ಗಾಂಧಿನಗರ (ಪಿಟಿಐ): ಗುಜರಾತ್ ಸರ್ಕಾರದ ಹಿರಿಯ ಸಚಿವೆ ಆನಂದಿ ಬೆನ್ ಪಟೇಲ್ ಅವರು ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.
ಈ ಮೂಲಕ ಕಳೆದ 12 ವರ್ಷಗಳ ಕಾಲ ಹತ್ತು ಹಲವು ವಿವಾದಗಳ ಮಧ್ಯ ಗುಜರಾತ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನರೇಂದ್ರ ಮೋದಿ ಅವರ ಆಡಳಿತ ಅಂತ್ಯಗೊಂಡಿದೆ.
ರಾಜ್ಯ ಕಂದಾಯ ಮಂತ್ರಿಯಾಗಿರುವ 73 ವಯಸ್ಸಿನ ಆನಂದಿ ಅವರು ಮೋದಿ ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಕೃಷಿ ಸಚಿವ ಭೂಪೇಂದ್ರ ಸಿಂಹ ಅವರು ಆನಂದಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಸದಸ್ಯರೆಲ್ಲ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು.