ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಕಾಲರ್‌ಶಿಪ್‌ ಪಡೆಯುವುದು ಹೇಗೆ?

Last Updated 12 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

1.ನಾನು 10ನೇ ತರಗತಿ ವಿದ್ಯಾರ್ಥಿ. ನನಗೆ ಎನ್‌ಡಿಎ ಸೇರುವ ಆಸೆ ಇದೆ ಇದರ ತಯಾರಿ ಹೇಗೆ ಮತ್ತು ಎನ್‌ಡಿಎ ಅಧಿಕಾರಿಗಳ ಕೆಲಸವೇನು? ಪಿಯುಸಿ ಜೊತೆಗೆ ತಯಾರಿ ನಡೆಸಬಹುದೇ? ದಯವಿಟ್ಟು ಸಲಹೆ ನೀಡಿ.
–ಹೆಸರು, ಊರು ತಿಳಿಸಿಲ್ಲ.

ಉತ್ತರ: ದೇಶದ ರಕ್ಷಣಾ ಸೇವೆಗೆ ಸೇರಬೇಕೆನ್ನುವ ನಿಮಗೆ ಶುಭಹಾರೈಕೆಗಳು. ಸರ್ಕಾರದ ಮಾನ್ಯತೆ ಪಡೆದ ಬೋರ್ಡ್/ಮಂಡಲಿಯಿಂದ ಪಿಯುಸಿ ಅಥವಾ ತತ್ಸಮಾನ ಕೋರ್ಸನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು, ಎನ್‌ಡಿಎ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಕನಿಷ್ಠ 16.5 ಮತ್ತು ಗರಿಷ್ಠ 19 ವರ್ಷಗಳ ಒಳಗಿದ್ದಲ್ಲಿ, ಯುಪಿಎಸ್‌ಸಿ ಆಯೋಜಿಸುವ ಎನ್‌ಡಿಎ ಪರೀಕ್ಷೆ ಬರೆಯಬಹುದು.

ಎನ್‌ಡಿಎ ಕಠಿಣವಾದ ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ; ಆದ್ದರಿಂದ, ಪಿಯುಸಿ ಮಾಡುವಾಗಲೇ ಎನ್‌ಡಿಎ ತಯಾರಿಯನ್ನು ಶುರು ಮಾಡುವುದು ಸೂಕ್ತ. ಈ ಪರೀಕ್ಷೆಯಲ್ಲಿ ಗಣಿತ, ಇಂಗ್ಲಿಷ್, ಭೌತವಿಜ್ಞಾನ, ರಸಾಯನವಿಜ್ಞಾನ, ಸಾಮಾನ್ಯ ವಿಜ್ಞಾನ, ಭೂಗೋಳ, ಇತಿಹಾಸ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತ ಪ್ರಶ್ನೆ ಪತ್ರಿಕೆಗಳಿರುತ್ತವೆ. ಪರೀಕ್ಷೆಯ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು, ನಿಮ್ಮ ಶಕ್ತಿ, ಸಾಮರ್ಥ್ಯ, ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯತಂತ್ರವನ್ನು ರೂಪಿಸಬೇಕು. ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವ್ಯಕ್ತಿತ್ವ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯಿರುತ್ತದೆ. ಅಂತಿಮವಾಗಿ ಆಯ್ಕೆಯಾದ ನಂತರ 3 ವರ್ಷದ ತರಬೇತಿಯನ್ನು ಪುಣೆ ನಗರದಲ್ಲಿರುವ ಎನ್‌ಡಿಎ ಕ್ಯಾಂಪಸ್‌ನಲ್ಲಿ ನೀಡಲಾಗುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ನಿಮ್ಮ ಆಯ್ಕೆಯ ಅನುಸಾರ ( ಸೇನಾ ಪಡೆ, ವಾಯು ಪಡೆ, ನೌಕಾ ಪಡೆ) ಒಂದು ವರ್ಷದ ನಿರ್ದಿಷ್ಟವಾದ, ಮುಂದುವರೆದ ತರಬೇತಿಯಿರುತ್ತದೆ. ಈ ಅವಧಿಯಲ್ಲಿ ತರಬೇತಿ ಭತ್ಯವನ್ನು ನೀಡಲಾಗುತ್ತದೆ. ಈ ತರಬೇತಿಯ ನಂತರ ಕ್ರಮಬದ್ಧವಾದ ನೇಮಕಾತಿಯಾಗಿ, ಕೆಲಸದ ಸ್ಥಳ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸೂಚಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:

2. ಸರ್, ಎಸ್‌ಎಸ್‌ಎಲ್‌ಸಿ (ಶೇ 80) ಮುಗಿಸಿದ್ದೇನೆ. ಅಪ್ಪನಿಗೆ ಅನಾರೋಗ್ಯ; ಅಮ್ಮ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ; ತಂಗಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅನಿವಾರ್ಯವಾಗಿ ಹೊಲಿಗೆ ಕೆಲಸ ಮಾಡುತ್ತಿದ್ದೇನೆ. ಮುಂದೆ ಬಹಳ ಓದಬೇಕೆಂಬ ಆಸೆಯಿದೆ. ಹಣಕ್ಕಾಗಿ ನೆಂಟರ ಮುಂದೆ ಕೈಯೊಡ್ಡಲು ಇಷ್ಟವಿಲ್ಲ. ಬಡವರಿಗಾಗಿಯೇ ಇರುವ ವಿದ್ಯಾರ್ಥಿವೇತನ, ಶೈಕ್ಷಣಿಕ ಸಾಲದ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಬಹುದೇ? ಧನ್ಯವಾದಗಳು.
–ಹೆಸರು, ಊರು ತಿಳಿಸಿಲ್ಲ.

ಉತ್ತರ: ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುವ ವೃತ್ತಿಯ ಬಗ್ಗೆ ಚಿಂತಿಸಿ. ಅದರಂತೆ ಕೋರ್ಸ್ ಆಯ್ಕೆ ಮಾಡಿ, ಸರ್ಕಾರಿ ಕಾಲೇಜುಗಳಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಅಧ್ಯಯನದ ಜೊತೆಗೆ, ನೀವು ಈಗಾಗಲೇ ಮಾಡುತ್ತಿರುವ ಹೊಲಿಗೆ ಕೆಲಸ ಅಥವಾ ಇನ್ನಿತರ ಅರೆಕಾಲಿಕ ಕೆಲಸಗಳನ್ನು ಕೂಡಾ ಮಾಡಬಹುದು.

ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಹೆಚ್ಚಿನ ವಿವರಗಳಿಗಾಗಿ ಈ ಜಾಲತಾಣಗಳನ್ನು ಗಮನಿಸಿ. https://scholarships.gov.in/

ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಷ್ಮಿ ಜಾಲತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyalakshmi.co.in/Students/

3.ನಾನು ಪದವಿಯನ್ನು 2022ರಲ್ಲಿ ಮುಗಿಸಿದ್ದೇನೆ. ಈಗ ಶಾಲಾಶಿಕ್ಷಣದಲ್ಲಿ ಬಿ.ಇಡಿ ಮಾಡಲು ಸರ್ಕಾರಿ ಕಾಲೇಜಿನಲ್ಲಿ ಸಿಗಲಿಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಖಾಸಗಿ ಕಾಲೇಜಿನಲ್ಲಿ ಮಾಡಲಾಗುವುದಿಲ್ಲ. ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ.
–ಹೆಸರು, ಊರು ತಿಳಿಸಿಲ್ಲ.

ಉತ್ತರ: ನಮ್ಮ ಬದುಕಿಗೊಂದು ಕೈಪಿಡಿ ಇಲ್ಲ; ಯಶಸ್ಸಿಗೆ ಇಂತದ್ದೇ ವೃತ್ತಿ ಮಾಡಬೇಕೆನ್ನುವ ನಿಯಮವಿಲ್ಲ. ಆದರೆ, ವೃತ್ತಿಯನ್ನು ನಮ್ಮ ಅಭಿರುಚಿಯಂತೆ, ಆಸಕ್ತಿಯಂತೆ ಆರಿಸಿ, ಪರಿಶ್ರಮದಿಂದ ಅನುಸರಿಸಿದರೆ, ಬದುಕಿನಲ್ಲಿ ಯಶಸ್ಸು, ಸಂತೃಪ್ತಿ ಸಿಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ, ನೀವು ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಸ್ಕಾಲರ್‌ಶಿಪ್, ವಿದ್ಯಾರ್ಥಿ ವೇತನ ಮತ್ತು ಬ್ಯಾಂಕ್ ಸಾಲಗಳ ಕುರಿತ ಮಾಹಿತಿ ಇಂದಿನ ಪ್ರಶ್ನೋತ್ತರದಲ್ಲಿ ಪ್ರಕಟವಾಗಿದೆ. ದಯವಿಟ್ಟು ಓದಿಕೊಳ್ಳಿ.

ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

4. ನಾನು ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು ಪಿ.ಎಚ್‌ಡಿ ಮಾಡುವ ಆಸೆಯಿದೆ. ಯಾವುದು ಉತ್ತಮ ಆಯ್ಕೆಯಾಗಬಹುದು? ದೂರಶಿಕ್ಷಣ ಅಥವಾ ನೇರವಾಗಿ ಮಾಡಬಹುದೇ? ಉತ್ತಮ ವಿಶ್ವವಿದ್ಯಾಲಯವನ್ನು ಸೂಚಿಸಿ.
ಹೆಸರು, ಊರು ತಿಳಿಸಿಲ್ಲ.

ಉತ್ತರ: ಮೊದಲಿಗೆ, ನೀವು ಪಿ.ಎಚ್‌ಡಿ ಮಾಡುವ ಕ್ಷೇತ್ರ ಮತ್ತು ಸಂಶೋಧನಾ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಕಲ್ಪನೆಯಿರಬೇಕು. ಆದ್ದರಿಂದ, ವಿಷಯದ ಕುರಿತು ಪೂರ್ವಭಾವಿ ಸಂಶೋಧನೆ ಮಾಡಬೇಕು. ಏಕೆಂದರೆ, ವಿಶ್ವವಿದ್ಯಾಲಯಗಳು, ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ಸಂಶೋಧನಾ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸೂಚಿಸುತ್ತವೆ. ಸಂಶೋಧನಾ ಕ್ಷೇತ್ರ, ವಿಷಯ, ನಿಮ್ಮ ವಾಸಸ್ಥಳ, ಪಿ.ಎಚ್‌ಡಿ ನಂತರದ ಯೋಜನೆ ಇತ್ಯಾದಿಗಳನ್ನು ಪರಿಗಣಿಸಿ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಬೇಕು. ಹಾಗೂ ಭವಿಷ್ಯದ ದೃಷ್ಟಿಯಿಂದ, ಪಿ.ಎಚ್‌ಡಿ ಕೋರ್ಸನ್ನು ರೆಗ್ಯುಲರ್ ಪದ್ಧತಿಯಲ್ಲಿ ಮಾಡುವುದು ಸೂಕ್ತ. ಪಿ.ಎಚ್‌ಡಿ ಮಾಡಲು ಬಯಸುವ ವಿಶ್ವವಿದ್ಯಾಲಯದ ಅಧಿಸೂಚನೆಯಂತೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಪಿ.ಎಚ್‌ಡಿ ಕೋರ್ಸ್ ಅರ್ಜಿಯ ಪರಿಶೀಲನೆಯ ನಂತರ ಪ್ರವೇಶ ಪರೀಕ್ಷೆ ಮತ್ತು ಇನ್ನಿತರ ಪ್ರಕ್ರಿಯೆಗಳ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂಶೋಧನೆಯಲ್ಲಿ ನಿಮಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲು ಮಾರ್ಗದರ್ಶಕರನ್ನು ನಿಯೋಜಿಸಲಾಗುತ್ತದೆ. ಸಾಮಾನ್ಯವಾಗಿ, 3 ರಿಂದ 5 ವರ್ಷಗಳಲ್ಲಿ ಪಿ.ಎಚ್‌ಡಿ ಮುಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT