ಪುಸ್ತಕ ಖರೀದಿಗೆ ಮುಗಿಬಿದ್ದ ಓದುಗರು

4
ಪುಸ್ತಕ ಪ್ರೀತಿ

ಪುಸ್ತಕ ಖರೀದಿಗೆ ಮುಗಿಬಿದ್ದ ಓದುಗರು

Published:
Updated:

ಅದು ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಸಿರಿಗನ್ನಡ ಮಳಿಗೆ. ಬೆಳಿಗ್ಗೆಯಿಂದ ತಂಡೋಪತಂಡವಾಗಿ ಜನ ಬರುತ್ತಿದ್ದರು. ಬಂದವರಲ್ಲಿ ಕೆಲವರು ನಾಲ್ಕರಿಂದ ಐದು ಪುಸ್ತಕಗಳನ್ನು ಕೈಯಲ್ಲಿಡಿದು ಹೋಗುತ್ತಿದ್ದರೆ, ಇನ್ನೂ ಕೆಲವರು 20ರಿಂದ 30 ಪುಸ್ತಕಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದರು.

ಸ್ವಾತಂತ್ರ್ಯ ದಿನಾಚರಣೆ ಸ್ಮರಿಸಲು ಕನ್ನಡ ಪುಸ್ತಕ ಪ್ರಾಧಿಕಾರ ಆಗಸ್ಟ್‌ ತಿಂಗಳ ಪೂರ್ತಿ ಪಸ್ತಕಗಳ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ ನೀಡಿದ್ದು, ಶುಕ್ರವಾರ ಈ ವಿಶೇಷ ಕೊಡುಗೆಯ ಕೊನೆ ದಿನವಾಗಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಪುಸ್ತಕ ಖರೀದಿಗೆ ಮುಗಿಬಿದ್ದಿದ್ದರು.

ಬೆಂಗಳೂರಿನ ವಿವಿಧ ಬಡಾವಣೆಯಿಂದಷ್ಟೇ ಅಲ್ಲದೆ ತುಮಕೂರು, ರಾಮನಗರ, ಮಂಡ್ಯ, ಕೋಲಾರ, ಹಾಸನ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು, ವಿದ್ವಾಂಸರು, ಓದುಗರು ಪುಸ್ತಕ ಖರೀದಿಸಲು ಬಂದಿದ್ದರು.

₹ 6.87 ಲಕ್ಷ ವಹಿವಾಟು
ವಿಶೇಷ ರಿಯಾಯಿತಿ ಇದ್ದಿದ್ದರಿಂದ ಆಗಸ್ಟ್‌ ತಿಂಗಳೊಂದರಲ್ಲಿಯೇ ಸಿರಿಗನ್ನಡ ಮಳಿಗೆಯಲ್ಲಿ ಸುಮಾರು 5000ಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿದ್ದು, ₹ 6 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ. ಇಲ್ಲಿ ಗರಿಷ್ಠ ರಿಯಾಯಿತಿ ದರದಲ್ಲಿ ಸಿಗುತ್ತಿದ್ದ ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಪುಸ್ತಕಗಳನ್ನು ಓದುಗರು ಖರೀದಿಸಿದ್ದಾರೆ. ಆನ್‌ಲೈನ್‌ ಮೂಲಕ 1500ಕ್ಕೂ ಹೆಚ್ಚು ಪುಸ್ತಕಗಳು ಈ ಅವಧಿಯಲ್ಲಿ ಮಾರಾಟವಾಗಿದ್ದು ₹ 87 ಸಾವಿರ ಆದಾಯ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಬಂದಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿಯಲ್ಲಿನ ಮಳಿಗೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ಪುಸ್ತಕ ಮಾರಾಟದಿಂದ ಅಂದಾಜು ₹ 3 ಲಕ್ಷ ಆದಾಯ ಬಂದಿದೆ.

‘ಸಾಮಾನ್ಯವಾಗಿ ತಿಂಗಳಿಗೆ ಅಂದಾಜು ಒಂದೂವರೆ ಲಕ್ಷ ರೂಪಾಯಿಯಷ್ಟು ವಹಿವಾಟು ಸಿರಿಗನ್ನಡ ಮಳಿಗೆಯಲ್ಲಿ ನಡೆಯುತ್ತಿತ್ತು. ಆಗಸ್ಟ್‌ ತಿಂಗಳಲ್ಲಿ ನೀಡಿದ ವಿಶೇಷ ಕೊಡುಗೆಯಿಂದಾಗಿ ನಾಲ್ಕು ತಿಂಗಳ ವಹಿವಾಟು ಒಂದೇ ತಿಂಗಳಲ್ಲಿ ಆದಂತಾಗಿದೆ’ ಎನ್ನುತ್ತಾರೆ ಈ ಮಳಿಗೆ ಸಿಬ್ಬಂದಿ.

ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಮೈಸೂರು, ಧಾರವಾಡ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳು ಹಾಗೂ ಬೆಂಗಳೂರಿನ ಹಲವಾರು ಕಾಲೇಜುಗಳ ಗ್ರಂಥಾಲಯಗಳು ಈ ತಿಂಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪುಸ್ತಕಗಳನ್ನು ಖರೀದಿಸಿವೆ. ಹಂಪಿ ವಿ.ವಿಯೊಂದೆ ₹ 60 ಸಾವಿರದಷ್ಟು ಪುಸ್ತಕ ಖರೀದಿಸಿದೆ. ಅಲ್ಲದೆ ಸಾಹಿತಿಗಳು, ವಿದ್ವಾಂಸರು, ವೈಯಕ್ತಿಕ ಹಾಗೂ ಖಾಸಗಿ ಗ್ರಂಥಾಲಯ ಹೊಂದಿರುವವರು ಈ ತಿಂಗಳಲ್ಲಿ ಮುಗಿಬಿದ್ದು ಪುಸ್ತಕಗಳನ್ನು ಖರೀದಿಸಿದ್ದಾರೆ.

ಶುಕ್ರವಾರ ಪುಸ್ತಕ ಖರೀದಿಸಿದ ಹೊಸಕೆರೆಹಳ್ಳಿ ನಿವಾಸಿ ಚಂದ್ರಶೇಖರ್‌, ‘ಓದುಗರ ಕೈಗೆಟುಕುವ ಬೆಲೆಗೆ ಕನ್ನಡದ ಪುಸ್ತಕಗಳು ದೊರೆಯುವಂತೆ ಆಗುತ್ತಿರುವುದು ಸ್ವಾಗತಾರ್ಹ. ಇದರಿಂದ ಪುಸ್ತಕ ಓದುವ ಮತ್ತು ಖರೀದಿಸುವ ಸಂಸ್ಕೃತಿ ಎರಡೂ ಬೆಳೆದಂತಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ನಾನು ಬ್ಯಾಂಕಿನ ನಿವೃತ್ತ ಸಿಬ್ಬಂದಿ. ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆ ನೆಲೆಗಳು ಕುರಿತ 12 ಸಂಪುಟಗಳನ್ನು ಖರೀದಿಸಿದ್ದೇನೆ. ರಿಯಾಯಿತಿ ದರವಾದ್ದರಿಂದ ಇವೆಲ್ಲ ₹ 700ರಿಂದ ₹ 800ಕ್ಕೆ ಸಿಕ್ಕಿದೆ. ಬೇರೆ ಸಂದರ್ಭವಾಗಿದ್ದರೆ ₹ 1,600ರವರೆಗೆ ಪಾವತಿಸಬೇಕಿತ್ತು. ಹಣವೂ ಉಳಿಯಿತು, ಪುಸ್ತಕಗಳೂ ಬಂದವು’ ಎಂದು ಖುಷಿಯಿಂದ ಹೇಳಿದರು.

ಗ್ರಂಥಾಲಯಕ್ಕೆ ಖರೀದಿ
‘ನಾನು ಬನ್ನೇರುಘಟ್ಟ ರಸ್ತೆಯಲ್ಲಿರುವ ಲಯೋಲ ಕಾಲೇಜಿನ ಗ್ರಂಥಪಾಲಕ. ಕಾಲೇಜಿನ ಉಪನ್ಯಾಸಕರು ಸೂಚಿಸಿದ್ದ ಶೇ 99ರಷ್ಟು ಪುಸ್ತಕಗಳನ್ನು ಕಾಲೇಜು ವತಿಯಿಂದ ಖರೀದಿಸಿದ್ದೇನೆ. ₹ 4,500ಕ್ಕೆ ಅಮೂಲ್ಯವಾದ 55 ಕನ್ನಡ ಪುಸ್ತಕಗಳು ದೊರೆತಿವೆ. ಇವು ನಮ್ಮ ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ನೆರವಾಗಲಿವೆ’ ಎನ್ನುತ್ತಾರೆ ಕೆ.ಆರ್‌. ಕುಮಾರ್‌.

ಶೇ 15ರಿಂದ 50ರಷ್ಟು ರಿಯಾಯಿತಿ
ವರ್ಷದಲ್ಲಿ ಮೂರು ತಿಂಗಳು ಎಲ್ಲ ಪುಸ್ತಕಗಳಿಗೆ ಶೇ 50ರಷ್ಟು ರಿಯಾಯಿತಿ ಇದ್ದರೆ, ಉಳಿದ ಒಂಬತ್ತು ತಿಂಗಳಲ್ಲಿ ವಿವಿಧ ಪುಸ್ತಕಗಳಿಗೆ ಶೇ 15ರಿಂದ ಶೇ 50ರಷ್ಟು ರಿಯಾಯಿತಿ ಇರುತ್ತದೆ. ಹೊಸ ಪುಸ್ತಕಗಳಿಗೆ ಶೇ 15, ಪ್ರಕಟಗೊಂಡು ಮೂರು ವರ್ಷಗಳಾಗಿರುವ ಪುಸ್ತಕಗಳಿಗೆ ಶೇ 20, ಪ್ರಕಟಗೊಂಡು 5 ವರ್ಷಗಳಾಗಿರುವ ಪುಸ್ತಕಗಳಿಗೆ ಶೇ 30 ಹಾಗೂ ಪ್ರಕಟಗೊಂಡು 10 ವರ್ಷಗಳಾಗಿರುವ ಪುಸ್ತಕಗಳಿಗೆ ಶೇ 50ರಷ್ಟು ರಿಯಾಯಿತಿ ಮುಂದುವರೆಯುತ್ತದೆ ಎನ್ನುತ್ತಾರೆ ಮಳಿಗೆಯ ಸಿಬ್ಬಂದಿ. 

*
 


ಡಾ.ವಸುಂಧರಾ ಭೂಪತಿ

ಉತ್ತಮ ಸ್ಪಂದನೆ
‘ಪುಸ್ತಕ ಕೊಂಡು ಓದುವ ಹವ್ಯಾಸವನ್ನು ಜನರಲ್ಲಿ ಬೆಳೆಸುವುದರ ಜತೆಗೆ ಹೆಚ್ಚಿನ ಪುಸ್ತಕಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲು ವರ್ಷದಲ್ಲಿ ಮೂರು ತಿಂಗಳು (ಜನವರಿ, ಆಗಸ್ಟ್‌, ನವೆಂಬರ್‌) ಶೇ 50ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಲು ಸರ್ಕಾರ ತೀರ್ಮಾನಿಸಿದೆ. ಆಗಸ್ಟ್‌ ತಿಂಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಓದುಗರಿಂದ ದೊರೆತಿದೆ. ಈ ಅವಧಿಯಲ್ಲಿ ಪುಸ್ತಕ ಖರೀದಿಸಲು ಆಗದವರು ನವೆಂಬರ್‌ ತಿಂಗಳಲ್ಲಿ (ಕನ್ನಡ ರಾಜ್ಯೋತ್ಸವ ಪ್ರಯುಕ್ತ) ಖರೀದಿಸಬಹುದು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !