಲ್ ಡಿಟಾಕ್ಸ್ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಪರ್ಧಾವಾಣಿ ಲೇಖನ
Published 15 ಫೆಬ್ರುವರಿ 2024, 0:01 IST
Last Updated 15 ಫೆಬ್ರುವರಿ 2024, 0:01 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರವು ಇತ್ತೀಚೆಗೆ ಆಲ್ ಇಂಡಿಯಾ ಗೇಮ್ ಡೆವಲಪರ್ಸ್ ಫೋರಮ್ (ಎಐಜಿಡಿಎಫ್) ಜತೆಗೆ‘ ಡಿಜಿಟಲ್ ಡಿಟಾಕ್ಸ್’ ಎಂಬ ಉಪಕ್ರಮವನ್ನು ಪ್ರಾರಂಭಿಸಲು ತನ್ನ ಸಹಯೋಗವನ್ನು ಘೋಷಿಸಿದೆ. ಗೇಮಿಂಗ್ ಡಿಸಾರ್ಡರ್‌ ಮತ್ತು ಸಾಮಾಜಿಕ ಮಾಧ್ಯಮದ ಅತಿ ಬಳಕೆಯನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮವಾಗಿದೆ.

ಈ ಉಪಕ್ರಮದ ಭಾಗವಾಗಿ, ಡಿಜಿಟಲ್ ಡಿಟಾಕ್ಸ್ ಕೇಂದ್ರಗಳನ್ನು ಕರ್ನಾಟಕದಾದ್ಯಂತ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸ್ಥಾಪಿಸಲಿದೆ. ಈ ಕೇಂದ್ರಗಳು ತಂತ್ರಜ್ಞಾನದ ಬಳಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುವಂತೆ, ತರಬೇತಿ ಪಡೆದ ವೃತ್ತಿಪರರ ವೈಯಕ್ತಿಕ ಮಾರ್ಗದರ್ಶನ ಮತ್ತು ಸಮಾಲೋಚನೆಯ ಸೇವೆಗಳನ್ನು ನೀಡುತ್ತವೆ. ಇದಕ್ಕಾಗಿ ಹೆಲ್ಪ್‌ ಲೈನ್‌ಗಳನ್ನು ನೀಡಲಾಗುತ್ತದೆ.

ಡಿಜಿಟಲ್ ಡಿಟಾಕ್ಸ್ ಎಂದರೇನು ?

l→ಸಕಲವೂ ಡಿಜಿಟಲೈಸ್‌ ಆಗಿರುವ ಜಗತ್ತಿನಲ್ಲಿ, ಡಿಜಿಟಲ್ ಡಿಟಾಕ್ಸ್ ಪರಿಕಲ್ಪನೆಯು ಡಿಜಿಟಲ್‌ ಸಾಧನಗಳ ನಿರಂತರ ಸಂಪರ್ಕದ ಋಣಾತ್ಮಕ ಪರಿಣಾಮಗಳನ್ನು ನಿವಾರಿಸುವ ಸಾಧನವಾಗಿ ನಿಲ್ಲುತ್ತದೆ.

l→ಡಿಜಿಟಲ್ ಡಿಟಾಕ್ಸ್ ಎನ್ನುವುದು ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ದೂರವಿರುವುದು.

ಡಿಜಿಟಲ್ ಗೀಳಿನ ಲಕ್ಷಣಗಳು

l→ತಂತ್ರಜ್ಞಾನದ ಅತಿಯಾದ ಬಳಕೆ: ಡಿಜಿಟಲ್ ಸಾಧನಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಅತಿ ಬಳಕೆಯಿಂದ ಕಡಿಮೆ ಉತ್ಪಾದಕತೆ, ನಿದ್ರಾಹೀನತೆ, ಅತಿ ಒತ್ತಡ ಮತ್ತು ಹದಗೆಡುವ ಮಾನಸಿಕ ಆರೋಗ್ಯದಂಥ ಸಮಸ್ಯೆಗಳನ್ನು ಸೃಷ್ಟಿಸಬಹುದು.

l→ಡಿಜಿಟಲ್ ಗೀಳು:  ತಂತ್ರಜ್ಞಾನದ ಬಳಕೆ ಗೀಳಾಗಿ ಪದೇ ಪದೇ ವಾಟ್ಸ್‌ಆ್ಯಪ್‌ ಪರೀಕ್ಷಿಸುವುದು, ತುಂಬಾ ಹೊತ್ತು ಇ–ಮೇಲ್‌ ನೋಡದಿದ್ದರೆ ಚಡಪಡಿಸುವುದು,  ಆನ್‌ಲೈನ್‌ನಲ್ಲಿ ಇಲ್ಲದಿರುವಾಗ ಇತರ ವಿಷಯಗಳತ್ತ ಕೇಂದ್ರೀಕರಿಸುವಲ್ಲಿ ವಿಫಲರಾಗುವುದು.

l→ಗೇಮಿಂಗ್‌ ಡಿಸ್‌ ಆರ್ಡರ್: ಮಕ್ಕಳು ಅತಿ ಗೇಮಿಂಗ್‌ ಗೀಳಿನಿಂದಾಗಿ ಗೇಮಿಂಗ್‌ ಡಿಸ್‌ಆರ್ಡರ್‌ಗಳಿಗೆ ಬಲಿಯಾಗಬಹುದು. ಭಾರತದಲ್ಲಿ, ಆನ್‌ಲೈನ್‌ನಲ್ಲಿ ಕಳೆಯುವ ಸಮಯವು ಇತರ ದೇಶಗಳಂತೆ ಇನ್ನೂ ಹೆಚ್ಚಿಲ್ಲದಿದ್ದರೂ, ವಯಸ್ಕ ಭಾರತೀಯ ಗೇಮರ್‌ಗಳಲ್ಲಿ ಸುಮಾರು ಕಾಲು ಭಾಗದಷ್ಟು ಆಟಗಾರರು ಆಟಗಳನ್ನು ಆಡುತ್ತಾ  ಕೆಲಸಕ್ಕೆ  ತಪ್ಪಿಸಿಕೊಂಡಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.

l→ನೆಮ್ಮದಿ ಮರೀಚಿಕೆ: ನಿರಂತರ ಅಧಿಸೂಚನೆಗಳು, ಇ–ಮೇಲ್‌ಗಳು, ಸಂದೇಶಗಳು ಮತ್ತು ಸಾಮಾಜಿಕ ಮಾಧ್ಯಮ ಅಪ್‌ಡೇಟ್‌ಗಳ ನಿರಂತರ ಚಟುವಟಿಕೆಗಳು ನೆಮ್ಮದಿಯನ್ನು ಕಸಿಯಬಹುದು. ಅತಿಯಾದ ಚಟುವಟಿಕೆಯಿಂದಾಗಿ ಮಾನಸಿಕ ನಿರಾಳತೆಯನ್ನು ಕಳೆದುಕೊಳ್ಳಬಹುದು.

l→ಮಾಹಿತಿಯ ಭಾರ: ನಿರಂತರವಾಗಿ ನೋಟಿಫಿಕೇಶನ್‌ಗಳೊಂದಿಗೆ ಬಂದುಬೀಳುವ ಮಾಹಿತಿಯು ವ್ಯಕ್ತಿಗಳನ್ನು ಸಾಮಾಜಿಕ ಚಟುವಟಿಕೆಗಳಿಂದ ವಿಮುಖರನ್ನಾಗಿಸಬಹುದು. ಮಾಹಿತಿಗಳ ಅತಿಭಾರವು ಇತರ ಗುರಿಗಳತ್ತ  ಕೇಂದ್ರೀಕರಿಸುವಲ್ಲಿ ವಿಫಲರಾಗಿ ಅರ್ಥಪೂರ್ಣ ಆಫ್‌ಲೈನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

l→ಆರೋಗ್ಯ ಕಾಳಜಿಗಳು:  ದೀರ್ಘಾವಧಿಗೆ ಡಿಜಿಟಲ್‌ ಪರದೆಗಳನ್ನು ನೋಡುತ್ತಿದ್ದರೆ  ಕಣ್ಣಿನ ಆಯಾಸ, ನಿಧಾನವಾಗಿ ದೃಷ್ಟಿಗುಂದುತ್ತಾ ಹೋಗುವುದು,(ಸಣ್ಣ ವಯಸ್ಸಿನಲ್ಲಿಯೇ ಕನ್ನಡಕ ಬಳಸಬೇಕಾಗುವ ಅನಿವಾರ್ಯತೆ)ತಲೆನೋವು, ತಪ್ಪಾದ ಆಂಗಿಕ ಭಂಗಿಯನ್ನು ಅಭ್ಯಾಸ ಮಾಡುವುದು ಅಂದರೆ ಬೆನ್ನು ಬಾಗಿಸಿ ನಡೆಯುವುದು ಅಥವಾ ಭುಜಗಳನ್ನು ಇಳಿಬಿಟ್ಟಂತೆ ನಿಲ್ಲುವುದು ಮತ್ತು ಬೊಜ್ಜು ಬೆಳೆಸಿಕೊಳ್ಳುವಂಥ ಸಮಸ್ಯೆಗಳಿಂದ ದೈಹಿಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

l→ಸೌಂದರ್ಯ ಕಾಳಜಿಗಳು: ಅತಿಯಾಗಿ ಸ್ಕ್ರೀನ್‌ ನೋಡುವುದರಿಂದ ಅಲ್ಲಿಂದ ಹೊರಸೂಸುವ ಬ್ಲೂ ರೇಸ್‌ ಚರ್ಮದ ಕಾಂತಿಗುಂದಿಸುತ್ತವೆ ಮತ್ತು ವಯಸ್ಸಿಗೆ ಮುನ್ನ ನಿರಿಗೆ ಮೂಡಲು ಕಾರಣವಾಗುತ್ತವೆ ಎಂದು ಕೂಡಾ ಸಂಶೋಧನೆಗಳಿಂದ ತಿಳಿದುಬಂದಿದೆ.

2. ಡಿಜಿಟಲ್ ಡಿಟಾಕ್ಸ್‌ನ ಪ್ರಯೋಜನಗಳು

ಸುಧಾರಿತ ಮಾನಸಿಕ ಆರೋಗ್ಯ

ಡಿಜಿಟಲ್ ಸಾಧನಗಳಿಂದ ಸಂಪರ್ಕ ಕಡಿಮೆಗೊಳಿಸುವುದು ಒತ್ತಡ, ಆತಂಕ ಮತ್ತು ಅತಿಯಾದ ಭಾವನಾತ್ಮಕ ಏರಿಳಿತಗಳನ್ನು ನಿವಾರಿಸುತ್ತದೆ. ವಿಶ್ರಾಂತಿ, ಸಾವಧಾನದ ಮನಸ್ಥಿತಿಯನ್ನು ಹೊಂದಲು ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಹೊಂದಲು ಸಹಾಯ ಮಾಡುತ್ತದೆ.

ಹೆಚ್ಚಿನ ಉತ್ಪಾದಕತೆ

ತೀವ್ರ ತಂತ್ರಜ್ಞಾನದ ಒಡನಾಟದಿಂದ ದೂರವಾಗುವ ಮೂಲಕ, ಗೊಂದಲ ಮತ್ತು ಪದೇಪದೇ ಅಡಚಣೆಗಳನ್ನು ಕಡಿಮೆ ಮಾಡುವ ಮೂಲಕ, ವ್ಯಕ್ತಿಗಳು ತಮ್ಮ ಕೆಲಸ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನ ಗಮನಸಾಧಿಸಿ ಸೃಜನಶೀಲ ಕಾರ್ಯಗಳನ್ನು ಸಾಧಿಸಬಹುದು. ಕೆಲಸದಲ್ಲಿಯೂ ದಕ್ಷತೆಯನ್ನು ಸಾಧಿಸಬಹುದು.

ಉತ್ತಮ ನಿದ್ರೆಯ ಗುಣಮಟ್ಟ

ಮಲಗುವ ಕೆಲವು ಗಂಟೆಗಳ ಮುನ್ನವೇ ಕಡ್ಡಾಯವಾಗಿ ಸ್ಕ್ರೀನ್‌ ನಿಂದ ದೂರವಿರುವುದು, ಸ್ಕ್ರೀನಿಂಗ್‌ ಸಮಯವನ್ನು ಸೀಮಿತಗೊಳಿಸುವುದು ಉತ್ತಮ ನಿದ್ರೆಯನ್ನು ಹೊಂದಲು ಸಹಾಯ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟ ಮತ್ತು ಅವಧಿಯನ್ನು ಸುಧಾರಿಸುತ್ತದೆ. ಸೊಗಸಾದ ನಿದ್ದೆಯು ಯಾವುದೇ ವ್ಯಕ್ತಿಗಳಿಗೆ ಸಹಜವಾಗಿಯೇ ಹೆಚ್ಚಿದ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ.

ಬಲವಾಗುವ ಸಂಬಂಧಗಳು

ಡಿಜಿಟಲ್ ಡಿಟಾಕ್ಸ್ ವ್ಯಕ್ತಿಗಳು ತಮ್ಮ ಗೆಳೆಯಗೆಳತಿಯರ ಜತೆ ಸಹಜವಾಗಿ ಬೆರೆಯಲು, ಸಂಬಂಧಗಳಿಗೆ ಆದ್ಯತೆ ನೀಡಲು, ವೈಯಕ್ತಿಕ ಸಂಪರ್ಕಗಳನ್ನು ಗಾಢವಾಗಿಸಲು ಮತ್ತು ಸ್ನೇಹಿತರು, ಕುಟುಂಬ ಮತ್ತು ಸಮುದಾಯದ ಸದಸ್ಯರೊಂದಿಗೆ ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ.ವಿಶೇಷವಾಗಿ ದಾಂಪತ್ಯದಲ್ಲಿ ಸಂಬಂಧಗಳ ಪುನರ್‌ ನವೀಕರಣಕ್ಕೆ ಕಾರಣವಾಗುತ್ತದೆ.

ಪ್ರಕೃತಿಯೊಂದಿಗೆ ಮರುಸಂಪರ್ಕ

ನಿಸರ್ಗದ ಜತೆ ಮುಖಾಮುಖಿಯಾಗುತ್ತಾ ಹೊರಾಂಗಣದಲ್ಲಿ ಸಮಯ ಕಳೆಯುವುದು ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾವು ನಿಸರ್ಗದ ಶಿಶುಗಳು ಎಂಬ ಪ್ರಜ್ಞೆಯನ್ನು ಬೆಳೆಸುತ್ತದೆ. ಸಹಜವಾಗಿಯೇ ಈ ಬದಲಾವಣೆಗಳು ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಕುಟುಂಬದ ಜತೆ ಬಾಂಧವ್ಯಗಳನ್ನು ಉತ್ತೇಜಿಸಿ ಪ್ರತ್ಯೇಕತೆ ಮತ್ತು ಬೇರ್ಪಡುವಿಕೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ.

3. ಡಿಜಿಟಲ್ ಡಿಟಾಕ್ಸ್ ಅನ್ನು ಕಾರ್ಯಗತಗೊಳಿಸುವ ತಂತ್ರಗಳು

ನಿಖರವಾದ ಗಡಿ

ನಿಖರವಾದ ಪರದೆ-ಮುಕ್ತ ಸಮಯಗಳು (ಉದಾ., ಊಟದ ಸಮಯದಲ್ಲಿ, ಮಲಗುವ ಮುನ್ನ) ಮತ್ತು ಪ್ರದೇಶಗಳು (ಉದಾ., ಮಲಗುವ ಕೋಣೆಗಳು, ಊಟದ ಟೇಬಲ್‌ ಗಳು) ತಂತ್ರಜ್ಞಾನದ ಬಳಕೆಯ ಸುತ್ತಲೂ ಸ್ಪಷ್ಟವಾದ ಗಡಿಗಳನ್ನು ಸ್ಥಾಪಿಸುವುದು.

ಶೆಡ್ಯೂಲ್ ಬ್ರೇಕ್‌ಗಳು

 ದೈನಂದಿನ ದಿನಚರಿಯಲ್ಲಿ ಡಿಜಿಟಲ್ ಸಾಧನಗಳಿಂದ ನಿಯಮಿತ ವಿರಾಮಗಳನ್ನು ಕಡ್ಡಾಯವಾಗಿ ಹಾಕುವುದು. ಉದಾಹರಣೆಗೆ ಕೆಲಸದ ಮಧ್ಯೆ ಸಣ್ಣ ನಡಿಗೆಗಳನ್ನು ಮಾಡುವುದು, ಚೇತೋಹಾರಿಯಾದ ಸಂಗೀತವನ್ನು ಆಲಿಸುವುದು, ಯಾವುದೇ ಇತರ ಆಫ್‌ಲೈನ್‌ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ಅನುಸರಿಸುವುದು.

ಪರದೆಯ ಸಮಯದ ಮಿತಿ

ನಮ್ಮ ಸ್ಕ್ರೀನ್ ಸಮಯವನ್ನು ಟ್ರ್ಯಾಕ್ ಮಾಡಲು ಮತ್ತು ಮಿತಿಗೊಳಿಸಲು ಅಪ್ಲಿಕೇಶನ್‌ಗಳು, ಸೆಟ್ಟಿಂಗ್‌ಗಳು ಅಥವಾ ಬಾಹ್ಯ ಪರಿಕರಗಳನ್ನು ಬಳಸುವುದು. ನಿರ್ದಿಷ್ಟ ಸಮಯದಷ್ಟೇ ಬಳಕೆಯ ಮಿತಿಗಳನ್ನು ಹೊಂದಿಸಿ ಮತ್ತು ದಿನದ ಕೆಲವು ಗಂಟೆಗಳಲ್ಲಿ ಡಿಜಿಟಲ್ ಡೌನ್‌ಟೈಮ್ ಅನ್ನು ಜಾರಿಗೊಳಿಸುವಂತಹಾ ಅಪ್ಲಿಕೇಶನ್ ಅನ್ನು ಬಳಸುವುದು.

ಸ್ವಯಂ ಅವಲೋಕನ

ನಿಮ್ಮ ತಂತ್ರಜ್ಞಾನದ ಬಳಕೆಯ ಬಗ್ಗೆ ಉದ್ದೇಶಪೂರ್ವಕವಾದ ಅರಿವನ್ನು ಬೆಳೆಸಿಕೊಳ್ಳುವುದು. ಡಿಜಿಟಲ್ ಸಂವಹನಗಳು ನಿಮ್ಮ ಮನಸ್ಥಿತಿ, ಶಕ್ತಿಯ ಮಟ್ಟಗಳು ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಗಮನ ಕೊಡುವುದು.ಡಿಜಿಟಲ್‌ ಗೀಳು ಶುರುವಾಗುವ ಮುನ್ನ ಹೇಗಿದ್ದೆ ಎಂದು ಅವಲೋಕನ ಮಾಡುವುದು.

ಆಫ್‌ಲೈನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು

ಓದುವುದು, ಅಡುಗೆ ಮಾಡುವುದು, ತೋಟಗಾರಿಕೆ ಮಾಡುವುದು, ವ್ಯಾಯಾಮ ಮಾಡುವುದು, ಕರಕುಶಲ ಕಲೆಗಳಲ್ಲಿ ತೊಡಗಿಸಿಕೊಳ್ಳುವುದು ಅಥವಾ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಂತಹ ಪರದೆಯ ಗೊಂದಲವಿಲ್ಲದೆ ಆಫ್‌ಲೈನ್ ಚಟುವಟಿಕೆಗಳ ಸಂತೋಷಗಳನ್ನು ಮರುಶೋಧನೆ ಮಾಡುವುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಡಿಜಿಟಲ್ ಡಿಟಾಕ್ಸ್ ತಂತ್ರಜ್ಞಾನದ ಅತಿಯಾದ ಬಳಕೆಯ ಋಣಾತ್ಮಕ ಪರಿಣಾಮಗಳನ್ನು ತಗ್ಗಿಸಲು ಮತ್ತು ಡಿಜಿಟಲ್ ಜೀವನಕ್ಕೆ ಹೆಚ್ಚು ಸಮತೋಲಿತ ವಿಧಾನವನ್ನು ಬೆಳೆಸಲು ಪೂರ್ವಭಾವಿ ಕಾರ್ಯತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಡಿಜಿಟಲ್ ಡಿಟಾಕ್ಸ್ ಅಭ್ಯಾಸಗಳನ್ನು ಸೇರಿಸುವ ಮೂಲಕ, ನಾವು ನಮ್ಮ ಡಿಜಿಟಲ್ ಅಭ್ಯಾಸಗಳ ಮೇಲಿನ ನಿಯಂತ್ರಣವನ್ನು ಪುನಃ ಪಡೆದುಕೊಳ್ಳಬಹುದು, ಆ ಮೂಲಕ ನಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡಬಹುದು ಮತ್ತು ಹೆಚ್ಚುತ್ತಿರುವ ಡಿಜಿಟಲೈಸ್ಡ್ ಜಗತ್ತಿನಲ್ಲಿ ನಾವು ನಮ್ಮೊಂದಿಗೆ, ನಿಸರ್ಗದೊಂದಿಗೆ ಮತ್ತು ಇತರರೊಂದಿಗೆ ಆಳವಾದ ಸಂಪರ್ಕಗಳನ್ನು ಬೆಳೆಸಿಕೊಳ್ಳಬಹುದು.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT