ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್ಸಿ (ಮೈಕ್ರೊಬಯಾಲಜಿ) ಪ್ರವೇಶಕ್ಕೆ ನೀಟ್ ಅಗತ್ಯವೇ?

Published 6 ಆಗಸ್ಟ್ 2023, 13:02 IST
Last Updated 6 ಆಗಸ್ಟ್ 2023, 13:02 IST
ಅಕ್ಷರ ಗಾತ್ರ

1) ನಾನು ಅಂತಿಮ ವರ್ಷದ ಬಿ.ಎಸ್ಸಿ-ಬಯೋಟೆಕ್ನಾಲಜಿ (ಬಿಬಿಜಿ) ಓದುತ್ತಿದ್ದೇನೆ. ಮುಂದೆ ನಾನು ಯಾವ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಮಾಡಬಹುದು? ಯಾವ ರೀತಿಯ ಕೆಲಸ ಸಿಗಬಹುದು? ಇಂಟರನ್‌ಷಿಪ್ ಯಾವ ರೀತಿ ಮಾಡಬಹುದು?

ಯಶಸ್ವಿನಿ.ಜಿ, ಯಲಹಂಕ, ಬೆಂಗಳೂರು.

ಉತ್ತರ: ನೀವು ಓದುತ್ತಿರುವ ಬಿ.ಎಸ್ಸಿ (ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಜೆನೆಟಿಕ್ಸ್) ಕೋರ್ಸ್‌ನಲ್ಲಿ ಉತ್ತಮ ಮತ್ತು ಬೇಡಿಕೆಯಲ್ಲಿರುವ ವಿಷಯಗಳಿವೆ. ಹಾಗಾಗಿ, ನಿಮ್ಮ ಅಭಿರುಚಿ ಮತ್ತು ಆಸಕ್ತಿಯ ಅನುಸಾರ ಜೆನೆಟಿಕ್ಸ್ ಅಥವಾ ಬಯೋಟೆಕ್ನಾಲಜಿ ವಿಷಯಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡಿ, ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಖಾಸಗಿ ಕ್ಷೇತ್ರದಲ್ಲಿ, ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹಾಗೂ, ಯುಪಿಎಸ್‌ಸಿ/ಕೆಪಿಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲಿನ ಅವಕಾಶಗಳನ್ನೂ ಬಳಸಿಕೊಳ್ಳಬಹುದು. ಇಂಟರನ್‌ಷಿಪ್ ಕುರಿತ ಮಾರ್ಗದರ್ಶನಕ್ಕಾಗಿ ಈ ಲೇಖನವನ್ನು ಗಮನಿಸಿ: http://www.vpradeepkumar.com/projects-to-kickstart-your-career/

2) ನಾನು ಬಿ.ಎಸ್ಸಿ ಪದವಿಯಲ್ಲಿ ಮೈಕ್ರೋಬಯಾಲಜಿ ವಿಷಯ ಓದಬೇಕಿದೆ. ಇದಕ್ಕೆ ನೀಟ್ ಪರೀಕ್ಷೆ ಬರೆಯಬೇಕೇ?

ಹೆಸರು ತಿಳಿಸಿಲ್ಲ, ಬೆಂಗಳೂರು.

ಉತ್ತರ: ಬಿ.ಎಸ್ಸಿ ಕೋರ್ಸ್ ಮಾಡಲು ನೀಟ್ ಪ್ರವೇಶ ಪರೀಕ್ಷೆಯ ಅಗತ್ಯವಿಲ್ಲ. ಸಾಮಾನ್ಯವಾಗಿ, ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ನೇರವಾದ ಪ್ರವೇಶವಿರುತ್ತದೆ. ಆದರೆ, ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರತ್ಯೇಕ ಪ್ರವೇಶ ಪರೀಕ್ಷೆಯೂ ಇರುತ್ತದೆ.

3) ನಾನು ಎಂಜಿನಿಯರಿಂಗ್ ಮಾಡಬೇಕು. ಅದರಲ್ಲಿ ಯಾವ ವಿಭಾಗದ ಕೋರ್ಸ್ ಒಳ್ಳೆಯದು ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಉತ್ತರ: ನಮ್ಮ ಅಭಿಪ್ರಾಯದಂತೆ ಎಂಜಿನಿಯರಿಂಗ್ ಕ್ಷೇತ್ರದ ಎಐ, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ರೊಬೊಟಿಕ್, ನವೀಕರಿಸಬಹುದಾದ ಇಂಧನ, ಪರಿಸರ ಮುಂತಾದ ವಿಭಾಗಗಳ ಪದವೀಧರರಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆಯಿರುವ ನಿರೀಕ್ಷೆಯಿದೆ. ಆದರೆ, ನಿಮ್ಮ ಅಭಿರುಚಿ, ಆಸಕ್ತಿಯ ಅನುಸಾರ ವಿಭಾಗದ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=T-QmE5tespU

4) ನನಗೀಗ 32 ವರ್ಷ ವಯಸ್ಸು. ಕಾರಣಾಂತರಗಳಿಂದ ಓದಲು ಸಾಧ್ಯವಾಗಿರಲಿಲ್ಲ. ಈಗ ಬಿಎ (ರಾಜ್ಯಶಾಸ್ತ್ರ , ಸಮಾಜ ಶಾಸ್ತ್ರ, ಅರ್ಥಶಾಸ್ತ್ರ) ಅಂತಿಮ ಸೆಮಿಸ್ಟರ್‌ನಲ್ಲಿದ್ದೇನೆ. ಆರ್ಥಿಕ ಸಂಕಷ್ಟದ ಕಾರಣ, ಮತ್ತೆ ಕೆಲಸಕ್ಕೆ ಹೋಗಬೇಕಿದೆ. ನಾನು ದೂರಶಿಕ್ಷಣದಲ್ಲಿ ಎಂ.ಎ ಮಾಡಬಹುದೇ? ಯಾವ ವಿಷಯ ದಲ್ಲಿ ಮಾಡಬಹುದು? ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪರೀಕ್ಷೆಯಲ್ಲಿ ಭಾಗವಹಿಸಲು, ದೂರಶಿಕ್ಷಣ ಪದವಿಯ ನಂತರ ಅರ್ಹತೆ ಸಿಗುವುದೇ? ಸರ್ಕಾರಿ ನೌಕರಿ ಅಥವಾ ಶಿಕ್ಷಕಿಯಾಗುವ ಕನಸಿದೆ. ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಉತ್ತರ: ನೀವು ಕೆಲಸದಲ್ಲಿದ್ದುಕೊಂಡು, ದೂರಶಿಕ್ಷಣದ ಮೂಲಕ ಎಂಎ ಕೋರ್ಸ್ ಮಾಡಬಹುದು. ಮುಂದೆ, ನೀವು ಶಿಕ್ಷಕಿಯಾಗಿ ಯಾವ ವಿಷಯವನ್ನು ಬೋಧಿಸಲು ಇಚ್ಛಿಸುತ್ತೀರೋ, ಆ ವಿಷಯದಲ್ಲಿ ಎಂ.ಎ ಕೋರ್ಸ್ ಮಾಡುವುದು ಸೂಕ್ತ.

ನಮ್ಮ ಅಭಿಪ್ರಾಯದಂತೆ, ಎಂಎ (ಅರ್ಥಶಾಸ್ತ್ರ) ಕೋರ್ಸಿಗೆ ಹೆಚ್ಚಿನ ಬೇಡಿಕೆಯಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆ ಪಡೆದ ದೂರ ಶಿಕ್ಷಣದ ಎಲ್ಲಾ ಪದವಿ ಕೋರ್ಸ್‌ಗಳಿಗೆ ಮಾನ್ಯತೆಯಿದ್ದು, ನೀವು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ಭಾಗವಹಿಸಬಹುದು. ಮಾನ್ಯತೆಯಿರುವ ದೂರಶಿಕ್ಷಣ ಕೋರ್ಸ್ ಮಾಹಿತಿಗಾಗಿ ಗಮನಿಸಿ: https://deb.ugc.ac.in/

5) ನಾನು ಮೊದಲ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ (ಸಸ್ಯಶಾಸ್ತ್ರ, ರಸಾಯನಶಾಸ್ತ್ರ). ಬಿ.ಎಸ್ಸಿ ನಂತರ ಯಾವ ಉದ್ಯೋಗ ಸಿಗ ಬಹುದು? ಈ ಪದವಿ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಸಹಾಯವಾಗಬಹುದೇ? ಬಿ.ಎಸ್ಸಿ ನಂತರ ಜೀವನದಲ್ಲಿ ಹೇಗೆ ನೆಲೆಯೂರಬಹುದು ?

ಹೆಸರು, ಊರು ತಿಳಿಸಿಲ್ಲ.

ಉತ್ತರ: ನಮ್ಮ ಅಭಿಪ್ರಾಯದಂತೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಪದವಿಯಷ್ಟೇ ಸಾಕಾಗುವುದಿಲ್ಲ. ಹಾಗಾಗಿ, ಬಿ.ಎಸ್ಸಿ ಪದವಿಯ ನಂತರ ಉನ್ನತ ಶಿಕ್ಷಣ (ಎಂ.ಎಸ್ಸಿ, ಎಂಬಿಎ, ಕೌಶಲಾಭಿವೃದ್ಧಿ ಕೋರ್ಸ್‌ಗಳು) ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ (ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಇತ್ಯಾದಿ) ಮೂಲಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ನಿಮ್ಮ ಅಭಿರುಚಿ, ಆಸಕ್ತಿ, ಸಾಮರ್ಥ್ಯ, ಅವಕಾಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವೈಯಕ್ತಿಕ ಮತ್ತು ವೃತ್ತಿಪರ ಧ್ಯೇಯಗಳನ್ನು ನಿರ್ಧರಿಸಿ, ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸುಗಮವಾಗುತ್ತದೆ.

ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

6. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದಿದ್ದೇನೆ. ಕೆಎಸ್‌ಇಟಿ ಪರೀಕ್ಷೆಯನ್ನು ಬರೆದಿದ್ದೇನೆ. ಐಎಎಸ್ ಅಧಿಕಾರಿಯಾಗಬೇಕಾದರೆ, ಮುಂದೆ ನಾನು ಯಾವ ವಿಷಯದಲ್ಲಿ, ಪದವಿಯನ್ನು ಮುಂದುವರಿಸಬೇಕು ಎಂಬ ಗೊಂದಲವಾಗುತ್ತಿದೆ. ಮಾರ್ಗದರ್ಶನ ನೀಡಿ.

ಹೆಸರು ತಿಳಿಸಿಲ್ಲ, ಬೆಂಗಳೂರು.

ಉತ್ತರ: ಐಎಎಸ್ ಅಧಿಕಾರಿಯಾಗಲು, ಯುಪಿಎಸ್‌ಸಿ ಆಯೋಜಿಸುವ ಮೂರು ಹಂತಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ, ಆಯ್ಕೆಯಾಗಬೇಕು:

1. ಬಹು ಆಯ್ಕೆ ಮಾದರಿಯ ಪೂರ್ವಭಾವಿ ಪರೀಕ್ಷೆ.

2. ಪ್ರಬಂಧ ರೂಪದ ಮುಖ್ಯ ಪರೀಕ್ಷೆ.

3. ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ಬಿ.ಎ, ಬಿ.ಕಾಂ, ಬಿ.ಎಸ್ಸಿ ಮುಂತಾದ ಯಾವುದಾದರೂ ಪದವಿ ಕೋರ್ಸ್ ಮುಗಿಸಿದ ನಂತರ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಭಾಗವಹಿಸಲು ಅರ್ಹತೆ ಸಿಗುತ್ತದೆ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ನೀವು ಆಯ್ಕೆ ಮಾಡುವ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಪದವಿ ಕೋರ್ಸ್ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ. ಹಾಗಾಗಿ, ನಿಮಗೆ ಹೆಚ್ಚಿನ ಆಸಕ್ತಿ ಮತ್ತು ಪರಿಣತಿಯಿರುವ ವಿಷಯದಲ್ಲಿ ಪದವಿ ಕೋರ್ಸ್ ಮಾಡುವುದು ಸೂಕ್ತ. ಆದರೆ, ಪದವಿ ಕೋರ್ಸ್ಗಳಿಗೆ ಮಾಡುವ ಅಧ್ಯಯನಕ್ಕೂ ಯುಪಿಎಸ್‌ಸಿ ಪರೀಕ್ಷೆಗೆ ಮಾಡಬೇಕಾದ ಅಧ್ಯಯನಕ್ಕೂ ಇರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಗಮನಿಸಿ, ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರವನ್ನು ರೂಪಿಸಬೇಕು.

ಪರೀಕ್ಷೆಗಳ ಮಾದರಿಯನ್ನು ಅರ್ಥೈಸಿಕೊಂಡು, ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಅಧ್ಯಯನ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT