ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿ ಶಿಕ್ಷಣ

Last Updated 21 ಮೇ 2019, 19:30 IST
ಅಕ್ಷರ ಗಾತ್ರ

ಯೂರೋಪ್‌ನಲ್ಲಿ ಜರ್ಮನಿಯೆಂದರೆ ಮುಕ್ತವಾದ, ವೈವಿಧ್ಯಮಯ ಸಂಸ್ಕೃತಿಯುಳ್ಳ, ಸೌಂದರ್ಯ ಉಕ್ಕುವ ಪ್ರಕೃತಿಯ ಬೀಡು. ಜಗತ್ತಿನ ಯಾವುದೇ ದೇಶದ ಜನರಿರಲಿ, ಅವರಿಗಿಲ್ಲಿ ಸ್ವಾಗತ ಕೋರುವ ಮುಕ್ತ ಸಮಾಜವಿದೆ. ಯೂರೋಪ್‌ನಲ್ಲಿ ಅತ್ಯಂತ ಸುಭದ್ರ ಆರ್ಥಿಕತೆ ಹೊಂದಿರುವ ದೇಶದಲ್ಲಿ ನಡೆದಿರುವ ಸಂಶೋಧನೆಗಳೂ ನೂರಾರು. ವಿಜ್ಞಾನ ಮತ್ತು ಸಂಶೋಧನೆಗೆ ಜರ್ಮನಿಯಲ್ಲಿ ಎಂದಿನಿಂದಲೂ ಬಹಳ ಪ್ರಾಮುಖ್ಯವಿದೆ. ಜರ್ಮನಿಯನ್ನು ಈ ಸ್ಥಿತಿಗೆ ತಂದು ನಿಲ್ಲಿಸಿರುವುದೇ ಕ್ರಾಂತಿಕಾರಿ ಎನಿಸುವಂತಹ ಸಂಶೋಧನೆಗಳು. ವಾಹನ ಕ್ಷೇತ್ರ, ಎಕ್ಸ್‌ರೇ ತಂತ್ರಜ್ಞಾನ, ಕಂಪ್ಯೂಟರ್‌, ಚಿಪ್‌ ಕಾರ್ಡ್‌, ಡೇಟಾ ಕ್ರೋಢೀಕರಣ ವ್ಯವಸ್ಥೆ, ಆ್ಯಸ್ಪರಿನ್‌ ಮಾತ್ರೆ.. ಹೀಗೆ ಹಲವಾರು ಮೈಲಿಗಲ್ಲು ಎನಿಸುವಂತಹ ಸಂಶೋಧನೆಗಳ ತವರೂರು ಜರ್ಮನಿ.

ಇಂತಹ ಜರ್ಮನಿಗೆ ಓದಲು ತೆರಳುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಸದ್ಯ 3.5 ಲಕ್ಷ ದಾಟಿದೆ. ಇವರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ 18 ಸಾವಿರದಷ್ಟಿದೆ. ಇದಕ್ಕೆ ಕಾರಣಗಳು ಹಲವು. ಜರ್ಮನಿಯ ವಿಶ್ವವಿದ್ಯಾಲಯಗಳಿಗೆ ಅಂತರರಾಷ್ಟ್ರೀಯ ಶೈಕ್ಷಣಿಕ ವಲಯದಲ್ಲಿ ಒಳ್ಳೆಯ ಹೆಸರಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಬಹುತೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಶುಲ್ಕವಿಲ್ಲ. ಅಂತರರಾಷ್ಟ್ರೀಯ ಪದವಿ, ಸ್ನಾತಕೋತ್ತರ ಕೋರ್ಸ್‌ಗಳನ್ನು ಇಂಗ್ಲಿಷ್‌ ಭಾಷೆಯಲ್ಲೇ ಕಲಿಯಬಹುದು. ಜೊತೆಗೆ ವಿದ್ಯಾರ್ಥಿ ವೇತನ ಪಡೆಯಬಹುದು. ಇಲ್ಲಿ ಕಲಿತರೆ ವೃತ್ತಿ ಅವಕಾಶಗಳೂ ಹೆಚ್ಚು.

ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ 2000 ಕ್ಕೂ ಅಧಿಕ ಸ್ನಾತಕೋತ್ತರ ಹಾಗೂ ಪಿಎಚ್‌.ಡಿ. ಕೋರ್ಸ್‌ಗಳಿದ್ದು, ಆಯ್ಕೆಗೆ ಸಾಕಷ್ಟು ಅವಕಾಶಗಳಿವೆ. ಜರ್ಮನ್‌ ಭಾಷೆಯನ್ನು ಕಲಿಯುವುದೂ ಕಡ್ಡಾಯವಲ್ಲ. ಆದರೆ ಮಾತನಾಡಲು ಕಲಿತರೆ ಸ್ಥಳೀಯವಾಗಿ ಸಂವಹನ ನಡೆಸಲು ಹೆಚ್ಚು ಸುಲಭವಾಗುತ್ತದೆ.

ವಿಶ್ವವಿದ್ಯಾಲಯದ ಆಯ್ಕೆ

ನಿಮ್ಮ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡುವುದು ಕಠಿಣವೆನಿಸಬಹುದು. ಆದರೆ ನೀವು ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದನ್ನು ಇದು ಅವಲಂಬಿಸಿದೆ. ಉದಾಹರಣೆಗೆ ನೀವು ಮುಂದೆ ಹೆಚ್ಚು ಅಕಾಡೆಮಿಕ್‌ ಆಗಿ, ಅಂದರೆ ಶಿಕ್ಷಕ ವೃತ್ತಿಗೆ ಹೋಗುವುದಾದರೆ ಸಂಶೋಧನೆ ಮತ್ತು ತಂತ್ರಜ್ಞಾನದ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚು ವೃತ್ತಿಪರ ಕೌಶಲಗಳನ್ನು ಪಡೆಯುವ ಆಸೆಯಿದ್ದರೆ ಅಪ್ಲೈಡ್‌ ವಿಜ್ಞಾನ ಕುರಿತ ವಿಶ್ವವಿದ್ಯಾಲಯದಲ್ಲಿ ಓದಬಹುದು.

ವಿಶ್ವವಿದ್ಯಾಲಯವಿರುವ ಸ್ಥಳ, ಅಲ್ಲಿರುವ ಟ್ಯೂಷನ್‌ ಶುಲ್ಕ, ಪ್ರಾಯೋಗಿಕ ತರಗತಿಗಳು, ಅಧ್ಯಯನಕ್ಕೆ ಬಳಸುವ ಮಾದರಿಗಳು.. ಇವೇ ಮೊದಲಾದವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಮಾಡಬಹುದು. ವೆಬ್‌ಸೈಟ್‌ಗಳಲ್ಲಿ ಇವುಗಳನ್ನು ಹುಡುಕಿಕೊಳ್ಳಬಹುದು.

ಇದಾದ ನಂತರ ಅಲ್ಲಿ ಅಗತ್ಯವಿರುವ ಕೆಲವು ವಿವರಗಳನ್ನು ನೀಡಬೇಕಾಗುತ್ತದೆ. ಇದು ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗೆ ಭಿನ್ನವಾಗಿರುವುದರಿಂದ ಆಯಾ ವೆಬ್‌ಸೈಟ್‌ನಲ್ಲಿ ಓದಿ ಮನನ ಮಾಡಿಕೊಳ್ಳಬೇಕು. ಅರ್ಜಿಯಲ್ಲಿ ಸಣ್ಣ ತಪ್ಪಿದ್ದರೂ ತಿರಸ್ಕೃತವಾಗುವ ಸಾಧ್ಯತೆ ಇರುವುದರಿಂದ ಸರಿಯಾಗಿ ಓದಿಕೊಳ್ಳಿ. ಆಪ್ಟಿಟ್ಯೂಡ್‌ ಪರೀಕ್ಷೆಯನ್ನು ಆನ್‌ಲೈನ್‌ನಲ್ಲೂ ತೆಗೆದುಕೊಳ್ಳಬಹುದು. ಜರ್ಮನ್‌ ಭಾಷೆಯಲ್ಲಿ ಸಂವಹನ ಮಾಡುವ ಸಾಮರ್ಥ್ಯವಿರಬೇಕು. ಯೂರೋಪ್‌ನ ಇಂಗ್ಲಿಷ್‌ ಭಾಷೆಯ ಮೇಲೆ ಹಿಡಿತ ಕಡ್ಡಾಯ. ಎಂಜಿನಿಯರಿಂಗ್‌ ಅಥವಾ ನ್ಯಾಚುರಲ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರಿಗೆ ಹೆಚ್ಚಾಗಿ ಪ್ರಾಯೋಗಿಕ ಪರೀಕ್ಷೆಗಳು, ಗಣಿತದ ಮೇಲೆ ಹಿಡಿತವಿದ್ದರೆ ಸಾಕು. ವೀಸಾ, ಹಣಕಾಸು ಸವಲತ್ತಿನ ಪುರಾವೆ, ಆರೋಗ್ಯ ವಿಮೆ ಮೊದಲಾದವುಗಳು ಕಡ್ಡಾಯ.

ಎಲ್ಲಾ ದಾಖಲೆಗಳನ್ನು ಅಂತರ್ಜಾಲದಲ್ಲಿ ಸಲ್ಲಿಸಬಹುದು. ಬಹುತೇಕ ವಿಶ್ವವಿದ್ಯಾಲಯಗಳು ಯೂನಿಅಸಿಸ್ಟ್‌.ಡಿ. ಎಂಬ ವೇದಿಕೆಯನ್ನು ಬಳಸುತ್ತಿವೆ. ಇದರಲ್ಲಿ ನೀವು ನಿಮ್ಮ ಖಾತೆ ತೆರೆದು ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಬಹುದು.

ಅಕಾಡೆಮಿಕ್‌ ಉದ್ಯೋಗಗಳಂತಹ ಸಾಂಪ್ರದಾಯಿಕ ಕ್ಷೇತ್ರದಲ್ಲಿ ಮುಂದುವರಿಯುವ ಆಯ್ಕೆಯಲ್ಲದೇ ಜರ್ಮನಿಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲೂ ವಿಪುಲ ಅವಕಾಶಗಳಿವೆ. ಜರ್ಮನಿ ಮೊದಲಿನಿಂದಲೂ ಬಲಿಷ್ಠವಾದ ಕೈಗಾರಿಕೆ– ಶೈಕ್ಷಣಿಕ ಸಹಯೋಗವನ್ನು ಹೊಂದಿದ್ದು ವಿದ್ಯಾರ್ಥಿಗಳು ಕಾರ್ಖಾನೆ, ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ ಮಾಡಬಹುದು. ಇದು ಸಹಜವಾಗಿಯೇ ಉದ್ಯೋಗಕ್ಕೆ ರಹದಾರಿ ಇದ್ದಂತೆ.

ವಿದ್ಯಾರ್ಥಿ ವೇತನದ ನೆರವು

ನೆರವಿಗೆ ಬರುವ ಇನ್ನೊಂದು ಅಂಶವೆಂದರೆ ಸ್ಕಾಲರ್‌ಶಿಪ್‌ಗಳು. ಜರ್ಮನಿ ವಿದೇಶಿ ವಿದ್ಯಾರ್ಥಿಗಳಿಗೆಂದೇ ಸ್ಕಾಲರ್‌ಶಿಪ್‌ ಪ್ರಮಾಣವನ್ನು ಶೇ 80ಕ್ಕೇರಿಸಿದೆ. ಹೀಗಾಗಿ ಒಂದಲ್ಲ ಒಂದು ಸ್ಕಾಲರ್‌ಶಿಪ್‌ ಪಡೆಯುವ ಅವಕಾಶ ಭಾರತೀಯ ವಿದ್ಯಾರ್ಥಿಗಳಿಗಿದೆ. ಉನ್ನತ ವ್ಯಾಂಸಗ ಅಂದರೆ ಸಂಶೋಧನೆ, ಪೋಸ್ಟ್‌ ಡಾಕ್ಟರಲ್‌ ಸಂಶೋಧನೆ ಮಾಡುವವರಿಗಂತೂ ವಿವಿಧ ಸಂಸ್ಥೆಗಳು ಉದಾಹರಣೆಗೆ ಮೇರಿ ಕ್ಯೂರಿ, ಜರ್ಮನ್‌ ಅಕಾಡೆಮಿಕ್‌ ಎಕ್ಸ್‌ಚೇಂಜ್‌ ಸರ್ವೀಸಸ್‌ (ಡಾಡ್‌), ಹಂಬೋಲ್ಟ್‌ ಮೊದಲಾದ ಫೆಲೋಶಿಪ್‌ಗಳು ಸಿಗುವ ಸಾಧ್ಯತೆ ಅಧಿಕ.

ಜರ್ಮನಿಯಲ್ಲಿ ಬೃಹತ್‌ ನಗರಗಳಾದ ಫ್ರಾಂಕ್‌ಫರ್ಟ್‌, ಮ್ಯುನಿಚ್‌, ಸ್ಟಟ್‌ಗರ್ಟ್‌, ಬರ್ಲಿನ್‌ ಮೊದಲಾದ ಕಡೆ ಇಂಗ್ಲಿಷ್‌ ಮಾತನಾಡುವವರ ಸಂಖ್ಯೆ ಅಧಿಕ. ಇಂತಹ ಕಡೆ ಟೋಫೆಲ್‌, ಐಇಎಲ್‌ಟಿಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ವೆಸ್ಟ್‌ ಜರ್ಮನಿಯನ್ನು ಬಿಟ್ಟರೆ ಈಸ್ಟ್‌ ಜರ್ಮನಿಯಲ್ಲಿ ಜರ್ಮನ್‌ ಭಾಷೆಯನ್ನೇ ಆಡುತ್ತಾರೆ. ಇಲ್ಲಿ ವೆಚ್ಚವೂ ಕಡಿಮೆ. ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ ಶುಲ್ಕವೂ ಇಲ್ಲ. ಆದರೆ ಜರ್ಮನ್‌ ಭಾಷೆ ಕಲಿಕೆ ಅಗತ್ಯ. ಕನಿಷ್ಠ ಬಿ ಮಟ್ಟದ ಭಾಷಾ ಪ್ರಾವೀಣ್ಯ ಬೇಕಾಗುತ್ತದೆ.

ಬೆಂಗಳೂರಿನಲ್ಲಿ ಜರ್ಮನ್‌ ಅಕಾಡೆಮಿಕ್‌ ಎಕ್ಸ್‌ಚೇಂಜ್‌ ಸರ್ವೀಸಸ್‌ನ ಕಚೇರಿಯಿದೆ. ಇದು ಜರ್ಮನ್‌ ಕಾನ್ಸುಲೇಟ್‌ ಜನರಲ್‌ ಕಚೇರಿಯ ಆವರಣದಲ್ಲಿದ್ದು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. (www.daad.de/)

***

ಮುಖ್ಯಾಂಶಗಳು

* ವೆಚ್ಚ ಕಡಿಮೆ

* ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಸರ್ಕಾರದ ಉನ್ನತ ರ‍್ಯಾಂಕ್‌ ಪಟ್ಟಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಓದಬಹುದು

* ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿ, ಸಂಶೋಧನೆ ಮತ್ತು ಅಭಿವೃದ್ಧಿ ಶಾಖೆಗಳಲ್ಲಿ ಇಂಟರ್ನ್‌ಶಿಪ್‌ ಮಾಡಬಹುದು

* ಸಂಶೋಧನೆ ಆಧಾರಿತ ಓದಿಗೆ ಅವಕಾಶ

* ಪ್ರಾಯೋಗಿಕ ಆಧಾರಿತ ಅಧ್ಯಯನ

* ಎಂಜಿನಿಯರಿಂಗ್‌/ ವೈದ್ಯಕೀಯ/ ವಿಜ್ಞಾನ/ ಕಲೆಯಲ್ಲಿ ಅಪ್‌ಡೇಟ್‌ ಆದ ಪಠ್ಯ

* ವಿಶ್ವವಿದ್ಯಾಲಯ ಮತ್ತು ಕಂಪನಿಗಳ ಮಧ್ಯೆ ಸಹಯೋಗ ಇರುವುದರಿಂದ ಇಂಟರ್ನ್‌ಶಿಪ್‌ಗೆ ಅನುಕೂಲ

(ಲೇಖಕಿ ಜರ್ಮನಿಯ ಒಟ್ಟೊ ವಾನ್‌ ಗ್ಯುರಿಕ್‌ವಿ.ವಿ.ಯ ಎಂ.ಎಸ್‌. ಪದವೀಧರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT