ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಗೆ ಮೂರು ಪರೀಕ್ಷೆ: ವಿದ್ಯಾರ್ಥಿಗಳಿಗೆ ಹೊರೆ?

ಪರೀಕ್ಷೆಗಳ ಭಾರಕ್ಕೆ ದ್ವಿತೀಯ ಪಿಯುಸಿ ಮಕ್ಕಳು ನಲುಗುವ ಸಾಧ್ಯತೆ: ಅಧ್ಯಾಪಕರ ಆತಂಕ
Published 1 ಅಕ್ಟೋಬರ್ 2023, 0:08 IST
Last Updated 1 ಅಕ್ಟೋಬರ್ 2023, 0:08 IST
ಅಕ್ಷರ ಗಾತ್ರ

ಮಂಗಳೂರು: ದ್ವಿತೀಯ ಪಿಯುಸಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಿ, ಉತ್ತಮ ಅಂಕ ಬಂದಿರುವ ಫಲಿತಾಂಶವನ್ನು ಪರಿಗಣಿಸುವುದಾಗಿ ಶಿಕ್ಷಣ ಇಲಾಖೆ ನಿರ್ಧಾರ ಪ್ರಕಟಿಸಿದೆ. ಆದರೆ, ಈ ಕ್ರಮ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಸೃಷ್ಟಿಸಿ, ಖಿನ್ನತೆಗೆ ಕಾರಣವಾಗಬಹುದು ಎನ್ನುವುದು ಉಪನ್ಯಾಸಕರ ಆತಂಕ.

‘ಎಸ್‌ಎಸ್‌ಎಲ್‌ಸಿ ನಂತರ ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎರಡು ವರ್ಷಗಳ ಪಠ್ಯಕ್ರಮವೇ ಮಕ್ಕಳಿಗೆ ಹೊರೆಯಾಗಿರುವಾಗ ಮತ್ತೆ ದ್ವಿತೀಯ ಪಿಯುಸಿಗೆ ಮೂರು ಅಂತಿಮ ಪರೀಕ್ಷೆಗಳನ್ನು ನಡೆಸಿದರೆ, ಪರೀಕ್ಷಾ ಭಯವೇ ಅವರ ಆತ್ಮವಿಶ್ವಾಸವನ್ನು ಉಡುಗಿಸಬಹುದು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಫಲಿತಾಂಶವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತಾ ಮಾನದಂಡವೇ ವಿನಾ ಅದನ್ನು ಆಧರಿಸಿ ಕಾಲೇಜುಗಳಿಗೆ ಪ್ರವೇಶ ದೊರೆಯುವುದಿಲ್ಲ. ಹೀಗಿದ್ದಾಗ ಮೂರು ಪರೀಕ್ಷೆ ನಡೆಸುವ ಔಚಿತ್ಯವೇನು’ ಎಂದು ಪ್ರಶ್ನಿಸುತ್ತಾರೆ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು.

‘ಒಂದು ಮುಖ್ಯ ಪರೀಕ್ಷೆ ನಂತರ ಅನುತ್ತೀರ್ಣಗೊಂಡವರಿಗೆ ಪೂರಕ ಪರೀಕ್ಷೆ ನಡೆಸುತ್ತಿದ್ದ ಕ್ರಮವೇ ಉತ್ತಮವಾಗಿತ್ತು. ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗೆ ಸಿದ್ಧವಾಗಲು ಸಮಯಾವಕಾಶ ಇರುತ್ತಿತ್ತು. ಹೊಸ ಪದ್ಧತಿಯಲ್ಲಿ ಪ್ರತಿ ವಿದ್ಯಾರ್ಥಿ ಮೊದಲನೇ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕು. ನಂತರ ಎರಡು ಮತ್ತು ಮೂರನೇ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಮೊದಲನೇ ಪರೀಕ್ಷೆ ಫಲಿತಾಂಶ ಕಡಿಮೆಯಾದರೆ, ಪಾಲಕರು, ಕಾಲೇಜಿನ ಪ್ರಮುಖರು ಮಕ್ಕಳ ಮೇಲೆ ಒತ್ತಡ ಹಾಕಿ ಉತ್ತಮ ಫಲಿತಾಂಶಕ್ಕಾಗಿ, ಮಕ್ಕಳಿಂದ ಇನ್ನೆರಡು ಪರೀಕ್ಷೆ ಬರೆಯಿಸುವ ಸಾಧ್ಯತೆಗಳೂ ಇರುತ್ತವೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ, ಎರಡು ಪೂರ್ವಭಾವಿ ಪರೀಕ್ಷೆ, ಮೂರು ಅಂತಿಮ ಪರೀಕ್ಷೆ, ವಿಜ್ಞಾನ ವಿಷಯ ಆಯ್ದುಕೊಂಡಿದ್ದರೆ, ಸಿಇಟಿ, ಎರಡು ಜೆಇಇ, ನೀಟ್, ಕ್ಲಾಟ್, ಎನ್‌ಡಿಎ ಹೀಗೆ ಹಲವಾರು ಪರೀಕ್ಷೆಗಳನ್ನು ಎದುರಿಸುವಲ್ಲಿ ಜರ್ಝರಿತರಾಗುತ್ತಾರೆ’ ಎಂದು ಉಪನ್ಯಾಸಕರೊಬ್ಬರು ಅಭಿಪ್ರಾಯಪಟ್ಟರು.

‘ಸಿಇಟಿ ಹೊರತು ಪಡಿಸಿ, ಉನ್ನತ ಶಿಕ್ಷಣದ ಬಹುತೇಕ ಎಲ್ಲ ವಿಭಾಗಗಳಲ್ಲಿ ಪ್ರವೇಶ ಪರೀಕ್ಷೆಯ ಫಲಿತಾಂಶವೇ ಪರಿಗಣನೆಯಾಗುತ್ತದೆ. ಡೀಮ್ಡ್ ವಿಶ್ವವಿದ್ಯಾಲಯಗಳು, ಸ್ವಾಯತ್ತ ಕಾಲೇಜುಗಳು ಪದವಿ ಅಥವಾ ಇನ್ನಾವುದೇ ಕೋರ್ಸ್‌ಗಳಿರಲಿ ತರಗತಿಗಳನ್ನು ಬೇಗ ಆರಂಭಿಸುತ್ತವೆ. ಮೂರು ಪರೀಕ್ಷೆಗಳು ಮುಗಿದು, ದ್ವಿತೀಯ ಪಿಯುಸಿ ಫಲಿತಾಂಶ ಬಂದ ನಂತರವೇ ಸಿಇಟಿ ಫಲಿತಾಂಶ ಬರುತ್ತದೆ. ಸರ್ಕಾರಿ ಕಾಲೇಜುಗಳು, ವಿಶೇಷವಾಗಿ ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಇದು ಭವಿಷ್ಯದಲ್ಲಿ ತೊಡಕಾಗಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಈ ಹಿಂದಿನ ಪರೀಕ್ಷಾ ಕ್ರಮವೇ ಒಳ್ಳೆಯದಿತ್ತು. ಮೂರು ಪರೀಕ್ಷೆಗಳಿದ್ದರೆ ಪಾಲಕರ ಒತ್ತಡವೂ ಹೆಚ್ಚಾಗುತ್ತದೆ. ನಮಗೂ ಗೊಂದಲವಾಗುತ್ತದೆ’ ಎಂದು ಕಲಾ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿವಾನಂದ ಕೂಡಲಗಿ ಹೇಳುತ್ತಾರೆ.

‘ಪರ್ಯಾಯ ಇಲ್ಲದೆ ಒಂದೇ ಅಂತಿಮ ಪರೀಕ್ಷೆ ಇದ್ದಾಗ, ಗುರಿ ತಲುಪುವ ಛಲ ಮಕ್ಕಳನ್ನು ಓದಿಗೆ ಒಗ್ಗಿಕೊಳ್ಳುವಂತೆ ಮಾಡುತ್ತದೆ. ಪರೀಕ್ಷೆಯ ಗಂಭೀರತೆ ಗಾಢವಾಗಿರುತ್ತದೆ. ಬಹು ಆಯ್ಕೆ ಇದ್ದಾಗ, ಅದು ಊರುಗೋಲಿನಂತಾಗಿ ಮಕ್ಕಳ ಅಭ್ಯಾಸದ ಕ್ರಮವೇ ಬದಲಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿನಿಯೊಬ್ಬಳ ಪಾಲಕಿ ಅನಿತಾ ಫ್ರಾಂಕ್.

‘ಪರೀಕ್ಷೆ, ಮೌಲ್ಯಮಾಪನಕ್ಕೆ ಸಮಯ’

ಸರ್ಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೂರು ಅಂತಿಮ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದೆ. ಈ ವರ್ಷ ಪೂರಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದ ಕಾರಣಕ್ಕೆ ಈ ನಿರ್ಧಾರ ಮಾಡಿರಬಹುದು. ಆದರೆ, ಪರೀಕ್ಷೆ, ಮೌಲ್ಯಮಾಪನಕ್ಕೆ ಉಪನ್ಯಾಸಕರ ಹೆಚ್ಚಿನ ಸಮಯ ವ್ಯಯವಾಗುವುದರಿಂದ ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆಗೆ ಹೆಚ್ಚು ಗಮನ ನೀಡಲು ಕಷ್ಟವಾಗಬಹುದು. ಕೇಂದ್ರೀಕೃತ ವ್ಯವಸ್ಥೆಯ ಮೌಲ್ಯಮಾಪನ ನಡೆಯುವುದರಿಂದ ಉಪನ್ಯಾಸಕರು ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಿ.ಯು.ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT