ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರೆಲ್ಲ ಸಸ್ಯಾಹಾರಿಗಳೇ? ಕೆ.ಸಿ. ವೇಣುಗೋಪಾಲ್‌ ಅವರ ಜೊತೆ ಸಂದರ್ಶನ

ದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಿಜೆಪಿ– ವ್ಯಂಗ್ಯ
Published 15 ಏಪ್ರಿಲ್ 2024, 0:26 IST
Last Updated 15 ಏಪ್ರಿಲ್ 2024, 0:26 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಕಾಂಗ್ರೆಸ್‌ನ ಚುನಾವಣಾ ಸಿದ್ಧತೆ, ಮೋದಿ ವರ್ಚಸ್ಸು ಮತ್ತು ಧ್ರುವೀಕರಣ ರಾಜಕಾರಣ, ಪಕ್ಷ ಘೋಷಿಸಿರುವ ‘ಗ್ಯಾರಂಟಿ’ಗಳ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಈ ಸಲ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ

*ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಯಾವ ರೀತಿ ಸಾಧನೆ ಮಾಡಲಿದೆ ಎಂದು ನೀವು ನಿರೀಕ್ಷಿಸುತ್ತಿದ್ದೀರಿ? ಪಕ್ಷದ ಚುನಾವಣಾ ಸಿದ್ಧತೆ ಹೇಗಿದೆ? 

ಪಕ್ಷವು ಈ ಸಲ ಉತ್ತಮ ಸಾಧನೆ ಮಾಡಲಿದೆ. ಇತ್ತೀಚಿನ ಬೆಳವಣಿಗೆಗಳಿಂದಾಗಿ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ನಾವು ಚುನಾವಣಾ ಪ್ರಚಾರವನ್ನು ಬಹಳ ಮುಂಚಿತವಾಗಿಯೇ ಪ್ರಾರಂಭ ಮಾಡಿದ್ದೆವು. ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯು ನಾವು ಬಯಸದೇ ಇದ್ದರೂ ಅದು ಚುನಾವಣಾ ಪ್ರಚಾರವಾಯಿತು. ಇದು ನಮ್ಮ ಚುನಾವಣಾ ಪ್ರಚಾರಕ್ಕೆ ಭದ್ರ ಬುನಾದಿಯನ್ನು ಒದಗಿಸಿತು. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಎಲ್ಲ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ನಾವು ಈಗಾಗಲೇ ಐದು ‘ನ್ಯಾಯ’ಗಳ ಭರವಸೆ ನೀಡಿದ್ದೇವೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮಾದರಿಯಲ್ಲೇ ದೇಶದಾದ್ಯಂತ ‘ಗ್ಯಾರಂಟಿ’ ಕಾರ್ಡ್‌ಗಳನ್ನು ವಿತರಿಸುತ್ತಿದ್ದೇವೆ. 

* ಶ್ರಾವಣ ಮಾಸದಲ್ಲಿ ಮಾಂಸ ತಿಂದು ಅದರ ವಿಡಿಯೊ ಹರಿಯಬಿಡುವ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳದ್ದು ಮೊಘಲರ ಮನಃಸ್ಥಿತಿ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ನಿಮ್ಮ ಪಕ್ಷದ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಚಿಂತನೆಯನ್ನು ಹೊಂದಿದೆ ಎಂದು ಲೇವಡಿ ಮಾಡಿದ್ದಾರೆ. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು? 

*ಬಿಜೆಪಿಯು ಉತ್ತರ ಭಾರತ ಸೇರಿದಂತೆ ಎಲ್ಲ ಕಡೆಗಳಲ್ಲಿ ನೆಲೆ ಕಳೆದುಕೊಳ್ಳುತ್ತಿರುವುದನ್ನು ಪ್ರಧಾನಿ ಅರಿತುಕೊಂಡಿದ್ದಾರೆ. ಅಧಿಕಾರ ಕಳೆದುಕೊಳ್ಳುತ್ತೇನೆ ಎಂದು ಆತಂಕಿತರಾಗಿದ್ದಾರೆ. ಹಾಗಾಗಿ, ವಿರೋಧ ಪಕ್ಷದ ನಾಯಕರ ಮೇಲೆ ಕೀಳು ಮಟ್ಟದ ದಾಳಿ ನಡೆಸುತ್ತಿದ್ದಾರೆ. ಇಲ್ಲದಿದ್ದರೆ ಅವರು ಈಗ ಕುರಿ ಮಾಂಸದ ಬಗ್ಗೆ ಏಕೆ ಮಾತನಾಡುತ್ತಿದ್ದರು? ಬಿಜೆಪಿಯಲ್ಲಿ ಇರುವವರೆಲ್ಲ ಸಸ್ಯಾಹಾರಿಗಳು ಹಾಗೂ ಕಾಂಗ್ರೆಸ್‌ನ ಎಲ್ಲರೂ ಮಾಂಸಾಹಾರಿಗಳು ಎಂದು ಹೇಳುತ್ತಿದ್ದಾರೆಯೇ? ಆಹಾರ ಹಕ್ಕು ವೈಯಕ್ತಿಕ ಆಯ್ಕೆಯಾಗಿದೆ. ಅದನ್ನು ಯಾರೂ ಹೇರಲು ಸಾಧ್ಯವಿಲ್ಲ. 

*ರಾಮಮಂದಿರದ ಬಗ್ಗೆ ಕಾಂಗ್ರೆಸ್‌ ನಿಲುವೇನು? 

ಪ್ರಧಾನಿ ಹಾಗೂ ಬಿಜೆಪಿಯವರು ರಾಮಮಂದಿರವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನರಿಗೆ ಅದು ಅರಿವಾಗುತ್ತಿದೆ. ಪ್ರಧಾನಿ ಆದಿಯಾಗಿ ಬಿಜೆಪಿ ನಾಯಕರು ದೇಶ ಎದುರಿಸುತ್ತಿರುವ ನಿರುದ್ಯೋಗ, ರೈತರ ಸಂಕಷ್ಟ ಹಾಗೂ ಬೆಲೆ ಏರಿಕೆಯಂತಹ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ. ಅವರು ಎಲ್ಲರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅವರು ಧ್ರುವೀಕರಣವನ್ನು ಬಯಸುತ್ತಿದ್ದಾರೆ. 

*ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ದಕ್ಷಿಣ ಭಾರತದ ಕಡೆಗೆ ಹೆಚ್ಚು ಗಮನ ಹರಿಸಿದೆ ಎಂಬ ಭಾವನೆ ನಿಮ್ಮ ನಾಯಕರಲ್ಲೇ ಗಾಢವಾಗಿದೆಯಲ್ಲ? 

ಉತ್ತರದಲ್ಲಿ ಕಾಂಗ್ರೆಸ್‌ ಹಾಗೂ ‘ಇಂಡಿಯಾ’ ಮೈತ್ರಿಕೂಟ ಪ್ರಬಲವಾಗಿದೆ. ರಾಜಸ್ಥಾನ, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಉತ್ತರದಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಹಾಗಿದ್ದ ಮೇಲೆ, ಉತ್ತರ ಮತ್ತು ದಕ್ಷಿಣದ ವಿಭಜನೆ ಎಲ್ಲಿದೆ? ಸೋಲಿನ ಭೀತಿಯಿಂದ ಬಿಜೆಪಿಯವರು ಇವನ್ನೆಲ್ಲ ಸೃಷ್ಟಿಸುತ್ತಿದ್ದಾರೆ. 

*ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್‌ನ ತಾರಾ ಪ್ರಚಾರಕರು. ಆದರೆ, ಅವರು ಅಮೇಠಿ ಹಾಗೂ ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿಗಳಿವೆಯಲ್ಲ? 

ಅಮೇಠಿ ಹಾಗೂ ರಾಯ್‌ಬರೇಲಿ ಮಾತ್ರವಲ್ಲ, ಇನ್ನೂ ಅನೇಕ ಕ್ಷೇತ್ರಗಳಿಗೆ ಪಕ್ಷವು ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಈ ಸಲ ಚುನಾವಣಾ ಪ್ರಕ್ರಿಯೆ ಸುದೀರ್ಘವಾಗಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳು ಸೀಮಿತ ಪ್ರಮಾಣದ ಹಣ ಖರ್ಚು ಮಾಡಬಹುದು. ರಾಜಕೀಯ ದುರುದ್ದೇಶದಿಂದ ಖಾತೆಗಳನ್ನು ಜಪ್ತಿ ಮಾಡಿದ್ದರಿಂದ ನಮ್ಮ ಬಳಿ ಹಣ ಬಹಳ ಕಡಿಮೆ ಇದೆ. ಈ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಇನ್ನೂ ಸಮಯವಿದೆ.

*ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ‌ಪ್ರಸ್ತಾಪವೇ ಇಲ್ಲವಲ್ಲ? 

ಸಿಎಎ ಕುರಿತು ಕಾಂಗ್ರೆಸ್‌ ನಿಲುವು ಸ್ಪಷ್ಟವಾಗಿದೆ. ಈ ಬಗ್ಗೆ ನಾವು ಸಂಸತ್‌ನಲ್ಲಿ ಧ್ವನಿ ಎತ್ತಿದ್ದೇವೆ. ಬಿಜೆಪಿಯು ಧ್ರುವೀಕರಣದ ಸಲುವಾಗಿ ಆ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅಲ್ಪಸಂಖ್ಯಾತರು ಹಾಗೂ ಇತರ ಸಮುದಾಯಗಳ ಹಿತ ರಕ್ಷಣೆಗಾಗಿ ಕಾಂಗ್ರೆಸ್‌ ಬದ್ಧವಾಗಿದೆ. ದೇಶದ ಪ್ರತಿ ಪ್ರಜೆಗೂ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸುವುದು ನಮ್ಮ ಉದ್ದೇಶ. 

*ಚುನಾವಣಾ ಬಾಂಡ್‌ ಬಗ್ಗೆಯೂ ಕಾಂಗ್ರೆಸ್‌ ನಾಯಕರು ಹೆಚ್ಚು ಮಾತನಾಡುತ್ತಿಲ್ಲವಲ್ಲ? 

ನಾವು ಚುನಾವಣಾ ಬಾಂಡ್‌ಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದೇವೆ. ಇದು ದೇಶದ ಅತೀ ದೊಡ್ಡ ಹಗರಣ. ಒಂದೆಡೆ ಅವರು ನಮ್ಮ ಖಾತೆಗಳನ್ನು ಜಪ್ತಿ ಮಾಡುತ್ತಿದ್ದಾರೆ. ಆದರೆ, ಚುನಾವಣಾ ಬಾಂಡ್‌ಗಳ ಭ್ರಷ್ಟಾಚಾರದ ಕುರಿತು ತನಿಖೆಯನ್ನೂ ಮಾಡುತ್ತಿಲ್ಲ. 

*ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಒಂದು ಸ್ಥಾನವಷ್ಟೇ ಗೆದ್ದಿತ್ತು. ಈ ಸಲ ಜನರ ಸ್ಪಂದನೆ ಹೇಗಿದೆ? 

ರಾಜ್ಯದಲ್ಲಿ ಈ ಸಲ ಪಕ್ಷ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ. 15ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಖಚಿತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT