ನವದೆಹಲಿ (ಪಿಟಿಐ): ಚುನಾವಣಾ ಅಭ್ಯರ್ಥಿಗಳು ತಮ್ಮ ಸಂಗಾತಿ ಮತ್ತು ಅವಲಂಬಿತ ಮಕ್ಕಳ ಆಸ್ತಿ ಹಾಗೂ ಸಾಲದ ವಿವರ ಸಲ್ಲಿಸದಿದ್ದರೆ ಅಂಥವರ ಆಯ್ಕೆಯನ್ನು ಅನೂರ್ಜಿತಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಸುರೀಂದರ್ ಸಿಂಗ್ ನಿಜ್ಜಾರ್ ಮತ್ತು ಎ.ಕೆ.ಸಿಕ್ರಿ ಅವರನ್ನು ಒಳಗೊಂಡ ನ್ಯಾಯಪೀಠ ಹೀಗೆ ಹೇಳಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ತನ್ನ ವಿರುದ್ಧ ಹಿಂದೆ ಇದ್ದ ಕ್ರಿಮಿನಲ್ ಪ್ರಕರಣಗಳು, ಶೈಕ್ಷಣಿಕ ಅರ್ಹತೆ ಕುರಿತೂ ಮಾಹಿತಿ ನೀಡುವುದು ಕಡ್ಡಾಯ ಎಂದು ನ್ಯಾಯಪೀಠ ಉಚ್ಚರಿಸಿದೆ.
ಸಂವಿಧಾನದ 19 (1) (ಎ) ವಿಧಿಯನ್ವಯ ಅಭ್ಯರ್ಥಿ ಹಿನ್ನೆಲೆಯ ಬಗ್ಗೆ ತಿಳಿಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹೀಗಾಗಿ ಈ ಮೇಲಿನ ಮಾಹಿತಿಗಳೆಲ್ಲವನ್ನೂ ಅಭ್ಯರ್ಥಿಯು ನೀಡಲೇಬೇಕು ಎಂದು ಪೀಠ ಹೇಳಿದೆ.