ಮತ ಎಣಿಕೆಗೆ ಕ್ಷಣಗಣನೆ, ಚಾಮರಾಜನಗರದ ನೂತನ ಸಂಸದ ಯಾರು?

ಸೋಮವಾರ, ಜೂನ್ 17, 2019
29 °C
ಲೋಕಸಭಾ ಚುನಾವಣೆ: ಅಧಿಕೃತ ಫಲಿತಾಂಶಕ್ಕೆ ಸಂಜೆವರೆಗೂ ಕಾಯಬೇಕು

ಮತ ಎಣಿಕೆಗೆ ಕ್ಷಣಗಣನೆ, ಚಾಮರಾಜನಗರದ ನೂತನ ಸಂಸದ ಯಾರು?

Published:
Updated:
Prajavani

ಅಂಕಿ ಅಂಶ

16,86,023 ಕ್ಷೇತ್ರದ ಮತದಾರರ ಸಂಖ್ಯೆ

12,68,173 ಮತ ಚಲಾಯಿಸಿದವರು

75.22% ಕ್ಷೇತ್ರದಲ್ಲಿ ಆಗಿದ್ದ ಮತದಾನದ ಪ್ರಮಾಣ

ಚಾಮರಾಜನಗರ: ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಜನಸಾಮಾನ್ಯರು ಒಂದು ತಿಂಗಳಿನಿಂದ ಕುತೂಹಲದಿಂದ ಕಾಯುತ್ತಿದ್ದ ಸಮಯ ಬಂದಿದೆ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. 

ಕ್ಷೇತ್ರದ ನೂತನ ಸಂಸದರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದರ ಸ್ಪಷ್ಟ ಚಿತ್ರಣ ಗುರುವಾರ ಮಧ್ಯಾಹ್ನದ ಹೊತ್ತಿಗೆ ಸಿಗಲಿದೆ. ಅಧಿಕೃತ ಫಲಿತಾಂಶಕ್ಕೆ ಸಂಜೆಯವರೆಗೂ ಕಾಯಬೇಕಾಗಬಹುದು.

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿರುವ ಈ ಬಾರಿಯ ಚುನಾವಣೆಯಲ್ಲಿ ಎರಡು ಬಾರಿಯ ಸಂಸದ ಆರ್‌. ಧ್ರುವನಾರಾಯಣ ಅವರು ಗೆದ್ದು ಹ್ಯಾಟ್ರಿಕ್‌ ಸಾಧಿಸುತ್ತಾರೋ ಅಥವಾ ಐದು ಬಾರಿ ಕ್ಷೇತ್ರದ ಸಂಸದರಾಗಿದ್ದ ಅನುಭವಿ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್‌ ಅವರು ಜಯಶಾಲಿಯಾಗಿ ಎರಡು ದಶಕಗಳ ಬಳಿಕ ಮತ್ತೆ ಲೋಕಸಭೆಗೆ ಆಯ್ಕೆಯಾಗುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

10 ಮಂದಿ ಚುನಾವಣಾ ಕಣದಲ್ಲಿದ್ದರೂ ಒಂದು ಕಾಲದಲ್ಲಿ ಒಂದೇ ‍ಪ‍ಕ್ಷದಲ್ಲಿದ್ದುಕೊಂಡು, ಆತ್ಮೀಯ ಒಡನಾಡಿಗಳಾಗಿದ್ದ ಆರ್‌. ಧ್ರುವನಾರಾಯಣ ಮತ್ತು ವಿ.ಶ್ರೀನಿವಾಸ ಪ್ರಸಾದ್‌ ಅವರ ನಡುವೆ ಸಮಬಲದ ಹೋರಾಟ ಏರ್ಪಟ್ಟಿದೆ. ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದರಿಂದ ಜನಸಾಮಾನ್ಯರಲ್ಲಿದ್ದ ಕೌತುಕ ಮತ್ತಷ್ಟು ಹೆಚ್ಚಿದೆ.

ತಾವು ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಕ್ಷೇತ್ರದಾದ್ಯಂತ ಇರುವ ಬೆಂಬಲಿಗರನ್ನು ನಂಬಿರುವ ಆರ್‌.ಧ್ರುವನಾರಾಯಣ ಅವರು ಗೆಲ್ಲುವ ದೃಢವಿಶ್ವಾಸದಲ್ಲಿದ್ದಾರೆ.

‘ಸಂಸದನಾಗಿ ಹತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದೇನೆ. ಇದು ಜನರಿಗೂ ಗೊತ್ತಿದೆ. ಸಮೀಕ್ಷೆಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಗೊಂದಲಕಾರಿಯಾಗಿವೆ. ಒಂದೊಂದು ಒಂದೊಂದು ರೀತಿಯಾಗಿ ಹೇಳುತ್ತಿವೆ. ಹಾಗಾಗಿ, ಅದನ್ನು ನಾನು ನಂಬುವುದಿಲ್ಲ. ಕ್ಷೇತ್ರದ ವಾಸ್ತವಾಂಶ ನನಗೆ ಚೆನ್ನಾಗಿ ಗೊತ್ತಿದೆ’ ಎಂದು ಧ್ರುವನಾರಾಯಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು ಬಿಟ್ಟು ಹನೂರು, ಕೊಳ್ಳೇಗಾಲ, ತಿ.ನರಸೀಪುರ, ವರುಣಾ ಮತ್ತು ಎಚ್‌.ಡಿ.ಕೋಟೆಗಳಲ್ಲಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ.

‘ನನ್ನ ಗೆಲುವಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮತದಾನದ ದಿನ ಎಂಟೂ ಕ್ಷೇತ್ರಗಳ ಮತಗಟ್ಟೆಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದ್ದೇವೆ. ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಜೆಡಿಎಸ್‌ನವರು ಕೂಡ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಕೆಲವು ಕಡೆ ಗೊಂದಲ ಉಂಟಾದರೂ ನನಗೇ ಮುನ್ನಡೆ ಸಿಗಲಿದೆ’ ಎಂದು ಧ್ರುವನಾರಾಯಣ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಹೆಚ್ಚಿದ ಆತ್ಮವಿಶ್ವಾಸ: ಎರಡು –ಮೂರು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿಯುತ್ತಲೇ, ಕಮಲ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಕೊನೆ ಕ್ಷಣದಲ್ಲಿ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಕ‌ಣಕ್ಕಿಳಿಸಿ ಕಾಂಗ್ರೆಸ್‌ ಅನ್ನು ಅಚ್ಚರಿಯಲ್ಲಿ ಕೆಡವಿದ್ದ ಬಿಜೆಪಿಯು ಪ್ರಧಾನಿ ಮೋದಿ ಅವರ ಅಲೆ, ಯಡಿಯೂರಪ್ಪ ವರ್ಚಸ್ಸು ಮತ್ತು ಶ್ರೀನಿವಾಸ ಪ್ರಸಾದ್‌ ಅವರ ಅನುಭವವನ್ನು ನೆಚ್ಚಿಕೊಂಡಿತ್ತು.

ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡು ಮತ್ತು ಎಚ್‌.ಡಿ.ಕೋಟೆಗಳಲ್ಲಿ ಪಕ್ಷಕ್ಕೆ ಮುನ್ನಡೆ ಸಿಗಲಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. 

‘ವಾತಾವರಣ ಆಶಾದಾಯಕವಾಗಿದೆ. ಸಮೀಕ್ಷೆಗಳನ್ನು ನೋಡಿ ನಾನು ಹೇಳುತ್ತಿಲ್ಲ. ಮತದಾನದ ನಂತರ ಎಲ್ಲ ಎಂಟೂ ಕ್ಷೇತ್ರಗಳಿಗೂ ಭೇಟಿ ನೀಡಿದ್ದೇನೆ. ಜನರು, ಮುಖಂಡರು ಬೆಂಬಲಿಸಿದ್ದಾರೆ. ಮತದಾರರು ನನ್ನ ಬಗ್ಗೆ ಒಲವು ತೋರಿದ್ದಾರೆ’ ಎಂದು ವಿ.ಶ್ರೀನಿವಾಸ ಪ್ರಸಾದ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಿರೀಕ್ಷೆ ಹುಸಿ?: ಬಹುಜನ ಸಮಾಜ ಪಕ್ಷವು ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ, ಮತದಾನದ ನಂತರ ಪಕ್ಷದ ಮುಖಂಡರ ಮಾತು ಕೇಳಿದರೆ, ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡಲು ವಿಫಲವಾದಂತೆ ಕಾಣುತ್ತಿದೆ.

ತಾವು ಪ್ರತಿನಿಧಿಸುತ್ತಿರುವ ಕೊಳ್ಳೇಗಾಲದಲ್ಲೇ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿಲ್ಲ ಎಂದು ಅಲ್ಲಿನ ಶಾಸಕ ಎನ್‌.ಮಹೇಶ್ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. 

‘ವೈಯಕ್ತಿಕವಾಗಿ ಗೆಲುವು ಕಷ್ಟ ಇದೆ ಎಂದು ಅನಿಸುತ್ತಿದೆ. ಕ್ಷೇತ್ರದ ಎಲ್ಲ ಜನರನ್ನು, ಸಮುದಾಯಗಳನ್ನು ತಲುಪಲು ನಮಗೆ ಸಾಧ್ಯವಾಗಿಲ್ಲ. ಆದರೆ, ಪಕ್ಷಕ್ಕೆ ಒಳ್ಳೆಯ ಮತಗಳು ಬರಲಿವೆ. ಈ ಚುನಾವಣೆಯಲ್ಲಿ ನಾವು ಶುಭಾರಂಭ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷದ ಸಂಘಟನೆ ಮಾಡಬೇಕಾಗಿದೆ’ ಎಂದು ಬಿಎಸ್‌ಪಿ ಅಭ್ಯರ್ಥಿ ಡಾ.ಶಿವಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಜೆ ಹೊತ್ತಿಗೆ ಫಲಿತಾಂಶ

ಈ ಬಾರಿ ಒಂದು ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳ ವಿವಿಪ್ಯಾಟ್‌ನ ಮತ ಖಾತರಿ ಪತ್ರಗಳನ್ನು ಲೆಕ್ಕ ಹಾಕಬೇಕಾಗಿರುವುದರಿಂದ ಅಧಿಕೃತ ಫಲಿತಾಂಶ ಘೋಷಣೆ ವಿಳಂಬವಾಗಲಿದೆ.

ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭಗೊಂಡರೂ ಅಂತಿಮ ಫಲಿತಾಂಶ ಪ್ರಕಟಿಸುವಾಗ ಸಂಜೆ ಆಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಟ್ಟು 21 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಎಲ್ಲ ಸುತ್ತುಗಳು ಮುಗಿದ ನಂತರ ವಿವಿಪ್ಯಾಟ್‌ ಪತ್ರಗಳ ಎಣಿಕೆ ನಡೆಯಲಿದೆ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ 9 ಕೊಠಡಿಗಳ ಹಾಕಲಾಗಿರುವ 110 ಮೇಜುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ.

ಬಿಗಿ ಬಂದೋಬಸ್ತ್‌:  ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಹೆದ್ದಾರಿ ಬದಿಯಲ್ಲೇ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಪಾಸ್‌ ಇಲ್ಲದವರಿಗೆ ಒಳ ಪ್ರವೇಶಿಸುವುದಕ್ಕೆ ಅವಕಾಶ ಇಲ್ಲ. ಸಾಕಷ್ಟು ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.‌ 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !