ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಸುಲಭ

Last Updated 21 ಮೇ 2019, 19:30 IST
ಅಕ್ಷರ ಗಾತ್ರ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗಳು ಉದ್ಯೋಗ ಹಿಡಿಯಬೇಕಾದರೆ ವಿವಿಧ ಸವಾಲುಗಳನ್ನು ಎದುರಿಸಬೇಕಾಗಿದೆ. ಅದೇ ರೀತಿ ಉನ್ನತ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ತಯಾರಿ ನಡೆಸಬೇಕಾಗಿದೆ. ಇಲ್ಲಿ ವಿದ್ಯಾರ್ಥಿಗಳು ಎದುರಿಸಬಹುದಾದ ಸವಾಲುಗಳೆಂದರೆ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನ. ಆದರೆ ಇಂದು ಪ್ರತಿಷ್ಠಿತ ಕಂಪನಿಗಳು ಹಾಗೂ ವಿದ್ಯಾಸಂಸ್ಥೆಗಳು ಸಂದರ್ಶನದ ಭಾಗವಾಗಿ ಗುಂಪು ಚರ್ಚೆಯನ್ನು ನಡೆಸುತ್ತಿವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಗುಂಪು ಚರ್ಚೆಯು ಮುಂಚೂಣಿಯಲ್ಲಿ ನಿಂತಿದೆ.

ಪದವಿ ಪೂರೈಸಿರುವ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ, ಪ್ರತಿಷ್ಠಿತ ಕಾಲೇಜುಗಳಲ್ಲಿ ಎಂಬಿಎ, ಪಿಜಿಡಿಎಂ, ಸಿಎಟಿ, ಎಕ್ಸ್‌ಎಟಿ, ಎಸ್‌ಎನ್‌ಎಪಿ, ಸಿಎಂಎಟಿ, ಎನ್‌ಎಂಎಟಿ ಮೊದಲಾದ ಪರೀಕ್ಷೆಗಳನ್ನು ಎದುರಿಸಬೇಕು. ಅಷ್ಟೆ ಅಲ್ಲದೆ ಪ್ರವೇಶಕ್ಕಿಂತ ಮೊದಲು ಗುಂಪು ಚರ್ಚೆ (Group Discussions– GDs) ಗಳನ್ನು ನಡೆಸುತ್ತವೆ. ಇದರ ಮೂಲಕ ವಿದ್ಯಾರ್ಥಿಗಳ ಸಂವಹನ ಕೌಶಲ, ವಿಷಯದ ಜ್ಞಾನ, ಆಲೋಚನಾ ಪ್ರಕ್ರಿಯೆ, ನಾಯಕತ್ವ ಗುಣ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದು ಕಂಪನಿಯಲ್ಲಿ ಉದ್ಯೋಗ ಪಡೆಯುವಲ್ಲಿ ಕೂಡಾ ಸಾಮಾನ್ಯವಾಗಿದೆ. ಹಾಗಾದರೆ ಗುಂಪು ಚರ್ಚೆಯ ಕುರಿತು ಕೆಳಗಿನ ವಿಷಯಗಳನ್ನು ತಿಳಿಯೋಣ.

ಗುಂಪು ಚರ್ಚೆ ಎಂದರೆ ವಿವಿಧ ವ್ಯಕ್ತಿಗಳ ಗುಂಪು ಮಾಡಿ ಒಂದು ನಿರ್ದಿಷ್ಟ ವಿಷಯ ನೀಡಲಾಗುವುದು. ವಿಷಯದ ಕುರಿತು ಆಲೋಚಿಸಲು ನಿಗದಿತ ಸಮಯ ನೀಡುವರು. ನಂತರ ಗುಂಪಿನ ಸದಸ್ಯರಿಗೆ ಚರ್ಚೆ ಪ್ರಾರಂಭಿಸಲು ತಿಳಿಸುವರು. ಈ ಚರ್ಚೆಯು ಸಮಯದ ನಿರ್ಬಂಧವನ್ನು ಹೊಂದಿರುವುದು. ನಿರ್ದಿಷ್ಟ ಸಮಯದ ನಂತರ ಚರ್ಚೆಯನ್ನು ಮುಗಿಸುವರು. ಈ ರೀತಿಯಾದ ಚರ್ಚೆಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುವುದು.

ನಿರ್ದಿಷ್ಟ ವಿಷಯದ ಮೇಲೆ ಚರ್ಚೆಯನ್ನು ಏರ್ಪಡಿಸುವುದು. ಗುಂಪಿನಲ್ಲಿ 8–12 ಅಭ್ಯರ್ಥಿಗಳು ಇರುವರು. ಇದು ಸಂಸ್ಥೆಯಿಂದ ಸಂಸ್ಥೆಗೆ ಭಿನ್ನವಾಗಿದೆ.ಗುಂಪು ಚರ್ಚೆಯ ಅವಧಿ 12–15 ನಿಮಿಷ ಇರುವುದು. ಇದೂ ಕೂಡ ಸಂಸ್ಥೆಯಿಂದ ಸಂಸ್ಥೆಗೆ ವಿಭಿನ್ನವಾಗಿದೆ. ಗುಂಪು ಚರ್ಚೆಯಲ್ಲಿ ಪಾಲ್ಗೊಂಡ ವ್ಯಕ್ತಿಗಳ ವ್ಯಕ್ತಿತ್ವ, ಭಾಗವಹಿಸುವಿಕೆ, ಜ್ಞಾನ, ಸಂವಹನ ಕೌಶಲ, ನಾಯಕತ್ವ ಗುಣ ಮುಂತಾದವುಗಳ ಆಧಾರದ ಮೇಲೆ ಗುಂಪಿನಿಂದ ಒಬ್ಬ ಇಲ್ಲವೆ ಇಬ್ಬರನ್ನು ಆಯ್ಕೆ ಮಾಡುವರು.

ಕೆಲವು ಸಾರಿ ಪ್ರಚಲಿತ ಸವಾಲುಗಳ ಕುರಿತು ಕೇಳುವರು. ಅಂತಹ ಸಂದರ್ಭದಲ್ಲಿ ಅಂಕಿ– ಅಂಶ, ವಿಷಯದ ತಾತ್ಪರ್ಯ, ವಿಶಿಷ್ಟತೆ ಮುಂತಾದವುಗಳನ್ನು ಆಧರಿಸಿ ಚರ್ಚಿಸಬೇಕು. ಉದಾಹರಣೆಗೆ ಭಯೋತ್ಪಾದನೆ, ಲಿಂಗ ತಾರತಮ್ಯ, ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಇತ್ಯಾದಿ.ವಿವಾದಾತ್ಮಕ ಮತ್ತು ರಾಜಕೀಯ ಪ್ರೇರಿತ ವಿಷಯಗಳನ್ನು ಚರ್ಚೆಯಲ್ಲಿ ಕೇಳುವುದಿಲ್ಲ. ಅವುಗಳ ಬಗ್ಗೆ ತಿಳಿದುಕೊಳ್ಳಲು ಸಮಯ ವ್ಯಯ ಮಾಡುವ ಅವಶ್ಯಕತೆ ಇರುವುದಿಲ್ಲ.

ಗುಂಪು ಚರ್ಚೆಯನ್ನು ಎದುರಿಸುವುದು ಹೇಗೆ?

ಗುಂಪು ಚರ್ಚೆಯಲ್ಲಿ ಅಭ್ಯರ್ಥಿಗಳು ಯಶಸ್ವಿಯಾಗಬೇಕಾದರೆ ಈ ಕೆಳಗೆ ಸೂಚಿಸುವ ಅಂಶಗಳನ್ನು ಅನುಸರಿಸಬೇಕು.

ವಿಷಯವನ್ನು ಅರ್ಥೈಸಿಕೊಳ್ಳುವುದು: ಗುಂಪು ಚರ್ಚೆಯಲ್ಲಿ ನೀಡಿರುವ ವಿಷಯದ ಮೇಲೆ ಅಭ್ಯರ್ಥಿ ಹೊಂದಿರುವ ಜ್ಞಾನವನ್ನು ಪರೀಕ್ಷಿಸುತ್ತಾರೆ. ಅದಕ್ಕಾಗಿ ಅಭ್ಯರ್ಥಿಗಳು ವಿಷಯದ ವಿವಿಧ ಮಗ್ಗಲುಗಳ ಜ್ಞಾನ ತಿಳಿದಿರಬೇಕಾಗಿರುತ್ತದೆ.

ಖಚಿತತೆ/ ಸಮರ್ಥನೆ: ಗುಂಪಿನಲ್ಲಿ ಚರ್ಚಿಸುವಾಗ ನೀವು ಹೇಳಿದ ಅಂಶಗಳನ್ನು ಸಮರ್ಥಿಸುವುದು ತುಂಬಾ ಅವಶ್ಯಕವಾಗಿದೆ. ಸಮರ್ಥನೆಯು ಚರ್ಚೆಯಲ್ಲಿ ನೀವು ಹೊಂದಿರುವ ವಿಶ್ವಾಸವನ್ನು ತೋರಿಸುತ್ತದೆ. ಇತರರು ನಿಮ್ಮ ಅಂಶಗಳನ್ನು ಒಪ್ಪದೆ ಇರಬಹುದು. ಆಗ ನೀವು ಎಷ್ಟರ ಮಟ್ಟಿಗೆ ಖಚಿತವಾಗಿರುವಿರಿ ಎಂಬುದನ್ನು ಸಮರ್ಥಿಸಬೇಕಾಗುವುದು.

ಗುಂಪು ಕೆಲಸ: ಗುಂಪು ಚರ್ಚೆಯಲ್ಲಿರುವ ವಿಷಯದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಚರ್ಚೆಯ ಉದ್ದೇಶ ಎಂದು ಭಾವಿಸೋಣ. ಗುಂಪಿನಲ್ಲಿರುವ ಎಲ್ಲರೂ ಹೇಳುವ ಅಭಿಪ್ರಾಯಗಳನ್ನು ಕೇಳುವ ಮತ್ತು ಅವುಗಳಿಗೆ ಮನ್ನಣೆ ನೀಡುವ ಕಾರ್ಯ ನಡೆಯಬೇಕು. ಆಗ ವಿಷಯದ ಮೇಲೆ ನಿರ್ಧಾರಗಳು ಬರುವವು. ಗುಂಪು ಕಾರ್ಯದಲ್ಲಿ ಪಾಲ್ಗೊಂಡು ಕಾರ್ಯ ಯಶಸ್ವಿಗೊಳಿಸುವುದನ್ನು ಇಲ್ಲಿ ಪರಿಗಣಿಸಲಾಗುವುದು.

ಮುಂದಾಳತ್ವ: ಗುಂಪು ಚರ್ಚೆಯಲ್ಲಿ ವಿಷಯದ ಮೇಲೆ ಒಂದಿಷ್ಟು ಹೇಳಿ ಸುಮ್ಮನಾಗದೆ ಅವಶ್ಯಕತೆಗೆ ಅನುಸಾರ ಮುಂದಾಗಿ ಚರ್ಚಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.

ಆಲಿಸುವುದು: ಚರ್ಚೆಯಲ್ಲಿ ಇತರರು ಹೇಳುವ ವಿಷಯವನ್ನು ಗಮನವಿಟ್ಟು ಆಲಿಸುವುದು ತುಂಬಾ ಮುಖ್ಯವಾಗಿದೆ. ಇದರಿಂದ ಇತರರು ವಿಷಯದ ಕುರಿತು ಏನನ್ನು ಹೇಳುತ್ತಾರೆಂಬುದು ಸ್ಪಷ್ಟವಾಗುವುದು.

ಹೊಂದಿಸಿಕೊಳ್ಳುವುದು: ಚರ್ಚೆಯಲ್ಲಿ ಕೆಲವು ವಿಷಯಗಳು ನಮ್ಮ ಚರ್ಚೆಯ ದಿಕ್ಕನ್ನು ಬದಲಾಯಿಸಬಹುದು. ಆವಾಗ ನಮ್ಮ ವಿಷಯವನ್ನೆ ಮುಂದೆ ಮಾಡಿ ವಾದಕ್ಕಿಳಿಯಬಾರದು. ಸಮರ್ಥನೀಯವಾದ ಅಂಶಗಳನ್ನು ಗೌರವಿಸಿ, ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ.

ನಾಯಕತ್ವ ಗುಣ: ನಾಯಕ ತನ್ನ ಹಿಂಬಾಲಕರನ್ನು ಗೌರವಿಸುವಂತೆ, ಚರ್ಚೆಯಲ್ಲಿ ಗುಂಪಿನ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಒಬ್ಬ ವ್ಯಕ್ತಿ ಎಷ್ಟೇ ಜ್ಞಾನಿಯಾಗಿದ್ದರೂ ಇತರರ ಸಣ್ಣ ಸಣ್ಣ ವಿಷಯಗಳನ್ನು ಒಳಗೊಂಡು ಚರ್ಚೆಯನ್ನು ಮುನ್ನಡೆಸಬೇಕು. ಇದರಿಂದ ಚರ್ಚೆಯಲ್ಲಿ ಉತ್ತಮ ಅಂಶಗಳು ಹೊರಬರಲು ಸಾಧ್ಯವಾಗುವುದು.

ಸಂವಹನ ಕೌಶಲಗಳು: ನಾವು ಹೊಂದಿರುವ ಜ್ಞಾನವನ್ನು ಹೊರಹಾಕಲು ನಮಗೆ ಸಂವಹನ ಕೌಶಲಗಳು ಅವಶ್ಯಕವಾಗಿವೆ. ಚರ್ಚೆಯಲ್ಲಿ ವಿಷಯವನ್ನು ವ್ಯಕ್ತಪಡಿಸುವಾಗ ನಾವು ಬಳಸುವ ಸಂವಹನ ಕೌಶಲಗಳು ನಮ್ಮ ಜ್ಞಾನ ಹಾಗೂ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಅದಕ್ಕಾಗಿ ಉತ್ತಮವಾಗಿ ಹೇಳುವ ಹಾಗೂ ಕೇಳುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

***

* ಗುಂಪು ಚರ್ಚೆಗಾಗಿ ಪೂರ್ವ ತಯಾರಿ

* ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಹೊಂದಿರುವುದು.

* ದಿನಪತ್ರಿಕೆಗಳು, ನಿಯತಕಾಲಿಕೆಗಳು, ದೂರದರ್ಶನದಲ್ಲಿ ಬರುವ ಅಧ್ಯಯನ ಪೂರಕ ವಿಷಯಗಳು, ಸ್ಮಾರ್ಟ್‌ಫೋನ್‌ಗಳ ಮೂಲಕ ಬರುವ ಮಾಹಿತಿ ಮುಂತಾದವುಗಳನ್ನು ಬಳಸಿಕೊಳ್ಳುವ ಹವ್ಯಾಸ ಹೊಂದಿರಬೇಕು.

* ಗುಂಪು ಚರ್ಚೆಗೆ ಬರುವ ವಿಷಯವು ಪ್ರಚಲಿತ ಘಟನೆಗಳು, ವಾಣಿಜ್ಯ ಸುದ್ದಿಗಳು, ಕ್ರೀಡೆ ಹೀಗೆ ವಿಭಿನ್ನ ವಿಷಯಗಳ ಮೇಲೆ ಇರುವುದರಿಂದ ಅಧ್ಯಯನದ ವ್ಯಾಪ್ತಿ ವಿಶಾಲವಿರಬೇಕು.

(ಲೇಖಕರು ಉಪನ್ಯಾಸಕರು ಬಿ.ವಿ.ವಿ.ಎಸ್ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯ ಮುಧೋಳ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT