ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟ ‘ಇಂಡಿ’ ಒಕ್ಕೂಟ ತಿರಸ್ಕರಿಸಿ: ಅಮಿತ್‌ ಶಾ

ವಿಜಯಸಂಕಲ್ಪ ಸಮಾವೇಶ
Published 2 ಏಪ್ರಿಲ್ 2024, 15:43 IST
Last Updated 2 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಚ್ಛ, ದಕ್ಷ, ಪ್ರಾಮಾಣಿಕ, ಜನ ಪರವಾದ ನರೇಂದ್ರ ಮೋದಿ ಆಡಳಿತ ಬೇಕೆ ಅಥವಾ ಕಾಂಗ್ರೆಸ್‌ ನೇತೃತ್ವದ ಪರಿವಾರವಾದಿ, ದುರಹಂಕಾರಿಗಳು ಮತ್ತು ಭ್ರಷ್ಟಾಚಾರಿಗಳ ‘ಇಂಡಿ’ ಒಕ್ಕೂಟ ಬೇಕೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಶ್ನಿಸಿದರು.

ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ ‘ವಿಜಯಸಂಕಲ್ಪ ಸಮಾವೇಶ’ದಲ್ಲಿ ಅವರು ಭಾಗವಹಿಸಿ ಮಾತನಾಡಿ, ‘ಭ್ರಷ್ಟ ‘ಇಂಡಿ’ ಒಕ್ಕೂಟವನ್ನು ಮುಲಾಜಿಲ್ಲದೇ ತಿರಸ್ಕರಿಸಿ’ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರದ ಕಳಂಕವಿಲ್ಲದೇ, ಸ್ವಚ್ಛ ಆಡಳಿತ ನೀಡಿದ್ದು ಮೋದಿ ಸರ್ಕಾರದ ಹೆಗ್ಗಳಿಕೆ. ದೇಶದ ಜನರಲ್ಲಿ ಮೋದಿ ಅವರ ಬಗ್ಗೆ ಅಪಾರ ವಿಶ್ವಾಸವಿದೆ. ಹೀಗಾಗಿ ಈ ಬಾರಿ ಮೋದಿ ಅಲೆ ಮಾತ್ರ ಅಲ್ಲ ಸುನಾಮಿಯೇ ಎದ್ದಿದೆ ಎಂದು ಶಾ ಹೇಳಿದರು.

ಕರ್ನಾಟಕದಲ್ಲಿ ಮೋದಿ ನೇತೃತ್ವದ ಬಿಜೆಪಿ– ಜೆಡಿಎಸ್‌ ಮೈತ್ರಿಕೂಟ 28 ಸ್ಥಾನಗಳನ್ನು ಗೆಲ್ಲಿಸಬೇಕು. ಕಾಂಗ್ರೆಸ್‌ ಖಾತೆಯನ್ನೂ ತೆರೆಯಬಾರದು. ಇದಕ್ಕೆ ಎರಡೂ ಪಕ್ಷಗಳ ಕಾರ್ಯಕರ್ತರು ತಯಾರಾಗಬೇಕು ಎಂದು ಸೂಚನೆ ನೀಡಿದರು. 

ಮನಮೋಹನ್‌ ಸಿಂಗ್‌ ಸರ್ಕಾರದ ರಿಮೋಟ್‌ ಕಂಟ್ರೋಲ್ ಸೋನಿಯಾ ಗಾಂಧಿ ಆಗಿದ್ದರು. ಆಗ ನಡೆದ ಹಗರಣಗಳ ಮೊತ್ತ ₹12 ಲಕ್ಷ ಕೋಟಿ. ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರ ಮಾಡಿದವರನ್ನು ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದು 2014 ರ ಲೋಕಸಭಾ ಚುನಾವಣೆಯಲ್ಲಿ ಹೇಳಿದ್ದೆವು. ₹12 ಲಕ್ಷ ಕೋಟಿ ಮೌಲ್ಯದಷ್ಟು ಹಗರಣ ಮಾಡಿದವರು ತಮ್ಮನ್ನು ಉಳಿಸಿಕೊಳ್ಳಲು ‘ಇಂಡಿ’ ಒಕ್ಕೂಟ ಕಟ್ಟಿಕೊಂಡು ಮೋದಿ ವಿರುದ್ಧ ನಿಂತಿದ್ದಾರೆ ಎಂದರು.

‘500 ವರ್ಷಗಳಿಂದ ಟೆಂಟ್‌ನಲ್ಲಿದ್ದ ರಾಮಲಲ್ಲಾನಿಗೆ ಭವ್ಯ ರಾಮಮಂದಿರ ನಿರ್ಮಿಸಿದ್ದೇವೆ. ರಾಮಮಂದಿರ ಉದ್ಘಾಟನೆಗೆ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಮತ ಬ್ಯಾಂಕ್‌ ಕೈ ತಪ್ಪಿ ಹೋಗಬಹುದು ಎಂಬ ಭಯಕ್ಕೆ ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಬರಲಿಲ್ಲ. ರಾಮಮಂದಿರ ನಿರ್ಮಾಣ ಸೇರಿದಂತೆ ನಮ್ಮ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಜಮ್ಮು–ಕಾಶ್ಮೀರದಲ್ಲಿ 370 ನೇ ವಿಧಿ ರದ್ದು, ಸಿಎಎ ಜಾರಿ ಪ್ರಮುಖವಾದವು’ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಸಿ.ಎನ್‌.ಮಂಜುನಾಥ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ, ಬೆಂಗಳೂರು ಉತ್ತರ ಕ್ಷೇತ್ರದ ಶೋಭಾ ಕರಂದ್ಲಾಜೆ, ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರಿಗೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದುಬರುವಂತೆ ಹಾರೈಸಿದರು. 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧಪಕ್ಷದ ನಾಯಕ ಆರ್‌.ಅಶೋಕ, ಬಿಜೆಪಿ ಸಮಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಸಂಸದ ಡಿ.ವಿ.ಸದಾನಂದಗೌಡ ಮತ್ತು ಇತರರು ಇದ್ದರು.

ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ತಾಕತ್ತಿದ್ದರೆ ಹೇಳಲಿ. ಹಣ– ಹೆಂಡ ಹಂಚಿ ತುಘಲಕ್‌ ದರ್ಬಾರ್ ಮೂಲಕ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿದ್ದಾರೆ

-ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ಬಿಜೆಪಿ– ಜೆಡಿಎಸ್‌ ಒಂದಾಗಿರುವುದು ಎಚ್‌.ಡಿ.ದೇವೇಗೌಡ. ಎಚ್‌.ಡಿ.ಕುಮಾರಸ್ವಾಮಿ ನಮ್ಮ ಜತೆ ಬಂದ ನಂತರ ಕಾಂಗ್ರೆಸ್‌ ತತ್ತರಿಸಿ ಹೋಗಿದೆ.

-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಹ್ಯಾಟ್ರಿಕ್‌ ವಿಜಯ ಸಾಧಿಸಲಿದ್ದು ಆ ತಂಡದಲ್ಲಿ ನಾವೆಲ್ಲರೂ ಆ ತಂಡದಲ್ಲಿರಬೇಕು. ಟೀಕೆಗಳನ್ನು ಬಿಟ್ಟು ಸಾಧನೆಗಳನ್ನು ಬಿಂಬಿಸೋಣ

-ಡಾ.ಸಿ. ಎನ್‌.ಮಂಜುನಾಥ್‌ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ

‘ಪ್ರತಿ ಕಾರ್ಯಕರ್ತನೂ ಮೋದಿ’

‘ಪ್ರತಿ ಬಿಜೆಪಿ ಕಾರ್ಯಕರ್ತನೂ ಮೋದಿ. ಮತದಾರರ ಮನೆಗಳಿಗೆ  ಮೋದಿಯಾಗಿ ಹೋಗಿ 10 ವರ್ಷಗಳ ಸಾಧನೆಯನ್ನು ಜನರಿಗೆ ಹೇಳಿ’ ಎಂದು ಅಮಿತ್‌ ಶಾ ಹೇಳಿದರು. ‘ಇದರ ಜತೆಗೆ ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕರ ಭ್ರಷ್ಟಾಚಾರವನ್ನೂ ಅವರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದರು. ‘ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿ ಮತ್ತು ಪ್ರಧಾನಿ ಆಗಿ 10 ವರ್ಷಗಳಲ್ಲಿ ಅವರ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವನ್ನು ಯಾವುದೇ ವಿರೋಧ ಪಕ್ಷ ನಾಯಕರು ಮಾಡಿಲ್ಲ. ಪಾರದರ್ಶಕ ಆಡಳಿತಕ್ಕೆ ಇದು ನಿದರ್ಶನ’ ಎಂದು ಅವರು ಹೇಳಿದರು. 

‘ಚುನಾವಣೆ ಮುಗಿಯುವರೆಗೆ ಮನೆ ಸೇರಲ್ಲ’

‘ನನಗೆ 81 ವರ್ಷ ಆಗಿದೆ. ಚುನಾವಣೆ ಮುಗಿಯುವರೆಗೆ ಮನೆ ಸೇರಲ್ಲ ನೀವೂ ಬನ್ನಿ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರೋಣ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ರಾಜ್ಯದ ಉದ್ದಗಲ ಪ್ರವಾಸ ಮಾಡೋಣ’ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ‘ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಚುನಾವಣೆ ಮುಗಿಯುವವರೆಗೆ ಮನೆ ಸೇರುವುದಿಲ್ಲ.28 ಕ್ಷೇತ್ರಗಳನ್ನೂ ಗೆಲ್ಲುವುದು ನಮ್ಮ ಗುರಿಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT