ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಎ.ಎಸ್‌: ಕಠಿಣ ತಯಾರಿ ಇರಲಿ

Last Updated 18 ಜೂನ್ 2019, 19:30 IST
ಅಕ್ಷರ ಗಾತ್ರ

ನಾನು ಮತ್ತು ನನ್ನ ಸ್ನೇಹಿತೆ ಇಬ್ಬರೂ ವಾಣಿಜ್ಯ ವಿಷಯ ತೆಗೆದುಕೊಂಡು ದ್ವಿತೀಯ ಪಿಯುಸಿ ಮುಗಿಸಿದ್ದೇವೆ. ನನಗೆ ಮುಂದೆ ಜಿಲ್ಲಾಧಿಕಾರಿ ಮತ್ತು ನನ್ನ ಗೆಳತಿಗೆ ಉಪನ್ಯಾಸಕಿ ಆಗಬೇಕೆಂಬ ಕನಸಿದೆ. ನಾವು ಈಗ ಪದವಿಗೆ ಯಾವ ಕೋರ್ಸ್‌ಗಳನ್ನು ತೆಗೆದುಕೊಳ್ಳಬೇಕು, ಹೇಗೆ ನಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಬೇಕು ಮತ್ತು ಒಬ್ಬ ಜಿಲ್ಲಾಧಿಕಾರಿ ಹಾಗೂ ಒಬ್ಬ ಉಪನ್ಯಾಸಕಿಗೆ ಇರಬೇಕಾದ ಅರ್ಹತೆಗಳನ್ನು ದಯಮಾಡಿ ತಿಳಿಸಿಕೊಡಿ.

ತೇಜೇಶ್‌, ಊರು ಬೇಡ

ತೇಜೇಶ್, ಎರಡು ವಿಷಯಗಳ ಬಗ್ಗೆ ನೀವು ಕೇಳಿರುವುದರಿಂದ ಎರಡನ್ನೂ ಪ್ರತ್ಯೇಕವಾಗಿ ಉತ್ತರಿಸುತ್ತೇನೆ.

1. ಉಪನ್ಯಾಸಕರಾಗಲು ನಿರ್ಧಾರ ಮಾಡಿದ್ದೀರಿ ಎಂದಾದರೆ ಮೊದಲಿಗೆ ಯಾವ ವಿಷಯವನ್ನು ಬೋಧಿಸಲು ಇಚ್ಛಿಸುತ್ತೀರಿ ಮತ್ತು ಯಾವ ಹಂತದ ವಿದ್ಯಾರ್ಥಿಗಳಿಗೆ ಬೋಧಿಸುತ್ತೀರಿ ಎಂದು ಸ್ಪಷ್ಟಪಡಿಸಿಕೊಳ್ಳಬೇಕು. ಈ ಸ್ಪಷ್ಟತೆಯ ಆಧಾರದ ಮೇಲೆ ಯಾವ ಶೈಕ್ಷಣಿಕ ಅರ್ಹತೆ ಬೇಕು ಎಂದು ತಿಳಿದು ಮುಂದುವರಿಯಬೇಕು. ಈಗ ನಿಮ್ಮ ಸ್ನೇಹಿತೆ ವಾಣಿಜ್ಯ ವಿಷಯ ಓದಿದ್ದರಿದ ಅದೇ ವಿಷಯದಲ್ಲಿ ಉಪನ್ಯಾಸಕರಾಗಬಹುದು‌. ಅದಕ್ಕಾಗಿ ಬಿ.ಕಾಂ. ಪದವಿ ಮತ್ತು ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸಬೇಕು. ಪದವಿಪೂರ್ವ ಹಂತದ ವಿದ್ಯಾರ್ಥಿಗಳಿಗೆ ಬೋಧಿಸಲು ಇಚ್ಛಿಸುವಿರಾದರೆ ಎಂ.‌ಕಾಂ. ನಂತರ ಬಿ.ಎಡ್. ಪದವಿ ಮಾಡಬೇಕು. ಪದವಿ ಮತ್ತು ಸ್ನಾತಕೋತ್ತರ ಹಂತಕ್ಕೆ ಬೋಧಿಸಲು ಎಂ.ಕಾಂ. ನಂತರ ಯು.ಜಿ.ಸಿ. ನಡೆಸುವ ಎನ್.‌ಇ.ಟಿ. ಪರೀಕ್ಷೆಯಲ್ಲಿ ಅರ್ಹತೆ ಗಳಿಸಿಕೊಳ್ಳಬೇಕು. ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸಿದರೆ ಸ್ನಾತಕೋತ್ತರ ಪದವಿಯ ನಂತರ ಪಿಎಚ್.ಡಿ. ಶಿಕ್ಷಣ ಮಾಡಬಹುದು.

ಇದು ನೀವು ಈಗ ಓದುತ್ತಿರುವುದರ ಆಧಾರದ ಮೇಲಿನ ಅವಕಾಶಗಳು. ವಾಣಿಜ್ಯ ವಿಷಯಗಳಲ್ಲದೆ ಇತರೆ ವಿಷಯಗಳನ್ನು ಬೋಧಿಸಲು ಆಸಕ್ತಿ ಹೊಂದಿದ್ದಲ್ಲಿ‌ ಆ ಕುರಿತು ಕೂಡ ಯೋಚಿಸಬಹುದು. ಉದಾಹರಣೆಗೆ ಪಿ.ಯು.ಸಿ.ಯಲ್ಲಿ ನೀವು ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಇತಿಹಾಸ ಇತ್ಯಾದಿ ವಿಷಯಗಳನ್ನು ಓದಿದ್ದರೆ ಅದನ್ನೆ ಪದವಿಯಲ್ಲಿ ಓದಿ ಮುಂದೆ ಅದೇ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಉಪನ್ಯಾಸಕರಾಗಬಹುದು. ಇದರಲ್ಲದೆ ಮ್ಯಾನೇಜ್‌ಮೆಂಟ್ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ (ಎಂ.ಬಿ.ಎ.) ಓದಿದರೆ ಅದೇ ವಿಷಯದಲ್ಲಿ ಉಪನ್ಯಾಸಕರಾಗಬಹುದು. ಹೀಗಾಗಿ ನಿಮಗೆ ಯಾವ ವಿಷಯಗಳನ್ನು ಬೋಧಿಸಲು ಆಸಕ್ತಿ ಇದೆ ಎಂದು ಸರಿಯಾಗಿ ಆಲೋಚಿಸಿ ನಿರ್ಧರಿಸಿ ಮುಂದುವರಿಯಿರಿ.

ಕಾಲೇಜು ಶಿಕ್ಷಣ ಮತ್ತು ಶೈಕ್ಷಣಿಕ ಅರ್ಹತೆಯ ಜೊತೆಗೆ ಉಪನ್ಯಾಸಕರಾಗಲು ಕೆಲವು ವಿಷಯಗಳಲ್ಲಿ ತಮ್ಮ ಕೌಶಲ ಬೆಳೆಸಿಕೊಳ್ಳಬೇಕು. ಅವು ಯಾವುವೆಂದರೆ,

* ಸದಾ ಓದುವ, ಜ್ಞಾನ ಪಡೆಯುವ ಮತ್ತು ಅದನ್ನು ಹಂಚವ ಹಂಬಲ.

* ಸಂವಹನ ಕೌಶಲ- ವಿಷಯಗಳನ್ನು ಸ್ಪಷ್ಟವಾಗಿ ಮತ್ತು ವ್ಯವಸ್ಥಿತವಾಗಿ ಆತ್ಮವಿಶ್ವಾಸದಿಂದ ವ್ಯಕ್ತಪಡಿಸುವುದು.

*ತಮ್ಮ ವಿಷಯದ ಕುರಿತು ಆಳವಾದ ಜ್ಞಾನ ಮತ್ತು ಆ ಕ್ಷೇತ್ರದಲ್ಲಿ ನ ಪ್ರಸಕ್ತ ವಿದ್ಯಮಾನಗಳು ಹಾಗೂ ನಡೆಯುತ್ತಿರುವ ಸಂಶೋಧನೆಗಳ ಜ್ಞಾನ.

* ವಿಷಯಗಳನ್ನು ವಿಮರ್ಶಿಸುವ ಮತ್ತು ಆ ಬಗ್ಗೆ ಇತರರಿಗೂ ಸ್ಪೂರ್ತಿಯಾಗುವ ವ್ಯಕ್ತಿತ್ವ.

2. ಜಿಲ್ಲಾಧಿಕಾರಿಯಾಗಲು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯು.ಪಿ.ಎಸ್.ಸಿ.) ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಆಗ ನೀವು ಇಂಡಿಯನ್ ಅಡ್ಮಿನ್‌ಸ್ಟ್ರೇಶನ್ ಸರ್ವೀಸ್ ( ಐ.ಎ.ಎಸ್.) ಅಥವಾ ಭಾರತೀಯ ಆಡಳಿತ ಸೇವೆಯ ಭಾಗವಾಗಿ ಜಿಲ್ಲಾಧಿಕಾರಿಯಾಗಿ ಅಥವಾ ಇತರೆ ಭಾರತೀಯ ಸೇವಾ ಅಧಿಕಾರಿಯಾಗಿ ಸೇವೆ ಸಲ್ಲಿಸಬಹುದು. ಯು.ಪಿ.ಎಸ್.‌ಸಿ ಪರೀಕ್ಷೆ ಬರೆಯಲು ಯಾವುದಾದರೂ ಪದವಿ ಶಿಕ್ಷಣ ಮುಗಿಸಿರಬೇಕು ಹಾಗೂ ವಯಸ್ಸಿನ ಮಿತಿ 21–32 ವರ್ಷಗಳ ನಡುವೆ ಇರಬೇಕು. ಹೀಗಾಗಿ ನೀವು ಬಿ.ಕಾಂ.‌ ಪದವಿ ಮುಗಿದ ನಂತರ ಯು.ಪಿ.ಎಸ್.ಸಿ. ಪರೀಕ್ಷೆಗೆ ಹಾಜರಾಗಬಹುದು.

ಯು.ಪಿ.ಎಸ್.ಸಿ. ಸಿವಿಲ್ ಸರ್ವೀಸ್ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತವು ಪ್ರಿಲಿಮ್ಸ್ (ಪೂರ್ವಭಾವಿ) ಹಂತವಾಗಿದ್ದು ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ( ಆಬ್ಜೆಕ್ಟಿವ್‌ ಮಲ್ಟಿಪಲ್ ಆಪ್ಶನ್) ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆಗಳಲ್ಲಿ 200 ಅಂಕದ ಎರಡು ಪೇಪರ್ ಗಳ ಪರೀಕ್ಷೆ ಇದ್ದು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಸಕ್ತ ವಿದ್ಯಮಾನಗಳು, ಭಾರತೀಯ ಇತಿಹಾಸ, ಸಾಮಾನ್ಯ ವಿಜ್ಞಾನ, ಪರಿಸರ, ಅರ್ಥಶಾಸ್ತ್ರ, ರಾಜಕೀಯ ಮತ್ತು ಸಂವಿಧಾನದ ಕುರಿತಾದ ವಿಷಯಗಳು ಮೊದಲ ಪೇಪರ್‌ನಲ್ಲೂ, ಸಂವಹನ ಕೌಶಲ, ತಾರ್ಕಿಕ ಆಲೋಚನೆ, ಸಾಮಾನ್ಯ ಭಾಷಾ ಗ್ರಹಿಕೆ, ಗಣಿತ ಇತ್ಯಾದಿ ವಿಷಯಗಳು ಎರಡನೇ ಪೇಪರ್‌ನಲ್ಲಿ ವಿಷಯಗಳಾಗಿ ಇರುತ್ತವೆ. ಪೂರ್ವಭಾವಿ ಹಂತದಲ್ಲಿ ತೇರ್ಗಡೆ ಹೊಂದಿದವರಿಗೆ ಮಾತ್ರ ಎರಡನೇ ಹಂತದ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.

ಎರಡನೇ ಹಂತವು ಮೈನ್ಸ್ ( ಮುಖ್ಯ ಪರೀಕ್ಷೆ) ಪರೀಕ್ಷೆ ಆಗಿದ್ದು ಪ್ರಬಂಧ ರೂಪದ ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಮಾದರಿಯನ್ನು ಹೊಂದಿರುತ್ತದೆ‌. ಈ ಪರೀಕ್ಷೆಯಲ್ಲಿ ಒಂದು ಪ್ರಾದೇಶಿಕ ಭಾಷೆ, ಇಂಗ್ಲಿಷ್, ಭಾರತೀಯ ಇತಿಹಾಸ, ಸಂಸ್ಕೃತಿ, ಪರಂಪರೆ, ಭೂಗೋಳ ಶಾಸ್ತ್ರ, ಆಡಳಿತ, ಸಂವಿಧಾನ, ರಾಜಕೀಯ, ಸಾಮಾಜಿಕ ನ್ಯಾಯ ಮತ್ತು ಅಂತರರಾಷ್ಟ್ರೀಯ ಸಂಬಂಧ, ತಂತ್ರಜ್ಞಾನ, ಅರ್ಥಶಾಸ್ತ್ರ, ಪರಿಸರ, ವಿಪತ್ತು ನಿರ್ವಹಣೆ, ಜೈವಿಕ ವೈವಿಧ್ಯತೆ, ನೈತಿಕತೆ, ಸಮಗ್ರತೆ ಇತ್ಯಾದಿ ವಿಷಯಗಳನ್ನು ಕೂಡಿದ ಪೇಪರ್‌ಗಳಿದ್ದು 1750 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ. ಇದರಲ್ಲಿ ತೇರ್ಗಡೆ ಆದ ನಂತರ 275 ಅಂಕಗಳ ವ್ಯಕ್ತಿತ್ವ ಪರೀಕ್ಷೆ ಸಂದರ್ಶನದ ಮುಖಾಂತರ ನಡೆಸಲಾಗುತ್ತದೆ. ಹೀಗಾಗಿ ಮುಖ್ಯ ಪರೀಕ್ಷೆಯು ಒಟ್ಟು 2025 ಅಂಕಗಳ ಪರೀಕ್ಷೆಯಾಗಿದ್ದು ಅದರಲ್ಲಿ‌ ಪಡೆಯುವ ಅಂಕಗಳ ಆಧಾರದ ಮೇಲೆ ಅಖಿಲ ಭಾರತೀಯ ರ‍್ಯಾಂಕಿಂಗ್ ನಿಗದಿಪಡಿಸಲಾಗುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಯು.ಪಿ.ಎಸ್.ಸಿ. ವೆಬ್‌ಸೈಟ್ ನಲ್ಲಿ ಇರುವ 2019 ರ ಪರೀಕ್ಷಾ ನೋಟಿಫಿಕೇಶನ್ ಅನ್ನು ವಿವರವಾಗಿ ಓದಿಕೊಳ್ಳಿ. ಪರೀಕ್ಷಾ ತಯಾರಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಯೂಟ್ಯೂಬಿನಲ್ಲಿ ಈಗಾಗಲೇ ಐ.ಎ.ಎಸ್. ಪರೀಕ್ಷೆ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಆ ಬಗ್ಗೆ ಮಾತನಾಡಿರುವ ವಿಡಿಯೋಗಳನ್ನು ವೀಕ್ಷಿಸಿ. ಯು.ಪಿ.ಎಸ್.‌ಸಿ. ಪರೀಕ್ಷೆ ಎದುರಿಸಲು ಬಹಳಷ್ಟು ಆಳವಾದ ಓದು, ತಯಾರಿ, ತಾಳ್ಮೆ ಮತ್ತು‌ ಬದ್ಧತೆ ಮುಖ್ಯ. ಶುಭವಾಗಲಿ‌‌.

ನಾನು ವಾಣಿಜ್ಯಶಾಸ್ತ್ರದಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದೇನೆ. ಈಗ ವಾಣಿಜ್ಯಶಾಸ್ತ್ರದಿಂದ ಕಲಾ ವಿಭಾಗಕ್ಕೆ ಬದಲಾಯಿಸಲು ನಿರ್ಧರಿಸಿದ್ದೇನೆ. ಬಿ.ಎ. ಪದವಿಯಲ್ಲಿ ಸೈಕಾಲಜಿ ತೆಗೆದುಕೊಳ್ಳಬೇಕೆಂಬ ಆಸೆ. ಸೈಕಾಲಜಿಯಲ್ಲಿ ಎಂ.ಎ. ಮಾಡಿದರೆ ಉದ್ಯೋಗಾವಕಾಶಗಳಿವೆಯೇ?

ಆಲಿಯಾ ಮೆಹರ್‌, ಊರು ಬೇಡ

ಆಲಿಯಾ ಮೆಹರ್, ಪಿ.ಯು.ಸಿ. ನಂತರ ನೀವು ನಿಮ್ಮ ಕಾಂಬಿನೇಷನ್ ಅನ್ನು ಬದಲಾಯಿಸಬಹುದು. ಮನಃಶಾಸ್ತ್ರ ವಿಷಯ ಇರುವ ಬಿ.ಎ. ಪದವಿಯನ್ನು ಆಯ್ಕೆ ಮಾಡಿಕೊಳ್ಳಿ. ಹೆಚ್ಚಾಗಿ ಮನಃಶಾಸ್ತ್ರ, ಪತ್ರಿಕೋದ್ಯಮ, ಗ್ರಾಮೀಣ ಅಭಿವೃದ್ಧಿ, ಇಂಗ್ಲಿಷ್ ಸಾಹಿತ್ಯ ವಿಷಯಗಳು ಇರುವ ಬಿ.ಎ. ಪದವಿ ಅನೇಕ ಕಾಲೇಜುಗಳಲ್ಲಿ ಸಿಗುತ್ತದೆ. ಯಾವ ವಿಷಯಗಳ ಕಾಂಬಿನೇಷನ್ ಆದರೂ ಪರವಾಗಿಲ್ಲ, ಆದರೆ ಬಿ.ಎ. ಪದವಿಯ ಮೂರು ವರ್ಷಗಳಲ್ಲಿ ಮನಃಶಾಸ್ತ್ರ ವಿಷಯ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ. ಮುಂದೆ ಎಂ.ಎ. ಸೈಕಾಲಜಿಯನ್ನು ಒಳ್ಳೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿ. ಬಿ.ಎ. ಮನಃಶಾಸ್ತ್ರ ಓದುವಾಗ ಮನಃಶಾಸ್ತ್ರದ ಬೇರೆ ಬೇರೆ ವಿಭಾಗಗಳ ಬಗ್ಗೆ ಓದುತ್ತೀರಿ. ಉದಾಹರಣೆಗೆ ಮಕ್ಕಳ ಮನಃಶಾಸ್ತ್ರ, ಹದಿಹರೆಯದ ಮನಃಶಾಸ್ತ್ರ, ವಯಸ್ಕ ಮತ್ತು ಹಿರಿಯರ ಮನಃಶಾಸ್ತ್ರ, ಮನೋವೈದ್ಯಕೀಯ ಶಾಸ್ತ್ರ ( ಸೈಕಿಯಾಟ್ರಿ), ಶಿಕ್ಷಣ ಮನಃಶಾಸ್ತ್ರ, ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಮನಃಶಾಸ್ತ್ರ, ಕೌನ್ಸೆಲಿಂಗ್, ಕ್ಲಿನಿಕಲ್, ಇಂಡಸ್ಟ್ರಿಯಲ್ ಇತ್ಯಾದಿ. ಆಗ ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂದು ಗುರುತಿಸಿಕೊಂಡು ಆ ಕ್ಷೇತ್ರದಲ್ಲಿ ಮುಂದುವರಿಯುವುದು ಹೇಗೆ ಎಂದು ತಿಳಿದುಕೊಂಡು ಅದೇ ಕ್ಷೇತ್ರದಲ್ಲಿ ಮುಂದಿನ ಶಿಕ್ಷಣ ಕೈಗೊಳ್ಳಬಹುದು.

ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಅನೇಕ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಅವಕಾಶಗಳಿರುತ್ತದೆ. ನಿಮ್ಮ‌ ಆಸಕ್ತಿಯ ಅನುಸಾರವಾಗಿ ಆಯ್ಕೆ ಮಾಡಿಕೊಂಡು ಕೆಲಸ ಮಾಡಬಹುದು.

* ಕ್ಲಿನಿಕಲ್ ಸೈಕಾಲಜಿ ಓದಿದರೆ, ಮಾನಸಿಕ ಆರೋಗ್ಯದ ಆಸ್ಪತ್ರೆ, ಮಕ್ಕಳ ಸಲಹಾ ಕೇಂದ್ರ, ಪಾನ ಮುಕ್ತಿ ಕೇಂದ್ರಗಳಲ್ಲಿ ಮನಃಶಾಸ್ತ್ರಜ್ಞ ಮತ್ತು ಕೌನ್ಸೆಲರ್ ಆಗಿ ಕೆಲಸ ನಿರ್ವಹಿಸಬಹುದು.

* ಕೌನ್ಸೆಲಿಂಗ್ ಮನಃಶಾಸ್ತ್ರ ಓದಿದಲ್ಲಿ ಶಾಲಾ ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರಾಗಿ, ಯುವಕ ಯುವತಿ ಮತ್ತು ಮಕ್ಕಳೊಂದಿಗೆ ಕೆಲಸ ಮಾಡುವ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಬಹುದು.

* ಇಂಡಸ್ಟ್ರಿಯಲ್ ಸೈಕಾಲಜಿ ಓದಿದರೆ ಕಂಪನಿಗಳಲ್ಲಿ ಮನಃಶಾಸ್ತ್ರ ಹಾಗೂ ಆಪ್ತಸಲಹಾಗಾರರಾಗಿ ಕಾರ್ಯನಿರ್ವಹಿಸಬಹುದು.

* ಫಾರೆನ್ಸಿಕ್ ಸೈಕಾಲಜಿ ಮತ್ತು ಕ್ರಿಮಿನಾಲಜಿ ಅಧ್ಯಯನ ಮಾಡಿದರೆ ಅಪರಾಧ ಕುರಿತಾದ ತನಿಖೆ, ಜೈಲುಗಳಲ್ಲಿ ಕೌನ್ಸೆಲರ್ ಆಗಿ ಕಾರ್ಯನಿರ್ವಹಿಸಬಹುದು.

* ಇವಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಮನೋವಿಜ್ಞಾನದ ತಜ್ಞರಾಗಿ, ವೃತ್ತಿ ಮಾರ್ಗದರ್ಶಕರಾಗಿ, ವಿಶೇಷ ಮಕ್ಕಳ ಶಾಲೆಗಳಲ್ಲಿ, ವ್ಯಕ್ತಿತ್ವ ವಿಕಸನ, ಆರೋಗ್ಯ ಮತ್ತು ಜೀವನ ಕೌಶಲಗಳಂತಹ ವಿಚಾರಗಳ ತರಬೇತುದಾರರಾಗಿಯೂ ಕೆಲಸ ನಿರ್ವಹಿಸಬಹುದು. ಮನಃಶಾಸ್ತ್ರ ಸಂಬಂಧಿಸಿದ ಸಂಶೋಧನ ಸಂಸ್ಥೆಗಳಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಸಂಶೋಧನ ಚಟುವಟಿಕೆಗಳಲ್ಲಿ ಅನುಭವ ಪಡೆದುಕೊಳ್ಳಬಹುದು.

* ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಕೌನ್ಸೆಲಿಂಗ್ ಅವಕಾಶಗಳು ಹೆಚ್ಚುತ್ತಿದ್ದು ಅನೇಕ ಆನ್‌ಲೈನ್‌ ವೇದಿಕೆಗಳು ಹದಿಹರೆಯದ ಆರೋಗ್ಯ, ವೃತ್ತಿ ಮತ್ತು ಸಂಬಂಧ ಆಪ್ತಸಲಹೆ ಇತ್ಯಾದಿ ಸೇವೆಗಳಲ್ಲಿ ಉದ್ಯೋಗ ಅವಕಾಶಗಳಿವೆ.

ನಿಮ್ಹಾನ್ಸ್ ಅಥವಾ ಅಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್. ಅಥವಾ ಪಿಎಚ್.ಡಿ. ಮಾಡಿ ಉನ್ನತ ಶಿಕ್ಷಣ ಪಡೆದು ಮನಃಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕ ಮತ್ತು ಪ್ರಾಧ್ಯಾಪಕರಾಗಿಯೂ ಉಪನ್ಯಾಸ ಹಾಗೂ ಸಂಶೋಧನ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬಹುದು. ಹೀಗೆ ಮನಃಶಾಸ್ತ್ರ ಕ್ಷೇತ್ರದಲ್ಲಿ ಅನೇಕ ಉದ್ಯೋಗ ಅವಕಾಶಗಳಿದ್ದು ಆಸಕ್ತಿಕರ ಕ್ಷೇತ್ರವಾಗಿದೆ. ವೈಯಕ್ತಿಕ ಆಸಕ್ತಿ, ಓದು, ನಮ್ಮ ಸುತ್ತಲಿನ ಸಮಾಜ ಮತ್ತು ಜನರನ್ನು ಗಮನಿಸುವ ಸಾಮರ್ಥ್ಯ ಹಾಗೂ ಸಂಶೋಧನಾ ಸಾಮರ್ಥ್ಯ ಮನಃಶಾಸ್ತ್ರ ಕ್ಷೇತ್ರದಲ್ಲಿ ಹೆಚ್ಚಿನದನ್ನು ಸಾಧಿಸಲು ಸಹಕಾರಿಯಾಗುತ್ತದೆ. ಆಲ್ ದಿ ಬೆಸ್ಟ್.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT