ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಟೀನ್ ಕಥೆ

Last Updated 27 ನವೆಂಬರ್ 2018, 19:45 IST
ಅಕ್ಷರ ಗಾತ್ರ

ನಮ್ಮ ಸ್ನಾತಕೋತ್ತರ ವಿಭಾಗ ಎರಡು ಭಾಗವಾದ ನಂತರ ನಾವು ಕೆಂಗೇರಿ ಸಮೀಪದ ಜ್ಞಾನಭಾರತಿಗೆ ಸ್ಥಳಾಂತರಗೊಂಡೆವು. ಕಾಡಿನ ನಡುವೆ ಮೈಲಿಗೆ ಒಂದರಂತೆ ಇರುವ ಕ್ಲಾಸ್‌ ರೂಂಗಳನ್ನು ಕಂಡು ದಿಗಿಲುಗೊಂಡಿದ್ದೆ. ಕಾಲಕಳೆದಂತೆ ಆ ವಾತಾವರಣವೇ ಆಪ್ತವಾಗುತ್ತಾ ಹೋಯಿತು.

ಕ್ಲಾಸ್ ರೂಂ ಜೊತೆಗೆ ನಮಗೆ ಅಪ್ಯಾಯಮಾನವಾಗಿದ್ದ ಸ್ಥಳವೆಂದರೆ ನಮ್ಮ ವಿಭಾಗದಿಂದ ಅಣತಿ ದೂರದಲ್ಲಿದ್ದ ಕ್ಯಾಂಟೀನ್. ಅದನ್ನು ‘ಆಂಟಿ ಕ್ಯಾಂಟೀನ್’ ಅಂತಲೂ ಕರೆಯುತ್ತಿದ್ದೆವು.ಕ್ಯಾಂಟೀನ್‍ಗೂ ನಮಗೂ ಅವಿನಾಭಾವ ಸಂಬಂಧ. ತರಗತಿಯಲ್ಲಿ ಕಳೆದಿದ್ದಕ್ಕಿಂತ ಹೆಚ್ಚಿನ ಸಮಯವನ್ನು ಇಲ್ಲಿಯೇ ಕಳೆದಿದ್ದೇವೆ. ದೇವಾಲಯದ ಒಳ ಹೋಗುವ ಮುನ್ನ ಅದರ ಮುಂದಿನ ಬಸವಣ್ಣನಿಗೆ ಕೈಮುಗಿಯುವಂತೆ, ಕ್ಯಾಂಟೀನ್ ಜಗಲಿ ಏರಿಯೇ ಕ್ಲಾಸ್‍–ರೂಂಗೆ ಪ್ರಯಾಣ. ಬೆಳಿಗ್ಗೆ ಇಲ್ಲಿಗೆ ಬಂದು ಕುಳಿತರೆ, ಎಷ್ಟೋ ಸಲ ಕ್ಲಾಸಿಗೂ ಹೋಗುತ್ತಿರಲಿಲ್ಲ. ಕ್ಯಾಂಟೀನ್ ನಮಗೆ ಊಟ, ತಿಂಡಿಯ ತಾಣ ಮಾತ್ರ ಆಗಿರಲಿಲ್ಲ, ನಮ್ಮ ಭಾವಾಭಿವ್ಯಕ್ತಿಯ ಸ್ಥಳವೂ ಆಗಿತ್ತು. ನಮ್ಮ ಹಲವು ಆಲೋಚನೆಗಳು, ವಿಚಾರಗಳು, ನವೀನ ಯೋಜನೆಗಳು, ಕ್ಲಾಸಿನಲ್ಲಿ ಮಾಡಿದ ತಂಟೆ-ತರಲೆಗಳು – ಎಲ್ಲವೂ ಇಲ್ಲಿ ವಿನಿಮಯಗೊಳ್ಳುತ್ತಿದ್ದವು.

ನಮ್ಮ ಬರ್ತ್‌–ಡೇ ಪಾರ್ಟಿಗಳೂ ಇಲ್ಲೇ ನಡೆಯುತ್ತಿದ್ದವು. ಇದು ನಮ್ಮ ಬಜೆಟ್‍ಗೂ ಸರಿ ಹೊಂದುತ್ತಿದ್ದರಿಂದ ಸ್ನೇಹಿತರ ಊಟೋಪಚಾರ ಇಲ್ಲೇ ನಡೆಯುತ್ತಿತ್ತು. ಸ್ನೇಹಿತರು ಬಂದು ಕುಳಿತು ಹರಟೆ ಪ್ರಾರಂಭಿಸಿದರೆ ಒಬ್ಬರ ಹಿಂದೆ ಒಬ್ಬರಂತೆ ಎಲ್ಲರೂ ಅಲ್ಲಿ ಸೇರುತ್ತಿದ್ದೆವು. ನಮ್ಮ ಟ್ರಿಪ್‍ಗಳ ನಿರ್ಧಾರವಾಗುತ್ತಿದ್ದುದ್ದೂ ಇಲ್ಲೇ.

ಕ್ಯಾಂಟೀನ್ ನನಗೆ ಹೃದಯಕ್ಕೂ ಹತ್ತಿರವಾಗಿತ್ತು. ನನಗೆ ಪ್ರೇಮಾಂಕುರವಾಗಿದ್ದ ಎಂ.ಕಾಂ. ಹುಡುಗಿ ಇಲ್ಲಿಯೇ ಟೀ ಕುಡಿಯಲು ಬರುತ್ತಿದ್ದಳು. ಆದರೆ ಪ್ರೀತಿ ನಿವೇದನೆಯಾಗದೆ ಬಟವಾಡೆಯಾಗದ ರಸೀದಿಯಂತೆ ನನ್ನಲ್ಲೇ ಉಳಿಯಿತು.

– ಶಿವರಾಜ್ ರಾಮನಾಳ, ಜ್ಞಾನಭಾರತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT