ಸಜೆಯಾಗದಿರಲಿ ರಜೆ

ಶುಕ್ರವಾರ, ಏಪ್ರಿಲ್ 26, 2019
24 °C

ಸಜೆಯಾಗದಿರಲಿ ರಜೆ

Published:
Updated:
Prajavani

ಬೆಕ್ಕಿನ ಮರಿ ಜನಿಸಿದ ಕೆಲವೇ ದಿನಗಳಲ್ಲಿ ಇಲಿ ಹಿಡಿಯಲು ಸಿದ್ಧವಾಗುತ್ತದೆ. ಮಗು ನಡೆದಾಡುವುದಿರಲಿ ಅದು ಮಗ್ಗಲಾಗುವುದು, ಮೊಗಚಿಕೊಳ್ಳುವುದು, ತೆವಳುವುದು, ಕೈ ಕಾಲು ಚಾಚುವುದು -ಒಂದೊಂದು ಹಂತವೂ ನಿಧಾನವೆ. ಹೀಗೇಕೆ? ಈ ಪ್ರಶ್ನೆ ಯಾರೂ ಕೇಳಿಯಾರು. ಅನುವಂಶಿಕತೆಯ ವಿಜ್ಞಾನ (ಜಿನೆಟಿಕ್ಸ್) ವಿವರಿಸುವಂತೆ ಮಗುವನ್ನು ಅತಿ ಅವಲಂಬಿತವಾಗಿಸುವುದೆ ಈ ಚೋದ್ಯಕ್ಕೆ ಕಾರಣ. ಸ್ವತಂತ್ರವಾಗಿ ಬಿಟ್ಟರೆ ಮಗುವಿನ ಬೆಳವಣಿಗೆ ಬೆಕ್ಕು ಅಥವಾ ಉಳಿದ ಪ್ರಾಣಿಗಳಷ್ಟೆ ತ್ವರಿತವೆಂದು ಅದು ಷರಾ ಬರೆಯುತ್ತದೆ.

ಆದರೆ ದಿನೇ ದಿನೇ ನಮ್ಮ ಆತುರ, ಕಾತುರಗಳು ನಮ್ಮನ್ನು ಅತೀವವಾಗಿ ಆಳತೊಡಗಿವೆ. ನಾವು ಅದೆಷ್ಟು ತ್ವರಿತಗತಿಗೆ ಹಪಹಪಿಸುತ್ತೇವೆಂದರೆ ಸ್ವಭಾವಜನ್ಯವಾದ ಆಗುಹೋಗುಗಳು ಹೆದರಿ ಇನ್ನು ನೀವುಂಟು, ನಿಮ್ಮ ತರಾತುರಿಯುಂಟು ಎಂದು ಹಿಂದೆ ಸರಿಯುತ್ತವೆ. ಉದಾಹರಣೆಗೆ ಬಾಲಕನೊಬ್ಬ ತನ್ನ ಮನೆಯ ಹಿತ್ತಿಲಿನ ಮರದ ಪೊಟರೆಯಲ್ಲಿ ಕೋಗಿಲೆಯ ಮೊಟ್ಟೆ ಕಂಡ. ಅವನ ಸಂತಸಕ್ಕೆ ಸಾಟಿಯಿರಲಿಲ್ಲ.

ಮೊಟ್ಟೆಯಿಂದ ಮರಿ ಎಂದು ಬಂದೀತು ಎಂಬ ತವಕ. ಒಂದು ದಿನ ಮೊಟ್ಟೆಯಲ್ಲಿ ಸಣ್ಣ ಬಿರುಕು ಗಮನಿಸಿದಾಗ ಬೇಡ ಅವನ ಕುತೂಹಲ! ಪುಟ್ಟ ಮರಿ ಹೊರ ಬಂದೀತೆಂದು ಹಿಗ್ಗಿ ಅವನು ಮಾಡಿದ್ದೇನು? ಮೊಟ್ಟೆಯ ಬಿರುಕನ್ನು ಹರಿತ ಚಾಕುವಿನಿಂದ ಅಗಲಿಸಿದ. ಮೊಟ್ಟೆ ಸೀಳಿ ಒಳಗಿದ್ದ ಮರಿ ಹೊರಗೆ ಬಂದಿತೇನೊ ಸರಿ. ಆದರೆ ಬೆಳವಣಿಗೆ ಸಾಲದಿದ್ದ ಕಾರಣ ಅದು ತಕ್ಷಣವೆ ಸತ್ತಿತು. ತಮ್ಮ ಮಕ್ಕಳು ಬೇಗ ಪುಸ್ತಕ ಹಿಡಿಯಬೇಕು. ಓದು, ಬರಹದಲ್ಲಿ ಮಗ್ನರಾಗಬೇಕು ಎಂಬ ಪೋಷಕರ ಹಂಬಲ ಈ ಉದಾಹರಣೆ ಹೋಲುವಷ್ಟು ಅನರ್ಥಕಾರಿ.

ಮನರಂಜನೆ ಗ್ಯಾಜೆಟ್‌ಗೆ ಮಾತ್ರ ಮೀಸಲೇ?
ಹೌದು, ಈಗ ಕಾಲ ಬದಲಾಗಿದೆ. ದುಡಿಯುವ ಪೋಷಕರಿಗೆ ಮಕ್ಕಳ ಜೊತೆ ಇಡೀ ದಿನ ಕಳೆಯಲು ಸಮಯದ ಕೊರತೆ. ಮಕ್ಕಳು ಮನೆಯಲ್ಲೇ ಕುಳಿತರೆ ಕಾಲ ಕಳೆಯಲು ಮನರಂಜನೆ ಬೇಕು. ಈಗೀಗ ಮನರಂಜನೆಯೆಂದರೆ ಟಿವಿ ಹಾಗೂ ಇನ್ನಿತರ ಗ್ಯಾಜೆಟ್‌ಗಳು. ಹೀಗಾಗಿ ಪೋಷಕರು ಬೇಸಿಗೆ ಶಿಬಿರದ ಬಗ್ಗೆ ಯೋಚಿಸುತ್ತಾರೆ.

ಈಗ ಮಕ್ಕಳಿಗೆ ಪರೀಕ್ಷೆಗಳು ಮುಗಿದು ರಜಾ ಶುರುವಾದರೂ ಶಾಲೆಯ ನಾಲ್ಕು ಗೋಡೆಗಳ ಚೌಕಟ್ಟಿನ ಮಧ್ಯೆ ಇರುವಂತಹ ಬೇಸಿಗೆ ಶಿಬಿರಗಳಿಗೆ ಕಳಿಸುವ ಪರಿಪಾಠ ಹುಟ್ಟಿಕೊಂಡಿದೆ. ಆದರೆ ಅಲ್ಲಿಯೂ ಕೂಡ ಡಾನ್ಸ್‌, ಕಲೆ ಮತ್ತು ಕ್ರಾಫ್ಟ್‌ನಂತಹ ವಿಷಯಗಳನ್ನೇ ಹೇಳಿಕೊಡುವುದು ಅಥವಾ ಆಟವಾಡಿಸುವುದು. ಮಕ್ಕಳು ತಮ್ಮನ್ನು ಆಂತರಿಕ ಶೋಧನೆಗೆ ತೊಡಗಿಸಿಕೊಳ್ಳಲು ಈ ಬೇಸಿಗೆ ಶಿಬಿರವೆಂಬುದು ಮಿತಿ ಹೇರುತ್ತದೆ.

ಬೇಸಿಗೆ ರಜವೆಂದರೆ ಮಕ್ಕಳಿಗೆ ಶಾಲೆಯಿಂದ ಒಂದು ತರಹದ ಮುಕ್ತಿ ಇದ್ದಂತೆ. ಬದುಕಿನ ಅನುಭವಗಳನ್ನು ಪಡೆದು ಆ ಮೂಲಕ ಪರೋಕ್ಷವಾಗಿ ತಮ್ಮನ್ನು ತಾವೇ ಆತ್ಮವಿಮರ್ಶೆಗೆ ಒಡ್ಡಿಕೊಳ್ಳಲು ಇದೊಂದು ಅಮೂಲ್ಯ ಅವಕಾಶ. ಆದರೆ ಶಿಬಿರದಲ್ಲಿ ಇಡೀ ರಜಾ ದಿನಗಳನ್ನು ಕಳೆದರೆ ಇಂತಹ ಬದುಕಿನ ಪಾಠಗಳನ್ನು ಅರಿಯುವ ನಿಟ್ಟಿನಲ್ಲಿ ವಂಚಿತರಾಗುತ್ತಾರೆ.

ಹೊಸ ಕಲಿಕೆ
ಕನಿಷ್ಠ ಮಕ್ಕಳು ತಮ್ಮ ಬೇಸಿಗೆಯ ಬಿಡುವನ್ನಾದರೂ ಮನೆಯಂಗಳದಲ್ಲಿ ಆಡುತ್ತ, ನಲಿಯುತ್ತ ಅವರಷ್ಟಕ್ಕೆ ಏನಾದರೂ ಹೊಸದು ಕಲಿಯುವುದಕ್ಕೆ ಪೋಷಕರೇಕೆ ಅವಕಾಶ ಕಲ್ಪಿಸಬಾರದು? ಮಕ್ಕಳ ಬಿಡುಬೀಸಿಗೆ ಅವರು ತಡೆಗೋಡೆಯಾಗುವುದರಿಂದ ಯಾವ ಲಾಭವೂ ಇಲ್ಲ. ಬದಲಿಗೆ ಎಳೆಯರಿಗೆ ಒಂದು ಬಗೆಯ ಬಂಧನವೆ. ಮಕ್ಕಳ ಮನಸ್ಸನ್ನು ಮಾಹಿತಿಗಳ ಬುಟ್ಟಿಯನ್ನಾಗಿಸದೆ ಅವರಾಗಿಯೆ ಕಂಡಿದ್ದು, ಕೇಳಿದ್ದು, ಅನುಭವಿಸಿದ್ದು ಅವರ ವಿವೇಕವರ್ಧನೆಗೆ ಸಲ್ಲುವಂತೆ ಪೋಷಕರು ಪ್ರಚೋದಿಸಬೇಕು. ಜನಪದದಲ್ಲಿ ’ಓಣಿ ಮಕ್ಕಳು ಬೆಳೆದವು, ಕೋಣೆ ಮಕ್ಕಳು ಕೊಳೆತವು’ ಎಂಬ ಅರ್ಥವತ್ತಾದ ನುಡಿಗಟ್ಟಿದೆ. ಎಳೆಯರ ಬುದ್ಧಿ ಸ್ವತಂತ್ರವಾಗಿ ಸಂಚರಿಸಲು ಬಿಡಬೇಕು. ಮಕ್ಕಳು ಅಗತ್ಯವಿದ್ದಾಗ ನಿಸ್ಸಂದೇಹವಾಗಿ ತಮ್ಮ ಸಂವೇದನೆಗಳನ್ನು ಅಭಿವ್ಯಕ್ತಿಸುತ್ತಾರೆ. ಅವರನ್ನು ಸಮರ್ಥವಾಗಿ ನಾವು ಪೋಷಕರು ಓದಿ, ಪರಾಮರ್ಶಿಸಬೇಕಷ್ಟೆ.

ಎಲ್ಲವೂ ಅಧ್ಯಯನಶೀಲವೇ!
ಮಕ್ಕಳ ಪ್ರತಿಯೊಂದು ಗ್ರಹಿಕೆಯೂ ಪ್ರಾಮಾಣಿಕ, ಅನುಭವವೇದ್ಯ. ಮಗುವಿನ ಪರಿವೆಗೆ ಬರುವುದೆಲ್ಲವೂ ನವನವೀನವೆ, ವಿಸ್ಮಯವೆ. ಏಕೆಂದರೆ ಒಂದೊಂದನ್ನೂ ಅದು ಕಾಣುತ್ತಿರುವುದು ಮೊಟ್ಟ ಮೊದಲ ಬಾರಿಗೆ. ಅಂದಹಾಗೆ ಮನೆಯಂಗಳವೆ ಬೇಸಿಗೆ ಶಿಬಿರವಾದರೆ ಏನೆಲ್ಲ ಇಂಬುಗಳು. ಮುಕ್ತ, ನಿರ್ಭಯ, ಪರಿಚಿತ ಪರಿಸರದಲ್ಲೇ ಮಕ್ಕಳು ಅಪರಿಚಿತವಾದದ್ದನ್ನು ತಿಳಿಯುತ್ತಾರೆ. ಹೊಸ ಜೊತೆಗಾರರನ್ನು ಪಡೆಯುತ್ತಾರೆ. ಹೊಸ ಸಾಧ್ಯತೆಗಳಿಗೆ ಹಾತೊರೆಯುತ್ತಾರೆ. ಸಾಹಸ ಒಲಿದಾಗ ಮುಗುಳ್ನುಗುತ್ತಾರೆ. ಹಾಗೆ ನೋಡಿದರೆ ಅವರ ಪಾಲಿಗೆ ಮನೆಯಲ್ಲಿನ ಪಾತ್ರೆ, ಪಡಗ, ಮೇಜು, ಕುರ್ಚಿ, ದಿನ ಪತ್ರಿಕೆ, ಪುಸ್ತಕ, ಬಳಪ, ಹಲಗೆ, ಬಟ್ಟೆ, ಬಾಚಣಿಗೆ- ಎಲ್ಲ ಪರಿಕರಗಳೂ ಅಧ್ಯಯನಶೀಲವೆ. ಕೆಲವು ಸಂಗತಿಗಳನ್ನು ಹೊರತುಪಡಿಸಿ ‘ನೀನು ಹೀಗೆಯೆ ಮಾಡು, ಹಾಗೆ ವರ್ತಿಸು, ಇದು ಕೂಡದು’ ಮುಂತಾದ ಪೋಷಕರ ನಿರಂಕುಶತೆಯ ಫಲಶ್ರುತಿ ಸ್ಪಷ್ಟವೆ. ಮಕ್ಕಳ ಸ್ವಭಾವದತ್ತ ಆತ್ಮವಿಶ್ವಾಸ, ಧನಾತ್ಮಕ ಪ್ರವೃತ್ತಿಗೆ ಸಂಚಕಾರ.

ಕೆಲವು ಮಕ್ಕಳು ಮೊದಲು ಬರೆಯುವುದನ್ನು ಕಲಿತು ಕಾಲಾಂತರದಲ್ಲಿ ಓದುತ್ತವೆ. ಮತ್ತೆ ಕೆಲವು ಇದಕ್ಕೆ ವ್ಯತಿರಿಕ್ತ. ಓದು, ಬರಹಕ್ಕಿಂತ ಹೆಚ್ಚಾಗಿ ಅವರು ನೋಡಿ ಕಲಿಯುತ್ತಾರೆ. ಚಿಣ್ಣರು ಪ್ರಶ್ನಿಸುವ ಮೂಲಕ ಜ್ಞಾನ ಬಯಸುತ್ತಾರೆ. ಏನು, ಎತ್ತ ಎಂದು ವಿಚಾರಿಸಿಯೆ ಅವರು ಮಾತು ಕಲಿಯುವುದು, ಜಾಣರಾಗುವುದು.

ಸೃಜನಶೀಲತೆ ಬೆಳಕಿಗೆ
ಮನುಷ್ಯ ನೈಸರ್ಗಿಕವಾಗಿ ಪಾಠ ಕಲಿಯುವುದೇ ಹೆಚ್ಚು. ಅಂದರೆ ಯಾವುದೇ ಪೂರ್ವ ನಿರ್ಧಾರಿತವಲ್ಲದ ಒಂದು ಆಟ ಅಥವಾ ಮನರಂಜನೆ ಎಂದಿಟ್ಟುಕೊಳ್ಳಿ. ಅದು ಮಕ್ಕಳಲ್ಲಿರುವ ಸೃಜನಶೀಲತೆ ಬೆಳಕಿಗೆ ಬರುವಂತೆ ಮಾಡುತ್ತದೆ. ಹೊಸ ಬಗೆಯ ಕಲಿಕಾ ಅವಕಾಶಗಳನ್ನು, ಅನುಭವಗಳನ್ನು ಕಟ್ಟಿ ಕೊಡುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ನೀಡುತ್ತದೆ ಹಾಗೂ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ಆದರೆ ಬೇಸಿಗೆ ಶಿಬಿರಗಳಲ್ಲಿ ಇಂತಹ ನೈಜ ಮನರಂಜನೆಗಳಿಗೆ ಅವಕಾಶವಿರುವುದು ಕಡಿಮೆ. ಎಲ್ಲವನ್ನೂ ಮೊದಲೇ ಯೋಜಿಸಿಕೊಂಡು ಅದೂ ಒಂದು ರೀತಿಯ ಶಾಲಾ ವಾತಾವರಣದಂತೆ ಅನಿಸುವುದು ಸಾಮಾನ್ಯ.

ಜೊತೆಗೆ ಶಾಲೆಯ ರೀತಿಯಲ್ಲೇ ಶಿಬಿರದಲ್ಲೂ ಒಂದು ಗುಂಪಿನ ಮಕ್ಕಳ ಜೊತೆಗೆ ಬೆರೆಯಬೇಕಾಗುತ್ತದೆ. ಸಮಾಜದ ವಿವಿಧ ಸ್ತರಗಳ, ವಿವಿಧ ರೀತಿಯ, ವಿವಿಧ ವಯಸ್ಸಿನ ವ್ಯಕ್ತಿಗಳ ಜೊತೆ ಒಡನಾಟ ಸಿಗುವುದಿಲ್ಲ. ದಿನದ ಬಹು ಭಾಗವನ್ನು ಶಿಬಿರದಲ್ಲೇ ಕಳೆಯುವುದರಿಂದ ಕೆಲವು ಮಕ್ಕಳು ಏಕತಾನತೆ, ಒಂದು ರೀತಿಯ ಬಂಧನ ಎಂದುಕೊಳ್ಳುವುದೂ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !