ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಾವಣೆಯೇ ಮೋದಿ ಮನದಾಳ: ಮಲ್ಲಿಕಾರ್ಜುನ ಖರ್ಗೆ

Published 22 ಏಪ್ರಿಲ್ 2024, 22:56 IST
Last Updated 22 ಏಪ್ರಿಲ್ 2024, 22:56 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ಸಂವಿಧಾನ ಬದಲಾಯಿಸುವ ಉದ್ದೇಶದಿಂದಲೇ ಪ್ರಧಾನಿ ಮೋದಿ 400 ಸೀಟು ಗೆಲ್ಲಿಸಿ ಕೊಡಿ ಎಂದು ಹೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಷಣದುದ್ದಕ್ಕೂ ಮೋದಿ ಅವರನ್ನೇ ಗುರಿಯಾಗಿಸಿಕೊಂಡು ಅವರು ಮಾತನಾಡಿದರು.

ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎನ್ನುವುದಾದರೆ, ಅದರ ವಿರುದ್ಧ ಮಾತನಾಡಿದವರನ್ನು ಯಾಕೆ ಬಿಜೆಪಿಯಿಂದ ಉಚ್ಚಾಟಿಸಿಲ್ಲ. ಮೇಲ್ನೋಟಕ್ಕಷ್ಟೇ ಬದಲಾಯಿಸುವುದಿಲ್ಲ ಎನ್ನುವ ಮೋದಿ ಮನದಾಳದಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಮತಕ್ಕಾಗಿ ಮನಬಂದಂತೆ ಹಿಟ್‌ ಆ್ಯಂಡ್ ರನ್ ಹೇಳಿಕೆ ನೀಡುವ ಮೋದಿ ಒಬ್ಬ ಅಜ್ಞಾನಿ. ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ. ಜಾತಿಗಣತಿ ಮಾಡಿ ಜನರ ಆಸ್ತಿಯನ್ನು ಮುಸ್ಲಿಮರಿಗೆ ಕೊಡುತ್ತಾರೆ ಎಂದಿರುವ ಅವರು ಮಾತುಗಳು ಪ್ರಧಾನಿ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು.

‘ಹತ್ತು ವರ್ಷಗಳಿಂದ ಮೋದಿ ಸಂವಿಧಾನದ ಪರವಾಗಿ ನಡೆದುಕೊಂಡಿಲ್ಲ. ರೈತ, ಕಾರ್ಮಿಕ ಹಾಗೂ ಜನ ವಿರೋಧಿ ಮಸೂದೆಗಳ ಕುರಿತು ನಾವು ದನಿ ಎತ್ತಿದರೆ ಅಧಿವೇಶನದಿಂದ ಹೊರ ಹಾಕುತ್ತಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮೋದಿ ಕೊಡುವ ಗೌರವ ಇದೇನಾ?’ ಎಂದು ಪ್ರಶ್ನಿಸಿದರು.

‘ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ನವರು ಬರಲಿಲ್ಲ ಎಂಬುದನ್ನೇ ಮೋದಿ ಟೀಕಿಸುತ್ತಿದ್ದಾರೆ. ನಾವಿರಲಿ, ಅಲ್ಲಿಗೆ ದೇಶದ ಮೊದಲ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆಯದೆ, ಮೋದಿಯೇ ಯಾಕೆ ಹೋಗಿ ಕೂತರು? ಅವರೇನು ಪೂಜಾರಿಯೇ? ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳು ಇರಬಾರದೆಂದೇ ಮುರ್ಮು ಅವರನ್ನು ಕರೆಯಲಿಲ್ಲ’ ಎಂದು ಹೇಳಿದರು.

‘ಸಂಸತ್ತಿನ ನೂತನ ಕಟ್ಟಡದ ಶಂಕುಸ್ಥಾಪನೆಗೂ ಹಿಂದಿನ ದಲಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಆಹ್ವಾನಿಸಲಿಲ್ಲ. ಉದ್ಘಾಟನೆಗೆ ಈಗಿನ ರಾಷ್ಟ್ರಪತಿ ಮುರ್ಮು ಅವರನ್ನು ಕರೆಯಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೊದಲ ಮಾನ್ಯತೆ ಸಿಗಬೇಕಿರುವುದು ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗೆ. ನಂತರ ಪ್ರಧಾನಿಗೆ. ಆದರೆ, ಸಂಸತ್ ಉದ್ಘಾಟನೆಯಲ್ಲಿ ಮೋದಿ ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿದರು’ ಎಂದು ವಾಗ್ದಾಳಿ ನಡೆಸಿದರು.

ಎಲ್ಲಿಯವರೆಗೆ ದೇವಸ್ಥಾನಗಳಿಗೆ ಎಸ್‌ಸಿ ಎಸ್‌ಟಿ ಹಾಗೂ ಶೂದ್ರರನ್ನು ಬಿಡುವುದಿಲ್ಲವೊ ಅಲ್ಲಿಯವರೆಗೆ ನಾನೂ ರಾಮಮಂದಿರಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪ್ರಣಾಳಿಕೆ ಕುರಿತು ಬಹಿರಂಗವಾಗಿ ಎಲ್ಲಿ ಬೇಕಾದರೂ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಮೋದಿ ಸಹ ಬರಲಿ. ದೆಹಲಿ ಸೇರಿದಂತೆ ಎಲ್ಲಿ ಬೇಕಾದರೂ ಸ್ಥಳ ನಿಗದಿ ಮಾಡಲಿ.
– ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

‘ಪ್ರಧಾನಿಗೆ ಸಾಮಾನ್ಯ ಜ್ಞಾನ ಇಲ್ಲ’ ಜಾತಿಗಣತಿ ಮಾಡಿ ಜನರ ಆಸ್ತಿಯನ್ನು ಮುಸ್ಲಿಮರಿಗೆ ಕೊಡುತ್ತಾರೆ ಎಂದು ಪ್ರಧಾನಿ ಹೇಳುತ್ತಾರೆ. ತಾಯಂದಿರಿಗೆ ₹1 ಲಕ್ಷ ಕೊಡುವುದು ನರೇಗಾ ಕೂಲಿ ₹400 ಏರಿಕೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ರೈತ ನ್ಯಾಯ ಮಹಿಳಾ ನ್ಯಾಯ ಶ್ರಮಿಕ ನ್ಯಾಯ ಯುವ ನ್ಯಾಯ ಪಾಲುದಾರಿಕೆ ನ್ಯಾಯ ಇವುಗಳಲ್ಲಿ ಯಾವುದು ಕೇವಲ ಮುಸ್ಲಿಮರ ಪರವಾಗಿದೆ ಎಂದು ಮೋದಿ ಹೇಳಲಿ? ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ತಿಳಿದುಕೊಂಡು ಅವರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ಜಾತಿಗಣತಿ ಉದ್ದೇಶ ಎಂಬ ಸಾಮಾನ್ಯ ಜ್ಞಾನ ಅವರಿಗಿಲ್ಲ ಎಂದು ಖರ್ಗೆ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT