ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಕೋರ್ಸ್‌

Last Updated 19 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ನನ್ನ ತಂಗಿ ಪ್ರಸ್ತುತ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೂತಿದ್ದಾಳೆ. ಅವಳಿಗೆ ಮುಂದಿನ ವಿದ್ಯಾಭ್ಯಾಸದಲ್ಲಿ ರಕ್ಷಣಾ ವ್ಯವಸ್ಥೆ ಮತ್ತು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಅದಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಬಗ್ಗೆ ಮತ್ತು ಕಾಲೇಜುಗಳ ಬಗ್ಗೆ ತಿಳಿಸಿ.

ಹೆಸರು, ಊರು ಬೇಡ

ನಿಮ್ಮ ತಂಗಿಗೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇರುವುದರಿಂದ ಈ ಕೆಳಕಂಡ ಕೋರ್ಸ್‌ಗಳನ್ನು ಆರಿಸಿಕೊಳ್ಳಬಹುದು.

ಎಸ್ಎಸ್ಎಲ್‌ಸಿ ಆದ ನಂತರದಲ್ಲಿ:

1. ಡಿಪ್ಲೊಮಾ ಇನ್ ಅಗ್ರಿಕಲ್ಚರ್

2. ಡಿಪ್ಲೊಮಾ ಇನ್ ಅಗ್ರಿಕಲ್ಚರ್ ಎಂಜಿನಿಯರಿಂಗ್

ಈ ಎರಡು ಕೋರ್ಸ್‌ಗಳಿಗೆ 10ನೇ ತರಗತಿಯಲ್ಲಿ ಪಡೆದ ಅಂಕಗಳು ಆಧಾರವಾಗಿರುತ್ತದೆ. ಈ ಕೋರ್ಸ್‌ಗಳಿಗೆ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸಸ್ (ಯುಎಎಸ್) - ಧಾರವಾಡ, ರಾಯಚೂರು, ಬೆಂಗಳೂರಿನಲ್ಲಿ ಅರ್ಜಿ ಹಾಕಬಹುದು.

ಪಿ.ಯು.ಸಿ ಆದ ನಂತರದಲ್ಲಿ ಅನೇಕ ಡಿಗ್ರಿ ಕೋರ್ಸಗಳು ಲಭ್ಯವಿರುತ್ತದೆ: ಬಿಎಸ್‌ಸಿ ಅಗ್ರಿಕಲ್ಚರ್, ಸೇರಿಕಲ್ಚರ್, ಹಾರ್ಟಿಕಲ್ಚರ್ ಮತ್ತು ಫಾರೆಸ್ಟರಿ. ಬಿಎಸ್‌ಸಿ ಕಮ್ಯುನಿಟಿ ಡೆವಲಪ್‌ಮೆಂಟ್ ಮತ್ತು ಬಿಎಸ್‌ಸಿ ಅಗ್ರಿ ಮಾರ್ಕೆಟಿಂಗ್ ಇನ್ನು ಕೆಲವು ಕೋರ್ಸ್‌ಗಳು. ಈ ಎಲ್ಲಾ ಕೋರ್ಸ್‌ಗಳಿಗೆ ಸಿಇಟಿ ಪರೀಕ್ಷೆಯ ಮೂಲಕವೇ ಪ್ರವೇಶ.

ಕಾಲೇಜುಗಳ ಪಟ್ಟಿಗೆ ನೀವು ವೆಬ್‌ಸೈಟಿನಲ್ಲಿ ಶೋಧನೆಯನ್ನು ಮಾಡಬಹುದು.

ನಾನು ಇನ್‌ಫಾರ್ಮೇಶನ್‌ ಸೈನ್ಸ್‌ ಎಂಜಿನಿಯರಿಂಗ್‌ 7ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಇನ್ನು 6 ತಿಂಗಳಲ್ಲಿ ನನ್ನ ಎಂಜಿನಿಯರಿಂಗ್ ಕೋರ್ಸ್ ಮುಗಿಯುತ್ತದೆ. ನಾನು ಬಿಇ ಮುಗಿದ ಮೇಲೆ ಯಾವ ಉದ್ಯೋಗದಲ್ಲಿ ಮುಂದುವರಿಯಬಹುದು ಮತ್ತು ಯಾವ ಕೋರ್ಸ್ ಮಾಡಬಹುದು. ಆ ಕೋರ್ಸ್ ಆಧಾರದ ಮೇಲೆ ಸುಲಭವಾಗಿ ಯಾವ ರೀತಿಯ ಉದ್ಯೋಗ ಗಿಟ್ಟಿಸಿಕೊಳ್ಳಬಹುದು.

ಅಂಬಿಕಾ, ಕಲರ್ಬುಗಿ

ನೀವು ಇನ್‌ಫಾರ್ಮೇಶನ್ ಸೈನ್ಸ್‌ನಲ್ಲಿ ವಿದ್ಯಾಭ್ಯಾಸವನ್ನು ಮುಗಿಸುವ ಹಂತದಲ್ಲಿರುವುದರಿಂದ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುವುದು ಒಳ್ಳೆಯದು.

ಉದ್ಯೋಗಾವಕಾಶಗಳಲ್ಲಿ ನಿಮ್ಮ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಇತ್ತೀಚಿನ ಅತ್ಯಾಧುನಿಕ ತಾಂತ್ರಿಕ ಜ್ಞಾನವನ್ನು ಕೊಡುವ ಮತ್ತು ಅತ್ಯಂತ ಹೆಚ್ಚಿನ ಬೇಡಿಕೆಯಲ್ಲಿರುವ - ಆ್ಯಪ್‌ ಡೆವಲಪ್‌ಮೆಂಟ್‌, ಯುಎಕ್ಸ್‌, ಡೇಟಾ ಸೈನ್ಸ್ , ಎಐ, ಸೈಬರ್ ಸೆಕ್ಯುರಿಟಿ, ಬ್ಲಾಕ್ ಚೈನ್ ಮುಂತಾದ ಕೋರ್ಸ್‌ಗಳಿಗೆ ನೋಂದಾಯಿಸಿಕೊಳ್ಳಬೇಕು.

ನೀವು ಆಯ್ಕೆ ಮಾಡುವ ವಿದ್ಯಾಸಂಸ್ಥೆಯ ಬಗ್ಗೆ ಜಾಗ್ರತೆ ವಹಿಸಿ.

ಬೆಂಗಳೂರಿನಲ್ಲಿಯೇ ಇರುವಂತಹ ಮತ್ತು ಉತ್ತಮ ಉದ್ಯೋಗಗಳನ್ನು ಕಲ್ಪಿಸಿ ಕೊಟ್ಟಿರುವಂತಹ ಸಂಸ್ಥೆಗಳನ್ನೇ ಆಯ್ಕೆ ಮಾಡಿ.

ನಿಮಗೆ ಇನ್ನೊಂದು ಸಲಹೆ ಎಂದರೆ ಹೊಸದಾಗಿ ಪ್ರಾರಂಭವಾಗಿರುವ ಯಾವುದಾದರು ಸಣ್ಣ ಪ್ರಮಾಣದ - ಸ್ಟಾರ್ಟ್ಅಪ್ ಕಂಪನಿಗಳಲ್ಲಿ ಕೆಲಸ ಪಡೆದು ಅವುಗಳ ಜೊತೆಯಲ್ಲಿ ಅನುಭವವನ್ನು ಪಡೆದರೆ ಮುಂದಿನ ನಿಮ್ಮ ಭವಿಷ್ಯಕ್ಕೆ ಒಳಿತಾಗುವುದು.

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು ಮೂರು ವರ್ಷದ ಸೇವಾವಧಿ ಮುಗಿದಿದೆ. ನಾನು ಡಿಇಡಿ ಹಾಗೂ ಗುಲಬರ್ಗಾ ವಿವಿಯಿಂದ ಕಲಾ ಪದವಿ ಪಡೆದಿದ್ದೇನೆ. ಮುಂದಿನ ಪದೋನ್ನತಿಗಾಗಿ ಶಿಕ್ಷಣ ಮುಂದುವರೆಸುವ ಬಗ್ಗೆ ಮಾಹಿತಿ ನೀಡಿ. ದೂರ ಶಿಕ್ಷಣದ ಮೂಲಕ ಒಂದಕ್ಕಿಂತ ಹೆಚ್ಚು ಸ್ನಾತಕೋತ್ತರ ಪದವಿಗಳನ್ನು ಪಡೆಯಬಹುದೇ ತಿಳಿಸಿ.

ಎಮ್. ಆರ್. ದುಬಲಗುಂಡೆ, ಚಿಂಚೋಳಿ

ನೀವು ಬಿಎಡ್ ಕೋರ್ಸ್ ಮುಗಿಸಿ ನಂತರ ಎಂಎಡ್ ಮಾಡಿದರೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತವೆ. ನಿಮಗೆ ಆಸಕ್ತಿ ಇರುವ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರೆ ಒಂದು ಉತ್ತಮ ಶಿಕ್ಷಕ ಆಗುವುದಕ್ಕೆ ಅನುಕೂಲ ಆಗುತ್ತದೆ.

ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರಾಗಬೇಕಾದ ಅರ್ಹತೆಯನ್ನು ಪಡೆಯುವುದಕ್ಕಾಗಿ ಯುಜಿಸಿ–ಎನ್‌ಇಟಿ ಪರೀಕ್ಷೆಯಲ್ಲಿ ಭಾಗವಹಿಸಬಹುದು. ನೀವು ಬಿಎಡ್ ಮಾಡುವ ವಿದ್ಯಾಸಂಸ್ಥೆ ಆಯ್ಕೆ ಮಾಡುವ ಮುನ್ನ ಅದರ ಗುಣಮಟ್ಟ ಮತ್ತು ಹೆಸರುವಾಸಿಯೇ ಅನ್ನುವುದನ್ನು ಪರಿಶೀಲಿಸಿ.

ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪೂರಕ ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿ. ನನಗೆ ಪಶುವೈದ್ಯನಾಗುವ ಆಸೆ. ಆ ಕೋರ್ಸ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು. ನನಗೆ ನಮ್ಮ ದೇಶ ಅಥವಾ ವಿದೇಶಗಳಲ್ಲಿ ಪಶುವೈದ್ಯಕೀಯ ಕೋರ್ಸ್ ಮಾಡಬೇಕೆಂಬ ಆಸೆ ಇದೆ. ಈ ಕೋರ್ಸ್ ಮಾಡುವುದು ಹೇಗೆ ತಿಳಿಸಿ.

ಮಂಜುನಾಥ್, ರಾಯಚೂರು

ಪಶುವೈದ್ಯಕೀಯ ಶಿಕ್ಷಣ ಪಡೆಯಲು ನೀವು ಪಶುವೈದ್ಯಕೀಯ ವಿಜ್ಞಾನದಲ್ಲಿ ಡಿಗ್ರಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು. ಡಿಗ್ರಿ ಮಾಡಲು ಕರ್ನಾಟಕ ಸಿಇಟಿ ಪರೀಕ್ಷೆ ಮೂಲಕ ಒಳ್ಳೆಯ ಕಾಲೇಜಿನಲ್ಲಿ ಸೀಟನ್ನು ಪಡೆಯಬೇಕು. ಈ ವರ್ಷದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್‌ 20.

ಬೇರೆ ರಾಜ್ಯದ ಕಾಲೇಜುಗಳಲ್ಲಿ ಸೇರಲು ನೀವು ನೀಟ್‌ ಪರೀಕ್ಷೆಯನ್ನು ಬರೆಯಬೇಕು. ಈ ಪರೀಕ್ಷೆಯ ದಿನಾಂಕ ಮೇ 5. ಈಗಾಗಲೇ ಈ ವರ್ಷದ ನೀಟ್‌ ಪರೀಕ್ಷೆಗೆ ಅರ್ಜಿ ಪಡೆಯುವ ದಿನಾಂಕ ಮುಗಿದು ಹೋಗಿರುವುದರಿಂದ ಮುಂದಿನ ವರ್ಷದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ

ನಾನು ದಾವಣಗೆರೆಯ ವಿಶ್ವವಿದ್ಯಾನಿಲಯದಲ್ಲಿ ಮೈಕ್ರೊಬಯಾಲಜಿಯಲ್ಲಿ ಎಂಎಸ್‌ಸಿ ಮಾಡುತ್ತಿದ್ದೇನೆ. ಸದ್ಯ 4ನೇ ಸೆಮಿಸ್ಟರ್‌. ಮುಂದೆ ಪಿಎಚ್‌.ಡಿ. ಮಾಡಬೇಕು ಎಂಬ ಆಸೆಯಿದೆ. ಈ ಬಗ್ಗೆ ನನಗೆ ಸಲಹೆ ನೀಡಿ. ಜೊತೆಗೆ ನಾನು ವಿದೇಶದಲ್ಲಿ ಓದಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ. ಈ ಕ್ಷೇತ್ರದಲ್ಲಿ ಮುಂದೆ ನನಗೆ ಯಾವ ರೀತಿಯ ಅವಕಾಶಗಳಿವೆ. ಇದಲ್ಲದೇ ಇನ್‌ಸ್ಪೈರ್‌ ಫೆಲೋಶಿಪ್‌ ಬಗ್ಗೆಯೂ ಮಾಹಿತಿ ನೀಡಿ.

- ಪೂರ್ಣಿಮಾ ಎಂ.ಬಿ., ದಾವಣಗೆರೆ

ಮೈಕ್ರೋಬಯಾಲಜಿಯಲ್ಲಿ ಎಂಎಸ್‌ಸಿ ಅಥವಾ ಪಿಎಚ್.ಡಿ.ಯನ್ನು ಪಡೆದ ಮೇಲೆ ನಿಮಗೆ ಆಸ್ಪತ್ರೆಗಳಲ್ಲಿ, ಕ್ಲಿನಿಕಲ್ ಲ್ಯಾಬೊರೇಟರಿಗಳಲ್ಲಿ, ಸಂಶೋಧನೆ ಸಂಸ್ಥೆಗಳಲ್ಲಿ, ಫೋರೆನ್ಸಿಕ್ ಸೈನ್ಸ್‌ ಲ್ಯಾಬೊರೇಟರಿಗಳಲ್ಲಿ, ಪರಿಸರಕ್ಕೆ ಸಂಬಂಧಪಟ್ಟ ಸಂಸ್ಥೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಆಹಾರಪದಾರ್ಥಗಳ ಉದ್ದಿಮೆಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳಿರುತ್ತವೆ.

ನಿಮ್ಮ ಎಂಎಸ್‌ಸಿ ಮುಗಿದ ನಂತರ ನೀವು ಕೆಳಕಂಡ ವಿಷಯಗಳಲ್ಲಿ ಪಿಎಚ್.ಡಿ. ಪದವಿಯನ್ನು ಪಡೆಯಬಹುದು: ಬಯೊ ಕೆಮಿಸ್ಟ್ರಿ, ಬಯೊ ಟೆಕ್ನಾಲಜಿ, ಬಯೊ ಇನ್‌ಫರ್ಮಾಟಿಕ್ಸ್, ಎನ್ವಿರಾನ್ಮೆಂಟಲ್ ಮೈಕ್ರೋ ಬಯಾಲಜಿ, ಜೆನೆಟಿಕ್ಸ್, ಮೆಡಿಕಲ್ ಮತ್ತು ಮಾಲಿಕ್ಯೂಲರ್ ಬಯಾಲಜಿ, ಕ್ಲಿನಿಕಲ್ ಮೈಕ್ರೋ ಬಯಾಲಜಿ, ಇಮ್ಯುನಾಲಜಿ. ಈ ಕ್ಷೇತ್ರಗಳಲ್ಲಿ ನಿಮ್ಮ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಮುಂದುವರಿಯಬಹುದು.

ನಿಮಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕಾದರೆ, ಅದರಲ್ಲೂ ಅಮೆರಿಕದಲ್ಲಿ ಮಾಡಬೇಕೆಂದಿದ್ದರೆ ನೀವು ಜಿಆರ್‌ಇ ಪರೀಕ್ಷೆಯನ್ನು ತೆಗೆದುಕೊಂಡು, ಟೋಫೆಲ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾದ ಮೇಲೆ ವಿದೇಶದ ವಿಶ್ವವಿದ್ಯಾಲಯಗಳಿಗೆ ಅರ್ಜಿ ನೀಡಬೇಕು.

ನೀವು ಭಾರತದಲ್ಲಿಯೇ ಪಿಎಚ್.ಡಿ. ಮಾಡುವುದಾದರೆ ನಿಮಗೆ ಇನ್‌ಸ್ಪೈರ್‌ ಸ್ಕಾಲರ್‌ಶಿಪ್ ದೊರಕುತ್ತದೆ. ಸುಮಾರು ಒಂದು ಸಾವಿರ ಸ್ಕಾಲರ್‌ಶಿಪ್‌ಗಳನ್ನು ಪ್ರತಿ ವರ್ಷ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ ಇನ್‌ಸ್ಪೈರ್‌ ವೆಬ್‌ಸೈಟ್‌ಗೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT