ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇತ್ರ ಪರಿಚಯ | ಸಾಂಗ್ಲಿ (ಮಹಾರಾಷ್ಟ್ರ)

Published 3 ಮೇ 2024, 19:45 IST
Last Updated 3 ಮೇ 2024, 19:45 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಸಾಂಗ್ಲಿಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆಗೆ ಅಖಾಡ ಸಿದ್ಧಗೊಂಡಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಸಂಜಯ್‌ಕಾಕಾ ಪಾಟೀಲ್‌ ಅವರನ್ನೇ ಬಿಜೆಪಿ ಕಣಕ್ಕಿಳಿಸಿದರೆ, ಶಿವಸೇನಾ ಉದ್ಧವ್‌ ಠಾಕ್ರೆ ಬಣವು ಕುಸ್ತಿಪಟು ಚಂದ್ರಹರ ಪಾಟೀಲ ಅವರನ್ನು ಸ್ಪರ್ಧೆಗಿಳಿಸಿದೆ. ಇವರಿಬ್ಬರ ಜೊತೆ ಪೈಪೋಟಿ ನಡೆಸಲು ವಿಶಾಲ್‌ ಪಾಟೀಲ್‌ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಸಂಜಯ್‌ಕಾಕಾ ಅವರು 1,64,352 ಮತಗಳ ಅಂತರದಿಂದ ಸ್ವಾಭಿಮಾನ ಪಕ್ಷದಿಂದ ಸ್ಪರ್ಧಿಸಿದ್ದ ವಿಶಾಲ್‌ ಪಾಟೀಲ್‌ ಅವರನ್ನು ಪರಾಭವಗೊಳಿಸಿದ್ದರು. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವು 2014ರ ನಂತರ ಬಿಜೆಪಿಯ ಕೈವಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಸಂಜಯ್‌ಕಾಕಾ ಅವರು ಮತಯಾಚಿಸಿದರೆ, ಕೇಂದ್ರ ಸರ್ಕಾರದ ನ್ಯೂನತೆಗಳನ್ನು ಪ್ರಮುಖ ಪ್ರಚಾರ ವಿಷಯವನ್ನಾಗಿಸಿ ಚಂದ್ರಹರ ಅವರು ಜನರ ಬಳಿಗೆ ತೆರಳುತ್ತಿದ್ದಾರೆ. ಕಾಂಗ್ರೆಸ್‌ ವಿರುದ್ಧ ಬಂಡೆದ್ದು, ವಿಶಾಲ್‌ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದರಿಂದ ‘ಇಂಡಿಯಾ’ ಒಕ್ಕೂಟದ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್‌ನಿಂದ ರಾಜಕೀಯ ಪ್ರವೇಶಿಸಿದ್ದ ಸಂಜಯ್‌ಕಾಕಾ ಅವರು ಅನಂತರ ಎನ್‌ಸಿಪಿಗೆ ಸೇರಿ, ಕೆಲವು ವರ್ಷಗಳ ಕಾಲ ಇದ್ದರು. 2014ರಲ್ಲಿ ಎನ್‌ಸಿಪಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಕ್ಷೇತ್ರದಲ್ಲಿ ಮೂವರು ಪ್ರಬಲ ಅಭ್ಯರ್ಥಿಗಳು ಸ್ಪರ್ಧೆಗಿಳಿದಿರುವುದರಿಂದ ಕಣವು ತೀವ್ರ ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT