ಶುಕ್ರವಾರ, ಏಪ್ರಿಲ್ 23, 2021
31 °C

ನಮ್ಮೊಳಗೊಬ್ಬ ನಾಜೂಕಯ್ಯ!

ನಡಹಳ್ಳಿ ವಸಂತ್, ಶಿವಮೊಗ್ಗ Updated:

ಅಕ್ಷರ ಗಾತ್ರ : | |

Prajavani

ಮನೆಗೆ ಆಕೆಯ ಪತಿಯ ಸ್ನೇಹಿತರು ಬಂದಿದ್ದರು. ಕಾಫಿ ಮಾಡಿಕೊಡಲು ಇಷ್ಟವಿಲ್ಲದ ಆಕೆ ‘ಅಯ್ಯೋ, ಹಾಲು ಒಡೆದು ಹೋಗಿದೆ. ಅಪರೂಪಕ್ಕೆ ಬಂದ ನಿಮಗೆ ಕಾಫಿಯನ್ನೂ ಕೊಡಲಾಗುತ್ತಿಲ್ಲ ನೋಡಿ’ ಎಂದಾಗ ಅಲ್ಲಿಯೇ ಇದ್ದ ಆಕೆಯ ನಾಲ್ಕು ವರ್ಷ ವಯಸ್ಸಿನ ಮಗ ಏನೋ ಹೇಳಲು ಹೊರಟಿದ್ದ. ಮಗುವಿನ ಕೈ ಹಿಡಿದು ಒಳಗೆ ಎಳೆದುಕೊಂಡು ಹೋದ ಆಕೆಗೆ ಪಟ್ಟು ಬಿಡದ ಮಗ ‘ಅಮ್ಮಾ, ಫ್ರಿಜ್‌ನಲ್ಲಿ ಹಾಲಿದೆಯಲ್ಲ! ಈಗಷ್ಟೇ ನನಗೆ ಕುಡಿಯಲು ಕೊಟ್ಟಿದ್ದೆ’ ಎಂದು ಕಣ್ಣರಳಿಸಿದ್ದ.

‘ನಾವು ಅವರ ಮನೆಗೆ ಹೋದಾಗ ಅವರು ನಮ್ಮನ್ನು ಸರಿಯಾಗಿ ಮಾತನಾಡಿಸಲಿಲ್ಲ. ಅದಕ್ಕೇ ಅವರಿಗೆ ಕಾಫಿ ಕೊಡಲಿಲ್ಲ’ ಎಂದು ಸುಳ್ಳಿಗೊಂದು ಸಮಜಾಯಿಷಿ ನೀಡಿದಳಾಕೆ.

ನಾಜೂಕನ್ನು ಬೆರೆಸಿ ನಯವಾಗಿ ಸುಳ್ಳು ಹೇಳುವ ಪಾಠ ಮಗುವಿಗೆ ಆರಂಭವಾಗುವುದು ಇಲ್ಲಿಂದಲೇ! ಹೀಗೆ ಕೌಟುಂಬಿಕ ವಾತಾವರಣದಲ್ಲಿನ ಅನುಭವಗಳ ಮೇಲೆ ಮಗು ಹೆಚ್ಚುಹೆಚ್ಚು ನಾಜೂಕುತನವನ್ನು ಕಲಿಯುತ್ತಾ ಹೋಗುತ್ತದೆ. ಹೊರಗಡೆಯ ಜನರ ಜೊತೆ ಮಗು ನಾಜೂಕಾಗಿ ವರ್ತಿಸುವುದನ್ನು ನೀವು ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ. ಆದರೆ ಮಗುವಿನಲ್ಲಿ ಈಗಾಗಲೇ ಮನೆಮಾಡಿರುವ ನಾಜೂಕಯ್ಯ ತನ್ನ ಚಮತ್ಕಾರವನ್ನು ನಿಮ್ಮ ಮೇಲೂ ಪ್ರಯೋಗಿಸಿದಾಗ ವ್ಯಗ್ರಗೊಳ್ಳುತ್ತೀರಿ! ‘ಬಿತ್ತುವುದು ಬೇವು, ಬಯಸುವುದು ಮಾವು’ ಎಂದಂತಾಯಿತಲ್ಲವೇ?

ಇಂತಹ ಸುಳ್ಳುಗಳು ಸಂಬಂಧಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಅನಿವಾರ್ಯ ಎಂದು ಸಾಕಷ್ಟು ಜನ ಅಂದುಕೊಳ್ಳುತ್ತಾರಲ್ಲವೇ? ಹಾಗಿದ್ದರೆ ಯಾರಿಗಾದರೂ ನೋವನ್ನುಂಟು ಮಾಡುವ ಅಥವಾ ಹಾನಿಮಾಡುವ ಉದ್ದೇಶವಿಲ್ಲದ ನಾಜೂಕುತನ ಎಂದು ಕರೆಸಿಕೊಳ್ಳುವ ನಡವಳಿಕೆಗಳು ಹೇಗೆ ಹಾನಿ ಮಾಡುತ್ತಿರುತ್ತದೆ?

ಇದನ್ನು ತಿಳಿದುಕೊಳ್ಳಲು ಕೌಟುಂಬಿಕ ಸಂಬಂಧಗಳಲ್ಲಿನ ಇಂತಹ ನಡವಳಿಕೆಗಳು ನಮ್ಮ ಮನಸ್ಸಿನಲ್ಲಿ ಎಂತಹ ಭಾವನೆಗಳನ್ನು ಮೂಡಿಸುತ್ತದೆ ಎನ್ನುವುದನ್ನು ಗಮನಿಸಬೇಕು. ಹೆಂಡತಿ ತರಕಾರಿ ತರಲು ಹೇಳಿದ್ದು ನೆನಪಿದ್ದರೂ ನಾಳೆ ತಂದರಾಯಿತು ಎಂದು ಸೋಮಾರಿಯಾಗಿರುವ ಗಂಡ ‘ಮರೆತು ಹೋಯಿತು’ ಎನ್ನುವ ಸಬೂಬಿನ ಬೆಣ್ಣೆ ಸವರುತ್ತಾನೆ. ಮಕ್ಕಳು ಚಾಕೋಲೇಟ್ ತರಲು ಹೇಳಿದ್ದಾಗ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದುಕೊಂಡು, ‘ನಿನಗೆ ಬೇಕಾಗಿದ್ದು ಹತ್ತಿರದ ಅಂಗಡಿಯಲ್ಲಿ ಇರಲಿಲ್ಲ’ ಎಂದು ತಪ್ಪಿಸಿಕೊಳ್ಳಬಹುದು. ಪತಿ ಸಂಜೆಗೆ ಸ್ನೇಹಿತರನ್ನು ಕರೆತರುವ ಯೋಚನೆಯಲ್ಲಿದ್ದಾಗ ಅವನ ಗೆಳೆಯರ ಬಗೆಗೆ ಒಳ್ಳೆಯ ಅಭಿಪ್ರಾಯವಿಲ್ಲದ ಪತ್ನಿ ‘ಇವತ್ತು ನನಗೆ ಹುಷಾರಿಲ್ಲ ಕಣ್ರೀ, ಅಡುಗೆ ಮಾಡಕ್ಕಾಗಲ್ಲ’ ಎನ್ನುವ ನೆಪ ಹುಡುಕಬಹುದು. ಹೊರಗೆ ಹೊರಟು ನಿಂತಾಗ ಮಗು ತಾನೂ ಬರುತ್ತೇನೆಂದು ರಚ್ಚೆ ಹಿಡಿದರೆ, ‘ನಾನು ಡಾಕ್ಟರ್ ಹತ್ತಿರ ಹೋಗುತ್ತೇನೆ, ನೀನು ಬಂದ್ರೆ ಚುಚ್ಚಿ ಕೊಡ್ತಾರೆ’ ಎಂದು ನಯವಾಗಿ ಹೆದರಿಸಿ ಸುಮ್ಮನಾಗಿಸುವುದು. ಹೀಗೆ ಹುಡುಕುತ್ತಾ ಹೋದರೆ ನಮ್ಮೆಲ್ಲರ ದಿನನಿತ್ಯದ ನಡವಳಿಕೆಗಳಲ್ಲಿ ಇಂತಹ ಸಾಕಷ್ಟು ನಾಜೂಕುತನವನ್ನು ಗುರುತಿಸಬಹುದು.

ಸಂಬಂಧಕ್ಕೆ ಕುತ್ತು

ಕುಟುಂಬದ ಸದಸ್ಯರ ನಡುವೆ ಆಗಾಗ ಇಂತಹ ನಡವಳಿಕೆಗಳ ವಿನಿಮಯವಾಗುತ್ತಿದ್ದರೆ ಸಂಬಂಧಗಳು ತಮ್ಮ ಸಹಜತೆಯನ್ನು ಕಳೆದುಕೊಳ್ಳುತ್ತವೆ. ನಿಧಾನವಾಗಿ ಇಂತಹ ನಯವಂಚಕತನವು ಸಂಬಂಧಗಳ ಮೂಲಸೆಲೆಯಾದ ನಂಬಿಕೆಯ ಬೇರುಗಳಿಗೆ ಕೊಡಲಿ ಪೆಟ್ಟನ್ನು ನೀಡುತ್ತದೆ. ಅನುಮಾನಗಳು ಹೊಗೆಯಾಡತೊಗಿದಾಗ ಸಣ್ಣಸಣ್ಣ ವಿಚಾರಗಳನ್ನಿಟ್ಟುಕೊಂಡು ಮಹಾಯುದ್ಧಗಳು ನಡೆಯುವುದು ಅಪರೂಪವಲ್ಲ.

ವಿಶ್ವಾಸಾರ್ಹತೆ ನಾಶ

‘ನಮ್ಮ ಮನೆಯವರು ಕೆಟ್ಟವರು ಅಂತೇನಲ್ಲ, ಆದರೆ ಇವರ ಮಾತುಗಳನ್ನು ನಂಬುವುದು ಕಷ್ಟ ಎನ್ನಿಸುತ್ತಿದೆ’ ಇದು ನೊಂದ ಪತ್ನಿಯೊಬ್ಬರ ಅಳಲು. ಹೀಗೆ ಇಬ್ಬರ ನಡುವಿನ ಕಂದಕ ಒಂದೆರಡು ಘಟನೆಗಳಿಂದ ಮೂಡಿರಲು ಸಾಧ್ಯವಿಲ್ಲ ಅಥವಾ ಕೆಲವು ಪ್ರಮುಖ ವಿಚಾರಗಳಲ್ಲಿನ ಇವರ ಭಿನ್ನಾಭಿಪ್ರಾಯಗಳು ಮಾತ್ರ ಇದಕ್ಕೆ ಕಾರಣವಾಗಿರಲಾರದು. ಅಪಾಯಕಾರಿಯಲ್ಲದ ಆಗಾಗ ಹೇಳುವ ಸಣ್ಣಸಣ್ಣ ಸುಳ್ಳುಗಳು ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುತ್ತಿರುವ ಭ್ರಮೆಯಲ್ಲಿ ತೋರಿಸುವ ನಾಜೂಕುತನಗಳೇ ನಿಧಾನವಾಗಿ ಇಬ್ಬರ ನಡುವಿನ ವಿಶ್ವಾಸಾರ್ಹತೆಯನ್ನು ನಾಶಮಾಡುತ್ತದೆ.

ಸರಳ ಸತ್ಯವನ್ನು ಇನ್ನೊಬ್ಬರಿಗೆ ಸಹ್ಯವಾಗುವ ರೀತಿಯಲ್ಲಿ ಹೇಳುವ ಅಭ್ಯಾಸ ಮಾಡಿಕೊಳ್ಳುವುದು ಸಾಧ್ಯವಿದೆ. ಸ್ನೇಹಿತ ಬಂದು ಹಣ ಕೇಳಿದಾಗ ಹಣವಿದ್ದರೂ ಕೊಡಲು ಇಷ್ಟವಿಲ್ಲದಿದ್ದರೆ, ‘ನನ್ನ ಬಳಿ ಹಣವಿಲ್ಲ’ ಎನ್ನುವ ನಾಜೂಕುತನವನ್ನು ಪ್ರದರ್ಶಿಸುವ ಬದಲಾಗಿ ‘ಸ್ನೇಹಿತರಲ್ಲಿ ಹಣಕಾಸಿನ ವ್ಯವಹಾರ ಮಾಡುವುದು ನನಗೆ ಕಷ್ಟವಾಗುತ್ತದೆ ಕ್ಷಮಿಸು’ ಎಂದೇಕೆ ಹೇಳಬಾರದು? ನನ್ನ ಹತ್ತಿರ ಹಣವಿಲ್ಲ ಎನ್ನುವ ಸಬೂಬನ್ನು ಸ್ನೇಹಿತ ನಂಬುವುದಿಲ್ಲ ಎನ್ನುವುದು ಕೂಡ ನಿಮಗೆ ಗೊತ್ತಿರಲೇಬೇಕು. ಏಕೆಂದರೆ ಇಂತಹದೇ ಇನ್ನೊಂದು ಸಂದರ್ಭದಲ್ಲಿ ಎದುರಿಗಿರುವವರು ಹೇಳಿದ ಮಾತು ವಿಶ್ವಾಸಾರ್ಹವಲ್ಲ ಎಂದು ಗೊತ್ತಿದ್ದರೂ ನೀವು ಸುಮ್ಮನಿರುತ್ತೀರಿ. ಅಂದರೆ ಎದುರಿಗಿರುವವರು ಮೌನವಾಗಿರುತ್ತಾರೆ ಅಥವಾ ನಂಬಿದಂತೆ ನಟಿಸುತ್ತಾರೆ ಎಂದರೆ ಅವರು ನಿಮ್ಮ ಮಾತನ್ನು ನಂಬಿರುತ್ತಾರೆ ಎನ್ನುವ ಖಾತ್ರಿಯೇನೂ ಇರುವುದಿಲ್ಲ. ಹಾಗಿದ್ದರೆ ನಾಜೂಕುತನದಿಂದ ನೀವು ಸಾಧಿಸಿದ್ದೇನು? ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದು ಮಾತ್ರ!

ಸರಳ ಸತ್ಯಗಳು ತಾತ್ಕಾಲಿಕವಾಗಿ ಕೆಲವು ಸ್ನೇಹಸಂಬಂಧಗಳಲ್ಲಿ ಬಿರುಕು ಮೂಡಿಸಬಹುದು. ಆದರೆ ನಿಧಾನವಾಗಿ ಹೆಚ್ಚುತ್ತಾ ಹೋಗುವ ನಿಮ್ಮ ವಿಶ್ವಾಸಾರ್ಹತೆ ಉಳಿದ ಸಂಬಂಧಗಳನ್ನು ಗಟ್ಟಿಯಾಗಿ ಉಳಿಸುತ್ತದೆ. ನಾಜೂಕುತನದಿಂದ ಎಲ್ಲರನ್ನೂ ಮೆಚ್ಚಿಸುವ ಭರದಲ್ಲಿ ನಮ್ಮೊಳಗೇ ನಾವು ಖಾಲಿಯಾದಂತೆ ಅನಿಸುವುದನ್ನು ತಪ್ಪಿಸಿ ನಮ್ಮ ಅಸ್ಮಿತೆಯನ್ನು ಧೃಡಪಡಿಸುತ್ತದೆ.

ಆದರೆ ಸರಳವಾಗಿ ಬದುಕುವುದು ಖಂಡಿತಾ ಸರಳವಲ್ಲ! ಇದಕ್ಕಾಗಿ ಸಾಕಷ್ಟು ಕಾಲ ನಿರಂತರವಾಗಿ ಪ್ರಯತ್ನ ಪಡಬೇಕಾಗುತ್ತದೆ. ಸರಳತೆಯ ರುಚಿ ಒಮ್ಮೆ ದೊರಕಿದರೆ ಮನಸ್ಸು ನಿರಾಳವಾಗುವ ಪರಿಯನ್ನು ಅನುಭವಿಸಿಯೇ ಆನಂದಿಸಬೇಕು!

ಮಕ್ಕಳಂತೆ ಬದುಕಿ

ಮಕ್ಕಳು ಸಹಜ ಸರಳ ಜೀವಿಗಳು. ಆದರೆ ನಾವು ಅವರಲ್ಲಿ ನಾಜೂಕುತನದ ಕೃತ್ರಿಮವನ್ನು ತುಂಬುತ್ತೇವೆ. ಹಾಗಾಗಿ ನಾವು ನಾಜೂಕುತನದಿಂದ ಹೊರಬರಬೇಕಾದರೆ ಮಕ್ಕಳಂತೆ ಬದುಕುವುದನ್ನು ಕಲಿಯಬೇಕು. ಇದಕ್ಕಾಗಿಯೇ ಖಲೀಲ್ ಗಿಬ್ರಾನ್ ಹೇಳಿದ್ದು ನೀವು ಮಕ್ಕಳಂತೆ ಇರಲು ಪ್ರಯತ್ನಿಸಿ, ಆದರೆ ಮಕ್ಕಳನ್ನು ನಿಮ್ಮಂತೆ ಮಾಡದಿರಿ. ಏಕೆಂದರೆ ಜೀವನ ಹಿಮ್ಮುಖವಾಗಿ ಹರಿಯುವುದಿಲ್ಲ ಅಥವಾ ನಿನ್ನೆಯಂತೆ ನಾಳೆ ಇರುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು