ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ: ಜನತಾದಳದಿಂದ ಕಣಕ್ಕಿಳಿದಿದ್ದ ಸಿದ್ದರಾಮಯ್ಯ

ಜನತಾದಳದಿಂದ ಕಣಕ್ಕಿಳಿದಿದ್ದ ಸಿದ್ದರಾಮಯ್ಯ, ಸಿ.ಎಂ.ಗಾದಿಗೆ ರಹದಾರಿಯಾದ ‘ಲೋಕ’ದ ಸೋಲು!
Published 5 ಏಪ್ರಿಲ್ 2024, 6:21 IST
Last Updated 5 ಏಪ್ರಿಲ್ 2024, 6:21 IST
ಅಕ್ಷರ ಗಾತ್ರ

ಕೊಪ್ಪಳ: ಕೆಲವರ ಸ್ಪರ್ಧೆಯಿಂದಾಗಿ ಆಯಾ ಕ್ಷೇತ್ರ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದು ಸಹಜ. ಕೊಪ್ಪಳ ಲೋಕಸಭಾ ಕ್ಷೇತ್ರವೂ 1991ರ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿತ್ತು.

ಇದಕ್ಕೆ ಕಾರಣ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧೆ. ರಾಜಕೀಯವಾಗಿ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡಿ ಹೆಸರು ಮಾಡಿದ್ದ ಸಿದ್ದರಾಮಯ್ಯ ಆಗ ಕೊಪ್ಪಳ ಕ್ಷೇತ್ರದಿಂದ ಜನತಾದಳ ಪಕ್ಷದ ಮೂಲಕ ಕಣಕ್ಕಿಳಿದಿದ್ದರು.

ಆಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಬಸವರಾಜ ಪಾಟೀಲ ಅನ್ವರಿ, ಜನತಾದಳದಿಂದ ಸಿದ್ದರಾಮಯ್ಯ, ಬಿಜೆಪಿಯಿಂದ ಅಚ್ಯುತ ದೇವರಾಯ ಮತ್ತು 10 ಜನ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಇದಕ್ಕೂ ಹಿಂದಿನ 1989ರ ಚುನಾವಣೆಯಲ್ಲಿ ಅನ್ವರಿ ಅವರು ಜನತಾದಳದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಎಚ್‌.ಜಿ. ರಾಮುಲು ಅವರನ್ನು ಸೋಲಿಸಿದ್ದರು.

ಅಷ್ಟೇ ಅಲ್ಲ ಪ್ರಧಾನಿ ಚಂದ್ರಶೇಖರ್ ಅವರ ಸರ್ಕಾರದಲ್ಲಿ ಉಕ್ಕು ಮತ್ತು ಗಣಿ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿದ್ದರು. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಚಿವರಾದ ಏಕೈಕ ಸಂಸದ ಇವರು ಎನ್ನುವ ಹೆಗ್ಗಳಿಕೆ ಈಗಲೂ ಇದೆ. ಇದಕ್ಕಿಂತ ಹೆಚ್ಚಾಗಿ 1980 ಮತ್ತು 1984ರ ಚುನಾವಣೆಗಳಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಎಚ್‌.ಜಿ. ರಾಮುಲು ಅವರನ್ನು ಮೊದಲ ಬಾರಿಗೆ ಅನ್ವರಿ ಅವರು ಸೋಲಿಸಿದ್ದರು.

ಹೀಗಾಗಿ ಅನ್ವರಿ ಮತ್ತು ಸಿದ್ದರಾಮಯ್ಯ ಅವರ ಸ್ಪರ್ಧೆ ಆಗ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. 1989ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸಿದ್ದರಾಮಯ್ಯ ಸೋಲು ಕಂಡಿದ್ದರಿಂದ ’ಲೋಕ’ದ ಚುನಾವಣೆಗೆ ಇಲ್ಲಿಗೆ ಬಂದಿದ್ದರು. ಅನ್ವರಿ 2,41,176 ಮತಗಳನ್ನು ಪಡೆದು ವಿಜಯಶಾಲಿಯಾದರೆ, ಸಮೀಪದ ಪ್ರತಿಸ್ಪರ್ಧಿಯಾಗಿ ಸಿದ್ದರಾಮಯ್ಯ 11,197 ಮತಗಳ ಅಂತರದಿಂದ ಸೋಲು ಕಂಡಿದ್ದರು.

ಮುಂದಿನ ದಿನಗಳಲ್ಲಿ ಬದಲಾದ ರಾಜಕೀಯ ಸ್ಥಿತ್ಯಂತರಗಳಿಂದ ಬೇರೆ ಬೇರೆ ಪಕ್ಷಗಳಲ್ಲಿದ್ದು ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಸೇರಿ ಎರಡು ಬಾರಿ ಮುಖ್ಯಮಂತ್ರಿಯಾದರು. ಆದರೆ ಅವರು ಕೊಪ್ಪಳ ಕ್ಷೇತ್ರಕ್ಕೆ ಬಂದಾಗ ಪ್ರತಿಬಾರಿಯೂ 1991ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನ ತೋರಿದ್ದ ಪ್ರೀತಿ, ಆತಿಥ್ಯ ಮತ್ತು ಕಾಳಜಿಯನ್ನು ಸದಾ ಸ್ಮರಿಸುತ್ತಾರೆ.

‘ಕೊಪ್ಪಳ ಕ್ಷೇತ್ರದಿಂದ ನಾನು ಸೋತಿದ್ದೇ ಒಳ್ಳೆಯದಾಯಿತು. ಒಂದು ವೇಳೆ ಆಗ ಗೆಲುವು ಪಡೆದಿದ್ದರೆ ರಾಷ್ಟ್ರ ರಾಜಕಾರಣಕ್ಕೆ ಹೋಗಿರುತ್ತಿದೆ. ಮುಖ್ಯಮಂತ್ರಿಯಾಗುವ ಅವಕಾಶವೂ ಸಿಗುತ್ತಿರಲಿಲ್ಲ’ ಎಂದು ಇಲ್ಲಿಗೆ ಬಂದಾಗಲೊಮ್ಮೆ ಹೇಳುತ್ತಾರೆ.

ಆಗಿನ ಚುನಾವಣಾ ದಿನಗಳನ್ನು ‘ಪ್ರಜಾವಾಣಿ’ ಜೊತೆ ಮೆಲುಕು ಹಾಕಿದ ಬಸವರಾಜ ಪಾಟೀಲ ಅನ್ವರಿ ’ಹಿಂದುಳಿದ ವರ್ಗಗಳ ನಾಯಕ ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಆಗ ಚುನಾವಣೆ ಎದುರಿಸಿದ್ದರು. ಪಕ್ಷವನ್ನು ಮುಂದಿಟ್ಟುಕೊಂಡು ಚುನಾವಣೆ ಸವಾಲು ಸ್ವೀಕರಿಸಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತೇನೊ ಎಂದು ನನಗೆ ಈಗಲೂ ಅನಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಗಳು ಆಗ ಈಗಿನ ಹಾಗೆ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿರಲಿಲ್ಲ. ಟಿ.ವಿ. ಮಾಧ್ಯಮಗಳ ಸಂಖ್ಯೆಯೂ ಕಡಿಮೆಯಿತ್ತು. ಕರಪತ್ರದ ಮೂಲಕ ಪ್ರಚಾರ ಹೆಚ್ಚಾಗಿರುತ್ತಿತ್ತು. ಮೊದಲು ಯಾರನ್ನು ಯಾರೂ ವೈಯಕ್ತಿಕ ತೇಜೋವಧೆ ಮಾಡುತ್ತಿರಲಿಲ್ಲ’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT