ಬುಧವಾರ, ನವೆಂಬರ್ 13, 2019
22 °C
ನಟರಾಜ ಕಾಲೇಜಿನ ಸಾಂಸ್ಕೃತಿಕ, ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಕ್ರೀಡಾ ವೇದಿಕೆ ಉದ್ಘಾಟನೆ

‘ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವುದೇ ಶಾಶ್ವತ’

Published:
Updated:
Prajavani

ಮೈಸೂರು: ‘ಅಧಿಕಾರ ಶಾಶ್ವತವಲ್ಲ. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವ ಚಿದಾನಂದ ಸ್ವಾಮೀಜಿಯ ಕಾರ್ಯ ಮಾತ್ರ ಶಾಶ್ವತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಟರಾಜ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ‘ಸಾಂಸ್ಕೃತಿಕ, ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಕ್ರೀಡಾ ವೇದಿಕೆ' ಉದ್ಘಾಟಿಸಿದ ಅವರು ಮಾತನಾಡಿ, ‘ಚಿದಾನಂದ ಸ್ವಾಮೀಜಿ ನೇರ ನಡೆ, ನುಡಿ ಹಾಗೂ ದೂರದೃಷ್ಟಿಯುಳ್ಳ ನಿಷ್ಠುರವಾದಿ. ಯುವ ಜನಾಂಗ ಹೇಗೆ ಮುಖ್ಯವಾಹಿನಿಗೆ ಬರಬೇಕು ಎಂಬುದನ್ನು ಅರಿತವರಾಗಿದ್ದು, ಬಸವಣ್ಣನವರ ಮಾರ್ಗದಲ್ಲಿ ಸಮಾಜ ಕಟ್ಟಲು ಶ್ರಮಿಸುತ್ತಿದ್ದಾರೆ’ ಎಂದರು.

‘ನಟರಾಜ ಪ್ರತಿಷ್ಠಾನದಲ್ಲಿ ಸುಮಾರು ಮೂರು ಸಾವಿರ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಸರ್ಕಾರಗಳ ಬಳಿ ಕೈಚಾಚದಂತೆ ಶ್ರೀಗಳು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಶೈಕ್ಷಣವಾಗಿ ಮಾತ್ರವಲ್ಲದೆ ದೈಹಿಕವಾಗಿ, ಮಾನಸಿಕವಾಗಿ ಸದೃಢಗೊಳ್ಳಬೇಕು ಎಂಬ ಉದ್ದೇಶದಿಂದ ಕಾಲೇಜಿನಲ್ಲಿ ಕ್ರೀಡಾ ವೇದಿಕೆ ರಚಿಸಿದ್ದಾರೆ. ವಿದ್ಯಾರ್ಥಿಗಳು ಇದರ ಸಂಪೂರ್ಣ ಲಾಭವನ್ನು ಪಡೆದುಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಬಡತನ, ಸಿರಿತನ ಶಾಶ್ವತವಲ್ಲ. ಆದರೆ, ವಿದ್ಯೆ ಶಾಶ್ವತವಾಗಿರುತ್ತದೆ’ ಎಂದರು.

ನೆರೆ ಸಂತ್ರಸ್ತರ ಕುಟುಂಗಳಿಗೆ ನೆರವಾಗುವ ನಿಟ್ಟಿನಲ್ಲಿ ಶ್ರೀ ನಟರಾಜ ಪ್ರತಿಷ್ಠಾನದ ವತಿಯಿಂದ ₹ 1 ಲಕ್ಷ ಮೊತ್ತದ ಚೆಕ್‍ನ್ನು ಇದೇ ಸಂದರ್ಭ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್ ವಾತ್ಸಲ್ಯ ವಾಹಿನಿ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಮಾಡಿದರು. ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‍ಎಸ್ ಕಾಲೇಜು ಪ್ರಾಧ್ಯಾಪಕ ಪ್ರೊ.ಡಿ.ಎಸ್.ಸದಾಶಿವಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶಿವಮೂರ್ತಿ ಕಾನ್ಯ, ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಎಂ.ಶಾರದಾ, ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿ.ಪ್ರದೀಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)