ಗೌಳಿಗರ ಮಕ್ಕಳಿಗೆ ಶಿಕ್ಷಕನಿಂದ ಜ್ಞಾನಧಾರೆ

7
ಮುಂಡಗೋಡ ತಾಲ್ಲೂಕಿನ ಗೌಳಿ ದಡ್ಡಿಯಲ್ಲಿ ಬದಲಾವಣೆಗೆ ಶ್ರಮಿಸುತ್ತಿರುವ ಹನಮಂತಪ್ಪ

ಗೌಳಿಗರ ಮಕ್ಕಳಿಗೆ ಶಿಕ್ಷಕನಿಂದ ಜ್ಞಾನಧಾರೆ

Published:
Updated:
Deccan Herald

ಮುಂಡಗೋಡ (ಉತ್ತರ ಕನ್ನಡ): ಹಳ್ಳಿಯಲ್ಲಿ ಸೇವೆ ಸಲ್ಲಿಸಲು ಶಿಕ್ಷಕರು ಹಿಂದೇಟು ಹಾಕುತ್ತಾರೆ ಎಂಬುದು ಹಲವೆಡೆ ಕೇಳಿಬರುವ ಆಪಾದನೆ. ಆದರೆ, ಇಲ್ಲೊಬ್ಬರು ಗೌಳಿಗರ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಅವರ ದಡ್ಡಿಯಲ್ಲಿಯೇ ಮನೆ ನಿರ್ಮಿಸಿಕೊಂಡಿದ್ದಾರೆ. ವಸತಿ ಶಾಲೆಯ ಮಾದರಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.

ತಾಲ್ಲೂಕಿನ ಮರಗಡಿ ದಡ್ಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹನಮಂತಪ್ಪ ಚೋಟನ್ನವರ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜ್ಯ ಹೆದ್ದಾರಿಯಿಂದ ಮೂರು ಕಿ.ಮೀ ದೂರದ ಕಾಡಿನಲ್ಲಿರುವ ದಡ್ಡಿಯಲ್ಲಿ ಮೂಲಸೌಕರ್ಯಗಳಿಲ್ಲ. ಆದರೆ, ಅದಾವುದಕ್ಕೂ ಬೇಸರಪಟ್ಟುಕೊಳ್ಳದ ಅವರು 10 ವರ್ಷಗಳಿಂದ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗೌಳಿಗರಿಗೆ ಹೈನುಗಾರಿಕೆಯೇ ಮೂಲ ಕಸುಬು. ಅವರಲ್ಲಿ ಒಂದಾಗಿ ಬೆರೆತ ಹನಮಂತಪ್ಪ, ಮಣ್ಣಿನ ಗೋಡೆಯ ಮನೆಯೊಂದನ್ನು ಕಟ್ಟಿ
ಕೊಂಡು ವಾಸ ಮಾಡುತ್ತಿದ್ದಾರೆ. ಮಕ್ಕಳಿಗೆ ಕಲೆ, ಸಾಹಿತ್ಯ, ಪರಿಸರ ವಿಷಯ ಬೋಧನೆಗೆ ಒತ್ತು ನೀಡುತ್ತಿದ್ದಾರೆ. ‘ನಲಿಕಲಿ’ ಪದ್ಧತಿಯಲ್ಲಿ ಶಿಕ್ಷಣ ಹೇಗಿರಬೇಕೆಂದು ಶಾಲೆಯ ಗೋಡೆಗಳು, ತರಗತಿ ಕೊಠಡಿಗಳು ತೋರಿಸುತ್ತಿವೆ.

‘ನಮ್ಮ ದಡ್ಡ್ಯಾಗ್ ಸಾಲಿಗಿ ಹೋಗೋ ಮಕ್ಕಳ ಕಡಿಮಿ ಇದ್ರ. ಹಾಲು ಮಾರದ್, ಎಮ್ಮಿ ಸಾಕದ್ರೊಳಗ ಜೀವನ ಸಾಕಾಗತಿತ್ತ. ಇನ್ನ ಮಕ್ಕಳನ್ನ ಸಾಲಿಗ ಕಳಸದರ್ ಕಡೆ ಲಕ್ಷ್ಯ ಮಾಡತ್ತಿದ್ದಿಲ್ಲ. ಆದ್ರ ಈ ಹನಮಂತ ಸರ್ ಬಂದನಂತರ ಬಾಳ ಚೇಂಜ್ ಆಗೇತಿ. ದಡ್ಡಿ ಮಕ್ಳ ದಿನಾಲೂ ಸಾಲಿಗೆ ಹೋಗ್ತಾರ್. ಇಲ್ಲಿ ಕಲಿತ ಮಕ್ಕಳು ಶಿರಸಿ, ಬನವಾಸಿಗೆ ಹೋಗಿ ಶಿಕ್ಷಣ ಮುಂದುವರಸ್ಯಾರ’ ಎಂದು ರಾಮು ತೊರವತ್ ಹೇಳಿದರು.

‘10 ವರ್ಷಗಳ ಹಿಂದೆ ಈ ಊರಿಗೆ ಬಂದಾಗ ರಸ್ತೆ ಇರಲಿಲ್ಲ. ಮಳೆಗಾಲದಲ್ಲಿ ದಡ್ಡಿಯಿಂದ ಹೊರ ಹೋಗಲಿಕ್ಕೆ ಆಗುತ್ತಿರಲಿಲ್ಲ. ಹೀಗಾಗಿ ಎರಡು ತಿಂಗಳಿಗಾಗುವಷ್ಟು ಕಿರಾಣಿ ಸಾಮಗ್ರಿ ಸಂಗ್ರಹಿಸುತ್ತಿದ್ದೆ. ಖಾಸಗಿ ಬುಡಕಟ್ಟು ಶಾಲೆಯಲ್ಲಿ ಕೆಲಸ ಮಾಡಿದ್ದ ಪತ್ನಿಗೆ ಗ್ರಾಮೀಣ ಬದುಕು ಹೊಸದಾಗಿರಲಿಲ್ಲ. ಈ ದಡ್ಡಿಯ ಮಕ್ಕಳಿಗೆ ಶಿಕ್ಷಣ ನೀಡುತ್ತ ಪ್ರಕೃತಿಯ ಸಹಜ ಸೊಬಗನ್ನು ಆನಂದಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕ ಹನಮಂತಪ್ಪ ಚೋಟನ್ನವರ್.

‘ಸವಾಲಿನ ಹಣ’ದಿಂದ ಪಾತ್ರೆ ಖರೀದಿ

ಶಿಕ್ಷಕರ ಪ್ರಯತ್ನದಿಂದ, ಗೌಳಿದಡ್ಡಿಯಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಕಳೆದ ವರ್ಷ ವಿಸರ್ಜನಾ ದಿನದಂದು ಸವಾಲಿನಲ್ಲಿ ₹ 50 ಸಾವಿರ ಹಣ ಸಂಗ್ರಹವಾಗಿತ್ತು. ಅದರಲ್ಲಿ ಶಾಲೆಗೆ ಪಾತ್ರೆ, ಮೈಕ್‌ ಸೆಟ್‌ ಇನ್ನಿತರ ವಸ್ತು ಖರೀದಿಸಲಾಗಿದೆ. ಅವಶ್ಯಕತೆ ಇದ್ದಾಗ, ಈ ಪಾತ್ರೆಗಳನ್ನು ಗ್ರಾಮಸ್ಥರಿಗೂ ನೀಡಲಾಗುತ್ತಿದೆ.

‘ಮನೆ ಮಕ್ಕಳಿಗೂ ಇದುವೇ ಶಾಲೆ’

‘ಅಣ್ಣನ ಮಗಳು ಐದನೇ ತರಗತಿವರೆಗೆ ಇದೇ ಶಾಲೆಯಲ್ಲಿ ಕಲಿತು ಈ ವರ್ಷ ಮಳಗಿ ಸಮೀಪದ ಪಂಚವಟಿ ನವೋದಯಕ್ಕೆ ಸೇರಿಕೊಂಡಿದ್ದಾಳೆ. ನನ್ನ ಮಗ ಇದೇ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾನೆ. ಖಾಸಗಿ ಶಾಲೆ ಹಾಗೂ ಪೇಟೆಯಲ್ಲಿ ಕಲಿತರೆ ಮಾತ್ರ ಮಕ್ಕಳು ಹುಷಾರಾಗುತ್ತಾರೆ (ಜಾಣರಾಗುತ್ತಾರೆ) ಎನ್ನುವುದು ಭ್ರಮೆ. ಈ ಶಾಲೆಯಲ್ಲಿ ಕಲಿತ ಮಕ್ಕಳು ಪದವಿ ಶಿಕ್ಷಣ ಪಡೆದಾಗ ಮಾತ್ರ ನನ್ನ ಅಳಿಲು ಸೇವೆಗೆ ಫಲ ನೀಡಿದಂತಾಗುತ್ತದೆ’ ಎಂದು ಹನಮಂತಪ್ಪ ಹೇಳಿದರು.

* ಗಂಟೆ ಬಾರಿಸುತ್ತಿದ್ದಂತೆಯೇ ಪಟ್ಟಣಕ್ಕೆ ಹೋಗುವ ಶಿಕ್ಷಕರಿಗೆ ಮಾದರಿಯಾಗಿ, ಹಳ್ಳಿ ಮಕ್ಕಳ ಜತೆಗೇ ತಮ್ಮ ಮಕ್ಕಳಿಗೂ ವಿದ್ಯಾಭ್ಯಾಸ ನೀಡುತ್ತಿರುವುದು ಹೆಮ್ಮೆಯ ಸಂಗತಿ
-ಸಂತೋಷ ಕೌಲಗಿ, ಜನಪದ ಸೇವಾ ಟ್ರಸ್ಟ್ ಮುಖಂಡ

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !