ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ತಯಾರಿ; ಕಡೆಗಣಿಸದಿರಿ ಆರೋಗ್ಯ

ಅಕ್ಷರ ಗಾತ್ರ

ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 9ರಿಂದ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆ ಮಾ. 30ರಿಂದ ಆರಂಭವಾಗಲಿವೆ. ಈ ಮಧ್ಯದ ಅವಧಿಯಲ್ಲಿಯೇ ಸಿಬಿಎಸ್ಇ ಹಾಗೂ ಐಸಿಎಸ್ಇ 10 ಹಾಗೂ 12ನೇ ತರಗತಿಯ ಪರೀಕ್ಷೆಗಳೂ ನಡೆಯಲಿವೆ. ವಿದ್ಯಾರ್ಥಿಜೀವನದಲ್ಲಿ ನಿರ್ಣಾಯಕವಾದ ಈ ಮಹತ್ವದ ಪರೀಕ್ಷೆಗಳ ಜೊತೆಯಲ್ಲಿ ಮತ್ತಿತರ ಪದವಿ, ವೃತ್ತಿಪರ ಕೋರ್ಸ್‌ಗಳ ಪರೀಕ್ಷೆಗಳು ಕೂಡ ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ನಡೆಯಲಿವೆ.

ಎಲ್ಲ ಹಂತದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸನ್ನದ್ಧರಾಗುತ್ತಿದ್ದಾರೆ. ಈ ರೀತಿಯ ಸಿದ್ಧತೆ ಎಷ್ಟೇ ಉತ್ತಮವಾಗಿದ್ದರೂ ‘ಪರೀಕ್ಷಾ ದಿನವೇ ನಿರ್ಣಾಯಕ’ವಾಗಿದ್ದು ಆ ದಿನ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿ ದೈಹಿಕ, ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಿರಬೇಕಾದುದು ಅನಿವಾರ್ಯ.

ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಿರೀಕ್ಷೆಯಂತೆ ಉತ್ತಮವಾಗಿ ಪರೀಕ್ಷೆ ಬರೆಯಲು ಸಾಧ್ಯ. ಆರೋಗ್ಯ ಕೈಕೊಟ್ಟರೆ, ದೈಹಿಕ–ಮಾನಸಿಕ ಅಸಮರ್ಥತೆಯಿಂದ ಉತ್ತರ ಗೊತ್ತಿದ್ದರೂ ಬರೆಯಲಾಗದ ಪರಿಸ್ಥಿತಿ ಬರಬಹುದು ಅಥವಾ ಪರೀಕ್ಷೆಗೆ ಗೈರು ಹಾಜರಾಗುವ ಅನಿವಾರ್ಯತೆಗೂ ಸಿಲುಕಬಹುದು.

ಹೊಳೆಯಲ್ಲಿ ಹುಣಸೆ ತೊಳೆದಂತಾಗಬಾರದು
ಪರೀಕ್ಷೆ ಸಮೀಪಿಸಿರುವ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ‘ಹಗಲು–ರಾತ್ರಿ’ ಓದಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಈ ರೀತಿ ಅವೈಜ್ಞಾನಿಕತೆಯಿಂದ ಕೂಡಿದ ‘ಹಗಲು–ರಾತ್ರಿಯ’ ನಿರಂತರ ಓದು ಅವರ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ವೈದ್ಯರ ಅಭಿಪ್ರಾಯದಂತೆ ತಡರಾತ್ರಿಯ ಓದು ಜ್ವರ, ಸುಸ್ತು, ತಲೆನೋವು, ಖಿನ್ನತೆಗೆ ಕಾರಣವಾಗುತ್ತದೆ.

ಹೀಗಾದರೆ, ಎಷ್ಟೇ ಓದಿದ್ದರೂ ನಿಮ್ಮ ಶ್ರಮವೆಲ್ಲ ನಿರರ್ಥಕವಾಗಿ ‘ಹೊಳೆಯಲ್ಲಿ ಹುಣಸೆ ತೊಳೆದಂತಾಗುತ್ತದೆ’! ಈ ರೀತಿಯ ನಿದ್ರೆರಹಿತ, ಅರೆಬರೆ ನಿದ್ರೆಯಿಂದ ಕೂಡಿದ ಓದುವಿಕೆಯಿಂದ ಪರೀಕ್ಷಾ ದಿನಗಳಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಪರೀಕ್ಷೆಯ ಹಿಂದಿನ ದಿನವಂತೂ ತಡರಾತ್ರಿಯ ಓದು ಸೂಕ್ತವಲ್ಲ ಎಂಬುದು ನೆನಪಿರಲಿ.

ಆರೋಗ್ಯ ರಕ್ಷಣೆಗೆ ಈ ಸೂತ್ರಗಳನ್ನು ಪಾಲಿಸಿ
‌ ಊಟ ಬಲ್ಲವನಿಗೆ ರೋಗವಿಲ್ಲ

ಪರೀಕ್ಷಾಪೂರ್ವ ಹಾಗೂ ಪರೀಕ್ಷೆ ನಡೆಯುವ ದಿನಗಳಲ್ಲಿ ಆಹಾರಸೇವನೆ ಹಿತ– ಮಿತವಾಗಿರಬೇಕು. ಸೇವಿಸುವ ಆಹಾರ ಪೌಷ್ಟಿಕತೆಯಿಂದ ಕೂಡಿರಬೇಕು. ಅತಿ ಹೆಚ್ಚು ಅಥವಾ ಕಡಿಮೆ ಆಹಾರಸೇವನೆ ಮಾಡಬಾರದು. ನಿಯಮಿತ ವೇಳೆಗೆ ಅನುಗುಣವಾಗಿ ಆಹಾರ ಸೇವಿಸಬೇಕು. ಅನಾರೋಗ್ಯಕ್ಕೆ ಕಾರಣವಾಗುವ ಕರಿದ ಆಹಾರಪದಾರ್ಥಗಳು, ಕುರುಕಲು ತಿಂಡಿ, ಗೋಬಿ ಮಂಚೂರಿ, ನೂಡಲ್ಸ್, ಪಿಜ್ಜಾ, ಬರ್ಗರ್‌... ಇತ್ಯಾದಿ ಜಂಕ್ ಫುಡ್‌, ಐಸ್‌ಕ್ರೀಂ, ಸಾಫ್ಟ್‌ಡ್ರಿಂಕ್‌ಗಳಿಂದ ದೂರವಿರಬೇಕು.

‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತಿನಂತೆ ಜೀರ್ಣಕ್ರಿಯೆಗೆ ಸುಲಭವಾಗಿರುವ ಅಪಾರ ಪೌಷ್ಟಿಕಾಂಶಗಳಿಂದ ಕೂಡಿರುವ ಸಿರಿಧಾನ್ಯ, ಮೊಳಕೆಕಾಳು, ಗಜ್ಜರಿ, ಸೌತೆಕಾಯಿ, ಮೂಲಂಗಿ, ಹಸಿರು ತರಕಾರಿ, ಹಣ್ಣು, ಹಾಲು, ಒಣಹಣ್ಣುಗಳಾದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರ, ಕಾರೀಕ್‌ಗಳಂಥವನ್ನು ಸೇವಿಸಬೇಕು. ನೆನಪಿರಲಿ, ಇವುಗಳ ಸೇವನೆಯೂ ಅತಿಯಾಗಬಾರದು. ತಿನ್ನುವಿಕೆ ನಿರಂತರವಾಗಿರದೇ ನಿಯಮಿತವಾಗಿರಬೇಕು. ಪ್ರತಿ ನಾಲ್ಕು ಗಂಟೆಗೊಮ್ಮೆ ಅಲ್ಪೋಪಹಾರ ಸೇವಿಸಬೇಕು. ಬೆಳಗಿನ ಉಪಾಹಾರ ಹೊಟ್ಟೆ ತುಂಬುವಂತಿರಬೇಕು. ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಮಿತಾಹಾರಸೇವನೆ ಸಾಕು.

ನೀರು ಕುಡಿಯುವುದು ನಿರಾಳತೆಗೆ ದಾರಿ
ಪರೀಕ್ಷಾ ಸಮಯದಲ್ಲಿ ಕುಡಿಯುವ ನೀರಿನ ವಿಷಯದಲ್ಲಿ ತುಂಬ ಎಚ್ಚರ ವಹಿಸಬೇಕು. ಕುಡಿಯುವ ನೀರು ಪರಿಶುದ್ಧವಾಗಿರಬೇಕು. ಬಹುತೇಕ ಕಾಯಿಲೆಗಳಿಗೆ ಅಶುದ್ಧ ನೀರುಸೇವನೆಯೇ ಮುಖ್ಯ ಕಾರಣವಾಗಿರುವುದರಿಂದ ಕುದಿಸಿ ಆರಿಸಿದ ನೀರು ಬಳಸಿದರೆ, ಉತ್ತಮ. ಮನೆ ಅಥವಾ ಶಾಲೆಯಲ್ಲಿ ಅಳವಡಿಸಿರುವ ಫಿಲ್ಟರ್‌ನ ನೀರನ್ನು ಬಳಸಬಹುದು. ಪರಸ್ಥಳಕ್ಕೆ ಹೋಗುವ ಅನಿವಾರ್ಯತೆ ಇದ್ದರೆ ಮನೆಯಿಂದಲೇ ಕುಡಿಯುವ ನೀರನ್ನು ಒಯ್ಯುವುದು ಉತ್ತಮ. ಯಾವುದೇ ಕಾರಣಕ್ಕೂ ಹೊಟೇಲ್, ಬೀದಿಬದಿಯ ಆಹಾರ ಮಳಿಗೆಗಳಲ್ಲಿ ಇರುವ ನೀರನ್ನು ಕುಡಿಯಬಾರದು. ‘ನೀರು ಕುಡಿಯುವುದು ನಿರಾಳತೆಗೆ ದಾರಿ’. ಪರಿಶುದ್ಧ ನೀರುಸೇವನೆಯಿಂದ ಉದ್ವೇಗ ಶಮನವಾಗುತ್ತದೆ. ದೇಹ–ಮನಸ್ಸುಗಳೆರಡೂ ಪ್ರಫುಲ್ಲಗೊಳ್ಳುತ್ತವೆ.

ಚೆನ್ನಾದ ನಿದ್ರೆಯೂ ಅಗತ್ಯ
ಪರೀಕ್ಷಾ ಅವಧಿಯಲ್ಲಿ ದಿನಕ್ಕೆ ಕನಿಷ್ಠ ಆರು ಗಂಟೆಯ ನಿದ್ರೆ ಅಗತ್ಯ. ಒಂದು ಉತ್ತಮ ನಿದ್ರೆ ಮಾನಸಿಕ ಒತ್ತಡ, ಉದ್ವೇಗಗಳನ್ನು ಹೋಗಲಾಡಿಸುತ್ತದೆ. ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಹೊಸತನಕ್ಕೆ, ಹೊಸದಿನಕ್ಕೆ, ಹೊಸ ಪ್ರಯತ್ನಕ್ಕೆ ಅನುವು ಮಾಡಿಕೊಡುತ್ತದೆ. ‘ಬೇಗ ಮಲಗಿ, ಬೇಗ ಏಳು’ ತತ್ವವನ್ನು ಪಾಲಿಸುವುದು ಸೂಕ್ತ. ನಿದ್ರೆಗೆ ಸೂಕ್ತ ಸಮಯ ಎಂದರೆ ರಾತ್ರಿ. ರಾತ್ರಿ 10ರಿಂದ ಬೆಳಗಿನ ಜಾವ 4 ಅಥವಾ ರಾತ್ರಿ 11ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ನಿದ್ರೆ ಮಾಡುವುದು ಅತ್ಯುತ್ತಮ.

ಅಧ್ಯಯನದ ನಡುವೆ ಅರ್ಧ ಗಂಟೆಯ ಮಧ್ಯಾಹ್ನದ ಕಿರುನಿದ್ರೆಯೂ ನಿಮ್ಮಲ್ಲಿ ನವಚೈತನ್ಯ ತುಂಬಬಹುದು. ಮಲಗುವ ಸ್ಥಳ, ಹಾಸಿಗೆ–ಹೊದಿಕೆಗಳು ಸ್ವಚ್ಛವಾಗಿರಬೇಕು. ಸೊಳ್ಳೆಪರದೆ ಬಳಸಬೇಕು. ಗಾಳಿ, ಬೆಳಕಿಗೆ ಸಾಕಷ್ಟು ಅವಕಾಶವಿರಬೇಕು. ಮಲಗುವಾಗ ಸರಿಯಾದ ಭಂಗಿಯೂ ಮುಖ್ಯ. ನಿದ್ರೆಗೆ ಜಾರುವ ಮುನ್ನ ಆ ದಿನ ನೀವು ಮಾಡಿದ ಅಧ್ಯಯನದ ಅಂತರಾವಲೋಕನ ಮಾಡಿಕೊಂಡು ಮರುದಿನದ ತಯಾರಿ ಏನಿರಬೇಕು, ಹೇಗಿರಬೇಕು?

ಎಂಬುದರ ಕುರಿತು ಮಾನಸಿಕ ಸಿದ್ಧತೆ ಮಾಡಿಕೊಂಡು ಮಲಗಬೇಕು. ಬೆಳಿಗ್ಗೆ ಎದ್ದ ನಂತರ ನಿಮ್ಮ ಇಷ್ಟದ ದೇವರನ್ನು ಪ್ರಾರ್ಥಿಸಿ, ‘ಈ ದಿನ ಶುಭವಾಗಿರುತ್ತದೆ’ ಎಂದು ಪರಿಭಾವಿಸಿ ಅಧ್ಯಯನಲ್ಲಿ ತೊಡಗಬೇಕು. ಈ ಪ್ರಕ್ರಿಯೆ ಮೊಬೈಲ್ ಸ್ವಿಚ್–ಆಫ್ ಮಾಡಿ ಚಾರ್ಜಿಂಗ್ ಇಟ್ಟು ನಂತರ ಸ್ವಿಚ್ ಆನ್ ಮಾಡಿದಂತೆ.

ಸ್ನಾನ, ಶೌಚಾದಿಗಳು ನಿಯಮಿತವಾಗಿರಲಿ
ಪರೀಕ್ಷಾ ಅವಧಿಯಲ್ಲಿ ಸ್ನಾನ–ಶೌಚಾದಿಗಳು ನಿಯಮಿತವಾಗಿರಬೇಕು. ದೇಹದ ಸ್ವಚ್ಛತೆ, ನೈರ್ಮಲ್ಯದತ್ತ ಗಮನ ವಹಿಸಬೇಕು. ಸಮಯಾನುಸಾರ ನಿಸರ್ಗದ ಕರೆಗಳಿಗೆ ಓಗೊಡಬೇಕು. ಮಲ–ಮೂತ್ರಗಳನ್ನು ವಿಸರ್ಜಿಸುವುದನ್ನು ಮುಂದೂಡಬಾರದು. ಇದರಿಂದ ಆರೋಗ್ಯ ಹದಗೆಡುತ್ತದೆ. ಅಲ್ಲದೆ, ದೈಹಿಕ, ಮಾನಸಿಕ ಒತ್ತಡವೂ ಹೆಚ್ಚುತ್ತದೆ.

ವ್ಯಾಯಾಮ, ಯೋಗ, ಧ್ಯಾನ ಅಗತ್ಯ
ಮನೆಯಲ್ಲಿಯೇ ಮಾಡಬಹುದಾದ ಸರಳ ವ್ಯಾಯಾಮ, ಯೋಗ, ಧ್ಯಾನಗಳಿಗೆ ಪರೀಕ್ಷಾ ಅವಧಿಯಲ್ಲಿ ಬೆಳಿಗ್ಗೆ ಅಥವಾ ಸಂಜೆ ಅರ್ಧ ಗಂಟೆ ಮೀಸಲಿಡಬೇಕು. ಇದರಿಂದ ದೇಹ, ಮನಸ್ಸುಗಳೆರಡೂ ಜಡತ್ವ ಕಳೆದುಕೊಂಡು ಚಟುವಟಿಕೆಯಿಂದ ಕೂಡಿರುತ್ತವೆ.

ಅನಗತ್ಯ ರಿಸ್ಕ್ ತೆಗೆದುಕೊಳ್ಳಬೇಡಿ
ಬೆಳಗಿನ ವೇಳೆ ಎಚ್ಚರವಾಗಿರುವ ಅವಧಿಯಲ್ಲೂ ಸೊಳ್ಳೆ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳಬೇಕು. ಅಲ್ಲದೆ, ಮೈದಾನಕ್ಕೆ ಆಟವಾಡಲು ಹೋಗಿ ಬಿದ್ದು ಗಾಯ ಮಾಡಿಕೊಳ್ಳುವುದು, ಸಲ್ಲದ ಕಸರತ್ತು ಮಾಡಲು ಹೋಗಿ ಕೈ–ಕಾಲು ಮುರಿದುಕೊಳ್ಳುವುದು, ಬೈಕ್‌ ಸವಾರಿ ಮಾಡಲು ಹೋಗಿ ಅಪಘಾತಕ್ಕೆ ಒಳಗಾಗುವುದು, ಅನಗತ್ಯ ಪರ ಊರಿಗೆ ಪ್ರಯಾಣ... ಇತ್ಯಾದಿ ‘ರಿಸ್ಕ್’ಗಳನ್ನು ಆದಷ್ಟು ತಪ್ಪಿಸಬೇಕು. 

*
ಅಗತ್ಯ ಬಿದ್ದರೆ ವೈದ್ಯರನ್ನು ಭೇಟಿಯಾಗಿ
ಪರೀಕ್ಷಾ ಅವಧಿಯಲ್ಲಿ ಆರೋಗ್ಯದ ವಿಷಯದಲ್ಲಿ ರಾಜಿ ಸಲ್ಲ. ಸಣ್ಣಪುಟ್ಟ ಕಾಯಿಲೆ ಎಂದು ಮನೆಮದ್ದಿಗೆ ಮೊರೆ ಹೋಗಬೇಡಿ. ಅಥವಾ ನಿಮಗೆ ತಿಳಿದ ಮಾತ್ರೆ, ಔಷಧಗಳನ್ನು ಸೇವಿಸಬೇಡಿ. ಕೆಮ್ಮ, ನೆಗಡಿ, ಜ್ವರ, ಗಂಟಲುನೋವು, ಮೈಕೈನೋವು – ಏನೇ ಬಂದರೂ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಮಾನಸಿಕ ಒತ್ತಡ ಹೆಚ್ಚಿದೆ, ಖಿನ್ನತೆ ಕಾಡುತ್ತಿದೆ, ಓದಲು–ಬರೆಯಲು ಸಾಧ್ಯವಾಗುತ್ತಿಲ್ಲ, ಓದಿರುವುದನ್ನು ನೆನಪಿಟ್ಟುಕೊಳ್ಳಲು ಆಗುತ್ತಿಲ್ಲ, ಏಕಾಗ್ರತೆಯ ಕೊರತೆ ಕಾಡುತ್ತಿದೆ... ಈ ರೀತಿ ‘ಪರೀಕ್ಷಾ ಭಯ’ದ ಲಕ್ಷಣಗಳು ನಿಮ್ಮನ್ನು ಕಾಡುತ್ತಿದ್ದರೆ ಮನೋವೈದ್ಯರನ್ನು ಭೇಟಿ ಮಾಡಿ, ಆಪ್ತಸಮಾಲೋಚನೆಗೆ ಒಳಗಾಗಿ. ವೈದ್ಯರು, ಪೋಷಕರು, ಶಿಕ್ಷಕರ ಎದುರು ನಿಮ್ಮ ಭಾವನೆ, ತೊಂದರೆಗಳನ್ನು ಬಿಚ್ಚಿಟ್ಟು ಅವರ ಮಾರ್ಗದರ್ಶನ ಪಡೆಯಲು ಹಿಂಜರಿಕೆ ಬೇಡ.
– ಡಾ. ಬಿ.ಎನ್. ರವೀಶ್, ನಿರ್ದೇಶಕರು, ‘ಧಿಮಾನ್ಸ್’ ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT