ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಅಧ್ಯಯನ: ಆಯ್ಕೆಗಳು ಹಲವು

ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ
Last Updated 16 ಜುಲೈ 2019, 19:30 IST
ಅಕ್ಷರ ಗಾತ್ರ

ನಾನು ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಶೇ 75 ಅಂಕಗಳನ್ನು ತೆಗೆದುಕೊಂಡಿದ್ದು ಕನ್ನಡ ಮಾಧ್ಯಮದಲ್ಲಿ ಓದಿರುತ್ತೇನೆ. ನಂತರ ಪಿ.ಯು.ಸಿ.ಯಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಓದಿ ಶೇ 90 ಅಂಕವನ್ನು ಗಳಿಸಿದ್ದೇನೆ. ಸದ್ಯ ಅಂತಿಮ ವರ್ಷದ ಬಿ.ಕಾಂ. ಪದವಿ ಪರೀಕ್ಷೆಯನ್ನು ಎದುರಿಸಲಿದ್ದೇನೆ. ನನಗೆ ಮುಂದೆ ಎಲ್‌.ಎಲ್‌.ಬಿ. ಮಾಡುವ ಆಸೆಯಿದೆ. ಈ ಬಗ್ಗೆ ನನಗೆ ಸಲಹೆ ನೀಡಿ. ಈ ಕ್ಷೇತ್ರದಲ್ಲಿ ಮುಂದೆ ನನಗೆ ಯಾವ ರೀತಿಯ ಅವಕಾಶಗಳಿವೆ ಅಥವಾ ಇನ್ನಿತರ ಯಾವುದೇ ಆಯ್ಕೆಗಳಿದ್ದರೆ ದಯವಿಟ್ಟು ತಿಳಿಸಿ.

–ಯಶಸ್ವಿನಿ ಕೆ.ಎಂ., ಊರು ಬೇಡ

ಯಶಸ್ವಿನಿ, ಕೆಲವೊಮ್ಮೆ ಕಾರಣಾಂತರಗಳಿಂದ ನಮಗೆ ನಮ್ಮ ಇಷ್ಟದ ವೃತ್ತಿ ಮತ್ತು ಆಯ್ಕೆಗಳು ಸ್ವಲ್ಪ ತಡವಾಗಿ ಗೋಚರಿಸುತ್ತವೆ. ಆದರೆ ಅದಕ್ಕಾಗಿ ನಮ್ಮಲ್ಲಿ ಸಮಯವಿದ್ದು, ಆರ್ಥಿಕವಾಗಿ ಏನೂ ಸಮಸ್ಯೆಗಳು ಇರದಿದ್ದಲ್ಲಿ ನಾವು ಯಾವ ಹಂತದಲ್ಲಿಯೂ ಕೂಡ ನಮ್ಮ ಇಷ್ಟದ ವೃತ್ತಿ ಮತ್ತು ಶಿಕ್ಷಣದ ಕಡೆಗೆ ಹೊರಳಬಹುದು. ನೀವು ಈಗಾಗಲೇ ಬಿ.ಕಾಂ. ಪದವಿ ಮಾಡಿರುವುದರಿಂದ ಎಲ್.ಎಲ್.ಬಿ. ಮಾಡಲು ಮತ್ತೆ ಮೂರು ವರ್ಷ ವಿನಿಯೋಗಿಸಬೇಕಾಗುತ್ತದೆ. ಹೀಗಾಗಿ ಆ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ ನಿರ್ಧಾರಕ್ಕೆ ಬಂದರೆ ಉತ್ತಮ.

ಆಗಲೇ ಹೇಳಿದ ಹಾಗೆ ನಿಮಗೆ ಸಮಯ ಮತ್ತು ಆರ್ಥಿಕ ಸಮಸ್ಯೆಗಳು ಇಲ್ಲದಿದ್ದಲ್ಲಿ ನೀವು ಎಲ್.ಎಲ್.ಬಿ. ಮಾಡಲು ಮುಂದುವರಿಯಬಹುದು. ಅದಕ್ಕಾಗಿ ನಿಮ್ಮ ಹತ್ತಿರದ ಕಾನೂನು ಕಾಲೇಜನ್ನು ಸಂಪರ್ಕಿಸಬಹುದು ಅಥವಾ ಕಾಮನ್ ಲಾ ಅಡ್ಮಿಷನ್ ಟೆಸ್ಟ್ (CLAT) ಮುಖಾಂತರ ಪ್ರತಿಷ್ಠಿತ ಕಾಲೇಜುಗಳಲ್ಲೂ ಪ್ರಯತ್ನಿಸಬಹುದು. ಎಲ್.ಎಲ್.ಬಿ. ಮಾಡಿದ ನಂತರ ಸರ್ಕಾರಿ ವಕೀಲರು ಮತ್ತು ಅನುಭವದೊಂದಿಗೆ ನ್ಯಾಯಾಧೀಶರಾಗಬಹುದು, ಸ್ವತಂತ್ರ ವಕೀಲರಾಗಿ ಕೆಲಸ ಮಾಡಬಹುದು, ಖಾಸಗಿ ಕಾರ್ಪೊರೇಟ್ ಕಂಪನಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿ ಕೆಲಸ ನಿರ್ವಹಿಸಬಹುದು.

ದೂರ ಶಿಕ್ಷಣದ ಮುಖಾಂತರ ಕಾನೂನು ಓದಲು ಬಯಸಿದರೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ವೆಬ್‌ಸೈಟ್‌ನಲ್ಲಿ (http://ded.nls.ac.in/) ಅನೇಕ ದೂರ ಶಿಕ್ಷಣದ ಕೋರ್ಸ್‌ಗಳ ಕುರಿತು ಮಾಹಿತಿ ಇದ್ದು, ಅದನ್ನು ಪರಿಶೀಲಿಸಿ ನಿಮ್ಮ ಅರ್ಹತೆ ಮತ್ತು ಆಸಕ್ತಿಗೆ ತಕ್ಕಂತೆ ಆಯ್ದುಕೊಳ್ಳಿ.

ಇದಲ್ಲದೆ ನೀವು ಬಿ.ಕಾಂ. ನಂತರ ಸಿ.ಎಸ್. ಅಥವಾ ಕಂಪನಿ ಸೆಕ್ರೆಟರಿ ಪರೀಕ್ಷೆಯನ್ನು ಬರೆಯಬಹುದು. ನಿಮಗೆ ಕಾನೂನು ವಿಷಯಗಳಲ್ಲಿ ಆಸಕ್ತಿ ಇರುವುದರಿಂದ ಸಿ.ಎಸ್. ಪರೀಕ್ಷೆ ಸೂಕ್ತವಾಗಬಹುದು. ಸಿ.ಎಸ್. ಪರೀಕ್ಷೆಯ ನಂತರ ಕಂಪನಿ ಸೆಕ್ರೆಟರಿ ಸಿ.ಎಸ್. ಪರೀಕ್ಷೆಯು ಮೂರು ಹಂತಗಳ ಪರೀಕ್ಷೆ ಆಗಿದ್ದು ಕಂಪನಿ ಲಾ, ಎಕನಾಮಿಕ್ಸ್‌ ಮತ್ತು ಕಮರ್ಷಿಯಲ್ ಲಾ, ಅಕೌಂಟ್ಸ್, ಟ್ಯಾಕ್ಸ್, ಬ್ಯುಸಿನೆಸ್ ಎಕನಾಮಿಕ್ಸ್ ಇತ್ಯಾದಿ ವಿಷಯಗಳನ್ನು ಓದಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಪಡೆಯಿರಿ. ಆಲ್ ದಿ ಬೆಸ್ಟ್.

* ನಾನು ಎಂ.ಕಾಂ.ನ ನಾಲ್ಕನೇ ಸೆಮಿಸ್ಟರ್‌ (ಸ್ಪೆಶಲೈಜೇಶನ್‌ ಅಕೌಂಟಿಂಗ್‌ ಮತ್ತು ಟ್ಯಾಕ್ಸೇಶನ್‌) ಓದುತ್ತಿದ್ದೇನೆ. ಜೊತೆಗೆ ಚಾರ್ಟರ್ಡ್‌ ಅಕೌಂಟೆಂಟ್‌ ಕಚೇರಿಯಲ್ಲೂ ಕೆಲಸ ಮಾಡುತ್ತಿದ್ದೇನೆ. ಮುಂದೆ ನನ್ನ ಔದ್ಯೋಗಿಕ ಜೀವನದಲ್ಲಿ ಉನ್ನತಿ ಸಾಧಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಿ ಹಾಗೂ ಯಾವ ರೀತಿಯ ಉದ್ಯೋಗಗಳು ನನಗೆ ಲಭಿಸಬಹುದು?

ಮೇಘಾ ಎನ್‌., ಬೆಂಗಳೂರು

ಮೇಘಾ, ನಿಮ್ಮ ಎಂ.ಕಾಂ. ಶಿಕ್ಷಣ ಮತ್ತು ಚಾರ್ಟರ್ಡ್‌ ಅಕೌಂಟೆಂಟ್ ಕಚೇರಿ ಕೆಲಸದ ಅನುಭವದ ಮೇಲೆ ನಿಮ್ಮ ಮುಂದಿನ ಶಿಕ್ಷಣ ಅಥವಾ ಕೆಲಸದ ಕುರಿತು ಯೋಜನೆ ರೂಪಿಸಿಕೊಳ್ಳಿ. ಸಿ.ಎ. ಕಚೇರಿಯ ಅನುಭವದ ಆಧಾರದ ಮೇಲೆ ನಿಮಗೆ ಚಾರ್ಟರ್ಡ್‌ ಅಕೌಂಟೆಂಟ್ ಆಗುವ ಆಸಕ್ತಿ ಇದ್ದಲ್ಲಿ ಆ ಕುರಿತು ಸಿ.ಎ., ಸಿ.ಎಂ.ಎ. ಅಥವಾ ಸಿ.ಎಸ್. ಪರೀಕ್ಷಾ ತಯಾರಿ ಮಾಡಿಕೊಳ್ಳಬಹುದು. ಈ ಕೆಲಸದ ಅನುಭವದ ಮತ್ತು ನಿಮ್ಮ ಶಿಕ್ಷಣದ ಆಧಾರದ ಮೇಲೆ ಆಡಿಟಿಂಗ್ ಫರ್ಮ್‌ಗಳಲ್ಲಿ ಕೆಲಸ ಹುಡುಕಬಹುದು. ಇದಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಅಕೌಂಟ್ಸ್ ವಿಭಾಗದಲ್ಲೂ ಕೆಲಸ ನೋಡಬಹುದು. ಸರ್ಕಾರಿ ಉದ್ಯೋಗ ಪಡೆಯುವ ಅಪೇಕ್ಷೆ ಇದ್ದಲ್ಲಿ ಐ.ಬಿ.ಪಿ.ಎಸ್., ಆರ್.ಆರ್.ಬಿ, ಎಸ್.ಬಿ.ಐ. ಬ್ಯಾಂಕಿಂಗ್ ಪರೀಕ್ಷೆಗಳು, ಕರ್ನಾಟಕ ಸರ್ಕಾರದ ಎಫ್.ಡಿ.ಎ., ಎಸ್.ಡಿ.ಎ. ಪರೀಕ್ಷೆ ಇತ್ಯಾದಿಗಳನ್ನು ಪ್ರಯತ್ನಿಸಬಹುದು. ಉಪನ್ಯಾಸಕರಾಗುವ ಆಸಕ್ತಿ ಇದ್ದಲ್ಲಿ ಕಾಲೇಜುಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಸಂಶೋಧನೆ ಮತ್ತು ಮುಂದಿನ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದಲ್ಲಿ ಪಿಎಚ್.ಡಿ. ಪ್ರವೇಶಾತಿಗೂ ತಯಾರಿ ಪ್ರಾರಂಭಿಸಬಹುದು.

ನಿಮ್ಮ ಮುಂದೆ ಅನೇಕ ಆಯ್ಕೆ ಮತ್ತು ಅವಕಾಶಗಳಿವೆ. ಇತರರಿಗಿಂತ ನಿಮ್ಮ ಬಗ್ಗೆ ನಿಮಗೇ ಹೆಚ್ಚು ತಿಳಿದಿರುವುದರಿಂದ ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಿಮ್ಮ ಮುಂದಿನ ನಡೆಯನ್ನು ನಿರ್ಧರಿಸಿ, ಯೋಜನೆ ರೂಪಿಸಿಕೊಂಡು ಮುಂದುವರಿಯಿರಿ.

* ನಾನು ಈಗ ದ್ವಿತೀಯ ಪಿಯುಸಿ ವಿಜ್ಞಾನ ಓದುತ್ತಿದ್ದೇನೆ. ನನಗೆ ಮುಂದೆ ಒಬ್ಬ ಶಾಲಾ ಶಿಕ್ಷಕ ಅಥವಾ ಒಬ್ಬ ಕಾಲೇಜಿನ ಅಧ್ಯಾಪಕ ಆಗುವ ಆಸೆ ಇದೆ. ಅದಕ್ಕೆ ನಾನು ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಸಿ ಕೊಡಿ.

ಅಶೋಕ್, ಊರು ಬೇಡ

ಅಶೋಕ್, ಶಿಕ್ಷಕ ಅಥವಾ ಉಪನ್ಯಾಸಕರಾಗಲು, ಮೊದಲಿಗೆ ನೀವು ಯಾವ ವಿಷಯವನ್ನು ಬೋಧಿಸಲು ಇಚ್ಛಿಸುತ್ತೀರಿ ಎಂದು ನಿರ್ಧರಿಸಿಕೊಳ್ಳಬೇಕು. ಉದಾಹರಣೆಗೆ ನೀವು ನಿಮ್ಮ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳನ್ನು ಓದುತ್ತಿದ್ದಲ್ಲಿ ಅವುಗಳಲ್ಲಿ ಒಂದು ವಿಷಯವನ್ನು ನಿಮ್ಮ ಬೋಧನೆಯ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಅಷ್ಟಲ್ಲದೆ, ನೀವು ಪಿ.ಯು.ಸಿ.ಯಲ್ಲಿ ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ ಇತ್ಯಾದಿ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ಅವುಗಳನ್ನು ನಿಮ್ಮ ಬೋಧನ ವಿಷಯವಾಗಿಯೂ ಆಯ್ದುಕೊಳ್ಳಬಹುದು. ಈ ವಿಷಯಗಳನ್ನು ಆಯ್ದುಕೊಳ್ಳುವಾಗ ನಿಮಗೆ ಆಸಕ್ತಿದಾಯಕ ಎನಿಸುವ ಮತ್ತು ಬೋಧಿಸಲು ಸೂಕ್ತ ಎನಿಸುವ ವಿಷಯವನ್ನು ಆಯ್ದುಕೊಳ್ಳಿ. ನಂತರ ನೀವು ಯಾವ ಹಂತದ ವಿದ್ಯಾರ್ಥಿಗಳಿಗೆ ಬೋಧಿಸಲು ಇಚ್ಛಿಸುತ್ತೀರಿ ಎಂದು ನಿರ್ಧರಿಸಿ.

ನಿಮ್ಮ ಪಿ.ಯು.ಸಿ. ಶಿಕ್ಷಣದ ನಂತರ ನೀವು ಯಾವ ವಿಷಯದಲ್ಲಿ ಶಿಕ್ಷಕರಾಗಬೇಕು ಎಂದುಕೊಂಡಿದ್ದೀರೋ ಆ ವಿಷಯ ಪ್ರಮುಖವಾಗಿರುವಂತೆ ನಿಮ್ಮ ಬಿ.ಎಸ್‌ಸಿ. ಶಿಕ್ಷಣವನ್ನು ಪಡೆಯಿರಿ. ನಿಮ್ಮ ಬಿ.ಎಸ್‌ಸಿ. ಶಿಕ್ಷಣದ ನಂತರ ಯಾವ ಹಂತದ ವಿದ್ಯಾರ್ಥಿಗಳಿಗೆ ಬೋಧಿಸುವ ಯೋಜನೆ ಹಾಕಿಕೊಂಡಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮುಂದಿನ ಶಿಕ್ಷಣದ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಮಿಡ್ಲ್‌ ಸ್ಕೂಲ್ ಮತ್ತು ಪ್ರೌಢಶಾಲೆ ಹಂತದ ವಿದ್ಯಾರ್ಥಿಗಳಿಗೆ ಬೋಧಿಸಲು ಬಿ.ಎಸ್‌ಸಿ. ಮತ್ತು ಬಿ.ಎಡ್. ಶಿಕ್ಷಣ ಮುಗಿದಿರಬೇಕು.

ಪಿ.ಯು.ಸಿ. ಹಂತದ ವಿದ್ಯಾರ್ಥಿಗಳಿಗೆ ಬೋಧಿಸಲು ಆಯಾ ವಿಷಯದಲ್ಲಿ ಬಿ.ಎಸ್‌ಸಿ. ಎಂ.ಎಸ್‌ಸಿ. ಮತ್ತು ಬಿ.ಎಡ್. ಮುಗಿಸಿರಬೇಕು.

ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಬೋಧಿಸಲು ಬಿ.ಎಸ್‌ಸಿ., ಎಂ.ಎಸ್‌ಸಿ. ಮತ್ತು ಯು.ಜಿ.ಸಿ. ನಡೆಸುವ ಎನ್.ಇ.ಟಿ. ಪರೀಕ್ಷೆ ಪಾಸಾಗಿರಬೇಕು.

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೋಧಿಸಲು ಮತ್ತು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಬಿ.ಎಸ್‌ಸಿ., ಎಂ.ಎಸ್‌ಸಿ. ಮತ್ತು ಯು.ಜಿ.ಸಿ. ಎನ್.ಇ.ಟಿ. ಪರೀಕ್ಷೆ ಹಾಗೂ ಪಿಎಚ್.ಡಿ. ಪಡೆದಿರಬೇಕು.

ಈ ಶೈಕ್ಷಣಿಕ ಅರ್ಹತೆಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮುಂದಿನ ಶಿಕ್ಷಣವನ್ನು ಮುಂದುವರಿಸಿ. ಶೈಕ್ಷಣಿಕ ಅರ್ಹತೆಗಳು ಮಾತ್ರವಲ್ಲದೆ, ಉತ್ತಮ ಉಪನ್ಯಾಸಕರಾಗಲು ಒಳ್ಳೆಯ ಸಂವಹನ ಕೌಶಲ, ಓದುವ ಹವ್ಯಾಸ, ಸಂಶೋಧನೆಗಳಲ್ಲಿ ಆಸಕ್ತಿ, ಶೈಕ್ಷಣಿಕ ಮನೋವಿಜ್ಞಾನದ ಕುರಿತಾದ ಜ್ಞಾನ ಇತ್ಯಾದಿಗಳು ಅವಶ್ಯಕವಾಗಿರುತ್ತವೆ. ಹೀಗಾಗಿ ನಿಮ್ಮ ಕಾಲೇಜು ಶಿಕ್ಷಣದ ಜೊತೆಗೆ ಈ ಎಲ್ಲ ಕೌಶಲ ಮತ್ತು ಜ್ಞಾನವನ್ನು ಗಳಿಸಿಕೊಳ್ಳುವುದರ ಬಗ್ಗೆಯೂ ಗಮನವಹಿಸಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT