ಸೋಮವಾರ, ಅಕ್ಟೋಬರ್ 21, 2019
21 °C

ಅನ್‌ಸ್ಕೂಲಿಂಗ್‌ ಕೌಶಲ ಅಭಿವೃದ್ಧಿಗೆ ಆದ್ಯತೆ

Published:
Updated:

ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗಿ ಕಲಿಕೆ ಮಾಡುವುದು, ಅಲ್ಲಿನ ಸಾಮಾನ್ಯ ಶಿಸ್ತಿನ ಚೌಕಟ್ಟಿಗೆ ಒಳಪಡುವುದು; ಅಲ್ಲಿ ಅಳವಡಿಸಿಕೊಂಡಿರುವ ಪಠ್ಯಕ್ರಮಕ್ಕೆ ಮಕ್ಕಳು ಹೊಂದಿಕೊಂಡು ಕಲಿಯುವುದು ಒಂದು ಕಡೆ. ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಅವರದೇ ಆದ ಒಂದು ಪಠ್ಯಕ್ರಮವಿದ್ದರೆ, ಕೇಂದ್ರೀಯ ವಿದ್ಯಾಲಯಗಳಲ್ಲಿ ಸಿಬಿಎಸ್‌ಸಿ ಮಾದರಿ ಇರುತ್ತದೆ. ಇನ್ನೊಂದು ಐ.ಸಿ.ಎಸ್.ಸಿ. ಇದು ಸಾಂಪ್ರದಾಯಕ ಶಿಕ್ಷಣ. ಇಲ್ಲಿ ಹೇಳ ಹೊರಟಿರುವುದು ಇವೆಲ್ಲಕ್ಕಿಂತ ವಿಭಿನ್ನವಾದುದು. ಅಂದರೆ, ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಮಕ್ಕಳನ್ನು ತಮ್ಮ ಸುತ್ತಮುತ್ತಲಿನ ಪ್ರಪಂಚದ ವಿದ್ಯಮಾನಗಳ ಮೂಲಕ ಕಲಿಯುವಂತೆ ಮಾಡುವ ಶಿಕ್ಷಣ ವಿಧಾನ. ಇದು ಅಸಾಂಪ್ರದಾಯಕ ಶಿಕ್ಷಣ ಪದ್ಧತಿ (ಅನ್‌ಸ್ಕೂಲಿಂಗ್‌).

ನಿರ್ದಿಷ್ಟ ಪಠ್ಯವಿಲ್ಲ

ಹೌದು, ಈ ಪದ್ಧತಿ ಸಾಂಪ್ರದಾಯಕ ಶಿಕ್ಷಣಕ್ಕಿಂತ ಭಿನ್ನವಾಗಿದೆ. ಆದರೆ ಮನೆ ಶಿಕ್ಷಣ(ಹೋಮ್‌ ಸ್ಕೂಲಿಂಗ್‌) ವೇನಲ್ಲ. ಹೋಮ್‌ ಸ್ಕೂಲಿಂಗ್‌ನಲ್ಲಿ ಕಲಿತರೂ ಕೂಡ ಪಠ್ಯಕ್ರಮ ಇರುತ್ತದೆ. ಆದರೆ ಅನ್‌ಸ್ಕೂಲಿಂಗ್‌ನಲ್ಲಿ ಯಾವುದೇ ನಿರ್ದಿಷ್ಟ ಪಠ್ಯವಿಲ್ಲ. ನಿತ್ಯದ ಚಟುವಟಿಕೆಗಳಾದ ಆಟ, ಮನೆಗೆಲಸ, ಅಡುಗೆ, ಸಂಗೀತ, ನೃತ್ಯ, ತಂತ್ರಜ್ಞಾನದ ಜೊತೆಗೆ ಮನೆಯ ಕುಟುಂಬದ ಸದಸ್ಯರು, ಸ್ನೇಹಿತರ ಜೊತೆ ಸಂವಹನ, ಪ್ರವಾಸದ ಮೂಲಕ ಕಲಿಕೆಗೆ ಒತ್ತು ನೀಡಲಾಗುತ್ತದೆ.

ಅಂದರೆ ಅವರಿಗೆ ಹೊರಜಗತ್ತಿನ ಆಗುಹೋಗುಗಳಿಗೆ ಹೆಚ್ಚು ತೆರೆದುಕೊಳ್ಳುವ, ಒಳಗೊಳ್ಳುವ ಅವಕಾಶವಿರುತ್ತದೆ. ಹೊಸ ಬಗೆಯ ಚಟುವಟಿಕೆಗಳು, ಅವಕಾಶಗಳಿಗೆ ಮಕ್ಕಳ ಮನಸ್ಸು ತೆರೆದುಕೊಂಡು, ಅವುಗಳನ್ನು ತಮ್ಮದಾಗಿಸಿಕೊಳ್ಳುವುದೇ ಈ ಅನ್‌ಸ್ಕೂಲಿಂಗ್‌ ಪದ್ಧತಿ ಎನ್ನಬಹುದು.

ಈ ವಿಧಾನದಲ್ಲಿ ಮಕ್ಕಳು ತಮ್ಮ ಸಮ ವಯಸ್ಕರಂತೆ ಶಾಲಾ ಸಮವಸ್ತ್ರ, ಬೆನ್ನಿನ ಮೇಲೆ ಪುಸ್ತಕಗಳ ಹೊರೆಯ ಗೊಡವೆಯೇ ಇಲ್ಲದೇ ಆಟ– ಪಾಠಗಳು, ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಅರಿತು ಕಲಿಯುವ ಅಭ್ಯಾಸ ಮತ್ತು ಹೊಸತನ್ನು ಕಂಡಾಗ ಅದರ ಆಳಕ್ಕೇ ಹೋಗಿ ತಿಳಿಯುವ ರೀತಿಯಾಗಿದೆ. ಇದರಲ್ಲಿ ಅವರು ಜೀವನ ಕೌಶಲದ ಪಾಠವನ್ನು ನೇರವಾಗಿ ಕಲಿಯುತ್ತಾರೆ.

ಸಾಂಪ್ರದಾಯಕವಾಗಿ ನಾವು ಏನೇ ಕಲಿತರೂ ಅದು ನಮ್ಮ ನಿಜ ಜೀವನದ ಪಯಣದ ಹಾದಿಯಲ್ಲಿ ಒಂದು ಹೆಜ್ಜೆ ಮಾತ್ರ. ಉಳಿದಂತೆ ನಾವು ಕಲಿಯುವುದೆಲ್ಲ ನಾವು ಭಾಗವಹಿಸುವ ದೈನಂದಿನ ಚಟುವಟಿಕೆಗಳಲ್ಲಿನ ಲೋಪದೋಷಗಳನ್ನು ಅರಿತು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳುವುದು. ಇಲ್ಲಿ ನಾವು ಕೆಲಸ ಮಾಡುವ ಸ್ಥಳದಲ್ಲಿ ದೊರಕುವ ಅವಕಾಶ, ಸಲಹೆ ಮತ್ತು ನಮ್ಮ ಸಮಾಜದ ಸುತ್ತಮುತ್ತಲಿನವರನ್ನು ಅರಿಯುವ ಪ್ರಯತ್ನ ಇರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ರೀತಿಯ ಚಟುವಟಿಕೆ ಸಾಕಷ್ಟು ವ್ಯಾಪಕವಾಗಿ ಇದೆ. ನಮಗೆಲ್ಲ ತಿಳಿದಿರುವಂತೆ ಕ್ರಿಕೆಟ್ ಆಟ ಇಂದು ಅದರಲ್ಲಿ ತೊಡಗಿಸಿಕೊಳ್ಳುವ ಆಟಗಾರರಿಗೆ ಆರ್ಥಿಕ ನೆಮ್ಮದಿ ದೊರಕಿಸುವಂತಹುದು. ಹಿಂದೆ, ಈ ಆಟ ಪಾಠಗಳಲ್ಲಿ ಅದ್ವಿತೀಯ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ರೂಪವಾಗಿ ಸರ್ಕಾರಿ ಅಥವಾ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ದೊರೆಯುತ್ತಿತ್ತು. ಆದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಆಟಗಾರರಿಗೆ ನಿಯಮಿತ ಸಂಭಾವನೆ ಬಹಳ ಹಿಂದಿನಿಂದಲೇ ಇದೆ.

ಜೀವನ ಕಲೆ

ನಮ್ಮ ದೇಶದ ಪರಿಸ್ಥಿತಿಯನ್ನು ಗಮನಿಸಿದಾಗ ಅತ್ಯಂತ ಕಡಿಮೆ ಸಾಂಪ್ರದಾಯಕ ಶಿಕ್ಷಣ ಹೊಂದಿದ ಬಹು ಪಾಲು ಜನರು ತಾವು ಅನಿವಾರ್ಯವಾಗಿ ಮಾಡಲೇ ಬೇಕಾದ ಕೆಲಸವನ್ನು ರೂಢಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಇದರಲ್ಲಿ ಗಾರೆ ಕೆಲಸ, ಬಡಗಿ, ಚಮ್ಮಾರ, ಪೇಂಟರ್, ಆಟೊಮೊಬೈಲ್, ಹೋಟೆಲ್ ಉದ್ಯಮ ಮೊದಲಾದ ಸ್ಥಳಗಳಲ್ಲಿ ಕೆಲಸ ಕಲಿತು ಮುಂದಿನ ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲಿ ಹಲವೆಡೆ ಮನೆಯಲ್ಲಿ ಹಿರಿಯರು ರೂಢಿಸಿಕೊಂಡು ಬಂದಂತಹ ಕೆಲಸಗಳನ್ನೇ ಮಕ್ಕಳು ಮುಂದುವರಿಸಿಕೊಂಡು ಬಂದಿರುತ್ತಾರೆ. ಇದಕ್ಕೆ ಅವರಿಗೆ ಅಗತ್ಯವಾದ ತರಬೇತಿ ಅವರ ಮನೆಯಲ್ಲೇ ಆಗಿರುತ್ತದೆ. ಇಂಥವರು ದಾಟಿ ಬಂದಿರುವ ಹಾದಿ ಸುಗಮವೇನಲ್ಲ. ಸಾಕಷ್ಟು ಏಳುಬೀಳುಗಳನ್ನು ಸಮರ್ಥವಾಗಿ ಎದುರಿಸಿ ಜೀವನ ನಡೆಸುವ ಕಲೆಯನ್ನು ರೂಢಿಸಿಕೊಂಡಿರುತ್ತಾರೆ. ಅನೇಕ ವಾಹನ ದುರಸ್ತಿ ಗ್ಯಾರೇಜ್‌ಗಳಲ್ಲಿ ಹಲವು ಮಕ್ಕಳು ಅನಿವಾರ್ಯವಾಗಿ ದುಡಿಯುವಂತಾಗಿರುತ್ತದೆ. ಹೀಗೆ ಚಿಕ್ಕ ವಯಸ್ಸಿನಲ್ಲೇ ಕೈಯಲ್ಲಿ ಸ್ಪ್ಯಾನರ್ ಹಿಡಿದು ಬೆಳೆದ ಇವರಿಗೆ ಆ ವಿಷಯದಲ್ಲಿನ ಬುದ್ಧಿಮತ್ತೆಯ ಆಳವೆಷ್ಟಿರುತ್ತದೆ ಎಂದರೆ ಅಲ್ಲಿ ದುರಸ್ತಿಗಾಗಿ ಬರುವ ವಾಹನಗಳ ಎಂಜಿನ್ ಶಬ್ದದಿಂದಲೇ ಅದರಲ್ಲಿನ ತೊಂದರೆ ಏನೆಂಬುದನ್ನು ಗ್ರಹಿಸಬಲ್ಲವರಾಗಿರುತ್ತಾರೆ. ಈ ರೀತಿಯ ಅಸಾಂಪ್ರದಾಯಕ ಶಿಕ್ಷಣದಿಂದಲೇ ಇಂಥವರು ಬದುಕಿಗೆ ಅಗತ್ಯವಾದ ಜೀವನ ಕೌಶಲವನ್ನು ಗಳಿಸಿರುತ್ತಾರೆ.

ಜಾನ್ ಹೋಲ್ಟ್ ಎಂಬ ಹೆಸರಾಂತ ಶಿಕ್ಷಣ ತಜ್ಞ ಹೇಳುವಂತೆ ಇದನ್ನು ಹೋಮ್ ಸ್ಕೂಲಿಂಗ್, ಅಂದರೆ ಮನೆಯಲ್ಲೇ ಶಿಕ್ಷಣ ನೀಡುವ ಪದ್ಧತಿಯ ಒಂದು ಭಾಗವೆನ್ನಬಹುದು. ಆದರೆ ಅದರಲ್ಲಿನ ವಿಧಾನ ಇದಕ್ಕಿಂದ ಭಿನ್ನವಾದುದು. ಅದರಲ್ಲಿ ಮಕ್ಕಳು ಶಾಲೆಗೆ ಹೋಗದಿದ್ದರೂ ಅವರು ಕಲಿಯುವ ರೀತಿ ಸಾಂಪ್ರದಾಯಕ ಪಠ್ಯ ಪದ್ಧತಿಯನ್ನೇ ಅನುಸರಿಸಿರುತ್ತದೆ. ಹೋಲ್ಟ್ ಅವರನ್ನು ‘ಅನ್‌ಸ್ಕೂಲಿಂಗ್‌ನ ಜನಕ’ ಎನ್ನುತ್ತಾರೆ.

ಅನ್‌ಸ್ಕೂಲಿಂಗ್‌ನ ಮೂಲ ತತ್ವವೆಂದರೆ ಅದರಲ್ಲಿ ಕಾಣುವ ಕಲಿಕೆಯ ಉತ್ಸಾಹ, ಆಸಕ್ತಿ, ಕುತೂಹಲ ಇವುಗಳು ಸಾಮಾನ್ಯ ಶಿಕ್ಷಣ ಪದ್ಧತಿಯಲ್ಲಿ ಕಾಣುವುದಿಲ್ಲ. ಏಕೆಂದರೆ ಆ ಮಕ್ಕಳ ಪಾಠ ಪ್ರವಚನಗಳು ಒಂದೇ ಅಳತೆಯದಾಗಿರುತ್ತದೆ. ಪ್ರತಿ ಮಕ್ಕಳೂ ಒಂದೇ ರೀತಿಯ ಪಠ್ಯಕ್ರಮದಲ್ಲಿ ಕಲಿಯಬೇಕಾಗುತ್ತದೆ. ಇಲ್ಲಿ ಪ್ರತಿ ಮಗುವಿನ ಆಸಕ್ತಿಯನ್ನು ಬೇರೆ ಬೇರೆಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.

ಮಕ್ಕಳನ್ನು ಈ ರೀತಿಯ ಅಸಾಂಪ್ರದಾಯಕ ಶಿಕ್ಷಣದಲ್ಲಿ ತೊಡಗಿಸುವುದೆಂದರೆ ಅಲ್ಲಿ ಅವರ ಪೋಷಕರ ಪಾತ್ರ ಏನೂ ಇರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮಕ್ಕಳಿಗೆ ಅವರ ಮಾರ್ಗದರ್ಶನ ಅತ್ಯವಶ್ಯ. ಸಾಮಾನ್ಯವಾಗಿ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ನೀಡುವ ಅವಶ್ಯಕತೆಗಳು ಈ ಮಕ್ಕಳಿಗೂ ಬೇಕೇ ಬೇಕು.

ಈ ಪದ್ಧತಿ ಥ್ರಿಲ್‌ ಎನಿಸಿದರೂ ಇದರಲ್ಲೂ ಅನುಕೂಲಗಳ ಜೊತೆ ಅನಾನುಕೂಲಗಳೂ ಇವೆ. ಹೀಗಾಗಿ ಪೋಷಕರು ಬಹಳ ಎಚ್ಚರಿಕೆಯಿಂದ ನಿರ್ಧಾರಕ್ಕೆ ಬರಬೇಕಾಗುತ್ತದೆ. ಮಗುವಿನ ಆಸಕ್ತಿ, ನಡವಳಿಕೆ, ಗುಣಗಳು ಇವುಗಳನ್ನೆಲ್ಲ ನೋಡಿಕೊಂಡು ಯಾವ ರೀತಿಯ ಶಿಕ್ಷಣ ನೀಡಬೇಕು ಎಂಬ ನಿರ್ಧಾರಕ್ಕೆ ಬರುವುದು ಒಳಿತು. ಹಾಗೆಯೇ ಮಕ್ಕಳಿಗೂ ಅದು ಹೊಂದುವಂತಿರಬೇಕು. ಪಠ್ಯೇತರ ಚಟುವಟಿಕೆ ಇಷ್ಟವಿದ್ದರೆ ಯಾವುದರಲ್ಲಿ ತೊಡಗಿಸಿಕೊಳ್ಳಬೇಕು ಎಂಬುದನ್ನು ಮಗುವಿಗೇ ಬಿಡಿ.

ಅನುಕೂಲಗಳು

* ಮಗು ಸ್ವಕಲಿಕೆ ಬಗ್ಗೆ ಒಲವು ಬೆಳೆಸಿಕೊಂಡು ಇದು ಬದುಕಿನುದ್ದಕ್ಕೂ ನಿರಂತರ ಕಲಿಕೆ ಎನಿಸಿಕೊಳ್ಳುತ್ತದೆ.

* ಮಕ್ಕಳಿಗೆ ಕಲಿಕೆ ಕುರಿತು ಸ್ವಪ್ರೇರಣೆ ಸಿಗುತ್ತದೆ. ತಮ್ಮ ಗುರಿಯನ್ನು ಸಾಧಿಸಲು ಇದು ಉತ್ತೇಜನ ನೀಡುವುದಲ್ಲದೇ ಬಾಹ್ಯ ಒತ್ತಡ ಇರುವುದಿಲ್ಲ.

* ಮಗು ಯಾವುದೇ ಒಂದು ನಿಗದಿತ ವೇಳಾಪಟ್ಟಿ ಅನುಸರಿಸುವ ಅವಶ್ಯಕತೆ ಇರುವುದಿಲ್ಲ. ತಮ್ಮ ಜೈವಿಕ ಗಡಿಯಾರಕ್ಕೆ ಅನುಗುಣವಾಗಿ ನಡೆದುಕೊಂಡರೆ ಸಾಕು. ತಮ್ಮ ಮನಸ್ಸು ಯಾವುದನ್ನು ಬಯಸುತ್ತದೋ ಅದರಂತೆ ನಡೆದುಕೊಳ್ಳುವ ಅವಕಾಶ ಇಲ್ಲಿದೆ.

* ಇದು ಮಕ್ಕಳಲ್ಲಿ ಹುದುಗಿರುವ ಆಂತರಿಕ ಪ್ರತಿಭೆಯನ್ನು ಚಿಗುರಿಸುತ್ತದೆ.

* ಮಕ್ಕಳಿಗೆ ನಿಜವಾದ ಪ್ರಪಂಚದ ಅನುಭವ ಚರ್ವಿತ ಚರ್ವಣವಾಗಿ ಕಾಣುವುದಲ್ಲದೇ ಯಾವುದಕ್ಕೆ ಪ್ರಾಮುಖ್ಯತೆ ನೀಡುವುದರಿಂದ ತಮಗೆ ಸರಿ ದಾರಿಯಲ್ಲಿ ನಡೆಯುವುದು ಸಾಧ್ಯ ಎನ್ನುವ ಅನುಭವ ಅವರಿಗೆ ಸಿಗುತ್ತದೆ.

ಅನಾನುಕೂಲಗಳು

* ಸೋಮಾರಿ ಮಕ್ಕಳಿಗೆ ಇದು ಸರಿ ಹೋಗುವುದಿಲ್ಲ.

* ಈ ರೀತಿಯ ಕಲಿಕೆಗೆ ಪೋಷಕರಲ್ಲಿ ಒಬ್ಬರಾದರೂ ಮನೆಯಲ್ಲೇ ಇರುವಂತಹವರಾಗಿರಬೇಕು. ಹೊಸ ಬಗೆಯ ಚಟುವಟಿಕೆ ನೀಡಲು ಸಮಯ ಹಾಗೂ ಸಹನೆಯ ಅಗತ್ಯವಿರುವುದರಿಂದ ಪೋಷಕರು ಇದಕ್ಕೆ ಸಿದ್ಧರಿರಬೇಕು.

* ಸಾಮಾಜಿಕ ಕೌಶಲಗಳಲ್ಲಿ ಅನುಭವ ಪಡೆಯಬೇಕಾದರೆ ಈ ಕಲಿಕೆಯಲ್ಲಿ ಅವಕಾಶವಿಲ್ಲ. ಅಂದರೆ ಮಗು ತನ್ನದೇ ವಯಸ್ಸಿನ ಇತರ ಮಕ್ಕಳ ಜೊತೆ ಬೆರೆಯಲು ಅವಕಾಶ ಸಿಗಲಾರದು. ಮಗು ಮುಂದೆ ಉದ್ಯೋಗದಲ್ಲೋ, ಉದ್ಯಮದಲ್ಲೋ ಯಶಸ್ವಿಯಾಗಬಹುದು, ಆದರೆ ಒಂಟಿತನ ಬೆಳೆಸಿಕೊಳ್ಳಬಹುದು.

* ಕಲಿಕೆ ಎಂಬುದು ಈಗ ಗಳಿಕೆಯ ಜೊತೆ ಜೋಡಣೆಯಾಗಿದೆ. ಅದೇ ರೀತಿ ಈಗಿನ ಉದ್ಯೋಗ ಮಾರುಕಟ್ಟೆಯೂ ಇದೆ. ಮಗು ಮುಂದೆ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಬೇಕಾದರೆ ಒಳ್ಳೆಯ ಶಾಲಾ– ಕಾಲೇಜುಗಳಿಂದ ಪದವಿ ಸರ್ಟಿಫಿಕೇಟ್‌ ಪಡೆದಿರಬೇಕಾಗುತ್ತದೆ. ಅದೇ ಕುಟುಂಬದ ಉದ್ಯಮವನ್ನು ಮುಂದುವರಿಸಿದರೆ ಅಥವಾ ನವೋದ್ಯಮ ಶುರು ಮಾಡಿದರೆ ಇದರ ಅವಶ್ಯಕತೆ ಇರುವುದಿಲ್ಲ.

Post Comments (+)