ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರ್ಮುಖಿ ವಿದ್ಯಾರ್ಥಿಗಳಿಗೆ ಕಲಿಸುವುದು ಹೇಗೆ?

Published : 23 ಸೆಪ್ಟೆಂಬರ್ 2024, 0:30 IST
Last Updated : 23 ಸೆಪ್ಟೆಂಬರ್ 2024, 0:30 IST
ಫಾಲೋ ಮಾಡಿ
Comments

ತರಗತಿಯಲ್ಲಿ ಅನೇಕ ವಿದ್ಯಾರ್ಥಿಗಳಿದ್ದಾಗ ಶಿಕ್ಷಕರಿಗೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಕೆಲವು ವಿದ್ಯಾರ್ಥಿಗಳು ಸುಮ್ಮನೆ ಕೂರಲಾಗದೆ ಏನಾದರೂ ಕೀಟಲೆ ಮಾಡುತ್ತಿರುತ್ತಾರೆ. ಕೆಲವರು ಚಿತ್ರಗಳನ್ನು ಬಿಡಿಸುತ್ತಿರುತ್ತಾರೆ.

ಕೆಲವು ಮಕ್ಕಳು ಅಂತರ್ಮುಖಿಗಳಾಗಿ ಮಾತನಾಡದೆ, ಪ್ರತಿಕ್ರಿಯೆ ನೀಡದೆ ಇರುವರು. ಆ ಮಕ್ಕಳಿಗೆ ಕಲಿಸಿದ್ದು ಅರ್ಥವಾಗುತ್ತಿದೆಯೇ ಇಲ್ಲವೇ ಎನ್ನುವುದು ಗೊತ್ತಾಗದೇ ಹೋಗಬಹುದು. ಅನೇಕ ಶಿಕ್ಷಕರಿಗೆ ಈ ಅಂತರ್ಮುಖಿ ವಿದ್ಯಾರ್ಥಿಗಳು ಒಂದು ಬಗೆಹರಿಯದ ಸಮಸ್ಯೆಯೇ ಆಗಿಬಿಡುವ ಸಾಧ್ಯತೆ ಹೆಚ್ಚು. ಅವರನ್ನು ಅರ್ಥ ಮಾಡಿಕೊಂಡರೆ ಶಿಕ್ಷಕರಿಗೆ ಮಾತ್ರವಲ್ಲ, ಪೋಷಕರಿಗೂ ಸಹಾಯವಾಗುವುದು.

ಅಂತರ್ಮುಖಿಗಳನ್ನು ಹೀಗೆ ವಿಂಗಡಿಸಬಹುದು. ಕೆಲವರು ಕೀಳರಿಮೆಯಿಂದ, ಹೇಳಿಕೊಳ್ಳಲಾಗದ ಭಯದಿಂದ, ಆತ್ಮವಿಶ್ವಾಸವಿಲ್ಲದ ಕಾರಣ ಅಂತರ್ಮುಖಿಗಳಾಗಿ ಉಳಿದಕೊಂಡಿರುತ್ತಾರೆ. ಕೆಲವರು ಯಾವುದೋ ಸಮಸ್ಯೆಯಿಂದಾಗಿ ಅಂತರ್ಮುಖಿಗಳಾಗಿರಬಹುದು. ಅವರ ಈ ನಡವಳಿಕೆಯನ್ನು ಗಮನಿಸಿದರೆ, ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡತೊಡಗಿದರೆ, ಕಾರಣ ತಿಳಿಯಬಹುದು. ಅದಕ್ಕೆ ಪರಿಹಾರ ಒದಗಿಸುವುದು ಸಾಧ್ಯವಾಗುತ್ತದೆ. ಮತ್ತೆ ಕೆಲವರು ಯಾವುದೇ ನಕಾರಾತ್ಮಕ ಅಂಶಗಳಿಲ್ಲದೇ ಸ್ವಭಾವತಃ ಅಂತರ್ಮುಖಿಗಳಾಗಿರಬಹುದು. ಅದಕ್ಕೆ ಆನುವಂಶಿಕ ಕಾರಣಗಳಿರಬಹುದು. ವಿಷಯಗಳನ್ನು ಅವರ ಮನಸ್ಸಿನಲ್ಲಿ ಮೆಲುಕು ಹಾಕುವ ರೀತಿ ಇರಬಹುದು, ದೇಹಗತಿ ತುಸು ಕಡಿಮೆ ವೇಗದ್ದಿರಬಹುದು, ಕೆಲವರು ಸಮರ್ಪಕತೆಯ ಮಟ್ಟ ತಲುಪಲು ಯಾವುದು ಸರಿ ಎಂಬ ತಾಕಲಾಟದಲ್ಲಿ ಇರಬಹುದು. ಇದಕ್ಕೆ ಕಾರಣ ಹುಡುಕಬೇಕಾದರೆ ಅವರ ನಡವಳಿಕೆಯನ್ನು ತುಸು ಸೂಕ್ಷ್ಮವಾಗಿ ಗಮನಿಸಬೇಕು.

  • ತಮ್ಮ ಮನಸ್ಸಿಗೆ ಹಿತವೆನಿಸುವ ಜನರೊಂದಿಗೆ ತಡೆಯಿಲ್ಲದೆ ಮಾತನಾಡುತ್ತಿರುವವರು ಎಲ್ಲರೊಡನೆಯೂ ಬೆರೆಯಲು ಇಷ್ಟಪಡದೇ ಹೋಗಬಹುದು. ವ್ಯಕ್ತಿಗಳ ನಡವಳಿಕೆ, ವರ್ತನೆಯ ಆಧಾರದಲ್ಲಿ ಅವರು ಬೆರೆಯಲು ಇಷ್ಟಪಡಬಹುದು.

  • ಪ್ರತಿಕ್ರಿಯೆ ನಿಧಾನ ಎಂದ ಮಾತ್ರಕ್ಕೆ ಅವರು ದಡ್ಡರಲ್ಲ. ಬಹುಮುಖ ಆಯಾಮಗಳಲ್ಲಿ ಅವರು ವಿಷಯವನ್ನು ಮನಸ್ಸಿನಲ್ಲಿ ಆಳವಾಗಿ ವಿಶ್ಲೇಷಿಸುತ್ತಿರಬಹುದು.

  • ಅನ್ಯಮನಸ್ಕತೆ ಒಂದು ಪ್ರಮುಖ ಗುಣ. ತಮ್ಮದೇ ಲೋಕದಲ್ಲಿ ಅವರ ಯೋಚನೆಗಳು ಹರಿಯುವ ಕಾರಣ ಪ್ರಸ್ತುತ ಪರಿಸ್ಥಿತಿಗೆ ಅವರು ಗಮನ ಕೊಡದಿರಬಹುದು. ಹೀಗಾಗಿ ಅವರು ಅನ್ಯಮನಸ್ಕರ ರೀತಿ ಕಾಣಬಹುದು. ತಾವು ಮಾಡುತ್ತಿರುವ ಕೆಲಸ ಕುರಿತು ಅವರಿಗೆ ಪೂರ್ಣ ಗಮನವೂ ಇಲ್ಲದಿರಬಹುದು.

  • ಅನೇಕ ವೇಳೆ ಅವರಿಗೆ ಗುಂಪಿನ ಜತೆ ಬೆರೆಯವುದು ಒಪ್ಪಿಗೆಯಾಗದಿರಬಹುದು. ಹಲವು ವಿಷಯಗಳನ್ನು ಒಮ್ಮೆಗೇ ಹೇಳುವುದರಿಂದ ಅವರ ಆಂತರಿಕ ಯೋಚನಾ ಲಹರಿಗೆ ಧಕ್ಕೆಯಾಗಬಹುದು.

ಇಂಥ ಅಂತರ್ಮುಖಿ ಮಕ್ಕಳು ಬುದ್ಧಿವಂತರೋ, ದಡ್ಡರೋ ಎಂಬುದನ್ನು ಅಂದಾಜು ಮಾಡಲಾಗದೆ ಪೋಷಕರು ಮತ್ತು ಶಿಕ್ಷಕರು ಪರದಾಡುತ್ತಾರೆ. ಅಂತರ್ಮುಖಿ ಮಕ್ಕಳು ದಡ್ಡರಲ್ಲ. ಸಮಾಜದಲ್ಲಿ ಸುಲಭವಾಗಿ ಬೆರೆಯುವ ಕೌಶಲ ಇರುವುದಿಲ್ಲ ಅಷ್ಟೆ. ಕಲಿಕೆಯಲ್ಲಿ ಹಿಂದುಳಿದವರಲ್ಲ. ಅವರ ಗ್ರಹಣ ಶಕ್ತಿ ಪ್ರಬಲವಾಗಿಯೇ ಇರುತ್ತದೆ. ದೊರೆತ ಮಾಹಿತಿಯನ್ನು ಹಲವು ಆಯಾಮಗಳಲ್ಲಿ ವಿಶ್ಲೇಷಿಸುವುದರಿಂದ ಆ ವಿಧಾನ ತುಸು ನಿಧಾನ ಎನಿಸಬಹುದು. ಮಾತಾಡಿಬಿಟ್ಟು, ತಪ್ಪು ಮಾಡಿದೆನಾ ಎಂದು ಕೊರಗುವ ಗುಂಪಿಗೆ ಸೇರುವುದಿಲ್ಲ. ಪ್ರತಿಕ್ರಿಯೆ ವ್ಯಕ್ತ ಪಡಿಸುವ ಮೊದಲು ವಿಶ್ಲೇಷಣೆಗೆ ಆದ್ಯತೆ ಕೊಡುತ್ತಾರೆ. ನಮಗೆ ಸಹಜ ಎನಿಸುವ ಕೆಲವು ನಡವಳಿಕೆಗಳು ಅವರಿಗೆ ಅಸಹಜ ಎನಿಸಬಹುದು.

ಅವಕಾಶ ಹೀಗೆ ಕಲ್ಪಿಸಿ

  •  ಅಂತರ್ಮುಖಿ ವಿದ್ಯಾರ್ಥಿಗಳಲ್ಲಿರುವ ಕೌಶಲವನ್ನು ಮೊದಲು ಅರಿಯುವ ಪ್ರಯತ್ನವನ್ನು ಮಾಡಬೇಕು. ಕೆಲವರು ಓದುವುದಕ್ಕೆ ಆದ್ಯತೆ ನೀಡಿದರೆ, ಕೆಲವರು ಯಂತ್ರಗಳ ಕಾರ್ಯನಿರ್ವಹಣೆಯನ್ನು ಗಮನಿಸುತ್ತಾರೆ. ಯಂತ್ರಗಳನ್ನು ಜೋಡಿಸುವುದು, ಇರುವ ವಸ್ತುಗಳನ್ನು ವಿಶಿಷ್ಟವಾಗಿ ಬಳಸುವುದು ಇಂಥವುಗಳಲ್ಲಿ ಗಮನಹರಿಸಬಹುದು. ಅವರಲ್ಲಿ ಹಾಸ್ಯ ಪ್ರಜ್ಞೆ ಹೇರಳವಾಗಿರಬಹುದು. ಅದಕ್ಕೆ ಪೂರಕವಾದ ವಾತಾವರಣ ಇಲ್ಲದಿದ್ದರೆ, ಅದನ್ನು ತಡೆದಿಟ್ಟುಕೊಳ್ಳಬಹುದು. ಅವಕಾಶ ಸಿಗಲಿಲ್ಲ ಎಂದು ಕೊರಗುವುದೂ ಇಲ್ಲ. ಮನೆಗಳಲ್ಲಿ, ಶಾಲೆಯಲ್ಲಿ ಎಲ್ಲರ ಜೊತೆ ಬೆರೆಯಬೇಕಾದ ಪರಿಸ್ಥಿತಿಯಲ್ಲಿ ಅವರಿಗೆ ಆಗಾಗ ಅವರದೇ ಪ್ರತ್ಯೇಕ ಲೋಕದಲ್ಲಿ ಕೆಲವು ಕ್ಷಣ ಕಳೆಯುವ ತುಡಿತ ಇರುತ್ತದೆ. ಅದಕ್ಕೆ ಅವಕಾಶ ಕೊಡಬೇಕು.

  • ತರಗತಿಗಳಲ್ಲಿ ಬ್ರೇಕ್ ಸಮಯದಲ್ಲಿ ಅವರ ಆಯ್ಕೆಗೆ ಅವಕಾಶವನ್ನು ಕೊಡಬಹುದು.

  • ಕೆಲವು ವಿಷಯಗಳನ್ನು ಕಲಿಯುವುದರಲ್ಲಿ ಹಿಂದಿರುವ ಸಹಪಾಠಿಗಳಿಗೆ ಮಾರ್ಗದರ್ಶನ ನೀಡುವ, ತಮ್ಮ ಯಾವುದಾದರೂ ಅನುಭವವನ್ನು ಕುರಿತು ಮಾತನಾಡುವ ಕೆಲಸಗಳನ್ನು ಈ ವಿದ್ಯಾರ್ಥಿಗಳಿಗೆ ಕೊಟ್ಟರೆ ಅಚ್ಚುಕಟ್ಟಾಗಿ ಮಾಡುತ್ತಾರೆ.

  • ಜಟಿಲ ಸಮಸ್ಯೆಯನ್ನು ಬಿಡಿಸಲು ಹೇಳಬಹುದು.

  • ಅವರ ಇಷ್ಟಕ್ಕೆ ವಿರುದ್ಧವಾಗಿ ಜನರೊಡನೆ ಬೆರೆಯಲು, ಮಾತನಾಡಲು ಒತ್ತಾಯಿಸಿದರೆ ಅವರಿಗೆ ಅದು ಸಮ್ಮತವಾಗದೆ ಅಳು ಅಥವ ಸಿಟ್ಟು ಬರಬಹುದು.

  •  ಬದಲಿಗೆ ಚೆನ್ನಾಗಿ ಪುಸಲಾಯಿಸುವ ಮೂಲಕ ಅವರಿಗೆ ಬೆರೆಯಲು, ಮಾತನಾಡಲು ಪ್ರೇರೇಪಿಸಬೇಕು. ಅವರದ್ದೇ ವೇಗದಲ್ಲಿ ಅರಳಲು ಅವಕಾಶ ಕೊಟ್ಟರೆ ಅವರಿಂದ ಅಪ್ರತಿಮ ಕೊಡುಗೆಗಳನ್ನು ನಿರೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT