ಬುಧವಾರ, ಜೂನ್ 23, 2021
22 °C
ಧಾರವಾಡ ಜಿಲ್ಲೆಯಲ್ಲಿ 100 ವಸತಿನಿಲಯಗಳು; 13 ಹೊಸದಾಗಿ ಮಂಜೂರಾತಿಗೆ ಪ್ರಸ್ತಾವ

ವಿದ್ಯಾರ್ಥಿಗಳ ವಸತಿ ನಿಲಯ: ಸಾಮರ್ಥ್ಯಕ್ಕಿಂತ 6 ಪಟ್ಟು ಅಧಿಕ ಅರ್ಜಿ

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿದ್ಯಾಕಾಶಿ ಧಾರವಾಡ ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಓದಬೇಕು ಎಂಬುದು ಬಹುತೇಕ ವಿದ್ಯಾರ್ಥಿಗಳ ಬಯಕೆ. ಆದರೆ, ಪ್ರತಿವರ್ಷ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಸರ್ಕಾರಿ ವಸತಿನಿಲಯಗಳು ಆರಂಭವಾಗದಿರುವುದು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ.

ಅನಿವಾರ್ಯವಾಗಿ ಸಾವಿರಾರು ರೂಪಾಯಿ ತೆತ್ತು ಕೊಠಡಿಯನ್ನು ಬಾಡಿಗೆ ಹಿಡಿಯಬೇಕಾಗಿದೆ. ನಿತ್ಯ ಉಪಾಹಾರ, ಊಟಕ್ಕೆಂದು ಖಾನಾವಳಿಗೂ ನೂರಾರು ರೂಪಾಯಿ ಖರ್ಚು ಮಾಡಬೇಕಿದೆ. ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 13 ಹೊಸ ವಸತಿ ನಿಲಯಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ವಸತಿನಿಲಯಗಳಿಗೆ ಮಂಜೂರಾತಿ ನೀಡಿಲ್ಲ. ಹಾಗಾಗಿ, ಈ ವರ್ಷವೂ ಹೆಚ್ಚುವರಿಯಾಗಿ ಕೇಳಲಾದ ವಸತಿನಿಲಯಗಳು ಕಾರ್ಯಾರಂಭ ಮಾಡುವುದು ಅನುಮಾನ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಎಂ)ಯು ಜಿಲ್ಲೆಯಾದ್ಯಂತ ಒಟ್ಟು 67 ವಸತಿನಿಲಯಗಳನ್ನು ಹೊಂದಿದೆ. ಆ ಪೈಕಿ 28 ವಸತಿನಿಲಯಗಳು ಧಾರವಾಡ ನಗರದಲ್ಲಿಯೇ ಇವೆ. ಆದರೂ, ಪ್ರತಿವರ್ಷ ಬಂದಷ್ಟು ಅರ್ಜಿಗಳಿಗೆ ತಕ್ಕಂತೆ ಸೀಟುಗಳನ್ನು ಕೊಡಲು ಆಗುತ್ತಿಲ್ಲ ಎನ್ನುತ್ತವೆ ಇಲಾಖೆಯ ಅಂಕಿ ಅಂಶಗಳು.

ಧಾರವಾಡದಲ್ಲಿರುವ ಬಿಸಿಎಂ ಇಲಾಖೆಯ ವಸತಿ ನಿಲಯಗಳಿಗೆ ಪ್ರತಿವರ್ಷ 665 ವಿದ್ಯಾರ್ಥಿಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2018–19ನೇ ಸಾಲಿನಲ್ಲಿ ಒಟ್ಟು 3369 ಅರ್ಜಿಗಳು ಬಂದಿವೆ. ಅಂದರೆ ವಸತಿನಿಲಯದ ಸಾಮರ್ಥ್ಯಕ್ಕಿಂತ ಶೇ 6ಪಟ್ಟು ಹೆಚ್ಚು!

‘665 ವಿದ್ಯಾರ್ಥಿಗಳನ್ನು ಭರ್ತಿ ಮಾಡಿದ ಬಳಿಕ ವಸತಿ ನಿಲಯಕ್ಕೆ ಆಯ್ಕೆಯಾಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಮಾಸಿಕ ₹ 1500 ನಗದು ನೀಡಲಾಗುತ್ತವೆ. ಇಲ್ಲವೇ, ಅವರು ಪಾವತಿಸಿದ ಶುಲ್ಕವನ್ನು ಇಲಾಖೆಯೇ ಭರಿಸುತ್ತದೆ’ ಎ‌ನ್ನುತ್ತಾರೆ ಇಲಾಖೆಯ ಜಿಲ್ಲಾ ಅಧಿಕಾರಿ ಪುರುಷೋತ್ತಮ ಎನ್‌.ಆರ್‌.

ಇನ್ನು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಇಲಾಖೆಯು ನಡೆಸುವ ವಸತಿ ನಿಲಯಗಳ ಕಥೆಯೂ ಇದಕ್ಕಿಂತ ಭಿನ್ನವೇನಿಲ್ಲ. ಸಮಾಜ ಕಲ್ಯಾಣ ಇಲಾಖೆಯು ಧಾರವಾಡ ಜಿಲ್ಲೆಯಾದ್ಯಂತ 33 ವಸತಿನಿಲಯಗಳನ್ನು ಆರಂಭಿಸಿದೆ. ಮೆಟ್ರಿಕ್‌ ಪೂರ್ವ ವಸತಿ ನಿಲಯಕ್ಕೆ ತಲಾ 65 ಹಾಗೂ ಮೆಟ್ರಿಕ್‌ ನಂತರದ ವಸತಿ ನಿಲಯಕ್ಕೆ ತಲಾ 100 ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಿದೆ. ಧಾರವಾಡ ನಗರದಲ್ಲಿ 12 ವಸತಿನಿಲಯಗಳಿದ್ದು, ಒಂದು ಮಾತ್ರ ಮೆಟ್ರಿಕ್ ಪೂರ್ವ ವಸತಿನಿಲಯ. ಉಳಿದ 11 ಮೆಟ್ರಿಕ್‌ ಪೂರ್ವ.
*
ವಸತಿನಿಲಯಗಳನ್ನು ಬಯಸಿ ಅರ್ಜಿ ಸಲ್ಲಿಸಿದ ಎಲ್ಲ ಎಸ್.ಸಿ. ಎಸ್ಟಿ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಕೊಡಬೇಕಾಗಿದೆ. ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಹೆಚ್ಚು ಬೇಡಿಕೆ ಇದೆ
ನವೀನ್‌ ಶಿಂತ್ರೆ, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಧಾರವಾಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು