ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಳಿ ಉದ್ಯಮದ ಬಾದ್‌ಶಾ ಬಾಹುಬಲಿ ಮುತ್ತಿನ ..!

ನಿತ್ಯವೂ ಕಿಕ್ಕಿರಿದ ಜನಸಂದಣಿ; ಕೋಟಿ, ಕೋಟಿ ವಹಿವಾಟು
Last Updated 17 ಅಕ್ಟೋಬರ್ 2018, 12:54 IST
ಅಕ್ಷರ ಗಾತ್ರ

ಚಡಚಣ: ಸಾಧಿಸುವ ಛಲ, ಕೆಲಸದಲ್ಲಿ ಶ್ರದ್ಧೆಯೊಂದಿದ್ದರೆ ಸಾಕು; ತಾನಂದುಕೊಂಡಿರುವ ಕ್ಷೇತ್ರದಲ್ಲಿ ಸಾಧನೆಗೈಯಬಹುದು, ಎಲ್ಲೆಡೆ ಕೀರ್ತಿ ಗಳಿಸಬಹುದು ಎಂಬುದಕ್ಕೆ ನೈಜ ನಿದರ್ಶನ ಪಟ್ಟಣದ ಜವಳಿ ಉದ್ಯಮಿಗಳಾದ ಬಾಹುಬಲಿ ಮುತ್ತಿನ ಹಾಗೂ ಅಜಿತ ಮುತ್ತಿನ ಸಹೋದರರು.

ನಿತ್ಯವೂ ಸಹಸ್ರ, ಸಹಸ್ರ ಸಂಖ್ಯೆಯ ಗ್ರಾಹಕರು ಭೇಟಿ ನೀಡುವ ಸ್ಥಳ. ಕೋಟಿ, ಕೋಟಿ ರೂಪಾಯಿ ವಹಿವಾಟು ನಡೆಯುವ ಬೆರಳೆಣಿಕೆಯ ರಾಷ್ಟ್ರದ ಜವಳಿ ಅಂಗಡಿಗಳಲ್ಲಿ ಬಾಹುಬಲಿ ಮುತ್ತಿನ ಚಡಚಣರ ಅಂಗಡಿಯೂ ಒಂದಾಗಿರುವುದು ಹೆಮ್ಮೆಯ ವಿಷಯ.

ರೇಮಂಡ್ಸ್‌ ಕಂಪನಿ ಪ್ರತಿ ಮೂರು ವರ್ಷಕ್ಕೊಮ್ಮೆ ನೀಡುವ 2017–18ನೇ ಸಾಲಿನ ‘ಟಾಪ್‌ ರಿಟೈಲ್‌ ಡೀಲರ್‌ ಇನ್‌ ಶರ್ಟಿಂಗ್ಸ್‌, ಶೂಟಿಂಗ್ಸ್‌’ ರಾಷ್ಟ್ರ ಮಟ್ಟದ ಪ್ರಶಸ್ತಿ, ಪದಕ ಬಾಹುಬಲಿ ಮುತ್ತಿನ ಸಹೋದರರಿಗೆ ಲಭಿಸಿದೆ. 2012-13ರಲ್ಲಿ ಸಿಯಾರಾಮ್ ಕಂಪನಿ, ಆದಿತ್ಯ ಬಿರ್ಲಾ ಕಂಪನಿ ಇದೇ ಪ್ರಶಸ್ತಿ ಹಾಗೂ ಪದಕ ಸಹೋದರರಿಗೆ ಲಭಿಸಿರುವುದು ರಾಜ್ಯದ ಜವಳಿ ಉದ್ಯಮದಲ್ಲಿ ಸಂತಸದ ವಿಷಯವಾಗಿದೆ.

1981ರಲ್ಲಿ ಪುಟ್ಟ ಹಳೆಯ ಮನೆಯಲ್ಲಿ ಈ ಅಂಗಡಿ ಆರಂಭಿಸಲಾಗಿತ್ತು. ಆಗ ನಿತ್ಯ ವಹಿವಾಟು ₹ 1000 ದಾಟುತ್ತಿರಲಿಲ್ಲ. ಬಾಹುಬಲಿ ಮುತ್ತಿನ ಬಟ್ಟೆ ಗಂಟು ಕಟ್ಟಿಕೊಂಡು, ಸೈಕಲ್‌ ಮೇಲೆ ಚಡಚಣ ಸುತ್ತಲಿನ ಗ್ರಾಮಗಳಲ್ಲಿ ನಡೆಯುವ ಸಂತೆ, ಸಂತೆ ಅಲೆದು ತಮ್ಮ ವ್ಯಾಪಾರ ವೃದ್ಧಿಸಿಕೊಂಡರು. ಕುಟುಂಬದ ಮೂಲ ಕಸುಬು ಬಳೆ ಮಾರಾಟ, ತೊಡಿಸುವುದು.

ಅಂಗಡಿ ವೈಶಿಷ್ಟ್ಯ:
ನೆಲಮಹಡಿ ಸೇರಿದಂತೆ ಮೂರು ಮಹಡಿಗಳಿವೆ. ಇದಕ್ಕೆ ಪುಟ್ಟದಾದ ದ್ವಾರ ಬಾಗಿಲಿದೆ. ಅಂಗಡಿ ಪ್ರವೇಶಿಸಿದರೆ ಸಾಕು ರಾಶಿ ರಾಶಿ ಹೊಸ ಬಟ್ಟೆಗಳು. ಬಲಭಾಗದಲ್ಲಿ ಕ್ಯಾಶ್ ಕೌಂಟರ್. ಹತ್ತಕ್ಕೂ ಹೆಚ್ಚು ಮಂದಿ ನಿರಂತರವಾಗಿ ಬಿಲ್‌ ಮಾಡುವುದನ್ನು ಕಾಣಬಹುದು.

ಒಳ ಹೊಕ್ಕಂತೆ ಹತ್ತಾರು ವಿಭಾಗ. ಸ್ಯಾರಿ, ಶರ್ಟಿಂಗ್‌, ರೆಡಿಮೇಡ್, ಚಾದರ, ಜಮಖಾನೆ... ಹೀಗೆ ವಿವಿಧ ವಿಭಾಗಗಳು ಒಂದೊಂದೆಡೆ. ಒಟ್ಟಾರೆ ಬಾಗಿಲಿಗೆ ಹಾಕುವ ಮ್ಯಾಟ್, ಚಾಪೆಯಿಂದ ಹಿಡಿದು ಮದುವೆ, ಮುಂಜಿಗೆ ಬೇಕಾದ ಎಲ್ಲ ತರಹದ ಬಟ್ಟೆ ಕೈಗೆಟುಕುವ ಬೆಲೆಯಲ್ಲಿ ಇಲ್ಲಿ ಲಭ್ಯ.

ಮುಂಜಾನೆಯಿಂದ ತಡರಾತ್ರಿವರೆಗೂ ವಹಿವಾಟು ನಡೆಯಲಿದೆ. ಖರೀದಿಗಾಗಿ ಬರುವ ಅಪಾರ ಸಂಖ್ಯೆಯ ಗ್ರಾಹಕರು ತಮಗಿಷ್ಟದ ಬಟ್ಟೆ ಖರೀದಿಸಿ, ಕ್ಯಾಶ್‌ ಕೌಂಟರ್‌ಗೆ ಬಂದು ಬಿಲ್‌ ಕೊಡುತ್ತಾರೆ. ಯಾವಾಗಲೂ ಅಂಗಡಿಯೊಳಗೆ ನೂಕು ನುಗ್ಗಲು ಇರುತ್ತದೆ.

ರಾಜ್ಯದ ಎಲ್ಲೆಡೆಯ ಗ್ರಾಹಕರ ಜತೆ, ನೆರೆಯ ಮಹಾರಾಷ್ಟ್ರ, ಗೋವಾದಿಂದಲೂ ಬಟ್ಟೆ ಖರೀದಿಗೆ ಜನರು ಬರುವುದು ವಿಶೇಷ. 500ಕ್ಕೂ ಹೆಚ್ಚು ಕಾರ್ಮಿಕರು ಪಾಳಿಯಂತೆ ಇಲ್ಲಿ ಕೆಲಸ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT