ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನ’ದ ಜಗಳ: ಯಾರಿಗೆ ‘ಮತ’ ಬಲ

ಮತ–ಮಂಥನ
Published 27 ಮಾರ್ಚ್ 2024, 23:22 IST
Last Updated 27 ಮಾರ್ಚ್ 2024, 23:22 IST
ಅಕ್ಷರ ಗಾತ್ರ

ಬೆಂಗಳೂರು: ‘ಅನ್ನಭಾಗ್ಯ’ವೂ ಸೇರಿ ಐದು ಗ್ಯಾರಂಟಿ ಘೋಷಿಸಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಪಕ್ಷ, ಲೋಕಸಭಾ ಚುನಾವಣೆಯಲ್ಲೂ ಅದರ ಫಲದ ನಿರೀಕ್ಷೆಯಲ್ಲಿದೆ. ಕೇಂದ್ರ ಸರ್ಕಾರ ಉಚಿತವಾಗಿ ಪೂರೈಸುತ್ತಿರುವ ಅಕ್ಕಿಯ ‘ಫಲ’ ತನಗೇ ದೊರಕಬೇಕು ಎಂದು ಎನ್‌ಡಿಎ (ಬಿಜೆಪಿ–ಜೆಡಿಎಸ್‌) ಮೈತ್ರಿಕೂಟ ಹಟಕ್ಕೆ ಬಿದ್ದಿದೆ. ಭೀಕರ ಬರಗಾಲ, ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಮುಂದೆ ‘ಅನ್ನ’ವೂ ಚುನಾವಣಾ ಅಸ್ತ್ರವಾದಂತಿದೆ.

ಅನ್ನಭಾಗ್ಯ ಯೋಜನೆಗೆ ತಿಂಗಳಿಗೆ ಹೆಚ್ಚುವರಿಯಾಗಿ 2.29 ಲಕ್ಷ ಟನ್‌ ಅಕ್ಕಿ ಹೊಂದಿಸಬೇಕಿದೆ. ಆರಂಭದಲ್ಲಿ ರಾಜ್ಯಕ್ಕೆ ಅಕ್ಕಿ ಪೂರೈಸಲು ಒಪ್ಪಿಕೊಂಡಿದ್ದ ಎಫ್‌ಸಿಐ, ದಿಢೀರ್‌ ನಿಲುವು ಬದಲಿಸಿತು. ನಂತರ ಛತ್ತೀಸಗಢ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯ ಸರ್ಕಾರಗಳಿಂದ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ನಡೆಸಿದ್ದ ಪ್ರಯತ್ನವೂ ಫಲ ಕೊಡಲಿಲ್ಲ.

ಎಫ್‌ಸಿಐನ ಮುಕ್ತ ಮಾರುಕಟ್ಟೆ ಮಾರಾಟ ಕಾರ್ಯಕ್ರಮದ ಅಡಿಯಲ್ಲಿನ ಅಕ್ಕಿ ದರಕ್ಕೆ ಸಮನಾಗಿ ಪ್ರತಿ ಕೆ.ಜಿ.ಗೆ ₹ 34ರಂತೆ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಹೊಸ ದಾರಿ ಕಂಡುಕೊಂಡಿದೆ. ಅನ್ನಭಾಗ್ಯ ಯೋಜನೆಗೆ ಎಫ್‌ಸಿಐ ಅಕ್ಕಿ ಪೂರೈಸದಂತೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ತಡೆದಿದೆ ಎಂಬ ಟೀಕೆಯನ್ನು ರಾಜ್ಯ ಸರ್ಕಾರ ಆಗಾಗ ಮಾಡುತ್ತಲೇ ಇದೆ.

ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ಅಕ್ಕಿಯನ್ನು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉಚಿತವಾಗಿ ಪೂರೈಸುತ್ತಿರುವುದು ತಾನು ಎಂಬುದನ್ನು ಪ್ರತಿಪಾದಿಸುವ ಮೂಲಕ ಚುನಾವಣಾ ರಾಜಕಾರಣದಲ್ಲಿ ‘ಅಕ್ಕಿ ಅಸ್ತ್ರ’ ಬಳಸಲು ಕೇಂದ್ರ ಸರ್ಕಾರ ಕೂಡ ಹಲವು ತಿಂಗಳ ಹಿಂದಿಯೇ ಹೆಜ್ಜೆ ಇರಿಸಿತ್ತು. ಪಡಿತರ ಧಾನ್ಯಗಳ ವಿತರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ ಪೂರೈಸುತ್ತಿದೆ ಎಂಬುದನ್ನು ನಮೂದಿಸಿ ರಸೀದಿ ನೀಡಬೇಕೆಂಬ ಆದೇಶವನ್ನೂ ಹೊರಡಿಸಲಾಗಿತ್ತು. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ.

ರಾಜ್ಯದ 223 ತಾಲ್ಲೂಕುಗಳ ಬರಗಾಲ ಇದೆ. ಆಹಾರ ಧಾನ್ಯಗಳ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳ ದರ ಏರುಗತಿಯಲ್ಲಿದೆ. ರಾಜ್ಯ ಸರ್ಕಾರ ಘೋಷಣೆಯಂತೆ ಹತ್ತು ಕೆ.ಜಿ. ಅಕ್ಕಿ ವಿತರಿಸಿದ್ದರೆ ಮಾರುಕಟ್ಟೆಯಲ್ಲಿ ಅಕ್ಕಿ ದರ ಏರುತ್ತಿರಲಿಲ್ಲ ಎಂಬ ಮಾತು ಬಡವರು ಮತ್ತು ಮಧ್ಯಮ ವರ್ಗದಲ್ಲಿ ಚರ್ಚೆಯಲ್ಲಿದೆ. ಅದನ್ನೇ ಮತವಾಗಿ ಪರಿವರ್ತಿಸುವ ಕಸರತ್ತಿನಲ್ಲಿ ಕಾಂಗ್ರೆಸ್‌– ಬಿಜೆಪಿ ತಂತ್ರ ಹೆಣೆಯುತ್ತಿವೆ.

‘ರಾಜ್ಯದ ಬಹುಭಾಗ ಬರಪೀಡಿತವಾಗಿದೆ. ಆಹಾರ ಧಾನ್ಯ ಉಚಿತವಾಗಿ ದೊರಕಿದ್ದರೆ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತಿತ್ತು. ಈ ಚುನಾವಣೆಯಲ್ಲಿ ಅನ್ನ ಭಾಗ್ಯದ ಅಕ್ಕಿಯ ವಿಚಾರ ಒಂದಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂಬುದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲ‍ಪುರ ನಾಗೇಂದ್ರ ಅವರ ಅಭಿಪ್ರಾಯ.

ಜನಪ್ರಿಯತೆಯ ನೆರಳಿನಲ್ಲಿ: ಕೇಂದ್ರ ಸರ್ಕಾರ ಉಚಿತವಾಗಿ ಪೂರೈಸುವ ಆಹಾರ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2013ರಲ್ಲೇ ಹೊಸ ಸ್ವರೂಪ ನೀಡಿತ್ತು. ಅಂತ್ಯೋದಯ ಮತ್ತು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ತಲಾ ಕೆ.ಜಿಗೆ ₹1ರಂತೆ ಅಕ್ಕಿ ವಿತರಿಸುವ ‘ಅನ್ನಭಾಗ್ಯ’ ಯೋಜನೆಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜಾರಿಗೊಳಿಸಿದ್ದರು. ಬಳಿಕ ಅದನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ‘ಜನಪ್ರಿಯ’ ಕಾರ್ಯಕ್ರಮದ ದಾಳವನ್ನೂ ಉರುಳಿಸಿದ್ದರು.

ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದಲ್ಲಿ ಅನ್ನಭಾಗ್ಯದ ವಿಸ್ತರಣೆ ಚುನಾವಣೆಯಲ್ಲಿ ‘ಕೈ’ ಹಿಡಿಯಬಹುದು ಎಂದು ಅಂದಾಜಿಸಿದ್ದ ಕಾಂಗ್ರೆಸ್‌, 2023ರ ವಿಧಾನಸಭೆ ಚುನಾವಣೆಗೆ ಮುನ್ನ ಅಂತ್ಯೋದಯ ಮತ್ತು ಬಿಪಿಎಲ್‌ ಕುಟುಂಬಗಳ ಪ್ರತಿ ಸದಸ್ಯರಿಗೂ ತಿಂಗಳಿಗೆ ತಲಾ 10 ಕೆ.ಜಿ. ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವ ‘ಅನ್ನ ಭಾಗ್ಯ ಗ್ಯಾರಂಟಿ’ ಘೋಷಿಸಿತ್ತು. ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚು ಸಂಖ್ಯೆಯಲ್ಲಿರುವ ರಾಜ್ಯದಲ್ಲಿ ಈ ಘೋಷಣೆ ವಿಧಾನಸಭಾ ಚುನಾವಣೆಯುದ್ದಕ್ಕೂ ಭಾರಿ ಸದ್ದು ಮಾಡಿತ್ತು.

ಮಿಂಚಿ ಮರೆಯಾದ ಭಾರತ್‌ ಅಕ್ಕಿ

ಚುನಾವಣೆ ಸಮೀಪಿಸುತ್ತಿರುವಾಗಲೇ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಎಫ್‌ಸಿಐ ‘ಭಾರತ್‌ ಅಕ್ಕಿ’ ಎಂಬ ಬ್ರ್ಯಾಂಡ್‌ನೊಂದಿಗೆ ಪ್ರತಿ ಕೆ.ಜಿ.ಗೆ ₹29ರ ದರದಲ್ಲಿ ಅಕ್ಕಿ ಮಾರಾಟ ಆರಂಭಿಸಿತ್ತು. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ‘ಭಾರತ್‌ ಅಕ್ಕಿ’ ಮಾರಾಟ ವಾಹನಗಳು ಕೆಲವು ದಿನಗಳ ಕಾಲ ಅಲ್ಲಲ್ಲಿ ಕಂಡವು. ಈಗ ಬಹುತೇಕ ಕಡೆಗಳಲ್ಲಿ ಭಾರತ್‌ ಅಕ್ಕಿ ಮಾರಾಟ ಸ್ಥಗಿತವಾಗಿದೆ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, 5 ಲಕ್ಷ ಟನ್‌ ಅಕ್ಕಿಯನ್ನು ಭಾರತ್‌ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡಲಾಗು ತ್ತಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಅಕ್ಕಿ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT