ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಪ್ರಧಾನಿ ಮೌನ ಪ್ರಶ್ನಿಸಿದ ಮಮತಾ

Published 3 ಮೇ 2024, 15:25 IST
Last Updated 3 ಮೇ 2024, 15:25 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರು ರಾಜಭವನದ ಮಹಿಳಾ ನೌಕರರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದರು.

‘ಗುರುವಾರ ರಾತ್ರಿಯಷ್ಟೇ ರಾಜಭವನಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

ಪೂರ್ವ ಬರ್ಧಮಾನ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ಗುರುವಾರ ಅಲ್ಲಿಂದ ಹೊರಬಂದು, ರಾಜ್ಯಪಾಲರ ಕಿರುಕುಳದ ವಿರುದ್ಧ ಧ್ವನಿಯೆತ್ತಿದ್ದಾರೆ. ಆ ಸಂತ್ರಸ್ತೆಯ ಕಣ್ಣೀರು ನನ್ನ ಮನಸ್ಸನ್ನು ಕಲಕಿದೆ. ನಾನು ಅವರ ವಿಡಿಯೊ ಸಾಕ್ಷ್ಯವನ್ನು ನೋಡಿದ್ದೇನೆ’ ಎಂದು ಹೇಳಿದರು.

‘ಅನಧಿಕೃತ ಸಮಯದಲ್ಲಿ ಕರೆ ಮಾಡಿ ಯುವತಿಯನ್ನು ಕರೆಸಿಕೊಂಡು ಕಿರುಕುಳ ನೀಡಲಾಗಿದೆ. ಆಕೆ ಅಳುತ್ತಾ ಹೊರ ಬಂದಿದ್ದಾಳೆ. ಇನ್ನು ಮುಂದೆ ರಾಜಭವನದಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾಳೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಇಂಥಹ ವ್ಯಕ್ತಿಗಳು ನಮ್ಮ ತಾಯಂದಿರು ಮತ್ತು ಸಹೋದರಿಯ ಘನತೆ ಬಗ್ಗೆ ಮಾತನಾಡುತ್ತಾರೆ’ ಎಂದು ಅವರು ಟೀಕಿಸಿದರು. 

‘ನೀವು (ಪ್ರಧಾನಿ) ಸಂದೇಶ್‌ಖಾಲಿ ವಿಷಯದಲ್ಲಿ ಎಷ್ಟೆಲ್ಲಾ ನಾಟಕ ಮಾಡುತ್ತಿದ್ದೀರಿ. ಕೆಲ ಅಪವಾದಗಳು ಕಂಡು ಬಂದ ಕೂಡಲೇ ನಾವು ಅಲ್ಲಿ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಆದರೆ ನೀವು, ಸಂತ್ರಸ್ತೆಯಿಂದ ಆರೋಪಗಳು ಬಂದ ಬಳಿಕವೂ ಇಡೀ ರಾತ್ರಿ ರಾಜಭವನದಲ್ಲಿ ಕಳೆದಿದ್ದೀರಿ. ನೀವೇಕೆ ಮೌನವಾಗಿದ್ದೀರಿ?’ ಎಂದು ಅವರು ಪ್ರಶ್ನಿಸಿದರು.

‘ಸಂದೇಶ್‌ಖಾಲಿಗೆ ಹೋಗಲು ಆತುರ ತೋರಿದ ರಾಜ್ಯಪಾಲರೇ, ಈಗ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವುದು ದುಃಖದ ವಿಷಯ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT