ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇಟಾ ಅನಾಲಿಟಿಕ್ಸ್

Last Updated 11 ಜೂನ್ 2019, 19:30 IST
ಅಕ್ಷರ ಗಾತ್ರ

ಇತ್ತೀಚಿಗೆ ಮೇಕ್‌ಮೈಟ್ರಿಪ್.ಕಾಂ ಮುಖಾಂತರ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಲು ಪ್ರಯತ್ನಪಡುತ್ತಿದ್ದೆ. ಯಾರೋ ಕರೆದರೆಂದು ಅದನ್ನು ಅರ್ಧಕ್ಕೆ ಬಿಟ್ಟು ನಂತರ ಮಾಡಿದರಾಯಿತೆಂದು ಬೇರೆ ಕೆಲಸಕ್ಕೆ ಹೊರಗೆ ಹೋದೆ, ಸಂಜೆ ಮತ್ತೆ ಟಿಕೆಟ್‌ ಕಾಯ್ದಿರಿಸಲು ಪ್ರಯತ್ನಿಸುತ್ತಿರುವಾಗ, ಬೇರೆ ಬೇರೆ ಟಿಕೆಟ್ ಏಜೆನ್ಸಿಗಳಿಂದ ತಮ್ಮ ಏಜೆನ್ಸಿಗಳ ಮೂಲಕವೇ ಟಿಕೆಟ್ ಕಾಯ್ದಿರಿಸಲು ನನ್ನ ಕಂಪ್ಯೂಟರ್ ಪರದೆಯ ಮೇಲೆ ಆಫರ್‌ಗಳು ಬಂದು ಬಿದ್ದಿದ್ದವು.

***

ದೆಹಲಿಯ ಯಾವುದೋ ಕಾನ್ಫರೆನ್ಸ್‌ಗೆ ನೋಂದಣಿ ಮಾಡಿದೆ. ಹತ್ತು ನಿಮಿಷಗಳ ನಂತರ ನನ್ನ ಮೇಲ್‌ನ ಇನ್‌ಬಾಕ್ಸ್ ತೆಗೆದು ನೋಡಿದರೆ, ದೆಹಲಿಯಲ್ಲಿ ಇನ್ನೊಂದು ಕಾನ್ಫರೆನ್ಸಿದೆ. ಅದಕ್ಕೂ ನೊಂದಾಯಿಸಿ ಎಂದು ಯಾರೋ ಮನವಿ ಕಳಿಸಿದ್ದರು.

***

ಆನ್‌ಲೈನ್ ಷಾಪಿಂಗ್‌ನಲ್ಲಿ ನನಗೆ ಬೇಕಾಗಿರುವ ವಸ್ತುಗಳನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಇನ್ನೊಂದು ಕಂಪನಿಯವರೂ ತಾವು ಮಾರಾಟ ಮಾಡುವ ಸರಕುಗಳ ಚಿತ್ರ ಹಾಗೂ ಬೆಲೆಗಳೊಂದಿಗೆ ನನ್ನನ್ನು ಪ್ರೇರೇಪಿಸುತ್ತಿದ್ದರು.

ನಾನು ಒಂದು ಕಂಪನಿಯಿಂದ ಟಿಕೆಟ್ ಕಾಯ್ದಿರಿಸುತ್ತಿರುವುದು, ದೆಹಲಿಯಲ್ಲಿ ಕಾನ್ಫರೆನ್ಸ್‌ಗೆ ಭೇಟಿ ನೀಡುತ್ತಿರುವುದು, ಹಾಗೆಯೇ ಆನ್‌ಲೈನ್ ಷಾಪಿಂಗ್‌ನಲ್ಲಿ ಇಂತಹದ್ದೇ ವಸ್ತು ಅಥವಾ ಸರಕುಗಳನ್ನು ಖರೀದಿಸಲು ತಯಾರಿದ್ದೇನೆ ಎಂದು ಇನ್ನೊಂದು ಕಂಪನಿಗೆ ಅಥವಾ ಏಜೆನ್ಸಿಗೆ ಹೇಗೆ ಗೊತ್ತಾಯಿತು?

ಇದಕ್ಕೆಲ್ಲಾ ಕಾರಣ ಡೇಟಾ ‌ಎನಾಲಿಟಿಕ್ಸ್ ಹಾಗೂ ಬ್ಯುಸಿನೆಸ್ ಇಂಟೆಲಿಜನ್ಸ್!

ಏನಿದು ಡೇಟಾ ಅನಾಲಿಟಿಕ್ಸ್ ಅಥವಾ ಮಾಹಿತಿ ವಿಶ್ಲೇಷಣೆ?
ಮಾರುಕಟ್ಟೆ ಬಗೆಗಿನ ದತ್ತಾಂಶ ಅಥವಾ ಮಾಹಿತಿಯನ್ನು ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಹಾಗೂ ಮುಂದುವರಿದ ಸಾಫ್ಟ್‌ವೇರ್‌ಗಳ ಸಹಾಯದಿಂದ ವಿಶ್ಲೇಷಿಸುವುದರಿಂದ ಒಂದು ಕಂಪನಿಯಲ್ಲಿನ ಅಥವಾ ಮಾರುಕಟ್ಟೆಯಲ್ಲಿನ ವ್ಯವಹಾರಕ್ಕೆ ಸಂಬಂಧಪಟ್ಟ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಪ್ರಸ್ತುತ ಕಂಪನಿಗಳು ಅಥವಾ ಸಂಸ್ಥೆಗಳು ತಾವು ತಯಾರಿಸಿದ ಸರಕು ಅಥವಾ ನೀಡುವ ಸೇವೆಗಳ ಆಧಾರದ ಮೇಲೆ ಹಾಗೂ ಅದರ ಮೇಲೆ ತಾವು ಗಳಿಸುವ ಲಾಭದ ಮೇಲೆ ಒಂದು ಸಂಸ್ಥೆಯ ಅಳಿವು-ಉಳಿವು ಇರುತ್ತದೆ. ಕಂಪನಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಮಾಹಿತಿ ವಿಶ್ಲೇಷಣೆಯ ಸಹಾಯ ತುಂಬಾ ಅನಿವಾರ್ಯ. ಮಾರುಕಟ್ಟೆಯಲ್ಲಿನ ತಮ್ಮ ಇರುವಿಕೆಯನ್ನು ಅಥವಾ ಅಸ್ತಿತ್ವವನ್ನು ಬಹಳ ದಿನಗಳ ಕಾಲ ಸಾಬೀತುಪಡಿಸಬೇಕಾದರೆ ಸರಕು ಹಾಗೂ ಸೇವೆಗಳ ಕುರಿತ ಗ್ರಾಹಕರ ಒಲವು, ಅವರ ಖರೀದಿಯ ಬಗೆಗಿನ ಚಲನವಲನಗಳ ಈ ಮಾಹಿತಿ ವಿಶ್ಲೇಷಣೆಗಳ ಮೂಲಕವೇ ಸಾಧ್ಯ. ಹೀಗಾಗಿ ಈ ಮಾಹಿತಿ ವಿಶ್ಲೇಷಣೆಯ ಬಗ್ಗೆ ಕೌಶಲ ಇರುವವರಿಗೆ ಬೇಡಿಕೆ ಇದ್ದೇ ಇದೆ.

ಇತ್ತೀಚಿನ ಮಾಹಿತಿ ಪ್ರಕಾರ ಎಫ್.ಎಂ.ಸಿ.ಜಿ. (ವೇಗವಾಗಿ ಬಿಕರಿಯಾಗುವ ಗ್ರಾಹಕ ವಸ್ತು) ದೊಡ್ಡ ರಿಟೇಲ್ ಚೈನ್ ಅಥವಾ ಕಂಪನಿಗಳಲ್ಲಿ, ಸರ್ಕಾರಿ ಕ್ಷೇತ್ರಗಳಲ್ಲಿ, ಹಡಗು ನಿರ್ಮಾಣ, ವಿಮಾನಯಾನ ಉದ್ಯಮ, ಬ್ಯಾಂಕಿಗ್, ಹಣಕಾಸು ಉದ್ಯಮ, ಇ– ಕಾಮರ್ಸ್ ಕ್ಷೇತ್ರಗಳಲ್ಲಿ ಹಾಗೂ ಸಾಪ್ಟ್‌ವೇರ್ ಕಂಪನಿಗಳಲ್ಲಿ ವಿಪುಲ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ.

2020ರ ವೇಳೆಗೆ ಅಮೆರಿಕಾದಲ್ಲಿ ಡೇಟಾ ಅನಾಲಿಟಿಕ್ಸ್ ಕ್ಷೇತ್ರಕ್ಕೆ 20 ಲಕ್ಷ ಹುದ್ದೆಗಳ ಅವಶ್ಯಕತೆ ಇರಲಿದ್ದು, ಭಾರತದಲ್ಲಿ ಸುಮಾರು 75 ಸಾವಿರ ಹುದ್ದೆಗಳ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ.

ಡೇಟಾ ಅನಾಲಿಟಿಕ್ಸ್‌ನಿಂದ ಕಂಪನಿಗಳಿಗೆ ಹೇಗೆ ಲಾಭ?
*
ವೇಗವಾದ ವರದಿ, ವಿಶ್ಲೇಷಣೆ ಅಥವಾ ಯೋಜನೆ
*ಹೆಚ್ಚು ನಿಖರ ವರದಿ
* ಉತ್ತಮ ವ್ಯಾಪಾರದ ನಿರ್ಧಾರಗಳು
*ಬಳಕೆದಾರ ಏನನ್ನು ಕಂಪನಿಯಿಂದ ಅಪೇಕ್ಷಿಸುತ್ತಾನೆ ಎಂಬುದರ ಬಗ್ಗೆ ನಿಖರ ಮಾಹಿತಿ
* ಸುಧಾರಿತಾ ಡೇಟಾ ಗುಣಮಟ್ಟ
* ಪ್ರತಿಸ್ಪರ್ಧಿಗಳ ವ್ಯವಹಾರ ಬುದ್ಧಿಮತ್ತೆಯ ಕೆಲವು ಸಂಭಾವ್ಯ ಪ್ರಯೋಜನಗಳು
*ಪ್ರತಿಸ್ಪರ್ಧಿಗಳ ತಂತ್ರದ ಅರಿವು

ಇವೆಲ್ಲದರ ಮೇಲೆ ಹೇಗೆ ತಮ್ಮ ಬಳಕೆದಾರ ಅಥವಾ ಗ್ರಾಹಕರನ್ನು ಸೆಳೆಯಬಹುದು ಹಾಗೂ ತಾವು ತಯಾರಿಸಿದ ವಸ್ತು ಅಥವಾ ಸೇವೆಗಳನ್ನು ಹೆಚ್ಚಿನ ರೀತಿಯಲ್ಲಿ ಗ್ರಾಹಕರು ಉಪಯೋಗಿಸುವಂತೆ ಮಾಡಿ ಕಂಪನಿಗೆ ಲಾಭ ಮಾಡಿಕೊಡಬಹುದು ಎಂಬುದರ ಬಗೆಗಿನ ವಿವರವಾದ ಮಾಹಿತಿಯನ್ನು ಡೇಟಾ ಎನಾಲಿಟಿಕ್ಸ್ ಹಾಗೂ ಬ್ಯುಸಿನೆಸ್ ಇಂಟೆಲಿಜೆನ್ಸ್‌ನಿಂದ ಪಡೆಯಬಹುದು.

ಕೋರ್ಸ್‌ಗೆ ಅಗತ್ಯ ಕೌಶಲಗಳು: ಸಂಖ್ಯಾಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ನೈಪುಣ್ಯ ಹಾಗೂ ಪರಿಣತಿಕ್ವೆರಿಯಿಂಗ್ ಲಾಂಗ್ವೆಜ್, (ಎಸ್.ಕ್ಯು.ಎಲ್, ಹೈವ್, ಪಿಗ್) ಸ್ಕ್ರಿಪ್ಟಿಂಗ್ ಲಾಂಗ್ವೆಜ್ (ಪೈಥಾನ್), ಹಾಗೂ (ಮ್ಯಾಟ್ ಲ್ಯಾಬ್), ಸ್ಟ್ಯಾಟಿಸ್ಟಿಕಲ್ ಲಾಂಗ್ವೆಜ್ (ಆರ್. ಎಸ್.ಪಿ.ಎಸ್.ಎಸ್.) ಹಾಗೂ ಮೈಕ್ರೊಸಾಫ್ಟ್ ಎಕ್ಸೆಲ್‌ನಲ್ಲಿ ಒಳ್ಳೆಯ ಪರಿಣತಿಯನ್ನು ಪಡೆದಿರಬೇಕು. ಈ ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ಅರ್ಥ ಮಾಡಿಕೊಂಡು, ವಿಶ್ಲೇಷಿಸುವ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರಬೇಕು.

ಜೊತೆಗೆ ಸೃಜನಶೀಲತೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೌಶಲ, ವಿಶ್ಲೇಷಣಾತ್ಮಕ ಯೋಜನೆ, ಒಂದು ತಂಡದಲ್ಲಿ ಉತ್ತಮ ಪಟು ಆಗುವ ಕೌಶಲ, ತಾಳ್ಮೆ, ದಿನದಲ್ಲಿ ಸಾಕಷ್ಟು ಗಂಟೆಗಳ ಕಾಲ ಕೆಲಸ ನಿರ್ವಹಿಸುವ ಸಾಮರ್ಥ್ಯ ಮೊದಲಾದವುಗಳೂ ಅಗತ್ಯ.

ಎಂತಹ ಹುದ್ದೆಗಳು?
*
ಡೇಟಾ ಸೈಂಟಿಸ್ಟ್
*ಡೇಟಾ ಆರ್ಕಿಟೆಕ್ಟ್
*ಡೇಟಾ ಎಂಜಿನಿಯರ್
*ಡೇಟಾ ಅನಾಲಿಸ್ಟ್ (ಮಾಹಿತಿ ವಿಶ್ಲೇಷಕ)
*ಸ್ಟ್ಯಾಟಿಸ್ಟೀಶಿಯನ್ (ಸಂಖ್ಯಾ ಶಾಸ್ತ್ರಜ್ಞ)
*ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್‌ (ದತ್ತಾಂಶ ನಿರ್ವಹಣಾಗಾರ)

ಯಾವ ಕೋರ್ಸ್ ಲಭ್ಯ?
ಡೇಟಾ ಅನಾಲಿಟಿಕ್ಸ್ ಬಗ್ಗೆ ಆಸಕ್ತಿ ಇರುವವರು ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ಈ ಕೋರ್ಸ್ ಓದಬಹುದು. ಇದರಲ್ಲಿ ಎಂಜಿನಿಯರಿಂಗ್ ಪದವಿಯನ್ನು ಕೂಡ ಪಡೆಯಬಹುದು.
*ಪದವಿ ಕೋರ್ಸ್– ಬಿ.ಇ. / ಬಿ.ಟೆಕ್., ಬಿ.ಎಸ್‌ಸಿ.
*ಸ್ನಾತಕೋತ್ತರ ಕೋರ್ಸ್‌– ಎಂ.ಬಿ.ಎ. / ಪಿಜಿಡಿಎಂ
*ಇದಲ್ಲದೆ ಡಿಪ್ಲೊಮಾ ಹಾಗೂ ಆನ್‌ಲೈನ್ ಸರ್ಟಿಫಿಕೇಟ್‌ ಕೋರ್ಸ್‌ಗಳೂ ಲಭ್ಯ.

(ಲೇಖಕ ತುಮಕೂರು ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT