ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಆರನೇ ಹಂತ: ಕಣದಲ್ಲಿರುವ ಪ್ರಮುಖರು..

Published 25 ಮೇ 2024, 0:56 IST
Last Updated 25 ಮೇ 2024, 0:56 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಆರನೇ ಹಂತದ ಚುನಾವಣೆ ಶನಿವಾರ ನಡೆಯಲಿದ್ದು, ಕಣದಲ್ಲಿ ವಿವಿಧ ರಾಜ್ಯಗಳ 889 ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್, ಬಿಜೆಪಿ, ಪಿಡಿಪಿಯ ಹಲವು ಘಟಾನುಘಟಿ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪುಟ್ಟ ಪರಿಚಯ ಇಲ್ಲಿದೆ.       

ಮೇನಕಾ ಗಾಂಧಿ (ಬಿಜೆಪಿ) - ಕ್ಷೇತ್ರ: ಸುಲ್ತಾನ್‌ಪುರ, ಉತ್ತರ ಪ್ರದೇಶ

ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಈ ಬಾರಿಯೂ ಮೇನಕಾ ಗಾಂಧಿ ಅವರನ್ನೇ ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಮೇನಕಾ ಗಾಂಧಿ ಅವರು 14,526 ಮತಗಳ ಅಂತರದಿಂದ ಬಿಎಸ್‌ಪಿಯ ಚಂದ್ರಭದ್ರ ಸಿಂಗ್‌ ಅವರನ್ನು ಪರಾಭವಗೊಳಿಸಿದ್ದರು. ಸಮಾಜವಾದಿ ಪಕ್ಷವು (ಎಸ್‌ಪಿ) ಈ ಕ್ಮೇತ್ರದಿಂದ ಭೂವಾಲ್‌ ನಿಶಾದ್‌ ಅವರನ್ನು ಸ್ಪರ್ಧೆಗಿಳಿಸಿದೆ. ಬಿಎಸ್‌ಪಿಯು ಉದಯ್‌ ರಾಜ್‌ ವರ್ಮಾ ಅವರನ್ನು ಅಖಾಡಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಿ‌ದ್ದವು. ರಾಜಕಾರಣಿ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಮೇನಕಾ ಅವರು ಕೇಂದ್ರ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದರು.

ಮೆಹಬೂಬಾ ಮುಫ್ತಿ (ಪಿಡಿಪಿ)- ಕ್ಷೇತ್ರ: ಅನಂತನಾಗ್‌–ರಜೌರಿ, ಜಮ್ಮು ಮತ್ತು ಕಾಶ್ಮೀರ

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌–ರಜೌರಿ ಲೋಕಸಭಾ ಕ್ಷೇತ್ರದಿಂದ ಪಿಡಿಪಿ ಅಭ್ಯರ್ಥಿಯಾಗಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರೇ ಸ್ಪರ್ಧಿಸುತ್ತಿದ್ದಾರೆ. ಪುನರ್‌ ವಿಂಗಡಣೆಯಾದ ಬಳಿಕ ಹೊಸದಾಗಿ ರಚನೆಯಾದ ಈ ಕ್ಷೇತ್ರದಿಂದ ಮೆಹಬೂಬಾ ಅವರಿಗೆ ಪ್ರತಿಸ್ಪರ್ಧಿಯಾಗಿ ನ್ಯಾಷನಲ್‌ ಕಾನ್ಫರೆನ್ಸ್‌, ಗುಜ್ಜರ್‌ ಮುಖಂಡ ಮಿಯಾನ್‌ ಅಲ್ತಾಫ್‌ ಅಹಮ್ಮದ್‌ ಅವರನ್ನು ಅಖಾಡಕ್ಕಿಳಿಸಿದೆ. ಪಿಡಿಪಿ ಕೂಡ ಆರಂಭದಲ್ಲಿ ‘ಇಂಡಿಯಾ’ ಒಕ್ಕೂಟದ ಜೊತೆಗೆ ಗುರುತಿಸಿಕೊಂಡಿತ್ತು. ಆದರೆ ನ್ಯಾಷನಲ್‌ ಕಾನ್ಫರೆನ್ಸ್ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ, ತಮ್ಮ ‍ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮುಫ್ತಿ ಘೋಷಿಸಿದ್ದರು.ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಫ್ತಿ ಅವರು, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. 2018ರಲ್ಲಿ ಬಿಜೆಪಿಯು ಬೆಂಬಲ ಹಿಂಪಡೆದಾಗ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮನೋಹರ್‌ ಲಾಲ್‌ ಖಟ್ಟರ್‌ (ಬಿಜೆಪಿ)- ಕ್ಷೇತ್ರ: ಕರ್ನಾಲ್‌, ಹರಿಯಾಣ 

ಹರಿಯಾಣದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಕರ್ನಾಲ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಸ್ಪರ್ಧೆಗಿಳಿದಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ದಿವ್ಯಾಂಶು ಬುದ್ಧಿರಾಜ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂಜಯ್‌ ಭಾಟಿಯಾ ಅವರು 6,56,142 ಮತಗಳ ಅಂತರದಿಂದ ಕಾಂಗ್ರೆಸ್‌ನ ಕುಲ್‌ದೀಪ್‌ ಶರ್ಮಾ ಅವರನ್ನು ಸೋಲಿಸಿದ್ದರು. ಖಟ್ಟರ್‌ ಅವರು 2014 ರಿಂದಲೂ ಕರ್ನಾಲ್‌ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹರಿಯಾಣದ ಆಡಳಿತಾರೂಢ ಬಿಜೆಪಿ ಮತ್ತು ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ನಡುವಿನ ಮೈತ್ರಿಯಲ್ಲಿ ಬಿರುಕು ಮೂಡುವ ಊಹಾಪೋಗಳ ನಡುವೆ ಮಾರ್ಚ್‌ 12 ರಂದು ಖಟ್ಟರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಕನ್ಹಯ್ಯ ಕುಮಾರ್‌ (ಕಾಂಗ್ರೆಸ್‌) - ಕ್ಷೇತ್ರ: ಈಶಾನ್ಯ ದೆಹಲಿ

ರಾಷ್ಟ್ರ ರಾಜಧಾನಿಯ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಯುವ ಮುಖಂಡ ಕನ್ಹಯ್ಯ ಕುಮಾರ್‌ ಅವರನ್ನು ಕಾಂಗ್ರೆಸ್‌ ಪಕ್ಷವು ಅಖಾಡಕ್ಕಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಟೀಕಾಕಾರರಾಗಿ ಗಮನ ಸೆಳೆದಿರುವ ಕನ್ಹಯ್ಯ ಅವರು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮುನ್ನೆಲೆಗೆ ಬಂದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೆಗುಸರಾಯ್‌ ಕ್ಷೇತ್ರದಿಂದ ಸಿಪಿಐನಿಂದ ಸ್ಪರ್ಧಿಸಿ ಪರಾಭಗೊಂಡಿದ್ದರು. 2021ರಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಕನ್ಹಯ್ಯ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಮನೋಜ್‌ ತಿವಾರಿ ಅವರು ಸ್ಪರ್ಧಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಮನೋಜ್‌ ಅವರು 3,66,102 ಮತಗಳ ಅಂತರದಿಂದ ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ ಅವರನ್ನು ಸೋಲಿಸಿದ್ದರು. 

ಧರ್ಮೇಂದ್ರ ಪ್ರಧಾನ್‌ (ಬಿಜೆಪಿ)-ಕ್ಷೇತ್ರ: ಸಂಬಲ್‌ಪುರ, ಒಡಿಶಾ

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಒಡಿಶಾದ ಸಂಬಲ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಹಿಂದೆ ಅವರು ರಾಜ್ಯಸಭಾ ಸದಸ್ಯರಾಗಿ ಸಂಸತ್‌ ಪ್ರವೇಶಿಸಿದ್ದರು. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ  ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿತೇಶ್ ಗಂಗಾ ದೇವ್‌ ಅವರು 9,162 ಮತಗಳ ಅಂತರದಿಂದ ಬಿಜು ಜನತಾ ದಳ (ಬಿಜೆಡಿ) ಅಭ್ಯರ್ಥಿ ನಳಿನಿ ಕಾಂತ ಪ್ರಧಾನ್ ಅವರನ್ನು ಪರಾಭವಗೊಳಿಸಿದ್ದರು. ಈ ಬಾರಿ ಬಿಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಪ್ರಣವ್‌ ಪ್ರಕಾಶ್‌ ದಾಸ್‌ ಅವರನ್ನು ಪ್ರಧಾನ್‌ ವಿರುದ್ಧ ಅಖಾಡಕ್ಕಿಳಿಸಿದೆ. ಕಾಂಗ್ರೆಸ್‌ ಕೂಡ ನಾಗೇಂದ್ರ ಕುಮಾರ್‌ ಪ್ರಧಾನ್‌ ಅವರನ್ನು ಅಭ್ಯರ್ಥಿಯಾಗಿಸಿದೆ.  

ದೀಪೇಂದರ್‌ ಹೂಡಾ (ಕಾಂಗ್ರೆಸ್‌) ಕ್ಷೇತ್ರ: ರೋಹ್ಟಕ್, ಹರಿಯಾಣ

ಹರಿಯಾಣದ ರೋಹ್ಟಕ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯ ದೀಪೇಂದರ್‌ ಹೂಡಾ ಕಣಕ್ಕಿಳಿದಿದ್ದಾರೆ. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರವಿಂದ ಕುಮಾರ್‌ ಶರ್ಮಾ ಅವರು, 7,503 ಮತಗಳ ಅಂತರದಿಂದ ದೀಪೇಂದರ್‌ ಅವರನ್ನು ಪರಾಭವಗೊಳಿಸಿದ್ದರು. ಈ ಬಾರಿಯೂ ಬಿಜೆಪಿಯಿಂದ ಅರವಿಂದ ಕುಮಾರ್‌ ಅವರೇ ಅಖಾಡಕ್ಕಿಳಿದಿದ್ದಾರೆ. 2009 ಮತ್ತು 2014ರಲ್ಲಿ ಈ ಕ್ಷೇತ್ರದಿಂದ ದೀಪೇಂದರ್‌ ಅವರು ಸಂಸದರಾಗಿ ಆಯ್ಕೆಯಾಗಿದ್ದರು.  ದೀಪೇಂದರ್‌ ಹೂಡಾ ಅವರು ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ. ದೀಪೇಂದರ್‌ ಅವರ ತಂದೆ ಭೂಪಿಂದರ್‌ ಹೂಡಾ ಅವರು ಹರಿಯಾಣದ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ.

ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ
ಮನೋಹರ ಲಾಲ್‌ ಖಟ್ಟರ್‌
ಮನೋಹರ ಲಾಲ್‌ ಖಟ್ಟರ್‌
ಕನ್ಹಯ್ಯ ಕುಮಾರ್‌
ಕನ್ಹಯ್ಯ ಕುಮಾರ್‌
ಧರ್ಮೇಂದ್ರ ಪ್ರಧಾನ್‌
ಧರ್ಮೇಂದ್ರ ಪ್ರಧಾನ್‌
ದೀಪೇಂದರ್‌ ಹೂಡಾ
ದೀಪೇಂದರ್‌ ಹೂಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT