ಇದು ಖಾಸಗಿಯಲ್ಲ, ಕಾಡಂಚಿನ ಮುಂಟಿಪುರ ಸರ್ಕಾರಿ ಮಾದರಿ ಶಾಲೆ!

7
ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಶಾಲೆ

ಇದು ಖಾಸಗಿಯಲ್ಲ, ಕಾಡಂಚಿನ ಮುಂಟಿಪುರ ಸರ್ಕಾರಿ ಮಾದರಿ ಶಾಲೆ!

Published:
Updated:
Deccan Herald

ಗುಂಡ್ಲುಪೇಟೆ: ಸರ್ಕಾರಿ ಶಾಲೆಯೆಂದರೇ ಮೂಗು ಮುರಿಯುವ ಪೋಷಕರೇ ಹೆಚ್ಚು. ಅಲ್ಲಿ ಮಕ್ಕಳಿಗೆ ಬೇಕಾದ ಮೂಲಸೌಕರ್ಯಗಳು, ಶುಚಿತ್ವ, ಉತ್ತಮ ಪರಿಸರ ಮತ್ತು ಶಿಸ್ತು ಇರುವುದಿಲ್ಲ ಎಂಬುದು ಪೋಷಕರ ಮನೋಭಾವ. ಈ ಕಾರಣಕ್ಕೆ ಮಕ್ಕಳಿಗೆ ಕಾನ್ವೆಂಟ್‌ ಅಥವಾ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ.

ಪೋಷಕರಲ್ಲಿರುವ ಇಂತಹ ಧೋರಣೆಯನ್ನು ಬದಲಾಯಿಸಲು, ತಾಲ್ಲೂಕಿನ ಕಾಡಂಚಿನಲ್ಲಿರುವ ಮುಂಟಿಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಯತ್ನ ಮಾಡುತ್ತಿದೆ. ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಈ ಸರ್ಕಾರಿ ಶಾಲೆ ಇದೆ. ಎಲ್ಲ ಸೌಲಭ್ಯಗಳನ್ನು ಹೊಂದಿರುವ ಶಾಲೆಯು ಇತರ ಶಾಲೆಗಳಿಗೆ ಮಾದರಿಯಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಓಂಕಾರ ಅರಣ್ಯ ವಲಯಕ್ಕೆ ಸೇರಿದ ಈ ಶಾಲೆಯಲ್ಲಿ ಉತ್ತಮವಾದ ಶೈಕ್ಷಣಿಕ ವಾತಾವರಣ, ಉತ್ತಮ ಪರಿಸರ, ಕೈತೋಟ, ಶುದ್ಧ ಕುಡಿಯುವ ನೀರು, ಕೈ ತೊಳೆಯಲು ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಇವೆ.

ಹೆಚ್ಚಾಗಿ ಹಿಂದುಳಿದ ವರ್ಗದ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಮುಖ್ಯ ಶಿಕ್ಷಕ ಜಯರಾಂ ಅವರು ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸದಸ್ಯರ ನೆರವು ಪಡೆದು ದಾನಿಗಳ ಸಹಾಯದಿಂದ ಶಾಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಮಾಡಿದ್ದಾರೆ.

ಶಾಲೆಯಲ್ಲಿ 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಅವರಲ್ಲಿ ಓದುವ ಗೀಳನ್ನೂ ಬೆಳೆಸಿದ್ದಾರೆ. ಈ ಶಾಲೆಯಲ್ಲಿ ಕಲಿತ ಹಲವು ಮಕ್ಕಳು 5ನೇ ತರಗತಿಯಿಂದ ತೇರ್ಗಡೆ ಹೊಂದಿ ಆರನೇ ತರಗತಿಗೆ ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಆದರ್ಶ ವಿದ್ಯಾಲಯ, ಮತ್ತು ನವೋದಯ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ.

ಹಚ್ಚ ಹಸಿರು: ಶಾಲೆಯು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ವಿವಿಧ ಜಾತಿಯ ಹೂವಿನ ಗಿಡಗಳು, ತರಕಾರಿ ಮತ್ತು ಸೊಪ್ಪಿನ ಗಿಡ, ಜೊತೆಗೆ ತೆಂಗು, ಮಾವು, ಹೊಂಗೆ, ಬೇವು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಇಲ್ಲಿ ಬೆಳೆಸಲಾಗಿದೆ.

ಮಧ್ಯಾಹ್ನದ ಬಿಸಿಯೂಟಕ್ಕೆ ಕೆಲ ತರಕಾರಿ ಮತ್ತು ಸೊಪ್ಪುಗಳನ್ನು ಶಾಲಾ ಕೈತೋಟದಲ್ಲೇ ಬೆಳೆಯಲಾಗುತ್ತದೆ. ಪಪ್ಪಾಯ ಬೆಳೆದು ಮಕ್ಕಳಿಗೆ ನೀಡಲಾಗುತ್ತದೆ.

‘ಈ ಎಲ್ಲ ಕೆಲಸಗಳನ್ನು ಮಾಡಲು ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸದಸ್ಯರು ಉತ್ತಮ ಸಹಕಾರ ನೀಡುತ್ತಾರೆ. ಮಕ್ಕಳಿಗಾಗಿ ಸೌಲಭ್ಯಗಳನ್ನು ನೀಡಲು ಹಿಂಜರಿಯುದಿಲ್ಲ. ಖಾಸಗಿ ಶಾಲೆಗಳಂತೆ ಗ್ರಾಮದ ಸರ್ಕಾರಿ ಶಾಲೆಯನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಶಯ. ಅದಕ್ಕಾಗಿ ಉತ್ತಮ ಸಹಕಾರ ನೀಡುತ್ತಾರೆ. ವಿವಿಧ ಸಂಘ ಸಂಸ್ಥೆಗಳ ಸಹಾಯದಿಂದ ಶಾಲೆಗೆ ಕಾಂಪೌಂಡ್‌, ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದೇವೆ. ಶಿಕ್ಷಣ ಇಲಾಖೆಯು ಅಡುಗೆ ಮನೆ ಸೇರಿದಂತೆ ಕೆಲ ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳನ್ನು ನಾವು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ಮುಖ್ಯ ಶಿಕ್ಷಕ ಜಯರಾಂ ಹೇಳುತ್ತಾರೆ.

ಪ್ರಶಸ್ತಿಗಳ ಗರಿ

2018ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಉತ್ತಮ ಪರಿಸರ ಸ್ನೇಹಿ ಶಾಲೆ ಮತ್ತು ಹಸಿರಿನ ಶಾಲೆ ಎಂಬ ಪ್ರಶಸ್ತಿಯನ್ನು ಈ ಶಾಲೆ ಮುಡಿಗೇರಿಸಿಕೊಂಡಿದೆ.

2011ರಲ್ಲಿ ಗುಣಾತ್ಮಾಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ, 2014–15ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಪರಿಸರ ಮಿತ್ರ ಪ್ರಶಸ್ತಿ ಹಾಗೂ 2017ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಸ್ವಚ್ಛ ವಿದ್ಯಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !