ಬುಧವಾರ, ಡಿಸೆಂಬರ್ 8, 2021
23 °C
ವಿದ್ಯಾರ್ಥಿನಿಯರ ವಿಭಾಗದಲ್ಲಿ ಕಾವ್ಯಾ ಚೋಪ್ರಾ ಪ್ರಥಮ

ಜೆಇಇ –ಅಡ್ವಾನ್ಸ್ಡ್‌ ಪರೀಕ್ಷೆ ಫಲಿತಾಂಶ ಪ್ರಕಟ: ದೆಹಲಿಯ ಮೃದುಲ್ ಟಾಪರ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷದ ಜೆಇಇ ಅಡ್ವಾನ್ಸಡ್‌ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ದೆಹಲಿ ವಲಯದ ಮೃದುಲ್‌ ಅಗರ್‌ವಾಲ್‌ ಉನ್ನತ ಸ್ಥಾನ ಗಳಿಸಿದ್ದಾರೆ. ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆಗಳಿಗೆ (ಐಐಟಿ) ಪ್ರವೇಶ ಪಡೆಯಲು ಇದು ಅರ್ಹತಾ ಪರೀಕ್ಷೆಯಾಗಿದೆ.

ರಾಜಸ್ಥಾನ ಮೂಲದ, 17 ವರ್ಷದ ಮೃದುಲ್ 360 ಅಂಕಗಳಿಗೆ 348 ಅಂಕ ಗಳಿಸಿದ್ದು, ಐಐಟಿ–ಬಾಂಬೆಯಲ್ಲಿ ಕಂಪ್ಯೂಟರ್‌ ಸೈನ್ಸ್ ವಿಷಯದಲ್ಲಿ ಬಿ.ಟೆಕ್ ಮಾಡುವ ಗುರಿ ಹೊಂದಿದ್ದಾರೆ. ಇವರು, ಜೆಇಇ ಮುಖ್ಯ ಪರೀಕ್ಷೆಯಲ್ಲಿ ಶೇ 100ರಷ್ಟು ಅಂಕಗಳಿಸಿದ್ದು, ಇತರೆ 17ರ ವಿದ್ಯಾರ್ಥಿಗಳ ಜೊತೆಗೆ ಮೊದಲ ರ‍್ಯಾಂಕ್‌ ಹಂಚಿಕೊಂಡಿದ್ದಾರೆ.

ಜೆಇಇ ಮುಖ್ಯ ಪರೀಕ್ಷೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದ, ದೆಹಲಿ ವಲಯದವರೇ ಆದ ಕಾವ್ಯಾ ಚೋಪ್ರಾ ಅವರೂ ಜೆಇಇ ಅಡ್ವಾನ್ಸಡ್ ಪರೀಕ್ಷೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಉನ್ನತ ಸ್ಥಾನಗಳಿಸಿದ್ದಾರೆ. ಇವರು 360 ಅಂಕಗಳಿಗೆ 286 ಅಂಕ ಗಳಿಸಿದ್ದು, 98ನೇ ರ‍್ಯಾಂಕ್‌ ಪಡೆದಿದ್ದಾರೆ.

ಓದಿ: 

ಈ ವರ್ಷ ಜೆಇಇ– ಅಡ್ವಾನ್ಸಡ್‌ ಪರೀಕ್ಷೆಗೆ 41,862 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಇವರಲ್ಲಿ 6,452 ವಿದ್ಯಾರ್ಥಿನಿಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಐಐಟಿ–ಕರಗ್‌ಪುರ್ ಪರೀಕ್ಷೆ ಆಯೋಜಿಸಿತ್ತು. ಜೆಇಇ ಅಡ್ವಾನ್ಸಡ್‌ ಪರೀಕ್ಷೆ 1 ಮತ್ತು 2ನೇ ಪತ್ರಿಕೆಗಳ ಪರೀಕ್ಷೆಗೆ 1,41,699 ಅಭ್ಯರ್ಥಿಗಳು ಹಾಜರಾಗಿದ್ದರು. 97 ವಿದೇಶಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 42 ಮಂದಿ ಹಾಜರಾಗಿದ್ದರು. ಇವರಲ್ಲಿ 7 ಮಂದಿ ಅರ್ಹತೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಾದ್ಯಂತ ಇರುವ ಐಐಟಿಗಳಿಗೆ ಪ್ರವೇಶಾರ್ಹತೆ ಪಡೆಯಲು ಜೆಇಇ–ಅಡ್ವಾನ್ಸಡ್‌ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಈ ವರ್ಷದಿಂದ ಜಾರಿಗೆ ಬಂದಿರುವಂತೆ ಜೆಇಇ ಮುಖ್ಯ ಪರೀಕ್ಷೆಯನ್ನು ವಾರ್ಷಿಕ ನಾಲ್ಕು ಬಾರಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳಿಸಲು ಅವಕಾಶ ಕಲ್ಪಿಸುವುದು ಇದರ ಉದ್ದೇಶ. ಮೊದಲ ಹಂತದ ಪರೀಕ್ಷೆ ಫೆಬ್ರುವರಿ ತಿಂಗಳು, ಎರಡನೇ ಹಂತದ ಪರೀಕ್ಷೆಯು ಮಾರ್ಚ್‌ ತಿಂಗಳಲ್ಲಿ ನಡೆದಿತ್ತು.

ಓದಿ: 

ತರದ ಹಂತದ ಪರೀಕ್ಷೆಗಳು ಏಪ್ರಿಲ್‌, ಮೇ ತಿಂಗಳು ನಡೆಯಬೇಕಿತ್ತು. ಆದರೆ, ಕೋವಿಡ್ 2ನೇ ಅಲೆ ಪರಿಣಾಮದಿಂದಾಗಿ ಮುಂದೂಡಲಾಗಿತ್ತು. ಬಳಿಕ ಮೂರನೇ ಹಂತದ ಪರೀಕ್ಷೆಯು ಜುಲೈ 20–25 ಹಾಗೂ ನಾಲ್ಕನೇ ಹಂತದ ಪರೀಕ್ಷೆಯು ಆಗಸ್ಟ್ 26 ಮತ್ತು ಸೆಪ್ಟೆಂಬರ್ 2ರ ನಡುವೆ ನಡೆದಿತ್ತು.

ಈಗಾಗಲೇ ರೂಪಿಸಲಾಗಿದ್ದ ನೀತಿಯ ಅನುಸಾರ ನಾಲ್ಕೂ ಪರೀಕ್ಷೆಗಳ ಅತ್ಯುತ್ತಮ ಸಾಧನೆಯನ್ನು ಪರಿಗಣನೆಗೆ ತೆಗೆದುಕೊಂಡು ರ‍್ಯಾಂಕ್‌ ಅನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು