ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣಕ್ಕೆ ಬೇಕು ಮಾರ್ಗದರ್ಶನ

Last Updated 9 ಜುಲೈ 2019, 19:30 IST
ಅಕ್ಷರ ಗಾತ್ರ

ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಜಾನ್ ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್‌ನ ಸ್ನಾತಕೋತ್ತರ ಪದವಿಯನ್ನು ಅಮೆರಿಕದಲ್ಲಿ ಗಳಿಸಿ ಅಪಾರ ಆಸೆ-ಆಕಾಂಕ್ಷೆಗಳನ್ನು ಹೊತ್ತು ಭಾರತಕ್ಕೆ ಮರಳಿದಾಗ ಅವನಿಗಾದ ಆಘಾತ ಅಷ್ಟಿಷ್ಟಲ್ಲ! ಏಕೆಂದರೆ, ಉದ್ಯೋಗದ ಸಂದರ್ಶನಗಳಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಂದ ಅವನು ಕ್ರಮೇಣ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದ. ಎಲ್ಲೆಡೆ ಅದೇ ಪ್ರಶ್ನೆ; ಅದೇ ಪ್ರತಿಕ್ರಿಯೆ. ‘ನಮಗೆ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಪದವೀಧರರ ಅವಶ್ಯಕತೆಯಿದೆಯೇ ಹೊರತು ಮೆಕಾಟ್ರಾನಿಕ್ಸ್ ಪದವೀಧರರ ಅವಶ್ಯಕತೆಯಿಲ್ಲ’ ಎಂದು ಸಂದರ್ಶಕರು ಹೇಳಿಬಿಡುತ್ತಿದ್ದರು. ಪ್ರತಿ ಸಂದರ್ಶನದ ನಂತರವೂ ಯಾಕಾದರೂ ಈ ಕೋರ್ಸ್ ಮಾಡಿದೆನೋ ಎಂದು ಜಾನ್‌ಗೆ ಅನಿಸುತ್ತಿತ್ತು.

ನಿರುದ್ಯೋಗದ ಸವಾಲು ಒಂದೆಡೆಯಾದರೆ ₹ 25 ಲಕ್ಷ ಸಾಲವನ್ನು ತೀರಿಸುವ ಮತ್ತು ಸಂಸಾರವನ್ನು ನೋಡಿಕೊಳ್ಳುವ ಜವಾಬ್ದಾರಿ ಬೇರೆ. ಕ್ಲಿಷ್ಟವಾದ ಈ ಸಮಸ್ಯೆಗಳಿಗೆ ಪರಿಹಾರ ಸಿಗದೆ, ತೀವ್ರವಾದ ಖಿನ್ನತೆಯಿಂದ ಬಳಲಿ ಮಾರ್ಗದರ್ಶನಕ್ಕೆ ನನ್ನ ಬಳಿ ಬಂದಾಗ ಜಾನ್ ಸಂಪೂರ್ಣವಾಗಿ ಕುಸಿದು ಹೋಗಿದ್ದ.

ಅವನ ಸಮಸ್ಯೆ ಗಂಭೀರವಾಗಿತ್ತು; ಪರಿಹಾರಕ್ಕೆ ತೀರ ಹೆಣಗಾಡಬೇಕಾಯಿತು. ಏಕೆಂದರೆ ಮೆಕಾಟ್ರಾನಿಕ್ಸ್ ಎಂಜಿನಿಯರ್‌ಗಳಿಗೆ ಭಾರತದಲ್ಲಿ ಆಗ ಬೇಡಿಕೆಯಿರಲಿಲ್ಲ. ಇಡೀ ದೇಶದಲ್ಲಿ 3–4 ಕಂಪನಿಗಳಿಗಷ್ಟೇ ಈ ವರ್ಗೀಕರಣದ ಎಂಜಿನಿಯರುಗಳ ಅವಶ್ಯಕತೆಯಿತ್ತು. ಅಷ್ಟಕ್ಕೂ, ಜಾನ್ ಮಾಡಿದ್ದ ತಪ್ಪಾದರೂ ಏನು? ಹೊಸ ವರ್ಗೀಕರಣವೆಂದು ಸೇರಿದ ಕೋರ್ಸ್‌ಗೆ ಉದ್ಯೋಗವನ್ನು ಅನ್ವೇಷಿಸುವಾಗ ನಿರೀಕ್ಷಿತ ಬೇಡಿಕೆ ಬರಲಿಲ್ಲ; ಕೋರ್ಸ್‌ಗೆ ಸೇರುವ ಮೊದಲು ಮಾರ್ಗದರ್ಶಕರ (ಮೆಂಟರ್‌) ಸಲಹೆಯನ್ನು ಪಡೆದಿರಲಿಲ್ಲ.

ಇಂತಹ ತಪ್ಪು ನಿರ್ಧಾರಗಳು, ಪ್ರಮಾದಗಳು ಈಗಲೂ ನಡೆಯುತ್ತಲೇ ಇವೆ. ಪೋಷಕರ ಒತ್ತಾಯದಿಂದಲೋ ಅಥವಾ ಮಾರ್ಗದರ್ಶನದ ಕೊರತೆಯಿಂದಲೋ, ವಿದ್ಯಾರ್ಥಿಗಳು ಕೋರ್ಸ್ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ತೀವ್ರವಾದ ಪ್ರಮಾದಗಳನ್ನು ಸರಿಪಡಿಸುವುದಕ್ಕೆ ಎಲ್ಲ ಸಂದರ್ಭಗಳಲ್ಲೂ ಸಾಧ್ಯವಿಲ್ಲ; ಹಾಗೊಮ್ಮೆ ಸಾಧ್ಯವಾದರೂ, ಜಾನ್ ಅನುಭವಿಸಿದಂತೆ ಅಗಾಧವಾದ ಶ್ರಮ ಮತ್ತು ಸಮಯ ಬೇಕಾಗುತ್ತದೆ.

ನಮ್ಮ ದೇಶದ ನಿಜವಾದ ಶಕ್ತಿಯೆಂದರೆ ನಮ್ಮ ಯುವಜನತೆ; ಅವರಿಂದಲೇ ದೇಶದ ಪ್ರಗತಿ ಸಾಧ್ಯ. ನಮ್ಮ ಯುವಜನತೆಯ ಇಚ್ಛಾಶಕ್ತಿ ಮತ್ತು ಅಪರಿಮಿತ ಚೈತನ್ಯ ಸಂಪೂರ್ಣವಾಗಿ ಬಳಕೆಯಾಗಬೇಕಾದರೆ, ಅವರಿಗೆ ಸೂಕ್ತವಾದ ಮಾರ್ಗದರ್ಶನದ ಅವಶ್ಯಕತೆಯಿದೆ. ಹೀಗಾಗಿ, ನಿಮ್ಮ ಶೈಕ್ಷಣಿಕ ಮತ್ತು ವೃತ್ತಿ ಜೀವನದ ಕನಸುಗಳನ್ನು ಸಾಕಾರಪಡಿಸಲು ಈ ಸೂತ್ರಗಳನ್ನು ಪಾಲಿಸಿ.

ನಿಮ್ಮ ಕನಸುಗಳೇನು?: ಬದುಕಿಗೊಂದು ಸ್ಪಷ್ಟವಾದ, ನಿಖರವಾದ, ಸಾಧಿಸಬಹುದಾದ ಮತ್ತು ಅಳೆಯಬಹುದಾದ ಗುರಿಯಿರಬೇಕು. ಇದನ್ನು ‘ಸ್ಮಾರ್ಟ್‌ ಗೋಲ್ಸ್‌’ ಎನ್ನುತ್ತೇವೆ. ಆ ಗುರಿಗಳು ನಿಮ್ಮನ್ನು ಸದಾಕಾಲ ಪ್ರೇರೇಪಿಸುವಂತಿರಬೇಕು.

ನಿಮ್ಮ ಶಕ್ತಿ, ಸಾಮರ್ಥ್ಯ, ಆಸಕ್ತಿ, ಅಭಿರುಚಿಗಳನ್ನು ಅರಿಯಿರಿ: ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ನಿಮ್ಮ ಸಾಮರ್ಥ್ಯ ಮತ್ತು ಅಭಿರುಚಿಗಳು ಆ ನಿಟ್ಟಿನಲ್ಲಿ ಇವೆಯೇ ಎಂಬುದು ಮುಖ್ಯವಾಗುತ್ತದೆ. ಉದಾಹರಣೆಗೆ, ನೀವು ಎಂಜಿನಿಯರಿಂಗ್ ಮಾಡುವ ಕನಸುಗಳಿದ್ದರೆ, ಗಣಿತದಲ್ಲಿ ಪರಿಣತಿ ಇರಬೇಕು; ಡಾಕ್ಟರ್ ಆಗಬೇಕಿದ್ದರೆ ಸೇವಾಮನೋಭಾವದ ಜೊತೆಗೆ ಚುರುಕಾದ ಜ್ಞಾಪಕಶಕ್ತಿಯಿರಬೇಕು; ಬ್ಯುಸಿನೆಸ್ ಮಾಡಬೇಕಾದರೆ ವ್ಯವಹಾರ ಜ್ಞಾನ, ಸಂವಹನಾ ಶಕ್ತಿ, ಸೂಕ್ಷ್ಮ ಮತ್ತು ಚುರುಕಾದ ಬುದ್ಧಿಶಕ್ತಿ ಇತ್ಯಾದಿ ಇರಬೇಕು; ಇಲ್ಲದಿದ್ದರೆ ಕಷ್ಟವಾದೀತು.

ಮಾರ್ಗದರ್ಶಕರನ್ನು ಗುರುತಿಸಿ: ಅನೇಕ ಬಾರಿ ಮಾರ್ಗದರ್ಶಕರನ್ನು ಗುರುತಿಸುವುದೇ ಒಂದು ಸವಾಲಾಗುತ್ತದೆ. ಆದ್ದರಿಂದ, ಈ ಕೆಳಗಿನ ಅಂಶಗಳು ಗಮನದಲ್ಲಿರಲಿ:

ನಿಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಮಾರ್ಗದರ್ಶಕರಿಗೆ ವ್ಯಾಪಕವಾದ ಶೈಕ್ಷಣಿಕ, ಸ್ವಂತ ಅನುಭವ ಅಥವಾ ತರಬೇತಿಯಿದ್ದು ಆ ಕ್ಷೇತ್ರದಲ್ಲಿ ನೈಪುಣ್ಯತೆಯಿರಬೇಕು; ಆ ಕ್ಷೇತ್ರದಲ್ಲಿ ಮುಂದೇನಾಗಬಹುದೆಂಬ ದೂರದೃಷ್ಟಿಯಿರಬೇಕು. ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮನೋಭಾವ, ತಾಳ್ಮೆ ಮತ್ತು ಸಂವಹನಾ ಶಕ್ತಿಯಿರಬೇಕು. ಇಂತಹ ನೈಪುಣ್ಯತೆ ಶಿಕ್ಷಕರು ಅಥವಾ ಪೋಷಕರಲ್ಲಿದ್ದರೆ ಅವರೇ ನಿಮ್ಮ ಮಾರ್ಗದರ್ಶಕರಾಗಬಹುದು.

ಯಾವ ವೃತ್ತಿ? ಯಾವ ಕೋರ್ಸ್?: ಮಾರ್ಗದರ್ಶಕರನ್ನು ಗುರುತಿಸಿದ ಮೇಲೆ, ಅವರೊಡನೆ ಮುಕ್ತವಾಗಿ ನಿಮ್ಮ ಬದುಕಿನ ಕನಸುಗಳ ಕುರಿತು ಚರ್ಚಿಸಿ. ನಿಮಗೆ ಆಸಕ್ತಿಯಿರುವ ವೃತ್ತಿ ಮತ್ತು ಆ ವೃತ್ತಿಗೆ ಬೇಕಾಗುವ ಕೌಶಲಗಳು ನಿಮ್ಮಲ್ಲಿವೆಯೇ ಎಂಬುದು ಮುಖ್ಯವಾಗುತ್ತದೆ.

ಇತ್ತಿಚೆಗೆ ನಡೆದ ಸಮೀಕ್ಷೆಗಳೂ ಸೇರಿದಂತೆ, ಅನೇಕ ಸಮೀಕ್ಷೆಗಳ ಪ್ರಕಾರ, ನಮ್ಮ ಪದವೀಧರರಿಗೆ (ಎಂಜಿನಿಯರಿಂಗ್ ಮತ್ತು ಎಂ.ಬಿ.ಎ. ಸೇರಿದಂತೆ) ಹೆಚ್ಚಿನ ಮಟ್ಟಿಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳಿರುವುದಿಲ್ಲ. ಹಾಗಾಗಿಯೇ, ಅನೇಕರಿಗೆ ಕ್ಯಾಂಪಸ್‌ನಲ್ಲಿ ನಡೆಯುವ ನೇರವಾದ ನೇಮಕಾತಿಗಳಲ್ಲಿ ಆಯ್ಕೆ ಆಗುವುದಿಲ್ಲ; ಹಾಗೊಮ್ಮೆ ಆದರೂ ಅವರಿಗೆ ಅಗಾಧವಾದ ತರಬೇತಿ ನೀಡಬೇಕಾಗುತ್ತದೆ. ಆದ್ದರಿಂದ, ನಿಮಗಿಷ್ಟವಿರುವ, ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಪಡೆಯಲು ಮಾರ್ಗೋಪಾಯಗಳನ್ನು ಪತ್ತೆ ಹಚ್ಚಿ, ಅದರ ಸಾಧಕ– ಬಾಧಕಗಳನ್ನು ಪರಿಶೀಲಿಸಿ. ಇದಾದ ನಂತರವೇ ವೃತ್ತಿ, ಕೋರ್ಸ್ ಮತ್ತು ಕಾಲೇಜ್ ಕುರಿತು ಅಂತಿಮ ನಿರ್ಧಾರವನ್ನು ಮಾಡಬೇಕು.

ಮಾರ್ಗದರ್ಶಕರ ಸಂಪರ್ಕ ಜಾಲವನ್ನು ಬಳಸಿಕೊಳ್ಳಿ: ಮಾರ್ಗದರ್ಶಕರಿಗೆ ವ್ಯವಹಾರ ಮತ್ತು ವೃತ್ತಿಗೆ ಪ್ರಸ್ತುತವಾದ ವ್ಯಾಪಕವಾದ ಸಂಪರ್ಕಗಳಿರುತ್ತವೆ. ಅವರ ಮೂಲಕವೇ ವೃತ್ತಿಪರ ಜಾಲತಾಣಗಳ (www.linkedIn.com) ಇತ್ಯಾದಿ ಸಂಪರ್ಕಗಳನ್ನು ನೀವು ಬೆಳೆಸಿಕೊಳ್ಳಿ. ಈ ಸಂಪರ್ಕಗಳಿಂದ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ನಿಮಗೆ ಅನುಕೂಲವಾಗುತ್ತದೆ. ಉದಾಹರಣೆಗೆ ಇಂಟರ್ನ್‌ಶಿಪ್, ಸಮ್ಮರ್ ಪ್ರಾಜೆಕ್ಟ್ಸ್ ಇತ್ಯಾದಿ.

ಯಶಸ್ವಿ ವೃತ್ತಿ ಜೀವನಕ್ಕೆ ಅಗತ್ಯವಾದ ಮೌಲ್ಯಗಳು: ಎಲ್ಲಾ ವೃತ್ತಿಗಳಿಗೂ ತನ್ನದೇ ಆದ ನಿಯಮಗಳು, ನಿಬಂಧನೆಗಳು, ಕಟ್ಟಳೆಗಳು, ಮೌಲ್ಯಗಳು, ರೂಢಿಗಳಿರುವುದು ಸಹಜ. ಮಾರ್ಗದರ್ಶಕರೊಡನೆ ಚರ್ಚಿಸಿ, ಇವುಗಳ ಮಹತ್ವವನ್ನು ಅರಿತು ವಿದ್ಯಾರ್ಥಿ ಜೀವನದಿಂದಲೇ ಅವುಗಳನ್ನು ಮೈಗೂಡಿಸಿಕೊಳ್ಳಬೇಕು. ಆಗಲೇ ನಿಮ್ಮ ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯವಾಗಿರುವಂತೆ ರೂಪಿಸಿಕೊಳ್ಳಬಹುದು.

ಬದುಕು ಅರ್ಥಪೂರ್ಣವಾಗಬೇಕಾದರೆ, ಕನಸುಗಳು ಮಹತ್ವಾಕಾಂಕ್ಷೆಯಾಗಿ ಬದಲಾಗಿ, ಸಾಧನೆಯ ಶಿಖರವನ್ನು ನೀವು ತಲುಪಬೇಕು. ಆದರೆ, ಇಂದಿನ ಸ್ಪರ್ಧಾತ್ಮಕ ಮತ್ತು ಚಲನಶೀಲ ಯುಗದಲ್ಲಿ ದೀರ್ಘಕಾಲೀನ ವೃತ್ತಿಪರ ಯಶಸ್ಸು ಸುಲಭವಾಗಿ ಸಿಗುವುದಿಲ್ಲ.

ಮಾರ್ಗದರ್ಶಕರ ದೃಷ್ಟಿಕೋನ, ವೃತ್ತಿಯ ಒಳನೋಟ ಮತ್ತು ಸಲಹೆ ನಿಮಗೆ ಸಿಕ್ಕಿದರೆ, ಹಂತ ಹಂತಕ್ಕೆ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

(ಲೇಖಕರು ಶಿಕ್ಷಣ ಮತ್ತು ಮ್ಯಾನೇಜ್‌ಮೆಂಟ್ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT