ಅರಮನೆ ಮತ್ತು ಗುರುಮನೆಯಲ್ಲಿ ಓದಿದ್ದು!

7
ಭಾವಸೇತು

ಅರಮನೆ ಮತ್ತು ಗುರುಮನೆಯಲ್ಲಿ ಓದಿದ್ದು!

Published:
Updated:

ನಾಲ್ಕೂವರೆ ದಶಕಗಳ ಹಿಂದೆ ಪದವಿಪೂರ್ವ ಶಿಕ್ಷಣಕ್ಕೆಂದು ಮೈಸೂರಿನ ಯುವರಾಜ ಕಾಲೇಜು ಸೇರಿದ್ದೆ. ರಾಮಾನುಜ ರಸ್ತೆಗೂ ಊಟಿ ರಸ್ತೆಗೂ ನಡುವೆಯಿದ್ದ ಹೊಸಮಠದ ಚಿಕ್ಕ ಕೊಠಡಿಯಲ್ಲಿ ವಾಸ. ಮೈಸೂರಿನಲ್ಲಿ ಮೊದಲೇ ಸೆಕೆ ಜಾಸ್ತಿ. ಪರೀಕ್ಷೆಯ ಕಾಲದಲ್ಲಂತೂ ಅಸಾಧ್ಯ ಸೆಕೆ.

ಕೋಣೆಯಲ್ಲಿ ಕುಳಿತು ಓದುವುದು ಸಾಧ್ಯವಾಗುತ್ತಿರಲಿಲ್ಲ. ಕೋಣೆಯಿಂದ ಐದು ನಿಮಿಷ ನಡೆದರೆ ಶ್ರೀಶಂಕರಮಠ. ವಿಶಾಲವಾದ ಜಗಲಿ, ಒರಗಿ ಕೂರುವುದಕ್ಕೆ ಕಂಬಗಳು, ಆವರಣದಲ್ಲಿ ಗಿಡಗಳಿದ್ದುದರಿಂದ ಗಾಳಿಯಾಡುತ್ತಿತ್ತು. ಹಗಲೆಲ್ಲಾ, ಅಂದರೆ ಕತ್ತಲಾಗುವವರೆಗೆ ಅಲ್ಲಿ ಓದಿಕೊಳ್ಳುತ್ತಿದ್ದೆ. ಸಂಜೆಯಾದ ಮೇಲೆ ಅಲ್ಲಿ ಬೆಳಕಿನ ವ್ಯವಸ್ಥೆಯಿರಲಿಲ್ಲ. ಹಾಗಾಗಿ, ಅಲ್ಲಿಂದ ಮತ್ತೈದು ನಿಮಿಷ ನಡೆದು ಅರಮನೆಗೆ ಹೋಗುತ್ತಿದ್ದೆ.

ಆ ಕಾಲದಲ್ಲಿ ಅರಮನೆಗೆ ಮುಕ್ತ ಪ್ರವೇಶವಿತ್ತು. ನನ್ನ ಮೆಚ್ಚಿನ ಸ್ಥಳ ಅರಮನೆಯ ಮುಂಭಾಗದಲ್ಲಿರುವ ಹುಲಿಯ ಪ್ರತಿಮೆಯ ಕೆಳಗೆ. ಅಲ್ಲಿ ಸಲೀಸಾಗಿ ಓದುವಷ್ಟು ಬೆಳಕಿರುತ್ತಿತ್ತು. ಅರ್ಧ ಗಂಟೆಗೊಮ್ಮೆ ಹುಲಿಗಳನ್ನು ಬದಲಾಯಿಸುತ್ತಿದ್ದೆ! ಕೆಲವೊಮ್ಮೆ ಅತ್ತಿತ್ತ ಅಡ್ಡಾಡುತ್ತಾ ಓದುತ್ತಿದ್ದೆ. ನಿದ್ದೆ ಬರುವವರೆಗೂ ಅಲ್ಲಿ ಓದಿಕೊಂಡು ಕೋಣೆಗೆ ಹಿಂತಿರುಗುತ್ತಿದ್ದೆ. ‘ಅರಮನೆ ಗುರುಮನೆ ಎರಡರಲ್ಲೂ ಓದಿದೋನು ನಾನು’ ಅಂತ ಹೆಂಡತಿ, ಮಗಳ ಮುಂದೆ ಆಗಾಗ ಹೇಳಿಕೊಳ್ಳುತ್ತಿರುತ್ತೇನೆ!

ನನಗೆ ಬೆಳಿಗ್ಗೆ ಬೇಗ ಏಳುವುದು ಆಗುತ್ತಿರಲಿಲ್ಲ. ಈಗಲೂ ಸಹ! ಬೆಳಗಿನ ಜಾವದ ಎರಡು– ಮೂರು ಗಂಟೆಯವರೆಗೂ ಓದುತ್ತಿದ್ದೆ. ನಂತರ ಕೋಣೆಗೆ ಬಂದು ಚಾಪೆಗೆ ನೀರು ಚುಮುಕಿಸಿಕೊಂಡು ಮಲಗಿದರೆ ಹಾಯಾಗಿ ನಿದ್ದೆ ಬರುತ್ತಿತ್ತು. ಬೆಳಿಗ್ಗೆ ಕಾಲೇಜಿಗೆ ಹೋಗುವ ಒಂದು ಗಂಟೆ ಮುಂಚೆ ಎದ್ದರೆ ಸಾಕಿತ್ತು.

ನಮ್ಮ ಕಾಲದಲ್ಲಿ ಈಗಿನ ಹಾಗೆ ಚಿಕ್ಕ ಚಿಕ್ಕ ಪ್ರಶ್ನೆಗಳಿರುತ್ತಿರಲಿಲ್ಲ. 20 ಅಂಕಗಳ ಎಂಟು ಪ್ರಶ್ನೆಗಳನ್ನು ಕೊಟ್ಟು ಯಾವುದಾದರೂ ಐದಕ್ಕೆ ಉತ್ತರಿಸಿ ಎನ್ನುತ್ತಿದ್ದರು. ಹಿಂದಿನ ನಾಲ್ಕೈದು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ನೋಡಿಕೊಂಡು ನನ್ನದೇ ಆದ ಪ್ರಶ್ನೆಪತ್ರಿಕೆಯನ್ನು ತಯಾರಿಸಿಕೊಳ್ಳುತ್ತಿದ್ದೆ. ಅದಕ್ಕೆ ತಯಾರಾದರೆ ಸಾಕು. ಏಕೆಂದರೆ ನಾನು ತಯಾರಿಸಿದ ಪತ್ರಿಕೆಯ ಐದೋ ಆರೋ ಪ್ರಶ್ನೆಗಳು ಇದ್ದೇ ಇರುತ್ತಿದ್ದವು. ನಾವು ಉತ್ತರಿಸಬೇಕಾದದ್ದು ಐದು ಪ್ರಶ್ನೆಗಳಿಗೆ ತಾನೇ! ಒಳ್ಳೆಯ ಅಂಕಗಳಿಂದ ಪಾಸಾಗಲು ಅಷ್ಟು ಸಾಕಾಗುತ್ತಿತ್ತು!

ಈಗಿನ ಮಕ್ಕಳ ಪರೀಕ್ಷಾ ತಯಾರಿ, ಅಂಕಗಳಿಕೆಯ ತೀವ್ರ ಒತ್ತಡದ ಪಡಿಪಾಟಲನ್ನು ನೋಡಿದಾಗ ಆ ಕಾಲ ಎಷ್ಟು ಚಂದಿತ್ತು ಎಂದು ಅನ್ನಿಸುತ್ತದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !