ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಗುಜರಾತ್‌ನಲ್ಲಿ ಬಿಜೆಪಿಗೆ ತೊಡಕಾಗಲಿದೆಯೇ ಭಿನ್ನಮತ?

ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಅಸಮಾಧಾನ, ಮನಸ್ತಾಪ
Published 1 ಏಪ್ರಿಲ್ 2024, 23:30 IST
Last Updated 1 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಲೋಕಸಭಾ ಟಿಕೆಟ್ ಹಂಚಿಕೆಯ ಸಂಬಂಧ ಬಿಜೆಪಿಯಲ್ಲಿ ಭಿನ್ನಮತ ತಲೆದೋರಿದ್ದು, ಇದು ಪಕ್ಷದ ‘ಕ್ಲೀನ್‌ಸ್ವೀಪ್‌’ ಕನಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಮ್ರೇಲಿ, ರಾಜ್‌ಕೋಟ್, ಸಾಬರಕಾಂಠಾ, ಸುರೇಂದ್ರನಗರ ಮತ್ತು ವಡೋದರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮುಖಂಡರ ನಡುವೆ ಮನಸ್ತಾಪ ತಲೆದೋರಿದೆ. ಕಳೆದ ಸಲ ಎಲ್ಲ 26 ಕ್ಷೇತ್ರಗಳನ್ನೂ ಗೆದ್ದುಕೊಂಡಿದ್ದ ಬಿಜೆಪಿ, ಈ ಬಾರಿ ಅದೇ ಸಾಧನೆ ಪುನರಾವರ್ತಿಸುವ ಲೆಕ್ಕಾಚಾರ ಹಾಕಿಕೊಂಡಿದೆ.

‘ರಜಪೂತ ದೊರೆಗಳು ಬ್ರಿಟಿಷರಿಗೆ ಸಹಕರಿಸಿದ್ದರು’ ಎಂದು ಕೇಂದ್ರ ಸಚಿವ ಮತ್ತು ರಾಜ್‌ಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಶೋತ್ತಮ್ ರೂಪಾಲಾ ಈಚೆಗೆ ಹೇಳಿಕೆ ನೀಡಿದ್ದರು. ಅದನ್ನು ವಿರೋಧಿಸಿ ಕ್ಷತ್ರಿಯ ಸಮುದಾಯದ ಮುಖಂಡ ರಾಜ್ ಶೆಖಾವತ್ ಶನಿವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಜತೆಗೆ ರೂಪಾಲಾ ಹೇಳಿಕೆ ಖಂಡಿಸಿ ಕ್ಷತ್ರಿಯ ಸಮುದಾಯವು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯನ್ನೂ ನಡೆಸಿದೆ.

ರಾಜ್‌ಕೋಟ್‌ನ ಸಾರ್ವಜನಿಕ ಸಭೆಯಲ್ಲಿ ತಾವು ಆಡಿದ ಮಾತಿಗೆ ರೂಪಾಲಾ ಕ್ಷಮೆಯಾಚಿಸಿದ್ದರು. ಆದರೂ ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿರುವ ಕರ್ಣಿ ಸೇನಾ, ರೂಪಾಲಾಗೆ ನೀಡಿರುವ ಟಿಕೆಟ್ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಚುನಾವಣೆಯಲ್ಲಿ ಅವರನ್ನು ಸೋಲಿಸುವುದಾಗಿ ಎಚ್ಚರಿಸಿದೆ.

ಬಿಜೆಪಿ ಕ್ಷತ್ರಿಯ ಸಮುದಾಯದ ಮನವೊಲಿಕೆಯ ಕಸರತ್ತು ನಡೆಸುತ್ತಿರುವಾಗಲೇ ಅಮ್ರೇಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಭರತ್ ಸುತಾರಿಯಾ ಅವರನ್ನು ಆಯ್ಕೆ ಮಾಡಿರುವ ಸಂಬಂಧ ಎರಡು ಬಣಗಳು ಶನಿವಾರ ರಾತ್ರಿ ಪರಸ್ಪರ ಸಂಘರ್ಷ ನಡೆಸಿವೆ.

ವಡೋದರದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಎರಡು ಅವಧಿಯ ಸಂಸದೆ ರಂಜನಾ ಭಟ್ ಆಂತರಿಕ ಭಿನ್ನಮತದಿಂದಾಗಿ ಈ ಬಾರಿ ಕಣದಿಂದ ಹಿಂದೆ ಸರಿದಿದ್ದರು. ಪಕ್ಷವು, ಹೆಮಾಂಗ್ ಜೋಷಿ ಅವರನ್ನು ವಡೋದರದ ಅಭ್ಯರ್ಥಿಯಾಗಿ ಘೋಷಿಸಿದೆ. 

ಬಿಜೆಪಿ ಮುಖಂಡ ಭೀಖಾಜಿ ಠಾಕೂರ್ ಕಣದಿಂದ ಹಿಂದೆ ಸರಿದ ಬಳಿಕ ಪಕ್ಷವು ಕಾಂಗ್ರೆಸ್‌ನ ಮಾಜಿ ಶಾಸಕ ಮಹೇಂದ್ರ ಸಿನ್ಹ ಬರೈಯಾ ಅವರ ಪತ್ನಿ ಶೋಭನಾ ಬರೈಯಾ ಅವರಿಗೆ ಸಾಬರಕಾಂಠಾ ಕ್ಷೇತ್ರದ ಟಿಕೆಟ್ ಘೋಷಿಸಿತ್ತು. ಅದರ ವಿರುದ್ಧ ಪ್ರತಿಭಟಿಸಲು ಮಾರ್ಚ್ 26ರಂದು ಠಾಕೂರ್‌ ಅವರ ದೊಡ್ಡ ಸಂಖ್ಯೆಯ ಬೆಂಬಲಿಗರು ಅರ್ವಲ್ಲಿ ಜಿಲ್ಲೆಯ ಪಕ್ಷದ ಕಚೇರಿಯ ಹೊರಗೆ ನೆರೆದಿದ್ದರು. ಅವರನ್ನು ಸಮಾಧಾನಿಸಲು ಪಕ್ಷದ ಹೈಕಮಾಂಡ್ ಅರ್ವಲ್ಲಿ ಮತ್ತು ಗಾಂಧಿನಗರದಲ್ಲಿ ಹಲವು ಸಭೆಗಳನ್ನು ನಡೆಸಬೇಕಾಯಿತು. 

ಸುರೇಂದ್ರನಗರದಲ್ಲಿಯೂ ಹಾಲಿ ಸಂಸದರ ಬದಲಿಗೆ ಕಣಕ್ಕಿಳಿದಿರುವ ಚಂದು ಶಿಹೋರ ಅವರನ್ನು ಪಕ್ಷದ ಕೆಲವು ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಶಿಹೋರ ಬದಲಿಗೆ ತಮ್ಮದೇ ಉಪಜಾತಿಯ ಮುಖಂಡನನ್ನು ಕಣಕ್ಕಿಳಿಸಬೇಕೆಂದು ತಲ್ಪಾಡಾ ಕೋಲಿ ಸಮುದಾಯ ಪಟ್ಟು ಹಿಡಿದಿದೆ.

‘ಚಂದು ಸ್ಪರ್ಧಾ ಕಣದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ನಾವು ಬಿಜೆಪಿ ವಿರುದ್ಧ ಮತ ಚಲಾಯಿಸುತ್ತೇವೆ’ ಎಂದು ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗಿರುವ ಸೋಮ ಪಟೇಲ್ ಹೇಳಿದ್ದಾರೆ.     

ಗುಜರಾತ್‌ನ 26 ಲೋಕಸಭಾ ಕ್ಷೇತ್ರಗಳಿಗೆ ಮೇ.7ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

‘ಹೊರಗಿನವರಿಗೆ ಮಣೆ ಹಾಕಿದ ಬಿಜೆಪಿ’

‘ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ ಬಿಜೆಪಿಯೊಳಗೆ ನಡೆಯುತ್ತಿರುವ ಸಂಘರ್ಷವು ಇತರೆ ಪಕ್ಷಗಳಿಂದ ಬಂದವರಿಗೆ ಮಣೆ ಹಾಕಿ ತನ್ನದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದರ ಫಲ’ ಎಂದು ಗುಜರಾತ್‌ನ ಕಾಂಗ್ರೆಸ್ ವಕ್ತಾರ ಮನೀಶ್ ದೋಶಿ ಅಭಿಪ್ರಾಯಪಟ್ಟಿದ್ದಾರೆ.  ಮೂರನೇ ಬಾರಿಗೆ ರಾಜ್ಯದ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ಬಿಜೆಪಿಯ ಪ್ರಯತ್ನಕ್ಕೆ ಆ ಪಕ್ಷದೊಳಗಿನ ಭಿನ್ನಾಭಿಪ್ರಾಯ ಅಡ್ಡಿಯಾಗಲಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT