ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಲಗೆಯ ಮೇಲೆ ತಂತ್ರಜ್ಞಾನದ ರೇಖೆಗಳು

ಸೆಂಟ್ರಲ್‌ ಸ್ವ್ಕೇರ್‌ ಪ್ರತಿಷ್ಠಾನದ ಅಧ್ಯಯನ ವರದಿ
Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಉತ್ತರ ಪ್ರದೇಶದ ಮೂಲೆಯ ಹೊಲದಲ್ಲಿ ರೈತಾಪಿ ಕೆಲಸ ಮಾಡುವ ವ್ಯಕ್ತಿಯ ಸೌಲಭ್ಯವಂಚಿತ ಮಗು ಅಲ್ಲಿನ ಶಾಲೆಯಲ್ಲಿ ಟ್ಯಾಬ್ಲೆಟ್‍ ಬಳಸಿ ಕಲಿಯುವುದು ರೋಮಾಂಚಕಾರಿ ವಿಷಯವಲ್ಲವೆ?! ವಿಜ್ಞಾನ, ಗಣಿತದಂಥ ಕಬ್ಬಿಣದ ಕಡಲೆ ವಿಷಯಗಳನ್ನು ಮಕ್ಕಳಿಗೆ ಆಸಕ್ತಿ ಹುಟ್ಟಿಸುವ ಹಾಗೆ ಪಾಠ ಮಾಡುವುದಕ್ಕಾಗಿ ಶಿಕ್ಷಕರು ಕಂಡುಕೊಂಡ ಮಾರ್ಗಗಳನ್ನು ವಾಟ್ಸ್ಆ್ಯಪ್‌ ಮೂಲಕ ತಿಳಿದುಕೊಳ್ಳುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತದಲ್ಲವೇ?
 
ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಶಿಕ್ಷಣಕ್ಷೇತ್ರದಲ್ಲಿ, ಅದರಲ್ಲಿಯೂ ಪ್ರಾಥಮಿಕ ಶಿಕ್ಷಣಕ್ಷೇತ್ರದಲ್ಲಿ ಅವುಗಳ ಬಳಕೆ ವ್ಯಾಪಕವಾಗಿಲ್ಲ. ಹಾಗೆಂದು ಪೂರ್ತಿ ನಿರಾಶರೂ ಆಗಬೇಕಿಲ್ಲ. ದೇಶದಾದ್ಯಂತ ಹಲವು ಕಡೆಗಳಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿಯಾದ ಉದಾಹರಣೆಗಳು ಸಿಗುತ್ತವೆ. ಒಟ್ಟಾರೆ ಶಾಲೆಗಳಿಗೆ ಹೋಲಿಸಿದರೆ ಇಂಥ ಪ್ರಯತ್ನಗಳು ಕಡಿಮೆ ಅನಿಸಿದರೂ ಅಪರೂಪದ ಯಶಸ್ಸಿನ ಉದಾಹರಣೆಗಳು ಆಶಾವಾದದ ಬೀಜವನ್ನಂತೂ ಬಿತ್ತುತ್ತವೆ. 
 
ಈ ಕುರಿತು ಸೆಂಟ್ರಲ್‌ ಸ್ವ್ಕೇರ್‌ ಪ್ರತಿಷ್ಠಾನವು ಬ್ರಿಟಿಷ್‌ ಕೌನ್ಸಿಲ್‍ ಸೆಂಟ್ರಲ್‍ ಸ್ವೇರ್‍ ಫೌಂಡೇಷನ್‌ನೊಂದಿಗೆ ಅಧ್ಯಯನ ನಡೆಸಿ ಪ್ರಕಟಿಸಿದ ವರದಿಯೂ ಒಂದು ಆಶಾಕಿರಣದಂತೆಯೇ ಕಾಣುತ್ತದೆ.
 
ದೇಶದಾದ್ಯಂತ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಸುತ್ತಿರುವ ಸುಮಾರು ನಾನೂರು ಸ್ಯಾಂಪಲ್‌ಗಳನ್ನು ಈ ವರದಿಯಲ್ಲಿ ಪರಿಗಣಿಸಿ ಯಶಸ್ವಿಯಾದ ಪ್ರಕರಣಗಳನ್ನು ಟಿಪ್ಪಣಿಗಳೊಂದಿಗೆ ಮುದ್ರಿಸಿದೆ. ಇಲ್ಲಿ ತಂತ್ರಜ್ಞಾನದ ಬಳಕೆ ಎಂದರೆ ವಿಡಿಯೊ ತೋರಿಸುವುದರಿಂದ ತೊಡಗಿ, ವಾಟ್ಸ್‌ಆ್ಯಪ್‌ ಗುಂಪುಗಳ ಬಳಕೆ, ಧ್ವನಿ, ಅನಿಮೇಷನ್, ಮಿಥ್ಯಾವಾಸ್ತವತೆ (ವರ್ಚುವಲ್ ರಿಯಾಲಿಟಿ), ಜಾಲತಾಣಗಳು, ವಿಡಿಯೊ ಕಾನ್ಫೆರೆನ್ಸ್, ವಿಕಿ, ಲ್ಯಾಪ್‌ಟಾಪ್‌, ಮೊಬೈಲ್‍ ಮತ್ತು ಮೊಬೈಲ್‍ ಆ್ಯಪ್‌ಗಳು, ಟ್ಯಾಬ್ಲೆಟ್‍, ಕ್ಯೂಆರ್‍ (ಕ್ವಿಕ್‍ ರೀಡರ್) ಕೋಡುಗಳು ಮತ್ತು ಸಂವಾದಾತ್ಮಕ ಕಪ್ಪುಹಲಗೆಗಳನ್ನು ಶಿಕ್ಷಣದಲ್ಲಿ ಸಕ್ರಿಯವಾಗಿ ಮತ್ತು ಪಾಠ ಮಾಡುವ ರೀತಿಯನ್ನಾಗಿಯೇ ಬಳಸುತ್ತಿರುವುದು. 
 
ವರದಿಯಲ್ಲಿ ಶಾಲೆಗಳನ್ನು ಯುಕ್ತವಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರ ಮಕ್ಕಳೇ ಬರುವ ಸರ್ಕಾರಿ, ಖಾಸಗಿ ಶಾಲೆಗಳನ್ನು ತಿಂಗಳಿಗೆ ಸಾವಿರದೈನೂರಕ್ಕಿಂತ ಕಡಿಮೆ ಶುಲ್ಕ ವಿಧಿಸುವ ಹಾಗೂ ಅದಕ್ಕಿಂತಲೂ ಹೆಚ್ಚು ಶುಲ್ಕ ವಿಧಿಸುವ ಶಾಲೆಗಳೆಂದು ವಿಂಗಡಿಸಲಾಗಿದೆ. ಇಂತಹ ವಿಂಗಡನೆಯನ್ನು ಬೇರೆಡೆಯೂ ಬಳಸಬಹುದು. ಖಾಸಗಿ ಶಾಲೆಯೆಂದ ಮಾತ್ರಕ್ಕೆ ಜನರ ರಕ್ತ ಹೀರಿ ನಡೆಸುತ್ತಿರುವ ಶಾಲೆಗಳು ಎಂಬ ಭಾವಕ್ಕೆ ವ್ಯತಿರಿಕ್ತವಾದ ಮೌಲ್ಯಾಧಾರಿತ, ತುಸು ಬಡತನದಲ್ಲೇ ನಡೆಯುತ್ತಿರುವ ಅನೇಕ ಖಾಸಗಿ ಶಾಲೆಗಳಿವೆ. ಇವನ್ನು ಗಮನಿಸಬೇಕು.
 
ಈ ವರದಿಯ ಪರಿಚಯ ವಿಭಾಗದಲ್ಲಿ ಭಾರತದ ಜನಸಂಖ್ಯೆ ಹಾಗೂ ತಂತ್ರಜ್ಞಾನದ ಬಳಕೆಯ ಅಂಕಿ ಅಂಶಗಳನ್ನು ನೀಡಿ (ವಿಶ್ವಸಂಸ್ಥೆಯು 2015ರಲ್ಲಿ ನೀಡಿದ ವರದಿಯಲ್ಲಿನ ಮಾಹಿತಿ ಆಧರಿಸಿದ್ದು http://hdr.undp.org/en/2015-report) ಭಾರತದ ಶಿಕ್ಷಣದಲ್ಲಿ ಉನ್ನತ ತಂತ್ರಜ್ಞಾನದ ಬಳಕೆ ಕುರಿತಾದ ಆಶಾವಾದವನ್ನು ಅಚ್ಚುಕಟ್ಟಾಗಿ ಮಂಡಿಸಲಾಗಿದೆ. ಹಾಗೆಯೇ ಭಾರತವನ್ನು ಏಕೆ ಇನ್ನು ಮುಂದುವರಿಯುತ್ತಿರುವ ರಾಷ್ಟ್ರ ಎಂದು ವರ್ಗೀಕರಿಸಲಾಗಿದೆ ಎಂಬುದನ್ನೂ ಹೇಳಲಾಗಿದೆ.
 
ಪರಿಣಾಮಕಾರಿಯೂ ಹೌದು
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಇತ್ತೀಚಿನ ಮೊಬೈಲ್‍ ಮತ್ತು ಮೊಬೈಲ್‍ ಡೇಟಾ ಕ್ರಾಂತಿಯಿಂದಾಗಿ ಇಂತಹ ತಂತ್ರಜ್ಞಾನದ ಬಳಕೆ ಹೆಚ್ಚುವುದು ಮಾತ್ರವಲ್ಲದೆ ಪರಿಣಾಮಕಾರಿ ಶಿಕ್ಷಣ ನೀಡುವಲ್ಲಿಯೂ ಯಶಸ್ವಿಯಾಗುತ್ತದೆ ಎಂಬುದನ್ನು ಈ ವರದಿ ಕಂಡುಕೊಂಡಿದೆ. 
ವರದಿಯಲ್ಲಿ ಐವತ್ತಕ್ಕೂ ಹೆಚ್ಚು ತಂತ್ರಜ್ಞಾನ ಬಳಕೆಯ ಸ್ಯಾಂಪಲ್‌ಗಳನ್ನು ವಿಶ್ಲೇಷಿಸಲಾಗಿದೆ. ಇಲ್ಲಿ ಆ ಬಳಕೆ ಯಶಸ್ವಿಯಾಗಿದ್ದು ಮಾತ್ರವಲ್ಲದೆ ಶಿಕ್ಷಕರ ಅಭಿವೃದ್ಧಿಗೂ ಇಂಬು ನೀಡಿದೆ. 
 
ಅವಕಾಶಗಳು ಲಭ್ಯವಿದ್ದಲ್ಲಿ, ಶಿಕ್ಷಕರು ಸ್ವಯಂಪ್ರೇರಣೆಯಿಂದ ಹೊಸ ತಂತ್ರಜ್ಞಾನಗಳನ್ನು ಕಲಿಸುವಲ್ಲಿ ಬಳಸಿಕೊಳ್ಳುತ್ತಾರೆ ಎಂಬ ಕುತೂಹಲಕಾರಿ ಅಂಶವನ್ನೂ ಈ ವರದಿ ಹೊರಗೆಡವಿದೆ. ಇದು ಮಕ್ಕಳಿಗೆ ಕಲಿಸುವ ಹಾಗೂ ಸ್ವತಃ ಶಿಕ್ಷಕರು ಬೋಧನಾ ವಿಷಯಗಳಲ್ಲಿ ಇತ್ತೀಚಿನ ಬೆಳೆವಣಿಗೆಗಳನ್ನು ಅರಿಯಲು ಸಹಕಾರಿಯಾಗಿದೆ. 
 
ಇದಕ್ಕೆ ಪೂರಕವಾಗಿ ಅನೇಕ ಸರ್ಕಾರೇತರ ಸಂಸ್ಥೆಗಳು ಮತ್ತು ವ್ಯಾಪಾರಿ ಸಂಸ್ಥೆಗಳು ಸಹ ಪೈಪೋಟಿಯ ಮೇಲೆ ಅತ್ಯುತ್ತಮ ಶೈಕ್ಷಣಿಕ ಉತ್ಪನ್ನಗಳನ್ನು ಆ್ಯಪ್‍, ಜಾಲತಾಣ, ಅನಿಮೇಷನ್, ಮಿಥ್ಯಾವಾಸ್ತವತೆ ಇತ್ಯಾದಿ ರೂಪಗಳಲ್ಲಿ ಹೊರತರುತ್ತಿವೆ. ಕೆಲವು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರಯತ್ನದಿಂದ ಇಂತಹ ಮೌಲಿಕ ವಿಷಯಗಳು ಅವಕಾಶವಂಚಿತ ಮಕ್ಕಳು, ಶಾಲೆಗೆ ಹೋಗಲಾಗದ ಸ್ಥಳೀಯ ಸಮುದಾಯಗಳಿಗೂ ಇದು ದಕ್ಕುತ್ತಿದೆ.


 
ವಿದ್ಯಾರ್ಥಿಗಳೊಟ್ಟಿಗೆ ಶಿಕ್ಷಕರಿಗೂ ಉಪಯುಕ್ತ
ಬೆಂಗಳೂರಿನ  ಸರ್ಕಾರಿ ಶಾಲೆಯ ಶಿಕ್ಷಕ ಮಹಮ್ಮದ್ ಫಜಿ಼ಲ್ ಇಂಗ್ಲಿಷ್‍ ಮತ್ತು ಗಣಿತವನ್ನು (4 ರಿಂದ 8ನೇ ತರಗತಿಯವರೆಗೆ) ಕಲಿಸಲು ಮಿಥ್ಯಾವಾಸ್ತವತೆ (ವರ್ಚುವಲ್ ರಿಯಾಲಿಟಿ)ಯನ್ನು ಬಳಸುತ್ತಿದ್ದಾರೆ. 
 
‘ನನ್ನ ಮೊದಲ ಗುರಿ ಪಾಠವನ್ನು ಹೆಚ್ಚು ಕುತೂಹಲಕಾರಿಯಾಗಿಸುವುದು ಹಾಗೂ ತನ್ಮೂಲಕ ಮಕ್ಕಳು ಹೆಚ್ಚು ಆಸಕ್ತಿಯಿಂದ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದಾಗಿತ್ತು. ತಂತ್ರಜ್ಞಾನ ಇದನ್ನು ಸಾಧಿಸಿತು’ ಎನ್ನುತ್ತಾರೆ ಅವರು.
 
ಮೈಸೂರಿನ ಸರ್ಕಾರಿ ಶಾಲೆಯಲ್ಲಿ ಏಳರಿಂದ ಹನ್ನೆರಡನೇ ತರಗತಿಯವರೆಗೆ ವಿಜ್ಞಾನ ಮತ್ತು ಗಣಿತವನ್ನು ಕಲಿಸುತ್ತಿರುವ ಪ್ರವೀಣ್‍ ಕುಮಾರ್ ಸಿಂಗ್ ಅವರು ಶಿಕ್ಷಕರಿಗಾಗಿ ಇರುವ ವಾಟ್ಸ್‌ಆ್ಯಪ್ ಕಲಿಕಾ ಸಮುದಾಯವನ್ನು ಬಳಸುತ್ತಿದ್ದಾರೆ. ಸದ್ಯ ಈ ವಾಟ್ಸ್‌ಆ್ಯಪ್‌ ಸಮುದಾಯದಲ್ಲಿ ಎಂಬತ್ತೇಳು ವಿಜ್ಞಾನಶಿಕ್ಷಕರಿದ್ದಾರೆ. ಪ್ರತಿವಾರ ವಿಜ್ಞಾನಬೋಧನೆ ಕುರಿತ ಪಠ್ಯ, ಧ್ವನಿ, ವಿಡಿಯೊಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.  
 
ಕನ್ನಡದ ಹಿರಿಯ ವಿಜ್ಞಾನ ಲೇಖಕರಾದ ಕೊಳ್ಳೆಗಾಲ ಶರ್ಮರು ‘ಜಾಣಬಂಡಿ’ ಎಂಬ ಜಾಲತಾಣ ನಡೆಸುತ್ತಿದ್ದು ಇದು ಶಿಕ್ಷಕರಿಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಮತ್ತು ಹಂಚಿಕೊಳ್ಳಲು ವೇದಿಕೆಯಾಗಿದೆ.   
 
ಜಾರ್ಖಂಡಿನ ಸರ್ಕಾರೇತರ ಸಂಸ್ಥೆ ಪ್ಲಾನ್ ಇಂಡಿಯಾ ಶಿಕ್ಷಣ ವಂಚಿತರು ಹಾಗೂ ಇತರರಿಗೆ ಸಹ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಅಲ್ಲಿ ವಿಡಿಯೊ ಕಾನ್ಫೆರೆನ್ಸ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. 
 
ಸಂವಾದಾತ್ಮಕ ವಿಡಿಯೊ ಕಾನ್ಫೆರೆನ್ಸ್, ಸ್ಮಾರ್ಟ್‌ಬೋರ್ಡ್ ಕೆಲವು ಜಾಲತಾಣದಿಂದ ಇಳಿಸಿಕೊಂಡ ವಿಡಿಯೊಗಳನ್ನು ಬಳಸಿಕೊಂಡು ಇಂಗ್ಲಿಷ್, ವಿಜ್ಞಾನ, ಗಣಿತ, ವ್ಯಕ್ತಿತ್ವ ವಿಕಸನ, ಮಾನವಹಕ್ಕುಗಳು, ಹದಿಹರೆಯದವರಿಗೆ ಬೇಕಾದ ಲೈಂಗಿಕ ಶಿಕ್ಷಣ ಮುಂದಿನ ಓದು ಮತ್ತು ವೃತ್ತಿ ಮಾರ್ಗದರ್ಶನವನ್ನು ಇಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ನೀಡಲಾಗುತ್ತಿದೆ. ಈ ಪ್ರಯತ್ನಕ್ಕೆ ಸಾಕಷ್ಟು ಪ್ರಶಂಸನೆಯೂ ವ್ಯಕ್ತವಾಗಿದೆ.
 
ಆಂಧ್ರಪ್ರದೇಶದಲ್ಲಿ ರಾಜೇಶ್‌ ಕೌಲೂರಿ ಎಂಬ ಸರ್ಕಾರಿ ಶಾಲಾ ಶಿಕ್ಷಕರು ಸ್ವತಃ ತಾವೇ ಸಿದ್ಧಪಡಿಸಿದ ವಿಡಿಯೊಗಳನ್ನು ಒಂದರಿಂದ ಎಂಟನೇ ತರಗತಿಯವರೆಗಿನ ಶಿಕ್ಷಣದಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಎಲ್ಲ ಕಲಿಕಾ ವಿಷಯಗಳನ್ನು ಒಳಗೊಂಡಿದೆ.
 
ಆ್ಯಪ್‌ ರೂಪಿಸಿದ ಶಿಕ್ಷಕ
ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಗುರು ಸಂಸ್ಥೆಯ ಸಿಇಒ ಅದಮ್ ಖೋರಾಕಿವಾಲ  ಮೊಬೈಲ್‍ ಬಳಸಿ ಇಂಗ್ಲಿಷ್‍ ಕಲಿಸುವ ಆ್ಯಪ್‍ ರೂಪಿಸಿದ್ದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಒಂದರಿಂದ ಐದರವರೆಗಿನ ತರಗತಿಯ ಮಕ್ಕಳಿಗೆ ಉಪಯುಕ್ತವಾಗಿದೆ. ಅನೇಕ ಸರ್ಕಾರಿ ಹಾಗೂ ಕಡಿಮೆ ಆದಾಯದ ಖಾಸಗಿ ಶಾಲೆಗಳಲ್ಲಿ ಬಳಕೆಯಲ್ಲಿದೆ.
 
ಇದೇ ರೀತಿ ಉನ್ನತ ತಂತ್ರಜ್ಞಾನವನ್ನು ಬಳಸಿಕೊಂಡು ಆ್ಯಪ್‌, ಟ್ಯಾಬ್ಲೆಟ್‍ ಇತ್ಯಾದಿ ಗ್ಯಾಜೆಟ್ಟುಗಳ ಸಹಾಯದಿಂದ ಇಂದು ಸರ್ಕಾರಿ ಹಾಗೂ ಕಡಿಮೆ ಆದಾಯದ ಖಾಸಗಿ ಶಾಲೆಗಳಲ್ಲಿಯೂ ತಂತ್ರಜ್ಞಾನ ಶಿಕ್ಷಣಕ್ರಾಂತಿಯನ್ನು ತರುತ್ತಿದೆ (ಇನ್ನು ಶ್ರೀಮಂತ ಶಾಲೆಗಳನ್ನು ಕುರಿತು ಹೇಳಬೇಕಾದ ಅವಶ್ಯಕತೆಯೇ ಇಲ್ಲ). 
 
ತಂತ್ರಜ್ಞಾನ ಬಳಸಿಕೊಂಡ ಮಾತ್ರಕ್ಕೆ ಶಿಕ್ಷಣ ಗುಣಮಟ್ಟ ಸುಧಾರಿಸುತ್ತದೆ ಎಂದೇನೂ ಇಲ್ಲ. ಆದರೆ, ಉತ್ತಮ ಶಿಕ್ಷಣವನ್ನು ನೀಡಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಈ ಹೊಸ ದಾರಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಜವಾಬ್ದಾರಿಯೂ ನಮ್ಮ ಶಿಕ್ಷಕರ ಮೇಲೆಯೇ ಇದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ದೇಶದ ಸರ್ಕಾರಿ ಶಾಲಾ ನೆಲೆಯಲ್ಲಿಯೇ ಕಂಡುಬರುತ್ತಿರುವುದು ಸಮಾಧಾನಕರ ಅಂಶ.
 
ತಂತ್ರಜ್ಞಾನ ಕೊಂಡಿಗಳು
https://generation.global/
janabandi.wordpress.com/
https://vr.google.com/cardboard/
https://www.barefootcollege.org
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT