ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ‘ಎಸ್ಟಾಂಪೇಜ್‌’ ಕಲಿಕೆ

Last Updated 15 ನವೆಂಬರ್ 2018, 19:31 IST
ಅಕ್ಷರ ಗಾತ್ರ

ನಮ್ಮ ಪರಂಪರೆ, ಸಂಸ್ಕೃತಿ, ಇತಿಹಾಸ ತಿಳಿಸುವ ವೀರಗಲ್ಲು, ಮಾಸ್ತಿಗಲ್ಲು, ಶಿಲಾಶಾಸನಗಳು ಮತ್ತು ಅದರಲ್ಲಿನ ಲಿಪಿ, ಶಿಲ್ಪಗಳನ್ನು ಸ್ಪರ್ಶಿಸುವ ಹಾಗೂ ಅದರಲ್ಲಿನ ಅಕ್ಷರಗಳನ್ನು ಓದಿಸುವ ಮೂಲಕ ಮಕ್ಕಳಲ್ಲಿ ಇತಿಹಾಸದ ಕುರಿತು ಆಸಕ್ತಿ, ಕುತೂಹಲ ಮೂಡಿಸುವ ಕಾರ್ಯಕ್ಕೆ ‘ಇನ್‌ಸ್ಕ್ರಿಪ್‌ಷನ್‌ ಸ್ಟೋನ್ಸ್‌ ಆಫ್‌ ಬೆಂಗಳೂರು’ ತಂಡ ಮುಂದಾಗಿದೆ.

ಇತಿಹಾಸ ರಚನೆಗೆ ಪ್ರಮುಖ ಆಧಾರಗಳಲ್ಲಿ ಒಂದಾಗಿರುವ ಶಾಸನಗಳ ಪಡಿಯಚ್ಚನ್ನು (ಎಸ್ಟಾಂಪೇಜ್‌) ಮಕ್ಕಳಿಂದಲೇ ತೆಗಿಸುವುದು ಈ ಕಾರ್ಯಕ್ರಮದ ಉದ್ದೇಶ. ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗಾಗಿ ಈ ವಿಶೇಷ ಕಾರ್ಯಕ್ರಮವನ್ನು ನವೆಂಬರ್‌ ತಿಂಗಳ ಪೂರ್ತಿ ಈ ತಂಡ ಕೈಗೊಂಡಿದೆ.

ಮಕ್ಕಳನ್ನು ಸಮೀಪದ ಶಾಸನವಿರುವ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಶಾಸನವನ್ನು ಪರಿಚಯಿಸಲಾಗುತ್ತದೆ. ಬಳಿಕ ಮಕ್ಕಳಿಗೆ ಎಸ್ಟಾಂಪೇಜ್‌ ತೆಗೆಯುವುದರ ಕುರಿತು ಈ ತಂಡದ ನುರಿತರೇ ಪ್ರಾತ್ಯಕ್ಷಿಕೆ ನೀಡುತ್ತಾರೆ. ನಂತರ ಮಕ್ಕಳಿಂದಲೂ ಈ ಕಾರ್ಯ ಮಾಡಿಸಿ ಅವರಲ್ಲಿ ಕುತೂಹಲ ಕೆರಳುವಂತೆ ಈ ತಂಡವರು ಮಾಡುತ್ತಾರೆ.

‘ಆಸಕ್ತ ಮಕ್ಕಳು, ಪೋಷಕರು, ಶಾಲಾ ಆಡಳಿತ ಮಂಡಳಿಯುವರು ನಮ್ಮನ್ನು ಸಂಪರ್ಕಿಸಿದರೆ ಅವರಿಗೆ ಸಮೀಪದಲ್ಲಿರುವ ಶಾಸನದ ಎಸ್ಟಾಂಪೇಜ್‌ ತೆಗೆಯುವುದರ ಪ್ರಾತ್ಯಕ್ಷಿಕೆ ನೀಡುತ್ತೇವೆ. ಇದಕ್ಕಾಗಿ ಕನಿಷ್ಠ 10 ಮಕ್ಕಳ ಗುಂಪು ಇರಲೇಬೇಕು. ಹೆಚ್ಚು ಮಕ್ಕಳಿದ್ದರೆ ನಮ್ಮ ಉತ್ಸಾಹವೂ ಇಮ್ಮಡಿಯಾಗುತ್ತದೆ’ ಎನ್ನುತ್ತಾರೆ ಈ ತಂಡದ ರೂವಾರಿ, ಟೆಕಿ ಪಿ.ಎಲ್‌. ಉದಯಕುಮಾರ್.

ಏನಿದು ಎಸ್ಟಾಂಪೇಜ್‌?: ಶಾಸನದ ಪಡಿಯಚ್ಚು ತೆಗೆಯುವುದನ್ನೇ ಎಸ್ಟಾಂಪೇಜ್‌ ಎನ್ನಲಾಗುತ್ತದೆ. ಇದು ಸಾಂಪ್ರದಾಯಿಕ ವಿಧಾನವಾಗಿದ್ದು ಎರಡು ಶತಮಾನದಿಂದ ಬಳಕೆಯಲ್ಲಿದೆ. ಪ್ರಾಚೀನ ಕಾಲದಿಂದ ಬರಹ ರೂಪದಲ್ಲಿ ಲಭ್ಯವಿರುವ ಶಿಲಾಶಾಸನಗಳ ಬರವಣಿಗೆ, ಲಿಪಿಯ ಅಧ್ಯಯನಕ್ಕೆ ಇದು ಉಪಯುಕ್ತ. ಭಾಷೆ, ಲಿಪಿ ಬೆಳವಣಿಗೆಗೆ ಸಂಬಂಧಿಸಿದಂತೆ ಅಧಿಕೃತ ದಾಖಲೆ ಸಂಗ್ರಹಿಸಲು ಈ ವಿಧಾನವನ್ನು ದೇಶ, ವಿದೇಶಗಳಲ್ಲಿ ಬಳಸಲಾಗುತ್ತಿದೆ.

ಭಾರತೀಯ ಪುರಾತತ್ವ ಇಲಾಖೆ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರಾಚ್ಯವಸ್ತುಗಳ ಇಲಾಖೆಗಳು, ವಿವಿಧ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ತನ್ನ ಗ್ರಂಥಾಲಯಗಳಲ್ಲಿ ವಿವಿಧ ಶಾಸನಗಳ ಪಡಿಯಚ್ಚುಗಳನ್ನು ಸಂಗ್ರಹಿಸಿಟ್ಟಿವೆ.

ಇತಿಹಾಸಕಾರರು, ಸಂಶೋಧಕರು ತಾವು ಕೈಗೊಳ್ಳುವ ಸಂಶೋಧನೆಗೆ ಪೂರಕವಾಗಿ ಈ ದಾಖಲೆಗಳನ್ನು ಪರಿಶೀಲಿಸಿ, ಪರಾಮರ್ಶಿಸಿ ಹಿಂದಿನವರು ಓದಿದ್ದನ್ನು ಸಮರ್ಥಿಸುವ ಅಥವಾ ಅದನ್ನು ಹೊಸದಾಗಿ ವಿಶ್ಲೇಷಿಸುವ ಪ್ರಯತ್ನ ಮಾಡುತ್ತಾರೆ.

ಬೆಂಗಳೂರು, ಕರ್ನಾಟಕ ಮತ್ತು ದೇಶದಲ್ಲಿ ಸಾಕಷ್ಟು ಶಾಸನಗಳೇನೋ ದೊರೆತಿವೆ. ಅವುಗಳಲ್ಲಿ ಹಲವು ಶಾಸನಗಳ ಪಡಿಯಚ್ಚನ್ನು ತೆಗೆದು ಸಂರಕ್ಷಿಸಲಾಗಿದೆ. ಆದರೆ ಕಾಲ ಕಳೆದಂತೆ ಅವುಗಳಲ್ಲಿ ಹಲವು ಕಲ್ಬರಹಗಳು ವಿನಾಶವಾಗಿವೆ. ಶಾಸನ ತಜ್ಞರಾದ ಬಿ.ಎಲ್‌.ರೈಸ್‌, ಜಾನ್‌ ಎಫ್‌. ಫ್ಲೀಟ್‌ ಸೇರಿದಂತೆ ಹಲವರು ಶಾಸನಗಳ ಎಸ್ಟಾಂಪೇಜ್‌ಗಳನ್ನು ತೆಗೆದೇ ಅವುಗಳನ್ನು ಓದಿ ದಾಖಲಿಸಿದ್ದಾರೆ ಎನ್ನುತ್ತಾರೆ ಉದಯ್‌ಕುಮಾರ್.

ಬೆಂಗಳೂರು ಪರಿಸರದಲ್ಲಿ ಲಭ್ಯವಾಗಿದ್ದ 152 ಶಾಸನಗಳ ಪಾಠವನ್ನು ಬಿ.ಎಲ್‌. ರೈಸ್‌ ಅವರು ಎಪಿಗ್ರಾಫಿಯಾ ಕರ್ನಾಟಕದಲ್ಲಿ ದಾಖಲಿಸಿದ್ದಾರೆ. ಇವುಗಳಲ್ಲಿ ಈಗ ಲಭ್ಯವಿರುವುದು 32 ಶಿಲಾಶಾಸನಗಳು ಮಾತ್ರ. ಹಾಗಾಗಿ ಎಸ್ಟಾಂಪೇಜ್‌ ತೆಗೆಯುವುದರ ಅಗತ್ಯ, ಅನಿವಾರ್ಯಗಳ ಬಗ್ಗೆ ಮಕ್ಕಳಿಗೆ ವಿವರಿಸುತ್ತೇವೆ. ಇದರಿಂದ ಮಕ್ಕಳು ತಮ್ಮ ಮನೆ ಬಳಿ ಅಥವಾ ಸುತ್ತಾಡುವ ಪ್ರದೇಶದಲ್ಲಿ ಯಾವುದಾದರೂ ಹೊಸ ಶಾಸನಗಳು ದೊರೆತರೆ ಅದರ ಎಸ್ಟಾಂಪೇಜ್‌ ತೆಗೆದು, ಆ ಶಾಸನವನ್ನು ಬೆಳಕಿಗೆ ತರಬಹುದು ಎನ್ನುತ್ತಾರೆ ಅವರು.

ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ: ಮಕ್ಕಳೊಂದಿಗೆ ಕೆಲ ಬಾರಿ ಶಾಸನಗಳ ‘ಎಸ್ಟಾಂಪೇಜ್‌’ ಅನ್ನು ನಮ್ಮ ತಂಡ ತೆಗೆದಿದೆ. ಈ ವೇಳೆ ಅವರಲ್ಲಿ ಸಾಕಷ್ಟು ಕುತೂಹಲ, ಆಸಕ್ತಿ ಇರುವುದನ್ನು ಗಮನಿಸಿದ್ದೇವೆ. ಎಸ್ಟಾಂಪೇಜ್‌ ತೆಗೆಯುವ ಪ್ರತಿ ಹಂತದಲ್ಲೂ ಅವರ ಭಾಗವಹಿಸುವಿಕೆಯನ್ನು ಕಂಡಿದ್ದೇವೆ. ಶಾಸನವೊಂದರ ಪಡಿಯಚ್ಚು ತೆಗೆಯಲು ಕನಿಷ್ಠ ಒಂದೂವರೆ ಗಂಟೆ ಬೇಕಾಗುತ್ತದೆ. ಇದು ಮಕ್ಕಳ ಗಮನವನ್ನು ಕೇಂದ್ರೀಕರಿಸುವುದರ ಜತೆಗೆ ಅವರ ಜ್ಞಾನವೃದ್ಧಿಗೂ ಸಹಕಾರಿ ಎಂದು ಅವರು ವಿವರಿಸುತ್ತಾರೆ.

‘ಮಕ್ಕಳ ದಿನಾಚರಣೆ’ ಪ್ರಯುಕ್ತ ಈ ತಿಂಗಳು ಪೂರ್ತಿ ಇದನ್ನು ಅಭಿಯಾನದ ರೀತಿ ಮಾಡಲಿದ್ದೇವೆ. ಆಹ್ವಾನಿಸುವ ಶಾಲೆ, ಸಂಸ್ಥೆಗಳಿಗೆ ಹೋಗಿ ಪ್ರಾತ್ಯಕ್ಷಿಕೆ ನೀಡುತ್ತೇವೆ. ಬೆಂಗಳೂರಿನಲ್ಲಿ ಲಭ್ಯವಿರುವ ಪ್ರಾಚೀನ ಶಾಸನವಾದ ಹೆಬ್ಬಾಳ ಶಾಸನವನ್ನು ನಮ್ಮ ತಂಡದ ಸದಸ್ಯರು ಅತ್ಯಾಧುನಿಕ ‘3ಡಿ’ ತಂತ್ರಜ್ಞಾನ ಬಳಸಿ ಚಿಕ್ಕದಾದ ಕಂಚಿನ ಪಡಿಯಚ್ಚನ್ನು ಸಿದ್ಧಪಡಿಸಿದ್ದೇವೆ. ಆಸಕ್ತರು ಅದನ್ನು ಖರೀದಿಸಬಹುದು. ಆ ಹಣವನ್ನು ಹೆಬ್ಬಾಳ ಶಾಸನದ ಮಂಟಪ ನಿರ್ಮಾಣಕ್ಕೆ ವಿನಿಯೋಗಿಸುತ್ತೇವೆ’ ಎಂದು ಅವರು ಹೇಳುತ್ತಾರೆ.

ಎಸ್ಟಾಂಪೇಜ್‌ ತೆಗೆಯುವುದು ಹೇಗೆ?

* ಮೊದಲಿಗೆ ಶಾಸನಕ್ಕೆ ಅಂಟಿಕೊಂಡಿರುವ ಮಣ್ಣು, ದೂಳನ್ನು ತೆಗೆದು, ನೀರಿನಿಂದ ಶುಚಿಗೊಳಿಸಬೇಕು. ನಂತರ ಬಿಳಿಯಾದ ದಪ್ಪನೆಯ (ಮ್ಯಾಪ್‌ಲಿಥೊ 80) ಹಾಳೆಯನ್ನು ನೀರಿನಲ್ಲಿ ಅದ್ದಿ, ಅದನ್ನು ಶಿಲಾಶಾಸನದ ಮೇಲೆ ಹಾಕಬೇಕು. ಈ ಕಾಗದವು ಶಾಸನದ ಅಕ್ಷರಗಳಿರುವ ಎಲ್ಲ ಕಡೆಯೂ ಅಂಟಿಕೊಳ್ಳುವಂತೆ ಅದನ್ನು ಬ್ರೆಷ್‌ವೊಂದರಿಂದ ನಿಧಾನವಾಗಿ ತಟ್ಟಬೇಕು.

* ಇಷ್ಟಾದ ನಂತರ ಕಪ್ಪು ಮಸಿಯನ್ನು ಆ ಬಿಳಿ ಹಾಳೆಯ ಮೇಲೆ ನಿಧಾನವಾಗಿ ಒತ್ತಬೇಕು. ಆಗ ಶಾಸನದಲ್ಲಿನ ಅಕ್ಷರಗಳು ಹಾಳೆಯಲ್ಲಿ ಬಿಳಿಯಾಗಿ ಮೂಡುತ್ತವೆ. ಉಳಿದ ಭಾಗ ಕಪ್ಪಾಗಿರುತ್ತದೆ.

* ಕೊನೆಯದಾಗಿ ಆ ಹಾಳೆಯನ್ನು ನಿಧಾನವಾಗಿ ಶಿಲಾ ಶಾಸನದಿಂದ ಬೇರ್ಪಡಿಸಿ, ಬಿಸಿಲಿನಲ್ಲಿ ಒಣಗಿಸಬೇಕು. ಬಳಿಕ ಕಾಗದದ ಮೇಲೆ ಮೂಡಿರುವ ಅಕ್ಷರಗಳನ್ನು ಓದಲು ಪ್ರಯತ್ನಿಸಬಹುದು. ಪ್ರಾಚೀನ, ಮಧ್ಯಕಾಲೀನ ಶಾಸನಗಳಲ್ಲಿನ ಲಿಪಿಗಳನ್ನು ಓದುವುದು ಕಷ್ಟ. ಹಾಗಾಗಿ ಈ ಕಾಗದ ಹಾಳಾಗದಂತೆ ಮಡಿಚಿ, ಅದನ್ನು ಲಿಪಿತಜ್ಞರ ಬಳಿ ತೆಗೆದುಕೊಂಡು ಹೋಗಿ, ಓದಲು ಅವರ ನೆರವು ಪಡೆಯಬಹುದು.

ಮಾಹಿತಿಗೆ: 98452 04268

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT