ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸರ್ಕಾರಿ ಶಾಲೆಯಲ್ಲಿ ನಿತ್ಯ ಪೂರ್ಣ ಹಾಜರಾತಿ

ಗಜೇಂದ್ರಗಡದ ಬಾಲಕಿಯರ ಶಾಲೆ; ಹೆಚ್ಚುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ
Last Updated 27 ಡಿಸೆಂಬರ್ 2018, 5:20 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣದಲ್ಲಿ 1881ರಲ್ಲಿ 137 ವರ್ಷಗಳ ಹಿಂದೆ ಪ್ರಾರಂಭವಾದ ಬಾಲಕಿಯರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ಸುಧಾರಣೆಗಳನ್ನು ಅಳವಡಿಸಿ ಕೊಂಡು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.

ಈ ಭಾಗದಲ್ಲಿ ನೇಕಾರಿಕೆ ಹೆಚ್ಚಾಗಿದ್ದರಿಂದ ಆರಂಭದ ದಶಕಗಳಲ್ಲಿ ಈ ಶಾಲೆಯಲ್ಲಿ ನಿತ್ಯ ಪಾಠದದೊಂದಿಗೆ ಒಂದು ಅವಧಿಯಲ್ಲಿ ಕೈಮಗ್ಗದ ತರಬೇತಿ ನೀಡಲಾಗುತ್ತಿತ್ತು. 1956ರವರೆಗೆ ಈ ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರು ಇಬ್ಬರೂ ಅಧ್ಯಯನ ಮಾಡುತ್ತಿದ್ದರು. 1956ರ ನಂತರ ಈ ಶಾಲೆ ಬಾಲಕಿಯರಿಗೆ ಮೀಸಲಾಯಿತು. ಪಟ್ಟಣದಲ್ಲಿ ಹಲವು ಖಾಸಗಿ ಶಾಲೆಗಳ ಭರಾಟೆ ಇದ್ದರೂ, ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿಲ್ಲ. ಹೊಸ ಕಲಿಕಾ ತಂತ್ರಜ್ಞಾನ ಅಳವಡಿಸಿಕೊಂಡು ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲೂ ಮುಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿ ಪ್ರವೇಶ ಪಡೆಯುವ ಮಕ್ಕಳ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ.

ನಿತ್ಯ ಶೇ 100ರಷ್ಟು ಹಾಜರಾತಿ ಹೊಂದಿರುವ ಈ ಶಾಲೆಯಲ್ಲಿ ಸದ್ಯ 470 ವಿದ್ಯಾರ್ಥಿಗಳಿದ್ದಾರೆ. 10 ಮಂದಿ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ವಿಜ್ಞಾನ, ಗಣಕಯಂತ್ರ ಮತ್ತು ಸಮಾಜವಿಜ್ಞಾನದ ಪ್ರತ್ಯೇಕ ಕೊಠಡಿಗಳಿವೆ. ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಾಲಾ ಅವಧಿಯ ನಂತರ ವಿಶೇಷ ತರಗತಿಗಳ ಮೂಲಕ ತರಬೇತಿ ನೀಡಲಾಗುತ್ತಿದೆ.

ಈ ಶಾಲೆಯ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ. ಇತ್ತೀಚೆಗೆ ಅಕ್ಷರ ಪೌಂಡೇಷನ್‌ ವತಿಯಿಂದ ನಡೆದ ಗಣಿತ ಸ್ಪರ್ಧೆಯಲ್ಲಿ ಕ್ರಮವಾಗಿ ನಾಲ್ಕು ಬಹುಮಾನಗಳು ಈ ಶಾಲೆಯ ವಿದ್ಯಾರ್ಥಿಗಳಿಗೆ ಲಭಿಸಿವೆ. ವಿದ್ಯಾರ್ಥಿಗಳನ್ನು ಒಳಗೊಂಡ ಶಾಲಾ ಸಂಸತ್ ರಚಿಸಿ, ಶಾಲಾ ಆವರಣದಲ್ಲಿ ಹಸಿರು ಪಥ ಅಭಿವೃದ್ಧಿಪಡಿಸಲಾಗಿದೆ.

ಎಲ್‌.ಕೆ.ಜಿ, ಯು.ಕೆ.ಜಿ ಆರಂಭಿಸಿದ ಮೊದಲ ಸರ್ಕಾರಿ ಶಾಲೆ
ತಾಲ್ಲೂಕಿನಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ಶಾಲೆಯಲ್ಲಿ ಎಲ್‌.ಕೆ.ಜಿ, ಯು.ಕೆ.ಜಿ ತರಗತಿ ಆರಂಭಗೊಂಡಿದ್ದು ಇದೇ ಶಾಲೆಯಲ್ಲಿ. ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅಂದರೆ ಜೂನ್ ತಿಂಗಳಲ್ಲಿ, ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಶಾಸಕ ಕಳಕಪ್ಪ ಬಂಡಿ ಚಾಲನೆ ನೀಡಿದ್ದರು. ಸದ್ಯಎಲ್‌.ಕೆ.ಜಿ ಹಾಗೂ ಯು.ಕೆ.ಜಿ ವಿಭಾಗದಲ್ಲಿ 22 ಪುಟಾಣಿಗಳು ಅಧ್ಯಯನ ಮಾಡುತ್ತಿರುವುದು ವಿಶೇಷವಾಗಿದೆ.

*
ಶಾಲೆಯ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ, ಶಾಲಾ ಅಭಿವೃದ್ಧಿಗೂ ಕೈಜೋಡಿಸುತ್ತಾರೆ. ದಾನಿಗಳ ನೆರವಿನಿಂದ ಶಾಲಾ ಆವರಣದಲ್ಲಿ ಕೊಳವೆ ಬಾವಿ ಕೊರೆಯಿಸಿದ್ದು ನೀರಿನ ತೊಂದರೆ ಇಲ್ಲ.
–ಕೆ.ಡಿ.ಭಜಂತ್ರಿ, ಮುಖ್ಯ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT