ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ: ವಿಶೇಷಾಧಿಕಾರವೇ ಮುಖ್ಯ ವಿಚಾರ

ಪ್ರಾದೇಶಿಕ ಅಸ್ಮಿತೆ, 35ಎ ವಿಧಿ ಚುನಾವಣಾ ಅಸ್ತ್ರಗಳು: ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ: ರಾಷ್ಟ್ರೀಯ ಪಕ್ಷಗಳಿಗೂ ಮಣೆ
Last Updated 31 ಮಾರ್ಚ್ 2019, 19:47 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಈ ಬಾರಿ ಐದು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಏ. 11ರಂದು ನಡೆಯಲಿದೆ. ರಾಜಕೀಯವಾಗಿ ಅತ್ಯಂತ ಸೂಕ್ಷ್ಮವೆನಿಸಿರುವ, ಸಂವಿಧಾನದ ‘35ಎ’ ವಿಧಿಯು ಚುನಾವಣೆಯಪ್ರಮುಖ ಅಸ್ತ್ರವಾಗಿ ಇಲ್ಲಿ ಬಳಕೆಯಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ಈ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿವೆ.

ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಹಾಗೂ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಯ (ಪಿಡಿಪಿ) ಮುಖಂಡರು, ‘ನಾವು ಅಧಿಕಾರಕ್ಕೆ ಬಂದರಷ್ಟೇ 35ನೇ ವಿಧಿಯನ್ನು ಉಳಿಸಿಕೊಳ್ಳಲು ಸಾಧ್ಯ’ ಎಂದು ಜನರಿಗೆ ಮನವರಿಕೆ ಮಾಡಿಕೊಡಲು ಹರಸಾಹಸಪಡುತ್ತಿದ್ದಾರೆ. ಸಂವಿಧಾನದ ಈ ವಿಧಿಯು ಕಾಶ್ಮೀರಿಗಳಿಗೆ ಅಲ್ಲಿ ಆಸ್ತಿ ಹೊಂದುವುದು ಮತ್ತು ಉದ್ಯೋಗ ಪಡೆಯುವುದರಲ್ಲಿ ವಿಶೇಷವಾದ ಅಧಿಕಾರವನ್ನು ನೀಡುತ್ತದೆ.

ಆದರೆ, ಬಿಜೆಪಿಯು ‘ಈ ವಿಧಿಯು ಸಾಂವಿಧಾನಿಕವಾಗಿ ಅತ್ಯಂತ ದುರ್ಬಲವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಮಾರಕವಾಗುತ್ತಿದೆ’ ಎಂದು ತಿಳಿವಳಿಕೆ ಹೇಳುವ ಮೂಲಕ ಜನರ ಸಹಾನುಭೂತಿ ಪಡೆಯಲು ಶ್ರಮಿಸುತ್ತಿದೆ.

ಗುರುವಾರ ನಡೆದ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡಿದ ಎನ್‌ಸಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ‘ಮುಂದಿನ ಲೋಕಸಭಾ ಚುನಾವಣೆಯು ಸಂವಿಧಾನದ 370ನೇ ವಿಧಿ ಹಾಗೂ 35ಎ ವಿಧಿಯ ಭವಿಷ್ಯ ನಿರ್ಧರಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವವಾದುದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ವಿಶೇಷ ಅಧಿಕಾರವನ್ನು ಉಳಿಸಿಕೊಳ್ಳಲು ನ್ಯಾಯಾಲಯ ಮಾತ್ರವಲ್ಲ ಹೊರಗಡೆಯೂ ಹೋರಾಟ ನಡೆಸಲಿದೆ’ ಎಂದಿದ್ದಾರೆ.

ದಕ್ಷಿಣ ಕಾಶ್ಮೀರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿರುವ ಪಿಡಿಪಿ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮೆಹಬೂಬಾ ಮುಫ್ತಿ, ‘ಸಂವಿಧಾನದ 35ಎ ವಿಧಿ ಈಗ ಅಪಾಯದಲ್ಲಿದೆ. ಇದರ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಬೇಕಾಗಿದೆ. ಆ ಕೆಲಸವನ್ನು ನಾನು ಮಾತ್ರ ಮಾಡಬಲ್ಲೆ ಎಂದು ನಮ್ಮ ಪಕ್ಷ ಭಾವಿಸಿದೆ’ ಎಂದಿದ್ದಾರೆ.

ಕಣಿವೆ ರಾಜ್ಯದ ಪ್ರತ್ಯೇಕತಾವಾದಿಗಳ ಸಹಾನುಭೂತಿಯನ್ನೂ ಪಡೆಯುವ ಪ್ರಯತ್ನ ಮಾಡುತ್ತಿರುವ ಮೆಹಬೂಬಾ, ‘ಉಗ್ರರ ಮೇಲೆ ಭಾರತ ಸರ್ಕಾರ ನಡೆಸುತ್ತಿರುವ ಕಠಿಣ ಕ್ರಮಗಳಿಂದಾಗಿ ಸರ್ಕಾರ ಮತ್ತು ಈ ಭಾಗದ ಜನರ ನಡುವಿನ ಕಂದಕವು ಇನ್ನಷ್ಟು ಅಗಲವಾಗುತ್ತಿದೆ’ ಎಂದಿದ್ದಾರೆ.

ಇನ್ನೊಂದೆಡೆ ಬಿಜೆಪಿ ನಾಯಕರು, ‘ನಾವು ಅಧಿಕಾರಕ್ಕೆ ಬಂದರೆ 35ಎ ವಿಧಿಯನ್ನು ರದ್ದು ಮಾಡುತ್ತೇವೆ’ ಎಂಬ ಹೇಳಿಕೆಯನ್ನು ಹೋದ ಕಡೆಗಳಲ್ಲೆಲ್ಲ ನೀಡುತ್ತಿದ್ದಾರೆ. ‘ತಾತ್ಕಾಲಿಕ ಪರಿಹಾರವಾಗಿ ಆ ಕಾನೂನನ್ನು ರೂಪಿಸಲಾಗಿತ್ತು. ಅದನ್ನು ರದ್ದು ಮಾಡಲು ಅವಕಾಶವಿದೆ ಮತ್ತು ರದ್ದು ಮಾಡಲೇಬೇಕು’ ಎಂದು ಅವರು ವಾದಿಸುತ್ತಾರೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ, ‘35ಎ ವಿಧಿಯು ಸಾಂವಿಧಾನಿಕವಾಗಿ ಅತ್ಯಂತ ದುರ್ಬಲವಾದುದು’ ಎಂದು ಹೇಳಿದ್ದಾರೆ. ಯಾರೇ ಆದರೂ ರಾಜ್ಯದಲ್ಲಿ ಈ ವಿಧಿಯ ಅಗತ್ಯವನ್ನು ಕುರಿತು ಪ್ರಶ್ನಿಸಿದರೆ ಅದು ರಾಜಕೀಯವಾಗಿ ದೊಡ್ಡ ಪರಿಣಾಮ ಉಂಟುಮಾಡುತ್ತದೆ ಎಂಬುದು ಖಚಿತ.

ರಾಜ್ಯದ ಭದ್ರತೆಯ ವಿಚಾರ ಚುನಾವಣೆಯ ಇನ್ನೊಂದು ಪ್ರಮುಖ ವಿಷಯವಾಗುತ್ತಿದೆ. ಸುಮಾರು ಮೂರು ವರ್ಷಗಳ ಹಿಂದೆ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಯ ಕಮಾಂಡರ್‌ ಬುರ್ಹಾನ್‌ ವಾನಿ ಹತ್ಯೆಯ ನಂತರ ಇಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಅನೇಕ ಹೊಸ ಸವಾಲುಗಳು ಹುಟ್ಟಿಕೊಂಡಿವೆ. ರಾಜಕೀಯ ಮತ್ತು ಭದ್ರತೆಯ ವಿಚಾರಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಮ್ಮತ ಇಲ್ಲ.

ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಪಕ್ಷಗಳೂ ಜನಸಾಮಾನ್ಯರಿಗೆ ನೇರವಾಗಿ ಸಂಬಂಧಪಡುವ ‘ಅಭಿವೃದ್ಧಿ’ಯ ವಿಚಾರಗಳನ್ನು ಹಿನ್ನೆಲೆಗೆ ಸರಿಸಿವೆ. ಪ್ರತಿಯೊಂದು ಪಕ್ಷವೂ ಎದುರಾಳಿ ಪಕ್ಷದ ಮೇಲೆ ಕೆಸರೆರಚಲು ಮಾತ್ರ ಆಸಕ್ತಿ ತೋರುತ್ತಿರುವುದರಿಂದ ಜನಸಾಮಾನ್ಯರ ಬಗ್ಗೆ ಮಾತನಾಡುವವರೇ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT