ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸ್ಕೃತ ಅಧ್ಯಯನಕ್ಕೂ ಪ್ರೇರಣೆ ಅಗತ್ಯ: ಥಾವರ್‌ಚಂದ್‌ ಗೆಹಲೋತ್‌ 

ಸಂಸ್ಕೃತ ವಿ.ವಿ. ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ 
Published 14 ಜೂನ್ 2024, 15:27 IST
Last Updated 14 ಜೂನ್ 2024, 15:27 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮಕ್ಕಳಿಗೆ ಸ್ಥಳೀಯ ಭಾಷೆಯೊಂದಿಗೆ ಸಂಸ್ಕೃತ ಭಾಷೆ ಅಧ್ಯಯನಕ್ಕೂ ಪ್ರೇರಣೆ ನೀಡಬೇಕಾದ ಅಗತ್ಯವಿದೆ’ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 10 ಮತ್ತು 11ನೆಯ ದೀಕ್ಷಾಂತ ಘಟಿಕೋತ್ಸವದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ಸಂಸ್ಕೃತದಲ್ಲಿ ಅಧ್ಯಯನ ಮಾಡಿದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಸಂಸ್ಕತ ಓದಿಯೇ ಇಸ್ರೊ ವಿಜ್ಞಾನಿಯೊಬ್ಬರು ಸಾಧನೆ ಮಾಡಿದ್ದಾರೆ. ಸಂಸ್ಕೃತದ ಮೇಲೆ ನನಗೆ ಎಲ್ಲಿಲ್ಲದ ವ್ಯಾಮೋಹ. ಆದ್ದರಿಂದಲೇ, ನಾನು ಶಾಸಕನಾಗಿ, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯನಾದಾಗ ಸಂಸ್ಕೃತದಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದೆ’ ಎಂದು ಹೇಳಿದರು.

‘ರಾಜ್ಯದ ಮತ್ತೂರು ಗ್ರಾಮದಲ್ಲಿ ಜನರು ಸಂಸ್ಕೃತ ಭಾಷೆಯಲ್ಲೇ ಹೆಚ್ಚು ಮಾತನಾಡುತ್ತಾರೆ ಎಂದು ಕೇಳಿದ್ದೇನೆ. ಆ ಗ್ರಾಮಕ್ಕೆ ಮುಂದಿನ ದಿನಗಳಲ್ಲಿ ಭೇಟಿ ನೀಡುತ್ತೇನೆ. ಜ್ಞಾನವಾಣಿಯಾಗಿರುವ ಸಂಸ್ಕೃತವನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತ ವಿಶಾಲವಾದ ತಳಹದಿ ಹೊಂದಿದೆ. ಕೆಲವರು ಮಾತ್ರ ಅಧ್ಯಯನ ಮಾಡಲು ಯೋಗ್ಯವಾದ ಭಾಷೆ ಎಂಬ ಕಾಲವಿತ್ತು. ಆದರೆ, ಈಗ ಪ್ರತಿಯೊಬ್ಬರೂ ಸಂಸ್ಕೃತ ಕಲಿಯುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಹೇಳಿದರು.

‘ಸಂಸ್ಕೃತವನ್ನು ಸಂಕುಚಿತವಾಗಿ ನೋಡಬಾರದು. ಇದು ಬಳಸಿದಷ್ಟೂ ಪ್ರಕಾಶಮಾನವಾದ ಭಾಷೆಯಾಗಿದೆ. ಸಂಸ್ಕೃತ ಸಾಹಿತ್ಯ ಭವ್ಯ ಪರಂಪರೆ ಹೊಂದಿದ್ದು, ನಮ್ಮ ರಾಷ್ಟ್ರದ ಹೃದಯವಾಗಿದೆ’ ಎಂದರು.

2021–22ನೇ ಸಾಲಿನ ಗೌರವ ಡಿ.ಲಿಟ್‌. ಅನ್ನು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಚಿನ್ಮಯ ಇಂಟರ್‌ನ್ಯಾಷನಲ್‌ ಫೌಂಡೇಷನ್‌ನ ಪ್ರೊ. ಗೌರೀ ಮಾಹುಲೀಕರ್‌, ಪಳ್ಳತ್ತಡ್ಕದ ಘನಪಾಠೀ ಶಂಕರನಾರಾಯಣ ಭಟ್ಟ ಹಾಗೂ 2022–23ನೇ ಸಾಲಿನ ಡಿ.ಲಿಟ್‌. ಅನ್ನು ನಂದೇಶ್ವರ ಕಮರಿಮಠದ ದುಂಡೇಶ್ವರ ಸ್ವಾಮೀಜಿ, ಹಿತ್ಲಳ್ಳಿಯ ಸೂರ್ಯನಾರಾಯಣ ಭಟ್ಟ, ಎ. ಹರಿದಾಸ ಭಟ್ಟ ಅವರಿಗೆ ನೀಡಲಾಯಿತು. 1,004 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಂಸ್ಕೃತ ವಿವಿ ಕುಲಪತಿ ಡಾ.ಎಸ್.ಅಹಲ್ಯಾ, ಕುಲಸಚಿವರಾದ ಪ್ರೊ.ವಿ.ಗಿರೀಶ್ ಚಂದ್ರ, ಡಾ.ಕೆ.ರಾಮಕೃಷ್ಣ ಭಟ್, ಸಂಸ್ಕೃತ ವಿದ್ವಾಂಸ ಎಚ್.ವಿ. ನಾಗರಾಜರಾವ್‌ ಉಪಸ್ಥಿತರಿದ್ದರು.

ಸಂಸ್ಕೃತ ಓದಿಯೇ ಇಸ್ರೊ ವಿಜ್ಞಾನಿಯಿಂದ ಸಾಧನೆ: ಗೆಹಲೋತ್ ಸಂಸ್ಕೃತ ಸಾಹಿತ್ಯ ರಾಷ್ಟ್ರದ ಹೃದಯವೆಂದ ಸಚಿವ ಎಂ.ಸಿ. ಸುಧಾಕರ್ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಗೌರವ ಡಿ.ಲಿಟ್. ಪ್ರದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT