ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024: ‘ಕೈ’ ಸರ್ಕಾರ ಉಳಿಯುವುದೇ...

ಹಿಮಾಚಲ ಪ್ರದೇಶ: ‘ಅತ್ಯಂತ ಹಳೆಯ ಪಕ್ಷ’ಕ್ಕೆ ಅಳಿವು ಉಳಿವಿನ ಹೋರಾಟ
Published 17 ಮೇ 2024, 19:54 IST
Last Updated 17 ಮೇ 2024, 19:54 IST
ಅಕ್ಷರ ಗಾತ್ರ

ನವದೆಹಲಿ: ಜೂನ್‌ 1ರ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಯ ಮತದಾನಕ್ಕೆ ಸಜ್ಜಾಗುತ್ತಿರುವ ಹಿಮಾಚಲ ಪ್ರದೇಶವು ‍ಪಶ್ಚಿಮ ಹಿಮಾಲಯ ತಪ್ಪಲಿನ ಸಣ್ಣ ರಾಜ್ಯ. ಈ ಚುನಾವಣೆಯ ಫಲಿತಾಂಶವು ರಾಜ್ಯ ಕಾಂಗ್ರೆಸ್‌ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಹೀಗಾಗಿ, ಈ ಚುನಾವಣೆಯು ‘ಕೈ’ ಪಾಳಯಕ್ಕೆ ನಿರ್ಣಾಯಕ. 

‘ದೇವಭೂಮಿ’ಯೆಂದು ಪ್ರಖ್ಯಾತವಾದ ಈ ರಾಜ್ಯದ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇ ಪ್ರಮುಖ. ಅವರು ತಪ್ಪಿದರೆ ಇವರು, ಇವರು ತಪ್ಪಿದರೆ ಅವರು ಎಂಬ ಸ್ಥಿತಿ ನಿರ್ಮಾಣವಾಗಿ ದಶಕಗಳು ಉರುಳಿವೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌– ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ರಾಜ್ಯದಲ್ಲಿ ಸಂಘಟನೆ ಬಲಪಡಿಸಲು ಆಮ್ ಆದ್ಮಿ ಪಕ್ಷವು (ಎಎಪಿ) ಈ ಹಿಂದೆ ಪ್ರಯತ್ನ ನಡೆಸಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗಳಿಸಿದ ಮತ ಪ್ರಮಾಣ ಶೇ 1ರಷ್ಟು. ಬಳಿಕ ಪಕ್ಷವು ಸಂಘಟನೆಯ ಪ್ರಯತ್ನವನ್ನು ಕೈಬಿಟ್ಟಿತು. 

2014ರ ಲೋಕಸಭಾ ಚುನಾವಣೆಯಲ್ಲಿ ಕಮಲ ಪಾಳಯವು ಎಲ್ಲ ನಾಲ್ಕು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲೂ ನಾಲ್ಕು ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಪಕ್ಷದ ಮತ ಪ್ರಮಾಣ ಗಣನೀಯವಾಗಿ ಹೆಚ್ಚಾಗಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಶೇ 43.90 ಮತ ಪಡೆದಿದ್ದ ಕೈ ಪಾಳಯವು 40 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಶೇ 40 ಮತ ಗಳಿಸಿದ್ದ ಬಿಜೆಪಿಗೆ ಸಿಕ್ಕಿದ್ದು 25 ಸ್ಥಾನಗಳು.

ವಿಕ್ರಮಾದಿತ್ಯ ಸಿಂಗ್‌
ವಿಕ್ರಮಾದಿತ್ಯ ಸಿಂಗ್‌
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌
್

ಉತ್ತರ ಭಾರತದಲ್ಲಿ ಕಾಂಗ್ರೆಸ್‌ನ ಏಕೈಕ ಸರ್ಕಾರ ಇರುವುದು ಹಿಮಾಚಲ ಪ್ರದೇಶದಲ್ಲಿ. ಒಂದು ವೇಳೆ ಇಲ್ಲಿನ ಸರ್ಕಾರ ಪತನಗೊಂಡರೆ ಸ್ವಾತಂತ್ರ್ಯ ನಂತರದಲ್ಲಿ ಮೊದಲ ಬಾರಿಗೆ ಉತ್ತರ ಭಾರತದಲ್ಲಿ ಕಾಂಗ್ರೆಸ್‌ ಸರ್ಕಾರ ಇಲ್ಲದಂತಾಗುತ್ತದೆ. ಅಗ್ನಿವೀರರ ನೇಮಕಾತಿಗೆ ಪ್ರತಿರೋಧ, ಸೇಬು ಬೆಳೆಗಾರರ ಸಮಸ್ಯೆ, ಅಭಿವೃದ್ಧಿ ಕೆಲಸಗಳು, ನಾಯಕತ್ವದ ವರ್ಚಸ್ಸಿನಂತಹ ಅಂಶಗಳು ವಿಶೇಷವಾಗಿ ಮತದಾನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಈ ನಂಬಿಕೆಯನ್ನು ಹುಸಿ ಮಾಡುವ ಯಾವುದೇ ಅಸಾಧಾರಣ ಸಂಗತಿಗಳು ಈ ಚುನಾವಣೆಯಲ್ಲಿ ಕಂಡು ಬರುತ್ತಿಲ್ಲ. 

‘ಕೈ’ ಮೀರಿದ ಭಿನ್ನಮತ

ಈ ವರ್ಷ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದರಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಅಭಿಷೇಕ್‌ ಮನು ಸಿಂಘ್ವಿ ಅವರಿಗೆ ಸೋಲಾಗಿತ್ತು. ವಿಶ್ವಾಸಮತ ಯಾಚನೆಗೆ ಬಿಜೆಪಿ ಪಟ್ಟು ಹಿಡಿದಿತ್ತು. ಹಣಕಾಸು ಮಸೂದೆ ಪರ ಮತ ಹಾಕದ ಕಾರಣಕ್ಕೆ ಆರು ಭಿನ್ನಮತೀಯ ಶಾಸಕರನ್ನು ವಿಧಾನ ಸಭಾಧ್ಯಕ್ಷರು ಅನರ್ಹಗೊಳಿಸಿದ್ದರು. ಜತೆಗೆ ಬಿಜೆಪಿಯ 15 ಶಾಸಕರನ್ನು ಸದನದಿಂದ ಅಮಾನತುಗೊಳಿಸಿದ್ದರು. ಹೀಗಾಗಿ ಸರ್ಕಾರ ಉಳಿದುಕೊಂಡಿತ್ತು. ಈ ನಡುವೆ ಮೂವರು ಪಕ್ಷೇತರ ಶಾಸಕರು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಸ್ವೀಕರಿಸಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ಮೂವರನ್ನು ಅನರ್ಹಗೊಳಿಸಲು ನೋಟಿಸ್‌ ನೀಡಿದ್ದಾರೆ. ಅನರ್ಹತೆ ಬಗ್ಗೆ ಜೂನ್‌ನಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಭಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಶಾಸಕರ ಅನರ್ಹತೆಯ ಬಳಿಕ ವಿಧಾನಸಭೆಯ ಸದಸ್ಯ ಬಲ 68ರಿಂದ 62ಕ್ಕೆ ಇಳಿದಿದೆ. 34 ಸದಸ್ಯರ ಬೆಂಬಲ ಹೊಂದಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಸರಳ ಬಹುಮತ ಇದೆ. ಅನರ್ಹರು ಬಿಜೆಪಿ ಟಿಕೆಟ್‌ನಿಂದ ಅಖಾಡಕ್ಕೆ ಇಳಿದಿದ್ದಾರೆ. ವಿಧಾನಸಭಾ ಉಪಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಕಾಂಗ್ರೆಸ್‌ ಸರ್ಕಾರಕ್ಕೆ ಸಮಸ್ಯೆ ಎದುರಾಗುವುದು ನಿಸ್ಸಂಶಯ. ‘ಬೇಲಿ ಮೇಲೆ ಕುಳಿತಿರುವ’ ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಕೇಸರಿ ಪಾಳಯಕ್ಕೆ ಜಿಗಿಯುವುದು ಖಚಿತ. 

ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿವೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್‌ ನಡುವಿನ ಮನಸ್ತಾಪ ಮೇರೆ ಮೀರಿದೆ. ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ಭಿನ್ನಮತೀಯ ಚಟುವಟಿಕೆಯ ಸೂತ್ರಧಾರರಾಗಿದ್ದವರು. ಆದರೆ ಲೋಕೋಪಯೋಗಿ ಸಚಿವರಾಗಿರುವ ವಿಕ್ರಮಾದಿತ್ಯ ಅವರನ್ನು ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಣಕ್ಕಿಳಿಸಿದೆ. ನಟಿ ಕಂಗನಾ ರನೌತ್‌ ಬಿಜೆಪಿ ಹುರಿಯಾಳು. ಇಲ್ಲಿ ಕಂಗನಾ ಎದುರು ವಿಕ್ರಮಾದಿತ್ಯ ಗೆಲ್ಲಲೇಬೇಕು ಎಂದು ಕಾಂಗ್ರೆಸ್‌ ನಾಯಕರು ಬಯಸುತ್ತಿದ್ದಾರೆ. ಸೋತರೆ ವಿಕ್ರಮಾದಿತ್ಯ ಅವರು ಸರ್ಕಾರ ಕೆಡವಲು ಪ್ರಯತ್ನ ಆರಂಭಿಸುತ್ತಾರೆ ಎಂಬುದು ‘ಕೈ’ ನಾಯಕರ ಆತಂಕ.

ಮೋದಿ ನಾಮಬಲವೇ ಶಕ್ತಿ 

ಸರ್ಕಾರ ಕೆಡವಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿಯು ಭಿನ್ನಮತದಿಂದ ಮುಕ್ತವಾಗಿಲ್ಲ. ಇಲ್ಲಿ ಮಾಜಿ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಹಾಗೂ ಕೇಂದ್ರ ಸಚಿವ ಅನುರಾಗ್‌ ಠಾಕೂರ್ ಅವರದ್ದು ಎಣ್ಣೆ ಸೀಗೆಕಾಯಿ ಸಂಬಂಧ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸೇ ಬಿಜೆಪಿಗೆ ಶಕ್ತಿ. ಮೋದಿ ನಾಮಬಲದಿಂದಲೇ ಎರಡು ಲೋಕಸಭಾ ಚುನಾವಣೆಗಳಲ್ಲೂ ಪಕ್ಷ ಗೆದ್ದಿತ್ತು. ಈ ಸಲವೂ ಅದೇ ಫಲಿತಾಂಶ ಪುನರಾವರ್ತನೆ ಆಗಲಿದೆ ಎಂಬುದು ಬಿಜೆಪಿ ನಾಯಕರ ನಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT