‘ದೈಹಿಕ ಶಿಕ್ಷಣ’ ಸದೃಢತೆಗೂ ಸೈ; ವೃತ್ತಿಗೂ ಜೈ

6

‘ದೈಹಿಕ ಶಿಕ್ಷಣ’ ಸದೃಢತೆಗೂ ಸೈ; ವೃತ್ತಿಗೂ ಜೈ

Published:
Updated:
ಪಿಎಸ್‌ಐ ಹುದ್ದೆಗಳ ಭರ್ತಿಗಾಗಿ ಬಳ್ಳಾರಿಯ ವಿಮ್ಸ್‌ ಮೈದಾನದಲ್ಲಿ ಸೋಮವಾರ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಬರಿಗಾಲಿನಲ್ಲೇ ಓಡಿದರು.

ಫಿಟ್‌ನೆಸ್ (ದೈಹಿಕ ಸದೃಢತೆ) ಹಾಗೂ ಚಲನಶೀಲತೆ ನಮ್ಮ ದಿನನಿತ್ಯ ಜೀವನದ ಚಟುಚಟಿಕೆಗಳಿಗೆ ಬಹುಮುಖ್ಯ ಅಂಶಗಳು. ಕೆಲವರು ಕೆಲಸದೊತ್ತಡದಲ್ಲಿ ದೇಹಾರೋಗ್ಯ ಕಡೆಗಣಿಸುತ್ತಾರೆ. ಸಾಮಾನ್ಯವಾಗಿ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿರುವವರು, ಕ್ರೀಡಾಸಕ್ತರು ಫಿಟ್‌ನೆಸ್ ಹಾಗೂ ಚಲನಶೀಲತೆಯನ್ನು ಸಿದ್ಧಿಸಿಕೊಂಡು ಆರೋಗ್ಯದಿಂದ ಬದುಕುತ್ತಾರೆ. ಉಳಿದವರು ನಿರಂತರ ಒಂದಿಲ್ಲೊಂದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ.

ಈ ರೀತಿಯಲ್ಲಿ ಫಿಟ್‌ನೆಸ್ ಹಾಗೂ ಚಲನಶೀಲತೆಯನ್ನು ಮಕ್ಕಳಲ್ಲಿ ಶಾಲಾ ದಿನಗಳಿಂದಲೇ ವೃದ್ಧಿಸಲು ನಾವು ಪಾಠದೊಂದಿಗೆ ಆಟಕ್ಕೂ ಆದ್ಯತೆ ಕೊಡಬೇಕಾಗುತ್ತದೆ. ಹೀಗೆ ಮಕ್ಕಳು ಶಾಲಾ ಹಂತದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಮುಂದೆ ವೃತ್ತಿಯಾಗಿ ಬದಲಾಗಲು ಸಾಕಷ್ಟು ಅವಕಾಶಗಳಿವೆ. ಈ ರೀತಿ ಅವಕಾಶಗಳನ್ನು ಒದಗಿಸುವುದೇ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ವೃತ್ತಿಪರ ಕೋರ್ಸ್‌ಗಳು.

ದೈಹಿಕ ಶಿಕ್ಷಣ ಕೋರ್ಸ್‌ಗಳ ಆಯ್ಕೆಯ ತಳಹದಿ

ಪಿಯು, ಪದವಿಯ ನಂತರ ಡಿಪ್ಲೊಮಾ ಇನ್ ಫಿಸಿಕಲ್ ಎಜುಕೇಶನ್ ಹಾಗೂ ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಶನ್ ಕೋರ್ಸ್‌ಗಳು ಲಭ್ಯ ಇವೆ. ಕ್ರೀಡೆಯ ಮೇಲಿನ ಪ್ರೀತಿ, ಸಕ್ರಿಯ ಜೀವನ ಶೈಲಿಯ ಮನೋಭಾವ, ಸವಾಲುಗಳನ್ನು ಎದುರಿಸುವ ಧೈರ್ಯ, ವೈಯಕ್ತಿಕ ಸಾಮರ್ಥ್ಯದ ಮೇಲೆ ವಿಶ್ವಾಸ, ಟೀಂ ಸ್ಪಿರಿಟ್, ಸ್ಪರ್ಧಾ ಮನೋಭಾವ, ಸಂಸ್ಕೃತಿಯ ಗ್ರಹಿಕೆ, ನಾಯಕತ್ವದ ಗುಣ ನಿಮ್ಮಲ್ಲಿ ಇವೆ ಎಂದಾದರೆ ಈ ಕೋರ್ಸ್ ನಿಮಗೆ ಸೂಕ್ತ.

ತಮ್ಮ ಸೌಕರ್ಯ ವಲಯದಿಂದ (ಕಂಫರ್ಟ್ ಝೋನ್) ಹೊರಗುಳಿಯ ಬಯಸುವ ವಿದ್ಯಾರ್ಥಿಗಳು, ಹೊಸ ಸಾಮಾಜಿಕ, ದೈಹಿಕ ಮತ್ತು ಭಾವನಾತ್ಮಕ ಸವಾಲುಗಳನ್ನು ಎದುರಿಸುವ ಆಕಾಂಕ್ಷೆ ಉಳ್ಳವರು, ಬದಲಾವಣೆಗೆ ಆಸ್ಪದ ನೀಡುವ ಮನೋಭಾವ ಇರುವವರು ಈ ಕೋರ್ಸ್ ಆಯ್ದುಕೊಳ್ಳಬಹುದು.

ಕಲಿಕೆಗೆ ಅವಕಾಶಗಳು

ಪಿಯುಸಿ ನಂತರ ದೈಹಿಕ ಶಿಕ್ಷಣದಲ್ಲಿ ಎರಡು ವರ್ಷದ ಡಿಪ್ಲೊಮಾ ಪದವಿಯನ್ನೂ (ಡಿ.ಪಿ.ಇಡಿ), ಸ್ನಾತಕ ಪದವಿ ನಂತರ ಬಿ.ಪಿ.ಇಡಿ ಪದವಿಯನ್ನು ಅಭ್ಯಸಿಸಬಹುದು. ಇದನ್ನು ಹೊರತುಪಡಿಸಿ ದೈಹಿಕ ಶಿಕ್ಷಣದಲ್ಲಿ ಬಿ.ಎ ಇನ್ ಫಿಸಿಕಲ್ ಎಜುಕೇಶನ್, ಎಂ.ಪಿ.ಇಡಿ (ಸ್ನಾತಕೋತರ ಕೋರ್ಸ್), ಎಂ.ಫಿಲ್ ಹಾಗೂ ಪಿಎಚ್.ಡಿ ಮಾಡಿಕೊಳ್ಳಲೂ ಅವಕಾಶಗಳಿವೆ.

ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಕಲಿಕೆ

ಎರಡು ವರ್ಷಗಳ ಡಿ.ಪಿ.ಇಡಿ (ಡಿಪ್ಲೊಮಾ ಇನ್ ಫಿಸಿಕಲ್ ಎಜುಕೇಶನ್) ವ್ಯಾಸಂಗದಲ್ಲಿ ಅನೇಕ ಸೈದ್ಧಾಂತಿಕ ವಿಷಯಗಳೊಂದಿಗೆ ಪ್ರಾಯೋಗಿಕ ಕಲಿಕೆಗೂ ಮಹತ್ವ ನೀಡಲಾಗಿದೆ. ಬೆಳಿಗ್ಗೆ 6 ರಿಂದ 8 ಹಾಗೂ ಸಂಜೆ 4ರಿಂದ 6 ಪ್ರತಿನಿತ್ಯ ಪ್ರಾಯೋಗಿಕ ತರಬೇತಿಗಳಿದ್ದು, ಇಲ್ಲಿ ಮೂಲ ಕ್ರೀಡೆಗಳೆಂದು ಪರಿಗಣಿಸುವ ಕೊಕ್ಕೊ, ಕಬಡ್ಡಿ, ವಾಲಿಬಾಲ್, ಹ್ಯಾಂಡ್‌ಬಾಲ್ ಸೇರಿ 16 ಕ್ರೀಡೆಗಳನ್ನು ಪರಿಚಯಿಸಲಾಗುತ್ತದೆ. ಈ 16 ಕ್ರೀಡೆಗಳೊಂದಿಗೆ ವಿದ್ಯಾರ್ಥಿಗಳು ತಮಗಿಷ್ಟವಾದ ಎರಡನ್ನು ಐಚ್ಛಿಕ (ಮೇಜರ್ ಎಲೆಕ್ಟಿವ್) ವಿಷಯಗಳನ್ನು ಆರಿಸಿಕೊಂಡು ಹೆಚ್ಚಿನ ಅಧ್ಯಯನ ಮಾಡಬಹುದು. ಸಿ.ಪಿ.ಇಡಿ ಅಧ್ಯಯನ ಕ್ರಮದಲ್ಲಿ ಕ್ರೀಡೆಗಳನ್ನು ಅಥ್ಲೆಟಿಕ್ಸ್, ರನ್ನಿಂಗ್, ಜಂಪ್ ಹಾಗೂ ಗ್ರೂಪ್ ಎಂಬುದಾಗಿ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.

ದೈಹಿಕ ಶಿಕ್ಷಣ ಪಠ್ಯದಲ್ಲೇನಿದೆ?

ದೈಹಿಕ ಶಿಕ್ಷಣದ ಶಾಸ್ತ್ರೋಕ್ತ ಅಧ್ಯಯನದಲ್ಲಿ ಪ್ರಧಾನವಾಗಿ ಅಂಗರಚನಾ ಶಾಸ್ತ್ರ, ದೈಹಿಕ ಶಿಕ್ಷಣದ ತತ್ವಗಳು, ಒಲಿಂಪಿಕ್ಸ್‌ನ ವಿಧಾನ, ಬೆಳವಣಿಗೆ, ದೇಹದಾರ್ಢ್ಯ, ಆರೋಗ್ಯ ಮತ್ತು ಸಂರಕ್ಷಣೆ, ಶಾಲೆಗಳಲ್ಲಿ ದೈಹಿಕ ಶಿಕ್ಷಣ, ತೂಕ ಹಾಗೂ ಪೌಷ್ಟಿಕಾಂಶ, ಆಫ್್ಸಸೆಟ್ಟಿಂಗ್, ಮನೋವಿಜ್ಞಾನ, ಕ್ಷೇಮ ಹಾಗೂ ಉಪಚಾರ, ಮೇಲ್ವಿಚಾರಣೆ ಹಾಗೂ ನಿರ್ವಹಣೆ, ಯೋಗ, ತಾಂತ್ರಿಕತೆ ಹಾಗೂ ದೈಹಿಕ ಶಿಕ್ಷಣ, ಜೈವಿಕ ಕಾರ್ಯವಿಧಾನ, ಕ್ರೀಡಾ ಮನೋವಿಜ್ಞಾನ ವಿಷಯಗಳನ್ನು ಬೋಧಿಸಲಾಗುತ್ತದೆ.

ಭವಿಷ್ಯದ ಅವಕಾಶಗಳೇನು?

ಡಿ.ಪಿ.ಇಡಿ, ಬಿ.ಪಿ.ಇಡಿ, ಬಿ.ಎ ಇನ್ ಫಿಸಿಕಲ್ ಎಜುಕೇಶನ್ ಹಾಗೂ ಎಂ.ಪಿ.ಇಡಿಕೋರ್ಸ್‌ಗಳನ್ನು ಮುಗಿಸಿಕೊಂಡರೆ ಶಾಲೆ– ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ದೈಹಿಕ ಶಿಕ್ಷಣ ನಿರ್ದೇಶಕ, ಸಹಾಯಕ ಪ್ರಾಧ್ಯಾಪಕ, ಕ್ರೀಡಾ ನಿರ್ವಾಹಕ, ಫಿಸಿಕಲ್ ಥೆರಪಿಸ್ಟ್, ಫಿಸಿಕಲ್ ಎಜುಕೇಶನ್ ಟ್ರೇನರ್, ಹೆಲ್ತ್ ಎಜುಕೇಟರ್, ಸ್ಪೋರ್ಟ್ಸ್ ಕೋಚ್, ಫಿಟ್ನೆಸ್ ಬೋಧಕ, ಅಥ್ಲೆಟಿಕ್ ತರಬೇತುದಾರ, ಸಮುದಾಯ ದೈಹಿಕ ಶಿಕ್ಷಣ ತರಬೇತುದಾರ, ಪೌಷ್ಟಿಕಾಂಶ ತಜ್ಞ, ವೈಯಕ್ತಿಕ ಕ್ರೀಡಾ ತರಬೇತುದಾರ, ಪುನರ್ವಸತಿ ತಜ್ಞ, ಭೌತಿಕ ಚಿಕಿತ್ಸಕ, ಸಹಾಯಕ ಶರೀರ ಶಾಸ್ತ್ರಜ್ಞ, ಕ್ರೀಡಾ ಮನೋತಾಜ್ಞ, ಕಿನಿಸಿಯಾಲಜಿಸ್ಟ್ (ದೇಹಚಲನಾ ಶಾಸ್ತ್ರಜ್ಞ), ಕ್ರೀಡಾ ಪತ್ರಿಕೊದ್ಯಮ... ಹೀಗೆ ಇನ್ನೂ ಅನೇಕ ವೃತ್ತಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಜೊತೆಗೆ ಕ್ರೀಡಾ ಸಾಧಕರಿಗೆಂದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಯಲ್ಲಿ ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಯೋಗದ ‘ಯೋಗಾಯೋಗ’

ಈ ಮುಂಚೆ ಯೋಗ ದೈಹಿಕ ಶಿಕ್ಷಣದ ಒಂದು ಭಾಗವಾಗಿ ಗುರುತಿಸಿಕೊಂಡಿದ್ದ ಯೋಗ ಈಗ ಪ್ರತ್ಯೇಕವಾಗಿ ‘ಯೋಗ ವಿಜ್ಞಾನ’ ಎಂದು ಗುರುತಿಸಿಕೊಂಡಿದೆ. ಯೋಗ ತರಬೇತಿಗೆಂದೇ ಪ್ರತ್ಯೇಕ ಕಾಲೇಜು, ಕೋರ್ಸ್‌ಗಳು ಹುಟ್ಟಿಕೊಂಡಿವೆ. ಯೋಗಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಸಿಕ್ಕ ನಂತರವಂತೂ ಯೋಗ ಹಾಗೂ ಯೋಗ ಪಟುಗಳ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬಹುತೇಕ ದೈಹಿಕ ಶಿಕ್ಷಣ ಶಿಕ್ಷಕರು ‘ಯೋಗ ಪಟು’ ಆಗಿ ತಮ್ಮ ಯೋಗಾಯೋಗ ಕಂಡುಕೊಳ್ಳುತ್ತಿದ್ದಾರೆ.

ಸ್ವಾವಲಂಬನೆಯ ದಾರಿ

ಫಿಟ್‌ನೆಸ್‌ಗೆ ಹೆಚ್ಚು ಮಹತ್ವವಿರುವ ಈ ಕಾಲದಲ್ಲಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಈ ಕ್ಷೇತ್ರ ಅತ್ಯುತ್ತಮ ಆಯ್ಕೆ. ದಿನವಿಡೀ ಆಟೋಟಗಳಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳು ಅತ್ಯಂತ ಚೈತನ್ಯಮಯವಾಗಿ ಕಲಿಯುತ್ತಾರೆ. ಆಗಾಗ ನಡೆಯುವ ಕ್ರೀಡಾ ಸ್ಪರ್ಧೆಗಳು ಟೂರ್ನಮೆಂಟ್‌ಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಮಿಗಿಲಾಗಿ ಹೆಚ್ಚಿನ ವಿದ್ಯಾರ್ಥಿಗಳು, ಸ್ವಂತ ಕೋಚಿಂಗ್ ಸೆಂಟರ್, ಕ್ಲಬ್‌ಗಳನ್ನು ತೆರೆದು ಸ್ವಾವಲಂಬಿಗಳಾಗಿ ಇತರರಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ
ಚಂದ್ರು ಪೂಜಾರ, ದೈಹಿಕ ಶಿಕ್ಷಣ ಕ್ಷೇತ್ರ ತಜ್ಞ

ಹುದ್ದೆಗಳ ನೇಮಕಾತಿಯೂ ಮುಖ್ಯ

ಎಲ್ಲರೂ ನಮ್ಮ ದೇಶದ ಕ್ರೀಡಾ ಸಾಧನೆ ಕಳಪೆಯಾಗಿದೆ ಎಂದು ದೂರುತ್ತಾರೆ. ಆದರೆ, ಶಾಲಾ ಮಟ್ಟದಿಂದಲೇ ದೈಹಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಮರೆಯುತ್ತಾರೆ. ರಾಜ್ಯ ಸರ್ಕಾರ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಂಡು ದಶಕ ಕಳೆದಿದೆ. ಕೇಂದ್ರ ಮಟ್ಟದಲ್ಲಿ ಸಿ.ಬಿ.ಎಸ್‌.ಇ ಶಾಲೆಗಳಲ್ಲಿ ದೈಹಿಕ ಶಿಕ್ಷಣ ವಿಷಯವನ್ನು ಕಡ್ಡಾಯಗೊಳಿಸಲಾಗಿದೆ. ಮುಂಚೆ ರಾಜ್ಯ ಸರ್ಕಾರಿ ಶಾಲೆಗಳಲ್ಲಿಯೂ ದೈಹಿಕ ಶಿಕ್ಷಣ ವಿಷಯ ಕಡ್ಡಾಯವಾಗಿತ್ತು. ಈಚೆಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಇಲ್ಲದ್ದರಿಂದ ಶಾಲೆಗಳಲ್ಲಿ ಆಟ ಎಂಬುದೇ ಮರೆತು ಹೋಗಿದೆ. ವಿದ್ಯಾರ್ಥಿಗಳು ಬರೀ ಪುಸ್ತಕದ ಹುಳು ಆಗುತ್ತಿದ್ದಾರೆ. ಕ್ರೀಡೆಯಲ್ಲಿ ಆಸಕ್ತಿ ಇರುವ ಸಾಮಾನ್ಯ ಶಿಕ್ಷಕರೇ ಅನಿವಾರ್ಯವಾಗಿ ಕಾಟಾಚಾರಕ್ಕೆ ವಾರ್ಷಿಕ ಕ್ರೀಡಾಕೂಟಗಳನ್ನು ಆಯೋಜಿಸಬೇಕಿದೆ. ರಾಜ್ಯ ಸರ್ಕಾರ ಅಗತ್ಯವಿರುವಷ್ಟು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಂಡರೆ ದೈಹಿಕ ಶಿಕ್ಷಣ ಮಹಾವಿದ್ಯಾಲಯಗಳೂ ಉಳಿಯುತ್ತವೆ. ಅಲ್ಲದೇ ಶಾಲಾ ಮಕ್ಕಳೂ ಕ್ರೀಡಾ ಸಾಧನೆ ಮೆರೆಯುತ್ತಾರೆ. ಇದನ್ನು ಪೋಷಕರು, ಅಧಿಕಾರಿಗಳು, ನಮ್ಮನ್ನಾಳುವ ಜನಪ್ರತಿನಿಧಿಗಳು ಎಲ್ಲರೂ ಅರಿತುಕೊಳ್ಳಬೇಕು
ರಾಯನಗೌಡ ಹೊಸೂರ, ಪ್ರಾಂಶುಪಾಲ, ಶ್ರೀ ಚನ್ನಬಸವೇಶ್ವರ ಡಿ.ಪಿ.ಇಡಿ ಕಾಲೇಜು, ಹುಬ್ಬಳ್ಳಿ

‘ಇತರ’ ಕೆಲಸಗಳಿಗೆ ಸೀಮಿತ

‘ದೈಹಿಕ ಶಿಕ್ಷಣ ಶಿಕ್ಷಕರನ್ನು ಗ್ರೇಡ್‌–1 ಎಂದು, ಇತರ ವಿಷಯ ಶಿಕ್ಷಕರನ್ನು ಗ್ರೇಡ್‌–2 ಎಂದು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ, ಅದು ಹೆಸರಿಗಷ್ಟೇ ಗ್ರೇಡ್‌. ಗ್ರೇಡ್‌–1 ಎಂದು ಕರೆಯಿಸಿಕೊಂಡ ಮಾತ್ರಕ್ಕೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸೌಲಭ್ಯಗಳೇನೂ ಸಿಗುವುದಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹೋದ್ಯೋಗಿ ಶಿಕ್ಷಕರು, ಆಯಾ ಶಾಲೆಯ ಆಡಳಿತ, ಸರ್ಕಾರ ನಡೆಸಿಕೊಳ್ಳುವ ರೀತಿ ದೇವರಿಗೇ ಪ್ರೀತಿ. ಕೆಲ ಶಾಲೆಗಳಲ್ಲಂತೂ ದೈಹಿಕ ಶಿಕ್ಷಣ ಶಿಕ್ಷಕರನ್ನೂ ‘ಇತರ’ ಕೆಲಸಗಳಿಗೆ ಸೀಮಿತಗೊಳಿಸಿರುತ್ತಾರೆ. ಅವರು ಸಿಪಾಯಿ, ಗುಮಾಸ್ತರು ಮಾಡುವ ಕೆಲಸ ಮಾಡಬೇಕು. ಈ ರೀತಿಯ ನಡವಳಿಕೆಯನ್ನು ಕೈಬಿಡಬೇಕು. ಈ ನಿಟ್ಟಿನಲ್ಲಿ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು ಹೇಳಿದ ಮಾತುಗಳು ಪ್ರಸ್ತುತ. ಅವರು ಹೇಳಿದಂತೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡಿಕೊಳ್ಳದ ಸರ್ಕಾರಗಳಿಗೆ ‘ಯೋಗ ದಿನ’ ಆಚರಿಸುವ, ಯೋಗದ ಹೆಸರಿನಲ್ಲಿ ಪ್ರಚಾರ ಪಡೆಯುವ ನೈತಿಕ ಹಕ್ಕಿಲ್ಲ’ ಎಂಬುದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಪ್ರೌಢಾಶಾಲೆ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರ ಆಕ್ರೋಶದ ನುಡಿ.

ಧಾರವಾಡ ಜಿಲ್ಲೆಯ ದೈಹಿಕ ಶಿಕ್ಷಣ ತರಬೇತಿ ಸಂಸ್ಥೆಗಳು

* ಕರ್ನಾಟಕ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಧಾರವಾಡ– ದೂ: 0836-2215265
* ಕೆ.ಜಿ.ನಾಡಿಗೇರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಧಾರವಾಡ– ದೂ: 0836–2790127
* ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಹುಬ್ಬಳ್ಳಿ– ಮೊ: 94486 31400

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !