ಸೋಮವಾರ, ಮಾರ್ಚ್ 8, 2021
24 °C

ಯೂಟ್ಯೂಬ್‌ನಲ್ಲಿ ಕವಿಸಮಯ!ಡಿಜಿಟಲ್‌ಗೆ ಪಿಯು ಸಾಹಿತ್ಯ ಪಠ್ಯ

ಮಂಜುಶ್ರೀ ಎಂ.ಕಡಕೋಳ Updated:

ಅಕ್ಷರ ಗಾತ್ರ : | |

ಪಿಯುಸಿ... ಆಗ ತಾನೇ ಹರೆಯಕ್ಕೆ ಬಂದ ಯುವಜನರು ಕಾಲೇಜು ಮೆಟ್ಟಿಲೇರುವ ಮಧುರಾನುಭೂತಿಯ ಕಾಲ. ಹದಿಹರೆಯದ ಕುದಿ ಮನಗಳು ಸೃಜನಾತ್ಮಕವಾಗಿ ಅರಳುವ ಸಮಯವಿದು. ಬರೀ ಪಠ್ಯದಲ್ಲಷ್ಟೇ ಕಳೆದು ಹೋಗಲು ಬಯಸದ ಮನ ಇಂದಿನ ವಿದ್ಯಾರ್ಥಿಗಳದ್ದು. ಯಾವುದು ಒಳಿತು, ಯಾವುದು ಹೆಚ್ಚು ಅಂಕ ಗಳಿಸಬಲ್ಲದು ಎನ್ನುವುದಷ್ಟೆ ಲೆಕ್ಕಾಚಾರ ಜಾಣ ವಿದ್ಯಾರ್ಥಿಗಳದ್ದು. ಆದರೆ, ಭಾಷಾ ಪಠ್ಯದ್ದು ಮಾತ್ರ ಅಂಕಗಳಿಕೆಯ ಲೆಕ್ಕಾಚಾರವಲ್ಲ. ಅದು ಜೀವನಪ್ರೀತಿ, ಬದುಕಿನ ಸೃಜನಶೀಲತೆಗೆ ಪೂರಕವಾಗಿರುವ ಪಠ್ಯ.

ಪ್ರಸ್ತುತ ಪ್ರಥಮ ಮತ್ತು ದ್ವಿತೀಯ ಪಿಯುಸಿಗಿರುವ ಸಾಹಿತ್ಯ ಸಂಚಲನ ಮತ್ತು ಸಾಹಿತ್ಯ ಸಂಪದ ಪಠ್ಯಗಳು ಸೃಜನಶೀಲ ನೆಲೆಯಲ್ಲಿ ರೂಪುಗೊಂಡಿವೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಈ ಪಠ್ಯಗಳಲ್ಲಿ ಹೊಸಗನ್ನಡ, ಹಳಗನ್ನಡದ ಮಿಶ್ರಣವಿದೆ. ಇಂತಿಪ್ಪ ಪಠ್ಯವನ್ನು ಭಾಷಾ ತರಗತಿಯಲ್ಲಿ ಉಪನ್ಯಾಸಕರು ಸರಿಯಾಗಿ ಪಾಠ ಮಾಡಿದರೆ, ಅದು ಮನದಲ್ಲಿ ಅಚ್ಚೊತ್ತಬಹುದು. ಆದರೆ, ಕಾಲೇಜಿನ ಮುಖವನ್ನೇ ನೋಡದ ಸಾವಿರಾರು ಬಾಹ್ಯ ವಿದ್ಯಾರ್ಥಿಗಳಿಗೆ ಪಠ್ಯ ವಾಚನ ಮತ್ತು ಉಪನ್ಯಾಸಕರ ಮಾತುಗಳು ಗಗನ ಕುಸುಮ. ಇದನ್ನು ಮನಗಂಡ ಬೆಂಗಳೂರಿನ ಕ್ರೈಸ್ಟ್‌ ಜೂನಿಯರ್ ಕಾಲೇಜು ಹಾಗೂ ಕ್ರೈಸ್ಟ್ ಯೂನಿವರ್ಸಿಟಿ ಸೆಂಟರ್ ಫಾರ್ ಕಾನ್ಸೆಪ್ಟ್ ಡಿಸೈನ್ ‘ಕವಿಸಮಯ’ ಎನ್ನುವ ವಿಶೇಷ ಕಾರ್ಯಕ್ರಮವನ್ನು ರೂಪಿಸಿ, ಯೂಟ್ಯೂಬ್‌ಗೆ ಅಳವಡಿಸಿದೆ.

ಏನಿದು ಕವಿಸಮಯ?
ಕವಿ ಅಥವಾ ಲೇಖಕರ ರಚನೆಗಳನ್ನು ಅವರದ್ದೇ ಮಾತುಗಳಲ್ಲಿ ಕೇಳಿ ಆನಂದಿಸುವ ರಸಾನುಭವವೇ ‘ಕವಿಸಮಯ’. ಪಿಯುಸಿಗೆ ಪಠ್ಯದಲ್ಲಿರುವ ಕವಿಗಳು, ಲೇಖಕರು ತಮ್ಮ ಕಾವ್ಯ ಮತ್ತು ಲೇಖನಗಳ ಕುರಿತು ವಾಚನ ಮಾಡಿ, ಕಾವ್ಯ ಹುಟ್ಟಿದ ಗಳಿಗೆ, ಲೇಖನ ರೂಪುಗೊಂಡ ಹಿನ್ನೆಲೆಯನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಂಡಿರುವುದೇ ‘ಕವಿಸಮಯ’. ಸಾವಿರಾರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಇದರ ಸದುಪಯೋಗ ಪಡೆಯುತ್ತಿದ್ದಾರೆ.‌

ಪಠ್ಯದಲ್ಲಿರುವ ರಚನೆಗಳು ಯಾವ ಸಮಯದಲ್ಲಿ ಹುಟ್ಟಿದವು, ಅವುಗಳ ಹಿಂದಿನ ಸ್ಫೂರ್ತಿ, ರಚಿಸುವಾಗ ಇದ್ದ ಮನೋಭಾವ ಇವುಗಳ ಬಗ್ಗೆ ಸಾಹಿತಿಗಳು ಯೂಟ್ಯೂಬ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕಾವ್ಯಗಳ ಆಶಯ, ಸಂದರ್ಭ, ಆದ ಪ್ರೇರಣೆ, ಸೂಕ್ಷ್ಮ ಒಳನೋಟಗಳು ಮತ್ತು ವೈಶಿಷ್ಟ್ಯತೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ನೇರವಾಗಿ ಕವಿಗಳೊಡನೆ ಪ್ರಶ್ನೋತ್ತರ ಸಮಯದಲ್ಲಿ ವಿಷಯಗಳನ್ನು ಕೇಳಿ, ಜ್ಞಾನ ಹೆಚ್ಚಿಸಿಕೊಂಡಿದ್ದಾರೆ.

‘ಕವಿಸಮಯ’ದಲ್ಲಿ ಡಾ.ಎಚ್.ಎಸ್. ಸತ್ಯನಾರಾಯಣ, ಪಿ.ವಿ.ನಾರಾಯಣ, ಕೆ.ಆರ್.ಗಣೇಶ್, ಡಾ.ಎಚ್.ಎಲ್. ಪುಷ್ಪಾ, ಟಿ. ಯಲ್ಲಪ್ಪ, ಡಾ.ಸುಕನ್ಯಾ, ಡಾ.ಎಂ.ಎಸ್. ಆಶಾದೇವಿ, ಡಾ.ಮಾಲತಿ ಪಟ್ಟಣಶೆಟ್ಟಿ, ಮಧುಸೂದನ, ಪ್ರೊ.ಎಲ್.ಎನ್. ಮುಕುಂದರಾಜ್, ಲಕ್ಕೂರು ಆನಂದ್, ಅಶ್ವತ್ಥ ನಾರಾಯಣ್, ರೋಹಿತ್ ಅಗಸರಳ್ಳಿ  ಸೇರಿದಂತೆ ಒಟ್ಟು 23 ಸಾಹಿತಿಗಳು ತಮ್ಮ ಕಾವ್ಯ–ಲೇಖನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹೊಸಗನ್ನಡದ ಕಥೆಗಳ ಕುರಿತು ವಿಮರ್ಶಕರು ಸೂಕ್ಷ್ಮ ಒಳನೋಟವನ್ನು ಗ್ರಹಿಸುವ ಬಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರೆ, ಹಳಗನ್ನಡದ ಕುರಿತು ತಜ್ಞರಾದ ಪಿ.ವಿ.ನಾರಾಯಣ, ಗಣೇಶ್ ಅವರು ವ್ಯಾಖ್ಯಾನಿಸಿರುವುದು ವಿಶೇಷ.

‘ನೇರವಾಗಿ ಪಿಯು ಪರೀಕ್ಷೆ ಕಟ್ಟಿರುವ ಸಾವಿರಾರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಲ್ಲದ ಗ್ರಾಮೀಣ ಕಾಲೇಜಿನ ವಿದ್ಯಾರ್ಥಿಗಳು ಬರೀ ಗೈಡ್ ಇಲ್ಲವೇ ಪಠ್ಯವನ್ನು ಮೇಲಸ್ತರದಲ್ಲಿ ಓದಿರುತ್ತಾರೆ. ಅಂಥವರಿಗೆ ಹಳಗನ್ನಡ ಕಬ್ಬಿಣದ ಕಡಲೆ ಎನಿಸಬಹುದು. ‘ಕವಿಸಮಯ’ದಲ್ಲಿ ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಳ್ಳಲಾಗಿದೆ. ಕಠಿಣ ಅನಿಸುವಂಥ ವಿಷಯಗಳನ್ನು ಯೂಟ್ಯೂಬ್‌ಗೆ ಅಳವಡಿಸಲಾಗಿದೆ’ ಎನ್ನುತ್ತಾರೆ ಲೇಖಕ ಡಾ.ಎಚ್.ಎಸ್. ಸತ್ಯನಾರಾಯಣ.

ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಕ್ರೈಸ್ಟ್‌ ಸಂಸ್ಥೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಚಟುವಟಿಕೆ ಮಾಡಬೇಕೆಂದು ಯೋಚಿಸುತ್ತಿರುವಾಗ ಮೂಡಿಬಂದದ್ದೇ ‘ಕವಿಸಮಯ’ ಎನ್ನುತ್ತಾರೆ ಕಾಲೇಜಿನ ಕನ್ನಡ ಉಪನ್ಯಾಸಕ ಭಾಸ್ಕರ್ ವೈ.

ಯೂಟ್ಯೂಬ್ ಲಿಂಕ್: youtube.com/channel/UC2WsjuHGfKoT7PsymfVb8wQ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು