ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಜಾತಿ ಕಾವಲಿಯಲ್ಲಿ ಬೇಯುತ್ತಿದೆ ಕಣ

Published 21 ಏಪ್ರಿಲ್ 2024, 4:43 IST
Last Updated 21 ಏಪ್ರಿಲ್ 2024, 4:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇನ್ನೂ ನನಸಾಗದ ಶಾಶ್ವತ ನೀರಾವರಿ ಯೋಜನೆಯ ಕನಸು, ಕಾಂಗ್ರೆಸ್ ಗ್ಯಾರಂಟಿ, ಮೋದಿ ಅಲೆ, ಭ್ರಷ್ಟಾಚಾರ, ವ್ಯಕ್ತಿಗತ ನಿಂದನೆ– ಹೀಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಣವು ನಾನಾ ವಿಚಾರಗಳ ಮೂಲಕ ಕದಡಿದೆ. 

ಈ ಎಲ್ಲಕ್ಕಿಂತ ತುಸು ಹೆಚ್ಚು ಪ್ರವಹಿಸಿರುವುದು ಜಾತಿ. ಜಾತಿ ಕಾವಲಿಯಲ್ಲಿ ರಾಜಕಾರಣ ಜೋರಾಗಿಯೇ ಬೇಯುತ್ತಿದೆ. ಮತ ವಿಭಜನೆ ಮತ್ತು ಧ್ರುವೀಕರಣವನ್ನು ಹದಗೊಳಿಸುತ್ತಿದೆ.   

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ನಡುವೆಯೇ ಜಿದ್ದಾಜಿದ್ದು. ಸಿಪಿಎಂನ ಎಂ.ಪಿ.ಮುನಿವೆಂಕಟಪ್ಪ ಸೇರಿದಂತೆ ಒಟ್ಟು 29 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 

ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಚೇಳೂರು ತಾಲ್ಲೂಕಿನಿಂದ ರಾಮನಗರ ಜಿಲ್ಲೆಯ ಸೋಲೂರಿನವರೆಗೆ ಕ್ಷೇತ್ರ ಹರಡಿದೆ. ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ರೀತಿಯ ಸನ್ನಿವೇಶವಿದೆ.

ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದ ತೀರಾ ಸಣ್ಣ ಪುಟ್ಟ ಸಮುದಾಯಗಳ ಅಭ್ಯರ್ಥಿಗಳು ದಾಖಲೆ ಅಂತರದಿಂದ ಗೆಲುವು ಸಾಧಿಸಿರುವ ಇತಿಹಾಸವಿದೆ. ಆದರೆ, ಈಗ ಆ ಸನ್ನಿವೇಶವಿಲ್ಲ.

ಸುಧಾಕರ್‌ ಒಕ್ಕಲಿಗ ಮತ್ತು ರಕ್ಷಾ ರಾಮಯ್ಯ ಬಲಿಜ ಸಮುದಾಯದವರಾಗಿದ್ದಾರೆ. ‘ನಮ್ಮವ’ ಎನ್ನುವ ಅಭಿಮಾನದ ಮತ ಬ್ಯಾಂಕ್‌ ಜೋರಾಗಿದೆ.  

ಸಚಿವನಾಗಿದ್ದ ವೇಳೆ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಶಿಕ್ಷಣ ಕಾಲೇಜು, ಮಂಚೇನಹಳ್ಳಿ ತಾಲ್ಲೂಕು ರಚನೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜಾತಿ ರಾಜಕೀಯ ಮಾಡಿಲ್ಲ. ಲೋಕಸಭಾ ಕ್ಷೇತ್ರಕ್ಕೆ ‘ಚಿಕ್ಕಬಳ್ಳಾಪುರ ಮಾದರಿ’ ಅಭಿವೃದ್ಧಿ ವಿಸ್ತರಿಸುವೆ, ಮತ ನೀಡಿ ಎಂದು ಡಾ.ಕೆ.ಸುಧಾಕರ್ ಕೋರುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆ ರದ್ದುಗೊಳಿಸಿದ್ದನ್ನು ಸಹ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.

‘ಕೋವಿಡ್ ವೇಳೆ ಸುಧಾಕರ್ ಭ್ರಷ್ಟಾಚಾರ ನಡೆಸಿದ್ದಾರೆ. ಮತ್ತೆ ಭ್ರಷ್ಟಾಚಾರಕ್ಕೆ ಅವಕಾಶ ನೀಡಬೇಡಿ. ಚಿಕ್ಕಬಳ್ಳಾಪುರದಲ್ಲಿ ಇದು ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧ. ನನಗೊಂದು ಅವಕಾಶ ಕೊಡಿ’ ಎಂದು ರಕ್ಷಾ ರಾಮಯ್ಯ ಮನವಿ ಮಾಡುತ್ತಿದ್ದಾರೆ. 

ಕಾಂಗ್ರೆಸ್‌ ಬೇರುಗಳು ಕ್ಷೇತ್ರದಲ್ಲಿ ಗಟ್ಟಿಯಾಗಿವೆ. ‌ಬಲಿಜ ಮತ್ತು ಅಹಿಂದ ಮತಗಳ ಧ್ರುವೀಕರಣ, ಶಾಸಕರ ಬಲ, ಗ್ಯಾರಂಟಿ ಯೋಜನೆಗಳು ‘ಕೈ’ ಹಿಡಿಯುತ್ತವೆ ಎನ್ನುವ ವಿಶ್ವಾಸ ಕಾಂಗ್ರೆಸ್‌ನದ್ದು.

ಕಳೆದ ಮೂರು ಲೋಕಸಭೆ ಚುನಾವಣೆಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಳ್ಳುತ್ತಲೇ ಮುನ್ನಡೆದಿದೆ. 2019ರ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡ ಮೂಲಕ ಕಮಲ ಮೊದಲ ಬಾರಿಗೆ ಅರಳಿತು. 

ಮೇಲ್ನೋಟಕ್ಕೆ ಬಿಜೆಪಿ–ಜೆಡಿಎಸ್ ‘ಮೈತ್ರಿ’ಯ ಬೆಸುಗೆ ಗಟ್ಟಿಯಾಗಿದೆ. ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಉತ್ತಮ ನೆಲೆ  ಇದೆ. ಆ ಕಾರಣದಿಂದ ಎಚ್‌.ಡಿ.ಕುಮಾರಸ್ವಾಮಿ ಗಮನ ಕೇಂದ್ರೀಕರಿಸಿ ಪ್ರಚಾರ ನಡೆಸಿರುವುದು ಬಿಜೆಪಿಗೆ ಅನುಕೂಲ. 2014ರ ಚುನಾವಣೆಯಲ್ಲಿ ಎಚ್‌ಡಿಕೆ ಜೆಡಿಎಸ್‌ನಿಂದ ಈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಬಹುಸಂಖ್ಯಾತ ಒಕ್ಕಲಿಗ ಮತಗಳ ಜತೆಗೆ ನಿರ್ಣಾಯಕರು ಎನಿಸಿರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. 

ಪಕ್ಷ ಮತ್ತು ಸಮುದಾಯ ಎನ್ನುವ ಕಾರಣಕ್ಕೂ ಇಬ್ಬರೂ ಅಭ್ಯರ್ಥಿಗಳಿಗೆ ಇಡುಗಂಟು ಮತಗಳಿವೆ. ಆ ನಂತರದ ಗಳಿಕೆಯೇ ಗೆಲುವನ್ನು ನಿರ್ಧರಿಸುತ್ತದೆ. 

ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್
ರಕ್ಷಾ ರಾಮಯ್ಯ
ರಕ್ಷಾ ರಾಮಯ್ಯ
ಸಚಿವನಾಗಿ ಎರಡೂ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಂಸದನಾದರೆ ಬಯಲು ಸೀಮೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವುದು ಖಚಿತ
ಡಾ.ಕೆ.ಸುಧಾಕರ್ ಬಿಜೆಪಿ ಅಭ್ಯರ್ಥಿ
ಮತದಾರರು ಆಶೀರ್ವಾದ ಮಾಡಿದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವೆ.
ಎಂ.ಎಸ್.ರಕ್ಷಾ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ

ಡಾ.ಕೆ.ಸುಧಾಕರ್ (ಬಿಜೆಪಿ) + ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆಲಸ + ಜೆಡಿಎಸ್ ಜೊತೆಗಿನ ಮೈತ್ರಿಯ ಬೆಸುಗೆ ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರದ ಆರೋಪ ಅಧಿಕಾರದಲ್ಲಿ ಇದ್ದಾಗ ವಿರೋಧಿಗಳ ಸೃಷ್ಟಿ *** ಎಂ.ಎಸ್.ರಕ್ಷಾ ರಾಮಯ್ಯ (ಕಾಂಗ್ರೆಸ್‌) + ಬಲಿಜ ಸೇರಿದಂತೆ ಅಹಿಂದ ಮತಗಳ ಬಲ. ಬೆನ್ನಿಗೆ ನಿಂತ ಮುಖ್ಯಮಂತ್ರಿ ಉಪಮುಖ್ಯಮಂತ್ರಿ + ಕಾಂಗ್ರೆಸ್‌ ಶಾಸಕರ ಬಲ ಗ್ಯಾರಂಟಿಗಳ ಅಲೆ  ಅನುಭವದ ಕೊರತೆ. ತಂದೆ ಸೀತಾರಾಮ ಅವರಿಂದ ನಿರ್ವಹಣೆ ಟಿಕೆಟ್‌ ವಂಚಿತರ ಮುನಿಸು ಒಳ ಏಟಿನ ಭೀತಿ

ವಿಧಾನಸಭಾ ಕ್ಷೇತ್ರಗಳು 1.ಯಲಹಂಕ;ಬಿಜೆಪಿ 2.ದೊಡ್ಡಬಳ್ಳಾಪುರ;ಬಿಜೆಪಿ 3.ದೇವನಹಳ್ಳಿ;ಕಾಂಗ್ರೆಸ್ 4.ನೆಲಮಂಗಲ;ಕಾಂಗ್ರೆಸ್ 5.ಹೊಸಕೋಟೆ;ಕಾಂಗ್ರೆಸ್ 6.ಚಿಕ್ಕಬಳ್ಳಾಪುರ;ಕಾಂಗ್ರೆಸ್ 7.ಬಾಗೇಪಲ್ಲಿ;ಕಾಂಗ್ರೆಸ್ 8.ಗೌರಿಬಿದನೂರು;ಪಕ್ಷೇತರ

ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ 76.78 1981347–ಒಟ್ಟು ಮತದಾರರ ಸಂಖ್ಯೆ 983775– ಪುರುಷರು 997306–ಮಹಿಳೆಯರು 266–ಲಿಂಗತ್ವ ಅಲ್ಪಸಂಖ್ಯಾತರು

ಕ್ಷೇತ್ರದ ಸಮಸ್ಯೆಗಳು * ಶಾಶ್ವತವಾದ ನೀರಾವರಿ ಯೋಜನೆಗಳಿಲ್ಲ * ಶಂಕುಸ್ಥಾಪನೆಯಾಗಿ ದಶಕವಾದರೂ ಬಾರದ ಎತ್ತಿನಹೊಳೆ ನೀರು * ಎಚ್.ಎನ್.ವ್ಯಾಲಿ ಯೋಜನೆ ನೀರು ಮೂರು ಹಂತದ ಶುದ್ಧೀಕರಣವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT